Advertisement

ಕರಾವಳಿಯಂತೆ ಯಕ್ಷಗಾನಕ್ಕೆ ಪ್ರೋತ್ಸಾಹಿಸಿ

10:05 PM Jan 25, 2023 | Team Udayavani |

ಬೆಂಗಳೂರು: ಯಕ್ಷಗಾನ ಕರಾವಳಿ ಕಲೆಯಲ್ಲ ಅದು ಇಡೀ ಕರ್ನಾಟಕದ ಕಲೆ ಎಂದು ಬಿಂಬಿಸಬೇಕಾಗಿದೆ ಎಂದು ಹಿರಿಯ ವಿಮರ್ಶಕ ಡಾ| ನರಹಳ್ಳಿ ಬಾಲಸುಬ್ರಹ್ಮಣ್ಯ ಹೇಳಿದ್ದಾರೆ.

Advertisement

ಕರ್ನಾಟಕ ಯಕ್ಷಗಾನ ಅಕಾಡೆಮಿ ನಯನ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ “ಮೂಡಲಪಾಯ ಯಕ್ಷಗಾನ: ಇತ್ತೀಚಿನ ಬೆಳವಣಿಗೆಗಳು’ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ದಕ್ಷಿಣ ಕರ್ನಾಟಕ ಭಾಗದಲ್ಲಿ ದಟ್ಟವಾಗಿದ್ದ ಈ ಕಲೆ ಮಂಡ್ಯ, ಹಳೆ ಮೈಸೂರು ಭಾಗದಲ್ಲಿ ಈಗ ಸಂಪೂರ್ಣ ನಶಿಸಿದೆ. ಅದರ ಪುನರುಜ್ಜೀವನ ಕಾರ್ಯ ನಡೆಯಬೇಕಾಗಿದೆ.

ಯಕ್ಷಗಾನ ಎಂದರೆ ಕರಾವಳಿ, ಉತ್ತರ ಕನ್ನಡ ಎಂಬ ಪ್ರಚಲಿತವಾದ ನಂಬಿಕೆ ಸುಳ್ಳು ಎನ್ನುವುದಷ್ಟೇ ನನ್ನ ವಾದ. ಜತೆಗೆ ಯಕ್ಷಗಾನ ಎಂದರೆ ಕರಾವಳಿ ಕಲೆಯಲ್ಲ ಕನ್ನಡದ ಕಲೆ, ನಾಡಿನ ಕಲೆ ಎಂದು ವಿಸ್ತಾರ ಮಾಡಬೇಕು ಎಂಬುದು ನನ್ನ ಹಂಬಲ ಎಂದು ತಿಳಿಸಿದರು.

ಒಂದು ಕಾಲದಲ್ಲಿ ರಾಜ್ಯಾದ್ಯಂತ ಪ್ರಚಾರದಲ್ಲಿದ್ದ ಯಕ್ಷಗಾನ ಕಲೆ ಈಗ ಕರಾವಳಿ ಮತ್ತು ಉತ್ತರ ಕನ್ನಡಕ್ಕೆ ಮಾತ್ರ ಸೀಮಿತವಾಗಿದೆ. ಒಂದು ಹಂತದಲ್ಲಿ ಯಕ್ಷಗಾನ ಎಂದರೆ ಅದು ಕರಾವಳಿ ಕಲೆ ಎಂದು ಸ್ವಂತಿಕೆ ಪಡೆದುಕೊಳ್ಳುವಷ್ಟರ ಮಟ್ಟಿಗೆ ಎಂಬಂತಾಗಿದೆ. ಆದರಲ್ಲಿ ತಪ್ಪೇನೂ ಇಲ್ಲ. ಅದಕ್ಕೆ ಆ ಭಾಗದಲ್ಲಿ ತುಂಬಾ ಪ್ರೋತ್ಸಾಹ ನೀಡಿ ಬೆಳೆಸಿದ್ದಾರೆ.

ನಾವು ಯಾವ ಕೆಲಸವನ್ನು ಮಾಡಲಿಕ್ಕೆ ಆಗಲಿಲ್ಲವೋ ಆ ಕೆಲಸವನ್ನು ಕರಾವಳಿ ಮತ್ತು ಉತ್ತರ ಕನ್ನಡ ಭಾಗದ ಜನರು ಮಾಡಿಕೊಂಡು ಬಂದಿದ್ದಾರೆ ಎಂದು ಶ್ಲಾಘಿಸಿದರು.

Advertisement

ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ. ರಾಮೇಗೌಡ ಮಾತನಾಡಿ, ರಾಜ್ಯೋತ್ಸವ ಮುಂತಾದ ಇನ್ನಿತರ ಪ್ರಶಸ್ತಿಗಳನ್ನು ನೀಡುವಾಗ ಕೇವಲ ಕರಾವಳಿ ಭಾಗದ ಕಲಾವಿದರನ್ನು ನೋಡದೆ ಹಳೆ ಮೈಸೂರು, ಮಂಡ್ಯದ ಕಲಾವಿದರನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ನಾಟಕಕಾರ ಮತ್ತು ಪಾಲಿಕೆ ವಿಶೇಷ ಆಯುಕ್ತ ಜಯರಾಮ ರಾಯಪುರ ಮಾತನಾಡಿ, ಮಂಡ್ಯ ಮತ್ತು ಮೈಸೂರು ಭಾಗಗಳಲ್ಲಿ ಕರ್ನಾಟಕ ಮೂಡಲಪಾಯ ಯಕ್ಷಗಾನ ಪರಿಷತ್ತು ಯಕ್ಷಗಾನವನ್ನು ಯುವ ಪೀಳಿಗೆಗೆ ತಲುಪಿಸುವ ಕೆಲಸ ಮಾಡುತ್ತಿದೆ ಎಂದರು.

ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ| ಜಯಪ್ರಕಾಶ ಗೌಡ, ರಂಗ ನಿರ್ದೇಶಕ ಶಶಿಧರ್‌ ಬಾರಿಘಟ್‌, ರವಿಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next