ದಾವಣಗೆರೆ : ನಾಟಕದಂತೆ ಯಕ್ಷಗಾನವೂ ರಂಗಭೂಮಿಯ ಒಂದು ಕಲಾ ಪ್ರಕಾರ. ಆದರೆ ರಾಜ್ಯ ಸರ್ಕಾರಗಳು ನಾಟಕಕ್ಕೆ ನೀಡಿದಷ್ಟು ಪ್ರೋತ್ಸಾಹ, ಮಾನ್ಯತೆಯನ್ನು ಬೇರೆ ಯಾವ ರಂಗಭೂಮಿ ಪ್ರಕಾರಕ್ಕೂ ನೀಡದೇ ಇರುವುದು ವಿಷಾದನೀಯ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ. ಎಂ.ಎ. ಹೆಗಡೆ ಹೇಳಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಉಡುಪಿಯ ಶ್ರೀ ಕಂದಾವರ ರಘುರಾಮ ಶೆಟ್ಟಿ ಪ್ರತಿಷ್ಠಾನದ ದಶಮಾನೋತ್ಸವ, ಕಂದಾವರ ಪ್ರಶಸ್ತಿ ಪ್ರದಾನ, ಯಕ್ಷಗಾನ, ತಾಳಮದ್ದಳೆ, ಯಕ್ಷಗಾನ ತರಬೇತಿ ಶಿಬಿರ ಹಾಗೂ ಯಕ್ಷೊàತ್ಸವ-2021′ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಬೇರೆ ಭಾಷೆಗಳ ಸೋಂಕಿಲ್ಲದ ಯಕ್ಷಗಾನ ಮಾತ್ರ ಕನ್ನಡ ಬೆಳೆಸುವ ಏಕೈಕ ಮಾಧ್ಯಮವಾಗಿದೆ. ಯಕ್ಷಗಾನ ಆರು ಸಾವಿರ ಪ್ರಸಂಗಳುಳ್ಳ ಏಕಮಾತ್ರ ಕಲೆಯಾಗಿದೆ.
ಆದರೆ ಸಾಹಿತ್ಯ ಸಮ್ಮೇಳನಗಳಲ್ಲಿ ಯಕ್ಷಗಾನದ ಮೇಲೆ ಒಂದು ಗೋಷ್ಠಿಯನ್ನೂ ನಡೆಸುವುದಿಲ್ಲ. ಈ ವಿಚಾರವಾಗಿ ಧ್ವನಿ ಎತ್ತಿದಾಗ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಯಕ್ಷಗಾನ ಕುರಿತು ಗೋಷ್ಠಿ ಏರ್ಪಡಿಸಲು ಕಸಾಪ ಮುಂದಾಗಿದೆ. ಇಂಥ ಕಲೆಗೆ ರಾಜ್ಯ ಹಾಗೂ ಕೇಂದ್ರ ಎರಡೂ ಸರ್ಕಾರಗಳು ಗುರುತಿಸದೇ ಇರುವುದು ನೋವಿನ ಸಂಗತಿ ಎಂದರು.
ಯಕ್ಷರಂಗ ಸಂಸ್ಥೆ ಅಧ್ಯಕ್ಷ ಮಲ್ಯಾಡಿ ಪ್ರಭಾಕರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರತಿಷ್ಠಾನದ ಸಂಸ್ಥಾಪಕ ಕಂದಾವರ ರಘುರಾಮ ಶೆಟ್ಟಿ, ಕರಾವಳಿ ಸೌಹಾರ್ದ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ಸಿ.ಎ. ಉಮೇಶ್ ಶೆಟ್ಟಿ, ಕಸಾಪ ತಾಲೂಕು ಅಧ್ಯಕ್ಷ ಬಿ. ವಾಮದೇವಪ್ಪ, ಯಕ್ಷರಂಗ ಸಂಸ್ಥೆಯ ಗಣೇಶ್ ಶೆಣೈ, ಕಲಾಕುಂಚ ಅಧ್ಯಕ್ಷ ಕೆ.ಎಚ್. ಮಂಜುನಾಥ್, ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷೆ ಹೇಮಾ ಶಾಂತಪ್ಪ ಪೂಜಾರಿ, ಬೇಳೂರು ಸಂತೋಷಕುಮಾರ್ ಶೆಟ್ಟಿ ಮತ್ತಿತರರು ಇದ್ದರು.
ಇದೇ ಸಂದರ್ಭದಲ್ಲಿ ಯಕ್ಷಗಾನ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಅವರಿಗೆ “ಕಂದಾವರ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಂದಾವರ ರಘುರಾಮ ಶೆಟ್ಟಿ ವಿರಚಿತ “ಸೀತಾ ಪಾರಮ್ಯ’ ಪೌರಾಣಿಕ ಕಥಾನಕದ ಯಕ್ಷಗಾನ ತಾಳಮದ್ದಳೆ, ಮಧುಕುಮಾರ್ ಬೋಳೂರು ವಿರಚಿತ ಪೌರಾಣಿಕ ಕಥಾನಕ “ಸುದರ್ಶನ ವಿಜಯ’ ಯಕ್ಷಗಾನ ಪ್ರದರ್ಶನಗೊಂಡವು.