Advertisement

ಕೈಮಗ್ಗಕ್ಕೆ  ಶೂನ್ಯ ಕರ ವಿಧಿಸಿ

04:25 PM Sep 15, 2017 | |

ಸಾಗರ: ಹೆಚ್ಚು ಉದ್ಯೋಗ ಸೃಷ್ಟಿಸಿ ಜನ ಸಾಮಾನ್ಯರ ಜೀವನ ನಿರ್ವಹಣೆಗೆ ಅನುಕೂಲವಾಗುವ ಗ್ರಾಮೀಣ ಕರಕುಶಲ ಉತ್ಪಾದಕ ವ್ಯವಸ್ಥೆಯ ಸಂಘಟನೆಗಳಿಗೆ ಜಿಎಸ್‌ಟಿ ಅಡಿಯಲ್ಲಿಯೇ ಶೂನ್ಯ ಕರ ವಿಧಿಸುವುದಕ್ಕೆ ಕೇಂದ್ರ ಮುಂದಾಗಬೇಕು ಎಂದು ಗ್ರಾಮ ಸೇವಾ ಸಂಘದ ರಾಜ್ಯ ಸಂಘಟನೆಯ ಪ್ರಮುಖ ಹಾಗೂ ರಂಗಕರ್ಮಿ ಪ್ರಸನ್ನ ಒತ್ತಾಯಿಸಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕು ಮತ್ತು ಸೇವಾ ತೆರಿಗೆ ವಿರುದ್ಧ ವಿವಿಧ ಕೈ ಉತ್ಪಾದಕ ಸಂಘಟನೆಗಳು ನಡೆಸುತ್ತಿರುವ ಹೋರಾಟಕ್ಕೆ ತಾತ್ಕಾಲಿಕ ಜಯ ಎನ್ನುವಂತೆ ಖಾದಿ ಉತ್ಪನ್ನಗಳ ಮೇಲಿನ ಕರ ಹಿಂತೆಗೆದುಕೊಳ್ಳಲಾಗಿದ್ದನ್ನು ಹೊರತುಪಡಿಸಿ, ಉಳಿದ ಕೈ ಉತ್ಪನ್ನಗಳ ಮೇಲೆ ರೂ. 20 ಲಕ್ಷ ವಾರ್ಷಿಕ ವ್ಯಾಪಾರ ಮಿತಿ ಒಳಪಡಿಸಲಾಗಿದೆ. ಇದು ಅಸಾಧುವಾದ ಕ್ರಮ. ಈ ಹಿನ್ನೆಲೆಯಲ್ಲಿ ಗ್ರಾಮ ಸೇವಾ ಸಂಘ ನಡೆಸುತ್ತಿರುವ ಕರ ನಿರಾಕರಣೆ ಸತ್ಯಾಗ್ರಹ ಮುಂದುವರಿಸಲಾಗುತ್ತಿದೆ ಎಂದು ಅವರು ಹೇಳಿದರು.

ರೈತರ ಆಹಾರೋತ್ಪನ್ನಗಳು, ನೇಕಾರನ ಕೈಮಗ್ಗ ವಸ್ತ್ರ, ಕಮ್ಮಾರನ ನೇಗಿಲು, ಮಾದಾರನ ಬುಟ್ಟಿ-ಚಾಪೆ, ಕುಂಬಾರನ
ಮಡಕೆ ಇತ್ಯಾದಿ ಎಲ್ಲದಕ್ಕೂ ಮಿತಿಯಿರದ ಶೂನ್ಯಕರ ಸೌಲಭ್ಯ ಸಿಗಬೇಕು ಎನ್ನುವುದು ಗ್ರಾಮ ಸೇವಾ ಸಂಘದ ಒತ್ತಾಯ. ಕರದಿಂದ ದೂರ ಉಳಿಯುವುದರಿಂದ ಗ್ರಾಮೀಣ ಗೃಹ ಕೈಗಾರಿಕೆಗಳು ಕುಂಠಿತವಾಗುತ್ತದೆ. ಜಿಎಸ್‌ಟಿ ಆಧಾರಿತ ಬಿಲ್ಲಿಂಗ್‌ ಆಗುವುದಿಲ್ಲ ಎಂತಾದರೆ ಅಧಿಕೃತ ವ್ಯವಸ್ಥೆಗಳು ಗೃಹ ಉದ್ಯಮಗಳ ಮೂಲಕ ಸಗಟು ಖರೀದಿ ಮಾಡಲು ಸಾಧ್ಯವಾಗುವುದಿಲ್ಲ. ಬೃಹತ್‌ ಉತ್ಪಾದಕರಿಗೆ ಗೃಹ ಉತ್ಪನ್ನಗಳನ್ನು ಅವರು ಕೇಳಿದ ದರಕ್ಕೆ ಕೊಡುವ ಸ್ಥಿತಿಯೂ ನಿರ್ಮಾಣವಾಗಬಹುದು. ಜಿಎಸ್‌ಟಿ ವ್ಯಾಪ್ತಿಗೆ ಒಳಪಡಿಸಿಯೂ ಸರ್ಕಾರ ಕೈ ಉತ್ಪನ್ನಗಳ ಖಾಸಗಿ ತಯಾರಕರಿಗೆ ಶೂನ್ಯ ತೆರಿಗೆ ವಿಧಿಸುವ ಬದಲು ತಯಾರಕರು ತಮ್ಮ ಸಹಕಾರಿ ವ್ಯವಸ್ಥೆಯೊಳಗೆ ತಮ್ಮ ಉತ್ಪನ್ನಗಳನ್ನು ನೇರ ಮಾರಾಟ ಮಾಡುವುದಕ್ಕೆ ಮತ್ತು ದಲ್ಲಾಳಿ ವ್ಯವಹಾರ ನಿಯಂತ್ರಿಸುವುದಕ್ಕೆ ಪೂರಕವಾಗಿ ಶೂನ್ಯ ಬಡ್ಡಿ ವಿಧಿಸಬೇಕು ಎಂದು ಆಗ್ರಹಿಸಿದರು.

ಕೈ ಉತ್ಪಾದಕ ಕ್ಷೇತ್ರ ಯಂತ್ರೋತ್ಪಾದಕ ಕ್ಷೇತ್ರಕ್ಕಿಂತ ಹನ್ನೆರಡು ಪಟ್ಟು ಹೆಚ್ಚು ಉದ್ಯೋಗ ಸೃಷ್ಟಿ ಮಾಡಲಿರುವುದನ್ನು ಸರಕಾರಗಳು ಗಮನಿಸಬೇಕು. ಒಂದು ವಿದ್ಯುತ್‌ ಮಗ್ಗ ಅಳವಡಿಕೆಯಿಂದ 12 ಸಾವಿರ ಕೈಮಗ್ಗ ಕಾರ್ಮಿಕರಿಗೆ ಸಿಗುವ ಉದ್ಯೋಗ ತಪ್ಪಿ ಹೋಗುತ್ತಿದೆ. ಉದ್ಯೋಗಾವಕಾಶವನ್ನು ಕಸಿದುಕೊಂಡ ಸರ್ಕಾರ ಹೊಸ ಉದ್ಯಮಗಳ ಮೂಲಕ ಉದ್ಯೋಗ ಸೃಷ್ಟಿಯ ಮಾತನಾಡುವುದು ಶುದ್ಧ ವ್ಯಂಗ್ಯ. ಆದರೆ ನಾವು ಸರ್ಕಾರಗಳ ವಿರುದ್ಧವಿಲ್ಲ. ಅವರಿಗೆ ವಾಸ್ತವದ ಮನವರಿಕೆ ಮಾಡಿಕೊಡುವ ಪ್ರಯತ್ನದಲ್ಲಿದ್ದೇವೆ. ಗ್ರಾಮೀಣ ಬಡವರ ಉತ್ಪಾದಕತೆ ಹೆಚ್ಚಿಸಿ ಅಲ್ಲಿ ಆರ್ಥಿಕ ವ್ಯವಹಾರ ಸುಧಾರಿಸುವಂತೆ ಮಾಡುವುದು ಸರಕಾರದ ಪ್ರಮುಖ ಜವಾಬ್ದಾರಿಯಾಗಬೇಕು. ಸರ್ಕಾರ ವಸ್ತುಸ್ಥಿತಿಯನ್ನು ಅಧ್ಯಾಯನ ನಡೆಸಿ ಕೈ ಉತ್ಪನ್ನಗಳ ವೈಜ್ಞಾನಿಕ ವಿವರಣೆಯನ್ನು ಮಾನ್ಯ ಮಾಡಬೇಕು. ಅಲ್ಲದೆ ಈ ಕುರಿತು ಮುಖ್ಯಮಂತ್ರಿಗಳು ವಿಧಾನಸಭೆಯಲ್ಲಿ ಎಲ್ಲ ಪಕ್ಷದ ಪ್ರಮುಖರ ಉಪಸ್ಥಿತಿಯಲ್ಲಿ ನಿಲುವು ಮಂಡಿಸಿ ಗ್ರಾಮೀಣ ಬಡ ಜನರ ಉತ್ಪಾದನೆಗೆ ಪ್ರೋತ್ಸಾಹ ನೀಡಬೇಕು. ಈ ನಿಟ್ಟಿನಲ್ಲಿ ನಾವೂ ಕೂಡ ಸರ್ಕಾರದ ಜೊತೆ ಕೈಜೋಡಿಸಲು ಬದ್ಧರಿದ್ದೇವೆ ಎಂದರು.

ಗ್ರಾಮಸೇವಾ ಸಂಘದ ಜಿಲ್ಲಾಧ್ಯಕ್ಷೆ ಗೌರಮ್ಮ, ಕಾರ್ಯದರ್ಶಿ ರಮೇಶ್‌, ಭೀಮನಕೋಣೆ ಚರಕ ಸಂಸ್ಥೆಯ ಭಾಗೀರಥಿ,
ಮಹಾಲಕ್ಷ್ಮಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next