Advertisement

ಪ್ರವಾಸಿ ತಾಣ ಚಿತ್ರೀಕರಿಸಿದರೆ ಪ್ರೋತ್ಸಾಹ ಧನ

06:25 AM Dec 06, 2018 | Team Udayavani |

ಬೆಂಗಳೂರು:ರಾಜ್ಯದ ಪ್ರೇಕ್ಷಣೀಯ ಹಾಗೂ ಪ್ರವಾಸಿ ತಾಣಗಳಲ್ಲಿ ಚಲನಚಿತ್ರ ಚಿತ್ರೀಕರಣ ಮಾಡಿ ದೃಶ್ಯಗಳನ್ನು ಸೆರೆ ಹಿಡಿದು ಚಿತ್ರಗಳಲ್ಲಿ ತೋರಿಸಿದರೆ ಪ್ರೋತ್ಸಾಹ ಧನ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

Advertisement

ಪ್ರವಾಸೋದ್ಯಮ ಇಲಾಖೆಯ ಪ್ರಸ್ತಾವನೆಗೆ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದ್ದು, 1 ಕೋಟಿ ರೂ.ನಿಂದ ಗರಿಷ್ಠ 2.50 ಕೋಟಿ ರೂ.ವರೆಗೆ ಪ್ರೋತ್ಸಾಹ ಧನ  ಸಿಗಲಿದೆ. ಕನ್ನಡ ಸೇರಿ  ಎಲ್ಲ ಭಾಷೆಯ ಚಿತ್ರಗಳಿಗೂ ಇದು ಅನ್ವಯವಾಗಲಿದೆ. ಆದರೆ, ಚಲನಚಿತ್ರದ ಬಜೆಟ್‌ ಕನಿಷ್ಠ 5 ಕೋಟಿ ರೂ. ನಿಗದಿಪಡಿಸಿದ್ದು ಬಜೆಟ್‌ ಆಧಾರದ ಮೇಲೆ ಪ್ರೋತ್ಸಾಹ ಧನ ನಿಯಮಾವಳಿಗಳಿಗೆ ಒಳಪಟ್ಟು ಸಿಗಲಿದೆ.

ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ, ಹಿಂದಿ ಚಲನಚಿತ್ರಗಳಲ್ಲಿ ವಿದೇಶಗಳ ಪ್ರವಾಸಿ ತಾಣಗಳನ್ನು ಚಿತ್ರೀಕರಣ ಮಾಡಿ ಅಲ್ಲಿನ ರಮಣೀಯ ದೃಶ್ಯ ತೋರಿಸುವುದರಿಂದ ಪ್ರವಾಸಿಗರು ಆಕರ್ಷಣೆಗೊಳ್ಳುತ್ತಿದ್ದಾರೆ. ಹೀಗಾಗಿ, ರಾಜ್ಯದಲ್ಲೂ ಅಂತದ್ದೊಂದು ಪ್ರಯತ್ನಕ್ಕೆ ಮುಂದಾಗಿದ್ದೇವೆ ಎಂದು ಹೇಳಿದರು.

ರಾಜ್ಯದ ಪ್ರೇಕ್ಷಣೀಯ ಹಾಗೂ ಪ್ರವಾಸಿ ತಾಣಗಳನ್ನು ಚಲನಚಿತ್ರಗಳಲ್ಲಿ ಚಿತ್ರೀಕರಿಸಿ ತೋರಿಸಿದರೆ ಅವು ಸಾರ್ವಜನಿಕರ ಮೇಲೆ ಪರಿಣಾಮ ಬೀರಲಿದ್ದು ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತದೆ ಎಂಬ ಅಧ್ಯಯನ ವರದಿ ಹಿನ್ನೆಲೆಯಲ್ಲಿಯೇ  ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಪ್ರೋತ್ಸಾಹ ಧನ ವ್ಯವಸ್ಥೆ ಪಾರದರ್ಶಕವಾಗಿರಲಿದೆ. ಯಾವುದೇ ಕಾರಣಕ್ಕೂ ದುರುಪಯೋಗ ಅಥವಾ ಪ್ರೋತ್ಸಾಹ ಧನಕ್ಕಾಗಿಯೇ ಚಿತ್ರ ನಿರ್ಮಾಣ ಮಾಡಲು ಮುಂದಾಗುವವರಿಗೆ ಅವಕಾಶ ಇರುವುದಿಲ್ಲ ಎಂದು ಹೇಳಿದರು.

Advertisement

ಭೂ ಕಂದಾಯ ಕಾಯ್ದೆ ನಿಯಮಾವಳಿಗೆ ತಿದ್ದುಪಡಿ: ಕೈಗಾರಿಕಾ ಉದ್ದೇಶಕ್ಕಾಗಿ ರೈತರಿಂದ ವಶಪಡಿಸಿಕೊಳ್ಳುವ ಜಮೀನನ್ನು ಕೃಷಿಯಿಂದ ಕೃಷಿಯೇತರ ಉದ್ದೇಶಕ್ಕೆ ಪರಿವರ್ತನೆ ಮಾಡುವ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಲು ಕರ್ನಾಟಕ ಭೂ ಕಂದಾಯ
ಕಾಯ್ದೆ-1964, 95 ಕಲಂ (2) ನಿಯಮಾವಳಿಗೆ ತಿದ್ದುಪಡಿ ತರಲು ಸಂಪುಟದಲ್ಲಿ ತೀರ್ಮಾನಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಕಂದಾಯ ಇಲಾಖೆಗೆ ಭೂ ಪರಿವರ್ತನೆಗಾಗಿ ಅರ್ಜಿ ಸಲ್ಲಿಸಿದರೆ ಕನಿಷ್ಠ ಒಂದು ತಿಂಗಳಲ್ಲಿ ಏಕಗವಾಕ್ಷಿ ಯೋಜನೆಯಡಿ ಪ್ರಕ್ರಿಯೆ ಪೂರ್ಣಗೊಳಿಸುವ ವ್ಯವಸ್ಥೆ ಇದಾಗಿದೆ. ಸಂಬಂಧಿಸಿದ ಪ್ರಾಧಿಕಾರ ಅಥವಾ ಸ್ಥಳೀಯ ಸಂಸ್ಥೆಗಳು ಇಂತಹ ಅರ್ಜಿಗಳ ಬಗ್ಗೆ 1 ತಿಂಗಳಲ್ಲಿ ಸಕಾರಣ ತಿಳಿಸದೆ ಕ್ರಮ ಕೈಗೊಳ್ಳದಿದ್ದರೆ ಅವರಿಂದ ಒಪ್ಪಿಗೆ ಸಿಕ್ಕಿದೆ ಎಂದೇ ಪರಿಗಣಿಸಿ ಪರಿವರ್ತನೆ ಮಾಡಲು ಅವಕಾಶ
ಕಲ್ಪಿಸಿಕೊಡಲಾಗುವುದು. ಪ್ರಸ್ತುತ ಇದು ಒಂದು ವರ್ಷದವರೆಗೂ ವಿಳಂಬವಾಗುತ್ತಿದೆ. ಇದನ್ನು ತಪ್ಪಿಸಲು ಈ ಕ್ರಮಕ್ಕೆ ಮುಂದಾಗಿದ್ದೇವೆ. ಕೈಗಾರಿಕೆಗಳಿಗೆ ರಾಜ್ಯ ಸರ್ಕಾರವೇ ಭೂಮಿ ಸ್ವಾಧೀನಪಡಿಸಿ ಕೊಡುವುದು ಕಷ್ಟವಾಗುತ್ತಿದೆ. ಹೀಗಾಗಿ, ಕೈಗಾರಿಕೆಗಳು ತಮಗೆ ಅಗತ್ಯವಾದ ಜಮೀನನ್ನು ರೈತರಿಂದ ನೇರವಾಗಿ ಖರೀದಿಸಿದರೆ ಭೂ ಪರಿವರ್ತನೆ ಪ್ರಕ್ರಿಯೆ ಸರಳ
ಮಾಡಿಕೊಡಲು ಸರ್ಕಾರ ನಿರ್ಧರಿಸಿದೆ ಎಂದರು.

ರಮೇಶ್‌ ಜಾರಕಿಹೊಳಿ ಗೈರು: ಸಚಿವ ಸಂಪುಟ ಸಭೆಗೆ ಸತತ ಗೈರು ಹಾಜರಾಗಿ ಕಳೆದ ಸಂಪುಟಕ್ಕೆ ಹಾಜರಾಗಿದ್ದ ಪೌರಾಡಳಿತ ಸಚಿವ ರಮೇಶ್‌ ಜಾರಕಿಹೊಳಿ ಬುಧವಾರದ ಸಂಪುಟ ಸಭೆಗೂ ಗೈರು ಹಾಜರಾಗಿದ್ದರು.

ಸಚಿವ ಸಂಪುಟ ಉಪ ಸಮಿತಿ ಪರಿಶೀಲನೆಗೆ
ರಾಜ್ಯ ಸರ್ಕಾರಿ ನೌಕರರು ವಾರದಲ್ಲಿ ಐದು ದಿನ ಮಾತ್ರ ಕಾರ್ಯ ನಿರ್ವಹಿಸುವ ಕುರಿತ ಆರನೇ ವೇತನ ಆಯೋಗದ ಶಿಫಾರಸ್ಸಿನ
ಪರಿಶೀಲನೆಯನ್ನು ಸಚಿವ ಸಂಪುಟ ಉಪ ಸಮಿತಿಗೆ ವಹಿಸಲಾಗಿದೆ. ವಾರದಲ್ಲಿ ಐದು ದಿನ ಕೆಲಸ ಮಾಡುವುದು ಅಥವಾ ಪ್ರತಿ
ತಿಂಗಳ ನಾಲ್ಕನೇ ಶನಿವಾರ ರಜೆ ಕೊಡುವುದು. ಜಯಂತಿಗಳ ಆಚರಣೆ ಸಂದರ್ಭದಲ್ಲಿ ರಜೆ ನೀಡದೆ ಆ ರಜೆಯನ್ನು ಇದಕ್ಕೆ ಸರಿದೂಗಿಸುವ ಬಗ್ಗೆ ಆರನೇ ವೇತನ ಆಯೋಗ ನೀಡಿದ್ದ ಶಿಫಾರಸ್ಸಿನ ಬಗ್ಗೆ ಸಚಿವ ಸಂಪುಟದ ಉಪ ಸಮಿತಿ ಅಂತಿಮ ತೀರ್ಮಾನ ಕೈಗೊಳ್ಳಲಿದೆ.

ರಾಜ್ಯ ಸರ್ಕಾರಿ ನೌಕರರಿಗೆ ವರ್ಷದಲ್ಲಿ ಎಷ್ಟು ರಜೆ ಇರಬೇಕು ಎಂಬ ಬಗ್ಗೆ ತೀರ್ಮಾನಿಸಲು ಈಗಾ ಗಲೇ ಸಚಿವ ಸಂಪುಟದ ಉಪ ಸಮಿತಿ ರಚಿಸಲಾಗಿದೆ. ಅದೇ ಸಮಿತಿ ವಾರದಲ್ಲಿ ಐದು ದಿನ ಕೆಲಸ ನಿರ್ವಹಣೆ ಅಥವಾ ಪ್ರತಿ ತಿಂಗಳ ನಾಲ್ಕನೇ ಶನಿವಾರ ರಜೆ ನೀಡುವ ಕುರಿತು ಪರಿಶೀಲಿಸಿ ಸರ್ಕಾರಕ್ಕೆ ವರದಿ ನೀಡಲಿದೆ. ಆರನೇ ವೇತನ ಆಯೋಗವು ಭತ್ಯೆಗಳ ಪರಿಷ್ಕರಣೆ ಸಂಬಂಧ ನೀಡಿದ್ದ ಕೆಲವು ಶಿಫಾರಸುಗಳಿಗೆ ಸಂಪುಟ ಒಪ್ಪಿಗೆ ನೀಡಿದೆ. ಸ್ವಂತ ವಾಹನ ಇಲ್ಲದವರಿಗೆ ಚಾಲಕರ ಭತ್ಯೆ 500 ರಿಂದ 750 ರೂ., ಸಹಾಯಕನ ಭತ್ಯೆ 750 ರೂ.ನಿಂದ 1000 ರೂ.ವರೆಗೆ ಹೆಚ್ಚಳ, ಪಿಂಚಣಿ ಸೌಲಭ್ಯ 20 ವರ್ಷ ಸೇವಾವಧಿಗೆ ಇದ್ದದ್ದು 15 ವರ್ಷಕ್ಕೆ ಅವಕಾಶ ಕಲ್ಪಿಸುವುದು ಸೇರಿದಂತೆ ಹಲವು ಶಿಫಾರಸುಗಳಿಗೆ ಒಪ್ಪಿಗೆ ನೀಡಲಾಗಿದೆ.

ಆರನೇ ವೇತನ ಆಯೋಗದ ಶಿಫಾರಸು ಪ್ರಕಾರ ಮೂಲ ವೇತನ ಪರಿಷ್ಕರಣೆ ತೀರ್ಮಾನ ಜಾರಿಯಿಂದ ಸರ್ಕಾರಕ್ಕೆ ವಾರ್ಷಿಕ 10,500 ಕೋಟಿ ರೂ. ಹೊರೆಯಾಗುತ್ತಿದ್ದು, ಇದೀಗ ಭತ್ಯೆಗಳ ಪರಿಷ್ಕರಣೆ ಯಿಂದ ಇನ್ನೂ 450 ಕೋಟಿ ರೂ.ಹೆಚ್ಚುವರಿ ಹೊರೆಯಾಗುವ ಅಂದಾಜು ಮಾಡಲಾಗಿದೆ ಎಂದು ತಿಳಿಸಿದರು
 

Advertisement

Udayavani is now on Telegram. Click here to join our channel and stay updated with the latest news.

Next