ನಾಲತವಾಡ: ಬಾಚಿಹಾಳ-ಸಿದ್ದಾಪುರ ಗ್ರಾಮದ ಮೀನುಮರಿ ಪಾಲನಾ ಕೇಂದ್ರಕ್ಕೆ ಸಂಬಂಧಿಸಿದ ಜಮೀನನ್ನು ರಾತ್ರೋ ರಾತ್ರಿ ರೈತರು ಜೆಸಿಬಿ ಮೂಲಕ ಒತ್ತುವರಿ ಪಡೆದುಕೊಳ್ಳುತ್ತಿದ್ದ ಘಟನೆ ಶನಿವಾರ ಬೆಳಕಿಗೆ ಬಂದಿದ್ದು ರವಿವಾರ ಅಧಿಕಾರಿಗಳು ಒತ್ತುವರಿ ಸ್ಥಳಕ್ಕೆ ಭೇಟಿ ನೀಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಹಿನ್ನಲೆ: 1983ರಲ್ಲೇ 7 ರೈತರಿಂದ ಅಂದಿನ ಅಂದಾಜು ಬೆಲೆ ನೀಡಿ ಕೆಬಿಜೆಎನ್‌ಎಲ್ ಇಲಾಖೆ ಸುಮಾರು 72 ಎಕರೆ ಪ್ರದೇಶದ ಜಮೀನನ್ನು ವಶಕ್ಕೆ ಪಡೆದುಕೊಂಡಿದೆ. ನಂತರ ಖಜಾನೆಯಿಂದ ನೇರವಾಗಿ ಜಮೀನು ಮಾಲೀಕರಿಗೆ ನಿಗದಿತ ಬೆಲೆಯ ಹಣ ನೀಡಲಾಗಿದೆ. ಸಾಕ್ಷಾಧಾರಗಳನ್ನು ಇಲಾಖೆ ತನ್ನಲ್ಲಿರಿಸಿಕೊಂಡಿದ್ದರೂ ರೈತರು ಪ್ರಾಣ ಹೋದರೂ ಜಮೀನು ಬಿಡಲ್ಲ ಎಂದು ಹಠ ಸಾಧಿಸುತ್ತೀರುವುದು ಕುತೂಹಲ ಮೂಡಿಸಿದೆ.
ಸುಮಾರು 35 ವರ್ಷಗಳಿಂದ ಸರಕಾರ ನಮ್ಮ ಜಮೀನನ್ನು ಪಡೆದಕೊಂಡು ಅಂದು ಸೂಕ್ತ ಬೆಲೆ ನೀಡಲಾಗಿದೆ ಎಂದು ಹೇಳಿದೆ. ಆದರೆ ಆ ಜಮೀನಿನ ದುಡ್ಡು ನಮ್ಮ ಕೈ ಸೇರಿಲ್ಲ. ಇಲಾಖೆಯವರು ನಮ್ಮನ್ನು ತಪ್ಪು ದಾರಿಗೆಳೆಯುತ್ತಿದೆ. ಸದ್ಯ ನಮ್ಮ ಜಮೀನು ನಮಗೆ ಬೇಕು ಅಥವಾ ಪ್ರಸ್ತುತ ಜಮೀನು ಬೆಲೆ ಬೇಕು ಎಂದು ಹಠ ಹಿಡಿದ ರೈತರ ಹಾಗೂ ಇಲಾಖೆಯ ನಡೆ ನಿ ಕೊಡೆ ನಾ ಬಿಡೆ ಎಂಬಂತಾಗಿದೆ.
ತಡೆಯಾಜ್ಞೆ-ಆಕ್ರೋಶ: ನಮ್ಮ ಜಮೀನಿಗಳಿಗೆ ಸೂಕ್ತ ಬೆಲೆ ನೀಡಿ ಎಂದು ಗುಲಬರ್ಗಾ ಹೈಕೋರ್ಟ್ ಮೆಟ್ಟಿಲೇರಿದ್ದೇವೆ. ನಮಗೆ ಸೂಕ್ತ ಬೆಲೆ ಘೋಷಣೆ ಸಾಧ್ಯತೆ ಸದ್ಯದಲ್ಲೇ ಇತ್ತು ಎನ್ನುತ್ತಾರೆ ರೈತರು. ಇದಕ್ಕೆ ಪ್ರತಿಯಾಗಿ ಇಲಾಖೆಯವರು ರೈತರಿಗೆ ಅಂದೇ ಸೂಕ್ತ ಬೆಲೆ ಘೋಷಿಸಿ ಹಣ ನೀಡಲಾಗಿದೆ. ಸದ್ಯ ಪುನಃ ಭೂಮಿಗೆ ಯಾವುದೇ ಬೆಲೆ ನಿಗದಿಗೊಳಿಸಿ ಆದೇಶ ಮಾಡಬಾರದು ಎಂದು ಕೆಬಿಜೆಎನ್‌ಎಲ್ ಇಲಾಖೆ ರೈತರ ಕೋರ್ಟ್ ಮೆಟ್ಟಿಲಿಗೆ ತಡೆಯಾಜ್ಞೆ ತಂದಿದ್ದು ರೈತರನ್ನು ರೊಚ್ಚಿಗೇಳಿಸಿದೆ.
ಪ್ರಕರಣ ದಾಖಲು: ಶನಿವಾರ ರೈತರಿಂದ ಜಮೀನು ಒತ್ತುವರಿ ವೇಳೆ ಸುಮಾರು ಮರಗಳೂ ಸಹ ಮಾಯವಾಗಿದ್ದು ಈ ಕುರಿತು ಒತ್ತುವರಿ ಮಾಡಿಕೊಳ್ಳುತ್ತಿರುವ ರೈತರ ವಿರುದ್ಧ ಈಗಾಗಲೇ ಪೊಲೀಸ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದು ನಮ್ಮಲ್ಲಿ ಸಾಕಷ್ಟು ಸತ್ಯಾಂಶದ ಸರಕಾರದ ಆದೇಶದ ದಾಖಲೆಗಳಿವೆ. ಮುಂದೆ ಜಮೀನು ಒತ್ತುವರಿ ತಂಟೆಗೆ ಬರದಂತೆ ಪ್ರಕರಣ ದಾಖಲಿಸುತ್ತೇವೆ ಎಂದು ಮೀನು ಮರಿ ಪಾಲನಾ ಇಲಾಖೆ ರೈತರಿಗೆ ಎಚ್ಚರಿಕೆ ನೀಡಿದೆ.
ಕಳೆದ 35 ವರ್ಷಗಳಿಂದೆ ಸಕರಾರ ನಮ್ಮ ಇಲಾಖೆಗೆ ರೈತರಿಗೆ ಸೂಕ್ತ ಬೆಲೆ ನೀಡಿದ ಸಾಕ್ಷಾಧಾರಗಳೊಂದಿಗೆ ದಾಖಲೆ ನೀಡಿದೆ. ಆದರೂ ರೈತರು ನಮ್ಮ ಜಮೀನು ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ. ಅವರನ್ನು ಗುರುತಿಸಿ ಮೇಲಾಧಿಕಾರಿಗಳಿಗೆ ದೂರು ಸಲ್ಲಿಸುತ್ತೇವೆ.
∙ಎಂ.ಎಸ್. ಭಾಂಗಿ, ಸಹಾಯಕ ಗ್ರೇಡ್-1 ನಿರ್ದೇಶಕ, ಮೀನು ಮರಿ ಪಾಲನಾ ಕೇಂದ್ರ, ನಾರಾಯಣಪುರ
ಕಷ್ಟ ಪಟ್ಟು ಬೆಳೆಸಿದ ಹೆಮ್ಮರಗಳನ್ನು ರೈತರು ತಮ್ಮ ಹಿತಕ್ಕಾಗಿ ಜಮೀನು ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಹೆಮ್ಮರವಾಗಿ ಬೆಳೆಸಿದ ಮರಗಳು ಸಹ ಮಾಯವಾಗಿವೆ. ತನಿಖೆಗೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸುತ್ತೇವೆ.
∙ಎಸ್.ಜಿ. ಬಿರಾದಾರ, ಸಹಾಯಕ ನಿರ್ದೇಶಕರು, ಮೀನು ಮರಿ ಪಾಲನಾ ಕೇಂದ್ರ, ನಾರಾಯಣಪುರ