ಲೋಕಾಪುರ: ಕಲಾವಿದರಿಗೆ ಪ್ರೋತ್ಸಾಹಿಸಿದರೆ ಮಾತ್ರ ಜನಪದ ಕಲೆ, ಸಾಹಿತ್ಯ ಉಳಿಯಲು ಸಾಧ್ಯ ಎಂದು ಹಿರೇಮಠದ ಶ್ರೀ ಡಾ| ಚಂದ್ರಶೇಖರ ಸ್ವಾಮಿಗಳು ಹೇಳಿದರು. ಪಟ್ಟಣದ ಶ್ರೀನಿವಾಸ ಚಿತ್ರಮಂದಿರದಲ್ಲಿ ಸರ್ವಶ್ರೇಷ್ಠ ಕ್ರಿಯೇಷನ್ಸ್ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ನಡೆದ ಜನಪದ ರಸಮಂಜರಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಪೂರ್ವಜರಿಂದ ಬಳುವಳಿಯಾಗಿ ಬಂದ ಗ್ರಾಮೀಣ ಸೊಗಡು, ನಮ್ಮ ನೆಲಮೂಲದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸ ಎಲ್ಲರೂ ಮಾಡಬೇಕಿದೆ.
ಗ್ರಾಮೀಣ ಭಾಗದ ಕಲೆ, ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಜಾನಪದ ಕಲಾವಿದರ ಕೊಡುಗೆ ಅಪಾರ. ಈ ನಿಟ್ಟಿನಲಿ ಕಲಾವಿದರಿಗೆ ಇರುವ ಎಲ್ಲ ಸೌಲಭ್ಯಗಳನ್ನು ಅರ್ಹರಿಗೆ ಮುಟ್ಟಿಸುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಬಾಗಲಕೋಟೆಯ ಆರ್.ಡಿ. ಬಾಬು (ಜ್ಯೂ. ಉಪೇಂದ್ರ) ಮಾತನಾಡಿ, ಜನಪದ ಕಲೆಯನ್ನು ಉಳಿಸಿ ಬೆಳೆಸುತ್ತಿರುವ ಎಷ್ಟೋ ಕಲಾವಿದರು ಗೌರವ ಸಿಗದೇ ಹಿಂದೆ ಉಳಿದಿದ್ದಾರೆ. ಅಂತವರನ್ನು ಗುರುತಿಸಿ ಸರಕಾರ ಪ್ರಶಸ್ತಿ ನೀಡಿದರೆ ಪ್ರಶಸ್ತಿಯ ಗೌರವವೂ ಹೆಚ್ಚುತ್ತದೆ. ಕಲಾವಿದರನ್ನು ಪ್ರೋತ್ಸಾಹಿಸಿದಂತಾಗುತ್ತದೆ ಎಂದರು.
ಜನಪದ ರಸಮಂಜರಿ ಕಾರ್ಯಕ್ರಮದಲ್ಲಿ ಮಜಾಭಾರತ ಖ್ಯಾತಿಯ ರಾಘವೇಂದ್ರ, ಜೂ. ಗುರುಕಿರಣ, ಜೂ. ಪ್ರಭಾಕರ, ಜೂ. ಎಸ್.ಪಿ. ಮತ್ತು ಜೂ. ಪುನೀತ್ ರಾಜಕುಮಾರ ಕಲಾವಿದರ ನಟನೆಯು ಜನರ ಮನ ಸೆಳೆಯಿತು. ಅಕಾಲಿಕ ಮರಣ ಹೊಂದಿದ ಖ್ಯಾತ ಚಿತ್ರನಟ ಪುನೀತ್ ರಾಜಕುಮಾರ ಅವರಿಗೆ ಪುಷ್ಪ ಅರ್ಪಿಸಿ ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸನ್ಮಾನ: ರಾಷ್ಟ್ರೀಯ ಪತ್ರಿಕಾ ದಿನ ನಿಮಿತ್ತ ಸ್ಥಳೀಯ ಪತ್ರಕರ್ತರನ್ನು ಹಾಗೂ ಬಾಗಲಕೋಟೆಯ ಮುತ್ತಪ್ಪ ರೈ ಮತ್ತು ಪುನೀತ್ ರಾಜಕುಮಾರ ಗೋಶಾಲೆಗೆ ಗೋದಾನ ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು.
ಕರ್ನಾಟಕ ಕಾರ್ಮಿಕರ ವೇದಿಕೆ ರಾಜ್ಯ ಉಪಾಧ್ಯಕ್ಷ ಹುಸೇನಸಾಬ್ ಕೆರೂರ, ನ್ಯಾಯವಾದಿ ರಾಜು ಮನ್ನಿಕೇರಿ, ಗಣಿ ಉದ್ಯಮಿ ಗುರುರಾಜ ಉದಪುಡಿ, ಸುಭಾಸ ಗಸ್ತಿ, ಲಕ್ಷ¾ಣ ಮಾಲಗಿ, ಮಾರುತಿ ರಂಗಣ್ಣವರ, ಕುಮಾರ ಕಾಳಮ್ಮನವರ, ಗುಣಕರ ಶೆಟ್ಟಿ, ನಿಗರಾಜ ಜಂಬಗಿ, ಕೃಷ್ಣಾ ಹೂಗಾರ , ಕಲ್ಯಾಣ ಕರ್ನಾಟಕ ವೇದಿಕೆ ಜಿಲ್ಲಾಧ್ಯಕ್ಷ ದುರಗೇಶ ಮಾದರ, ರಂಗಪ್ಪ ವಡ್ಡರ, ಕೃಷ್ಣಾ ಭಜಂತ್ರಿ, ಸಂಸ್ಥೆ ಅಧ್ಯಕ್ಷ ಜ್ಯೂ. ಉಪೇಂದ್ರ ಎಂಬ ಹೆಸರಾಂತ ಕಲಾವಿದ ಆರ್.ಡಿ. ಬಾಬು, ಮುತ್ತು ತುಂಗಳ ಹಾಗೂ ಕೆ.ಪಿ. ಯಾದವಾಡ ನಿರೂಪಿಸಿದರು.