Advertisement

ಕೊನೆಯಲ್ಲಿ  ಸಂದೇಶ; ಮಿಕ್ಕಿದ್ದೆಲ್ಲಾ  ಆವೇಶ

03:57 PM Nov 11, 2017 | Team Udayavani |

ಸರಿಯಾಗಿ ನವೆಂಬರ್‌ 27ಕ್ಕೆ ಸಂಯುಕ್ತ ಮೆಡಿಕಲ್‌ ಕಾಲೇಜಿನಿಂದ ಒಬ್ಬರಾದರೂ ಮಾಯವಾಗುತ್ತಾರೆ. ಅವರು ಎಲ್ಲಿಗೆ ಹೋಗುತ್ತಾರೆ, ಏನಾಗುತ್ತಾರೆ ಎಂಬುದು ಯಾರಿಗೂ ಗೊತ್ತಿಲ್ಲ. ಒಟ್ಟಿನಲ್ಲಿ ಕೆಲವು ವರ್ಷಗಳಿಂದ ಅದೇ ದಿನ ಒಬ್ಬರಲ್ಲ ಒಬ್ಬರು ಮಿಸ್ಸಿಂಗ್‌ ಲಿಸ್ಟ್‌ನಲ್ಲಂತೂ ಸೇರುತ್ತಾರೆ ಎಂಬ ಪ್ರತೀತಿ ಅಲ್ಲಿದೆ. ಆ ಹಾಸ್ಟೆಲ್‌ನ ತುದಿಯಲ್ಲಿರುವ ಒಂದು ಕೋಣೆಗೆ ದಿಗ್ಭಂಧನ ಹಾಕಲಾಗಿದೆ. ಒಳಗೆ ಯಾರೂ ಹೋಗಿಲ್ಲ.

Advertisement

ಕೆಲವು ವರ್ಷಗಳ ಹಿಂದೆ, ಆ ಕೋಣೆಯಿಂದ ಒಬ್ಬ ಹುಡುಗಿ ನಾಪತ್ತೆಯಾಗಿದ್ದಾಳೆ. ಅವಳ ಆತ್ಮ ಆ ಕೋಣೆಯಲ್ಲಿದೆ ಮತ್ತು ಅದನ್ನು ಕೆಣಕಿದವರನ್ನು ಅಟ್ಟಾಡಿಸಿಕೊಂಡು ಕೊಂದು ಹಾಕುತ್ತದೆ ಎಂಬ ನಂಬಿಕೆ ಎಲ್ಲರಲ್ಲೂ ಇದೆ. ಪ್ರತಿ ದಿನ ಕ್ಯಾನ್ಸರ್‌ ರೋಗದಿಂದ ಸಾಯುತ್ತಿರುವ ನೂರಾರು ಮಂದಿಯನ್ನು ನೋಡಿ, ಒಬ್ಬ ವೈದ್ಯ ಕ್ಯಾನ್ಸರ್‌ಗೆ ಔಷಧಿ ಕಂಡುಹಿಡಿಯುವುದಕ್ಕೆ ಹೊರಡುತ್ತಾನೆ.

ಈ ಜಗತ್ತಿನಿಂದ ಕ್ಯಾನ್ಸರ್‌ ನಿರ್ಮೂಲನೆ ಮಾಡಿಬಿಡಬೇಕೆಂದು ನಿರ್ಧರಿಸಿ, ಹೊಸ ಫಾರ್ಮುಲಾ ಕಂಡುಹಿಡಿಯುವುದಕ್ಕೆ ಮುಂದಾಗುತ್ತಾನೆ. ದೂರದ ಸಿಯಾಚಿನ್‌ನಲ್ಲಿ ಸೈನಿಕರ ಚಳಿಗೆ, ಶೀತಗಾಳಿಗೆ ಸಾಯುತ್ತಿದ್ದಾರೆ. ಬೆಚ್ಚಗಿನ ಬಟ್ಟೆಗಳು, ಬೂಟ್ಸ್‌ ಇಲ್ಲದೆ ಅವರೆಲ್ಲಾ ಸಾಯುತ್ತಿದ್ದಾರೆ. ಹೀಗೆ ಸಾಯುತ್ತಿರುವ ಯೋಧರನ್ನು ಹೇಗಾದರೂ ಮಾಡಿ ಉಳಿಸಬೇಕು ಎಂಬ ಮತ್ತೂಬ್ಬ ಯೋಧ ಪಣತೊಡುತ್ತಾನೆ.

ಈ ನಾಲ್ಕು ಘಟನೆ‌ಗಳಿಗೂ ಒಂದಕ್ಕೊಂದು ಸಂಬಂಧವಿದೆ. ಸಂಯುಕ್ತಾ ಮೆಡಿಕಲ್‌ ಕಾಲೇಜಿನಲ್ಲಿ ಯಾರೋ ನಾಪತ್ತೆಯಾಗುವುದಕ್ಕೂ, ಸಿಯಾಚಿನ್‌ನಲ್ಲಿ ಯೋಧರನ್ನು ಉಳಿಸುವುದಕ್ಕೂ ಎಲ್ಲಿಂದೆಲ್ಲಿಯ ಸಂಬಂಧ ಎಂದನಿಸಬಹುದು. ಆದರೂ ಸಂಬಂಧ ಇದೆ. ಆ ಸಂಬಂಧ ಏನು ಎಂದು ಹೇಳುವುದು ಅಷ್ಟು ಸುಲಭವಲ್ಲ. ತೆರೆಯ ಮೇಲೆ ನೋಡಿದರಷ್ಟೇ ಅದು ಅರ್ಥವಾಗೋಕೆ ಸಾಧ್ಯ.

ಆ ತರಹದ್ದೊಂದು ಟ್ರಿಕ್ಕಿ ಸ್ಕ್ರಿಪ್ಟ್ ಬರೆದಿದ್ದಾರೆ ನಿರ್ದೇಶಕ ಅಭಿರಾಮ್‌. ಇಲ್ಲಿ ಒಂದು ಸರಳ ಕಥೆಗೆ ಹಲವು ಚಿತ್ರ-ವಿಚಿತ್ರ ಘಟನೆಗಳನ್ನು ಸೇರಿಸಿ, ಹಲವು ಟ್ವಿಸ್ಟ್‌ಗಳನ್ನು ಇಟ್ಟಿದ್ದಾರೆ. ಇದು ಯಾರೋ ಮಾಡುತ್ತಿರುವ ಷಡ್ಯಂತ್ರವಾ ಅಥವಾ ದೆವ್ವದ ಕಾಟವಾ ಎಂದು ಗೊತ್ತಾಗದೆ ಪರದಾಡುವಂತೆ ಮಾಡುತ್ತಾರೆ. ಚಿತ್ರ ನೋಡುವ ಸಂದರ್ಭದಲ್ಲಿ ಯಾವೊಂದು ವಿಷಯವೂ ಸ್ಪಷ್ಟವಾಗುವುದಿಲ್ಲ.

Advertisement

ಆದರೆ, ಎಲ್ಲಾ ಘಟನೆಗಳೂ ಒಂದಕ್ಕೊಂದು ಅಂಟಿಕೊಂಡಿದೆ ಮತ್ತು ಎಲ್ಲಾ ಪ್ರಶ್ನೆಗಳಿಗೂ ಚಿತ್ರದ ಕೊನೆಯಲ್ಲಿ ಸಿಗುತ್ತದೆ. ಹಾಗೆ ಉತ್ತರ ಸಿಗಬೇಕಾದರೆ ಸ್ವಲ್ಪ ತಾಳ್ಮೆ ಬೇಕಾಗಬಹುದು. ಹೌದು, ಸ್ವಲ್ಪ ತಾಳ್ಮೆಯಿದ್ದರೆ “ಸಂಯುಕ್ತ-2′ ಖಂಡಿತಾ ರುಚಿಸುತ್ತದೆ. ಅದು ಇಷ್ಟವಾಗುವುದಕ್ಕೆ ಕಾರಣ, ಚಿತ್ರದಲ್ಲಿರುವ ಸಂದೇಶ. ಒಂದು ಅದ್ಭುತ ಸಂದೇಶವನ್ನು ಚಿತ್ರದ ಕೊನೆಗೆ ಇಟ್ಟಿದ್ದಾರೆ ಅಭಿರಾಮ್‌.

ಅದನ್ನು ಹೇಳುವುದಕ್ಕೆ ಥ್ರಿಲ್ಲರ್‌, ಹಾರರ್‌ ಅಂಶಗಳನ್ನು ಬಳಸಿಕೊಂಡಿದ್ದಾರೆ. ರಾಬರ್ಟ್‌ ಸ್ಟೀವನ್‌ಸನ್‌ ಅವರ “ಡಾ ಜೆಕೆಲ್‌ ಆ್ಯಂಡ್‌ ಹೈಡ್‌’ ಕಥೆಯನ್ನು ಈ ಕ್ಯಾನ್ವಸ್ಸಿಗೆ ಅದ್ಭುತವಾಗಿ ಫಿಟ್‌ ಮಾಡುತ್ತಾರೆ. ಬಹುಶಃ ಹಲವು ವಿಷಯಗಳನ್ನು ಒಂದೇ ಚಿತ್ರದಲ್ಲಿ ತುಂಬಿಸಿರುವುದರಿಂದ, ಚಿತ್ರ ಅವರ ಕೈತಪ್ಪಿ ಹೋಗುವುದಷ್ಟೇ ಅಲ್ಲ, ಪ್ರೇಕ್ಷಕರಿಗೂ ಚಿತ್ರದಲ್ಲಿ ಏನಾಗುತ್ತಿದೆ ಎಂಬ ಗೊಂದಲ ಕಾಡುತ್ತದೆ.

ಆ ಗೊಂದಲ ಮತ್ತು ಗದ್ದಲಗಳ ನಡುವೆಯೇ ಚಿತ್ರ ಅರ್ಥವಾದರೆ, ಚಿತ್ರ ಇಷ್ಟವಾಗುವುದರಲ್ಲಿ ಸಂದೇಹವಿಲ್ಲ. ಚಿತ್ರದಲ್ಲಿ ಹಲವರು ನಟಿಸಿದ್ದಾರೆ. ಆದರೆ, ದೇವರಾಜ್‌ ಮತ್ತು ನಿರ್ಮಾಪಕ ಮಂಜುನಾಥ್‌ ಅವರನ್ನು ಬಿಟ್ಟರೆ, ಇನ್ಯಾರ ಅಭಿನಯವೂ ನೆನಪಿನಲ್ಲುಳಿಯುವುದಿಲ್ಲ. ದೇವರಾಜ್‌ ಅವರಿಗೂ ಅದ್ಭುತ ಅಥವಾ ದೊಡ್ಡ ಪಾತ್ರವೇನಿಲ್ಲ. ಇರುವ ಸಮಯದಲ್ಲೇ ದೇವರಾಜ್‌ ಇಷ್ಟವಾಗುತ್ತಾರೆ.

ಇನ್ನು ನಿರ್ಮಾಪಕ ಮಂಜುನಾಥ್‌ಗೆ ಮೊದಲ ಚಿತ್ರದಲ್ಲೇ ದೊಡ್ಡ ಪಾತ್ರವಿದೆ. ಪಾತ್ರಕ್ಕೆ ಹೋಲಿಸಿದರೆ ಅವರು ಕೊಂಚ ಡಲ್ಲು. ಮೊದಲ ಚಿತ್ರವಾಗಿರುವುದರಿಂದ ಸುಧಾರಿಸಿಕೊಳ್ಳುವ ಅವಕಾಶವಿದೆ. ಇನ್ನು ಚೇತನ್‌ ಚಂದ್ರ, ತಬಲಾ ನಾಣಿ, ರೇಖ ಎಲ್ಲರೂ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ರಾಜಶೇಖರ್‌ ಅವರ ಛಾಯಾಗ್ರಹಣ ಭಯ ಹುಟ್ಟಿಸುತ್ತದೆ. ರವಿಚಂದ್ರ ಅವರ ಹಾಡುಗಳಲ್ಲಿ ಎರಡು ಖುಷಿಕೊಡುತ್ತವೆ.

ಚಿತ್ರ: ಸಂಯುಕ್ತ – 2
ನಿರ್ಮಾಣ: ಡಾ ಮಂಜುನಾಥ್‌
ನಿರ್ದೇಶನ: ಅಭಿರಾಮ್‌
ತಾರಾಗಣ: ಚೇತನ್‌ ಚಂದ್ರ, ಸಂಜಯ್‌, ನೇಹಾ ಪಾಟೀಲ್‌, ಐಶ್ವರ್ಯ ಸಿಂಧೋಗಿ, ಡಾ ಮಂಜುನಾಥ್‌, ತಬಲಾ ನಾಣಿ ಮುಂತಾದವರು

* ಚೇತನ್‌ ನಾಡಿಗೇರ್‌

Advertisement

Udayavani is now on Telegram. Click here to join our channel and stay updated with the latest news.

Next