Advertisement

ಅಜ್ಜಾರ, ಅಮ್ಮಾರ ಮಕ್ಕಳನ್ನ ಶಾಲೆಗೆ ಕಳಿಸ್ರಿ!

03:09 PM Oct 05, 2019 | Suhan S |

ಲಕ್ಷ್ಮೇಶ್ವರ: ಅಮ್ಮ, ಅಜ್ಜ, ನಾನು ಗದಗ ಜಿಲ್ಲೆಯ ಡಿಡಿಪಿಐ ರೀ. ನಿಮಗ್‌ ನಾ ಕೈ ಮುಗಿದು ಕೇಳ್ಳೋದಿಷ್ಟರೀ. ಮಕ್ಕಳನ್ನು ಕೆಲಸಕ್ಕೆ ಕಳಿಸದೇ ತಪ್ಪದೇ ಶಾಲೆಗೆ ಕಳಿಸ್ರಿ…

Advertisement

ಹೀಗೆ ಪಾಲಕರಲ್ಲಿ ಪರಿಪರಿಯಾಗಿ ಮನವಿ ಮಾಡಿದವರು ಗದಗ ಜಿಲ್ಲಾ ಡಿಡಿಪಿಐ ಎನ್‌.ಎಚ್‌. ನಾಗೂರ ಅವರು. “ಸರ್ಕಾರ ಮಕ್ಕಳಿಗೆ ಪುಸ್ತಕ, ಸಮವಸ್ತ್ರ, ಸೈಕಲ್‌, ಬಿಸಿಯೂಟ ಎಲ್ಲಾ ಕೊಡತೈತ್ರಿ. ಮಕ್ಕಳಿಗೆ ಉತ್ತಮ ಶಿಕ್ಷಣ, ಜ್ಞಾನ ನೀಡಿ ನಿಮಗ ಒಳ್ಳೆ ಹೆಸರು ತರೋ ಕೆಲಸ ಮಾಡೋ ಮಕ್ಕಳನ್ನು ನಮ್ಮ ಶಿಕ್ಷಕರು ತಯಾರ್‌ ಮಾಡ್ತಾರ್‌. ದಯವಿಟ್ಟು ನಮ್ಮನ್ನು ನಂಬ್ರಿ ಎಂದು ವಿನಂತಿಸಿದರು.

ಪಾಲಕರು, ಮಕ್ಕಳು ಮತ್ತು ಸಮುದಾಯದಲ್ಲಿ ಶಿಕ್ಷಣದ ಮಹತ್ವ, ಹಾಜರಾತಿ ಹೆಚ್ಚಳ, ಫಲಿತಾಂಶ ಸುಧಾರಣೆ, ಶೈಕ್ಷಣಿಕ ಸಮಸ್ಯೆಗಳ ಪರಿಹಾರಕ್ಕಾಗಿ ಬಟ್ಟೂರ ಗ್ರಾಮದ ಎಫ್‌.ವಿ ಅಂಗಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸುತ್ತಲಿನ ಶಾಲೆಗಳ ಸಂಯೋಜನೆಯೊಂದಿಗೆ ಹಮ್ಮಿಕೊಳ್ಳಲಾಗಿದ್ದ “ಶಾಲಾ ವ್ಯಾಸ್ತವ್ಯ’ ವಿನೂತನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಿಕ್ಷಣವೇ ಶಕ್ತಿಯಾಗಿದ್ದು, ಭವಿಷ್ಯದ ರೂವಾರಿಗಳಾದ ನೀವು ಕಲಿಕಾ ಹಂತದಲ್ಲಿ ಸಮಯ ವ್ಯರ್ಥ ಮಾಡದೇ ಶ್ರದ್ಧೆ, ಶಿಸ್ತು, ಸಂಯಮ, ಏಕಾಗ್ರತೆ ರೂಢಿಸಿಕೊಂಡು ಕ್ರಮಬದ್ಧ ಅಭ್ಯಾಸ ಮಾಡಬೇಕು ಎಂದು ಹೇಳಿದರು. ಶಾಲೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಬಟ್ಟೂರ ಸೇರಿ ಸುತ್ತಲಿನ ಅಡರಕಟ್ಟಿ, ಶೆಟ್ಟಿಕೇರಿ, ಕುಂದ್ರಳ್ಳಿ ಗ್ರಾಮದ ಸರ್ಕಾರಿ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳ ನೂರಾರು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ವಿದ್ಯಾರ್ಥಿನಿ ರೇಖಾ ಕಡಪಟ್ಟಿ, ಲತಾ ಪಾಟೀಲ,ಚನ್ನವೀರಯ್ಯ ಬಾಳೇಹಳ್ಳಿಮಠ, ಪ್ರಿಯಾಂಕ ಹುಲ್ಲಮ್ಮನವರ ಸೇರಿ ಅನೇಕ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಸಮಸ್ಯೆ

ಕೇಳಿ ಪರಿಹಾರ ಪಡೆದರು. ಇಂಗ್ಲಿಷ್‌, ಗಣಿತ ಭಾಷೆಯಲ್ಲಿ ಹೆಚ್ಚು ಅಂಕ ಪಡೆಯುವುದು ಹೇಗೆ? ಎಂಬ ವಿದ್ಯಾರ್ಥಿಗಳು ಕೇಳಿದ ಪಶ್ನೆಗೆ ಉತ್ತರಿಸಿದ ಡಿಡಿಪಿಐ ಅವರು “ಇಂಗ್ಲಿಷ್‌-ಗಣಿತ ಭಾಷೆ ಕಬ್ಬಿಣದ ಕಡಲೆಯಲ್ಲ. ನಿಮ್ಮಲ್ಲಿಯ ಭಯ, ನಕಾರಾತ್ಮಕ ಭಾವದಿಂದ ಹೊರ ಬಂದು, ನಾನು ಹೆಚ್ಚು ಅಂಕ ಪಡೆಯಬಲ್ಲೇ ಎಂಬ ಆತ್ಮ ವಿಶ್ವಾಸ ಹೊಂದಬೇಕು’. ಎಂದರು.

Advertisement

ನಮ್ಮ ಶಾಲೆಯಲ್ಲಿ ವಿಜ್ಞಾನ ವಿಷಯಕ್ಕೆ ಪ್ರಯೋಗಾಲಯವಿಲ್ಲ ಏನೂ ಮಾಡಬೇಕು? ಎಂಬ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಕೇಳಿದ ಪ್ರಶ್ನೆಗೆ “ಯಾವುದೇ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸಮೀಪದ ಪ್ರೌಢಶಾಲೆಗೆ ಶಿಕ್ಷಕರೊಂದಿಗೆ ತೆರಳಿ ಪ್ರಯೋಗಾತ್ಮಕ ಕಲಿಕೆ ಮಾಡಬಹುದು’ ಎಂದರು.

ಶಾಲೆಯಲ್ಲಿ ಇಂಗ್ಲಿಷ್‌ ಭಾಷೆಯ ಶಿಕ್ಷಕರ ಕೊರತೆ ಇದೇ ಎಂಬ ಪಾಲಕರ ಪ್ರಶ್ನೆಗೆ “ಕೂಡಲೇ ಈ ಸಮಸ್ಯೆಗೆ ಪರಿಹಾರ ಕಲ್ಪಿಸುವುದಾಗಿ’ ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಿಡಿಪಿಐ ಅವರು “ಉನ್ನತ ಗುರಿ ಮತ್ತು ಕನಸು ಹೊಂದಿ ಆ ನಿಟ್ಟಿನಲ್ಲಿ ದೃಢ ಸಂಕಲ್ಪ ಮಾಡಿದರೆ ಏಕಾಗ್ರತೆ ತಾನೇ ಆವರಿಸಿಕೊಳ್ಳುತ್ತದೆ. ನಾವೇನಾಗಬೇಕು ಅಂತ ಬಯಸ್ತಿವೋ ಹಾಗಾಗಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪಾಲಕರು ಮತ್ತು ಶಿಕ್ಷಕರು ಮಕ್ಕಳಿಗೆ, ಪ್ರೇರಣೆ, ಪ್ರೋತ್ಸಾಹ, ಶೈಕ್ಷಣಿಕ ವಾತಾವರಣ ರೂಪಿಸಿಬೇಕು. ವಿದ್ಯಾರ್ಥಿಗಳು ಸಮಯ ವ್ಯರ್ಥ, ಸೋಮಾರಿತ ಬಿಟ್ಟು ಪರೀಕ್ಷೆಗಾಗಿ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು ಅದಕ್ಕಾಗಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡುವುದು ಮುಖ್ಯವಾಗಿದೆ. ಸಕಾಲದಲ್ಲಿ ಸಾತ್ವಿಕ ಆಹಾರ, ನಿದ್ರೆ, ವ್ಯಾಯಾಮ, ಧ್ಯಾನ, ಯೋಗ, ಪ್ರಾರ್ಥನೆ ರೂಢಿಸಿಕೊಳ್ಳಬೇಕು. ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಸಂಪನ್ಮೂಲ ಮತ್ತು ವಿಷಯ ಶಿಕ್ಷಕರು ಕೈಗೊಂಡ ಪರಿಶ್ರಮಕ್ಕೆ ವಿದ್ಯಾರ್ಥಿಗಳು ಉತ್ತಮ ಫಲಿತಾಂಶದ ಗುರು ಕಾಣಿಕೆ ಸಲ್ಲಿಸಬೇಕು’ ಎಂದರು.

ಜಿಪಂ ಸದಸ್ಯೆ ದೇವಕ್ಕ ಲಮಾಣಿ, ಗ್ರಾಪಂ ಅಧ್ಯಕ್ಷ ಸೋಮಶೇಖರಯ್ಯ ಶಿಗ್ಲಿಹಿರೇಮಠ, ಯು.ಎ. ಹೊಳಾಪುರ, ಫಕ್ಕೀರಶೆಟ್ರ ಅತ್ತಿಗೇರಿ, ಜಗದೀಶ ಪಾಟೀಲ, ಕಲ್ಲಪ್ಪ ಹಡಪದ, ಮಲ್ಲಪ್ಪ ಲಮಾಣಿ, ಫಕ್ಕೀರಪ್ಪ ಹಡಪದ, ಎಚ್‌.ಬಿ. ರಡ್ಡೇರ, ಎಚ್‌.ಎಂ. ಖಾನ್‌, ಎಸ್‌.ಕೆ. ಹವಾಲ್ದಾರ್‌, ಅಸುಂಡಿ, ಡಾ| ಜಯಶ್ರೀ ಕೋಲಕಾರ ಸೇರಿ ಇತರರಿದ್ದರು. ಬಿಇಒ ವಿ.ವಿ. ಸಾಲಿಮಠ, ಮುಖ್ಯ ಶಿಕ್ಷಕಿ ವಿ.ಬಿ. ಪಾಟೀಲ, ಎಸ್‌.ಎ. ಗೊರವನಕೊಳ್ಳಿ ನಿರೂಪಿಸಿದರು. ಶಾಲಾ ಮಕ್ಕಳು ಮತ್ತು ಹರ್ಲಾಪುರದ ಶಂಬಯ್ಯ ಹಿರೇಮಠ ಕಲಾ ತಂಡದಿಂದ ಸಾಂಸ್ಕತಿಕ ಕಾರ್ಯಕ್ರಮ ಜರುಗಿದವು. ಡಿಡಿಪಿಐ ಶಾಲೆಯಲ್ಲಿಯೇ ವಾಸ್ತವ್ಯ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next