Advertisement

ಲೋಕಾಯುಕ್ತಕ್ಕೆ ಶಕ್ತಿ ನೀಡಿ; ಎಸಿಬಿ ಸಿಬಂದಿ ವರ್ಗಾಯಿಸಿ

12:18 AM Nov 17, 2022 | Team Udayavani |

ಎಸಿಬಿ ರದ್ದುಗೊಳಿಸಿ ಲೋಕಾಯುಕ್ತಕ್ಕೆ ಅಧಿಕಾರ ವರ್ಗಾವಣೆ ಮಾಡಿದ ಅನಂತರ ಬರುತ್ತಿರುವ ದೂರುಗಳ ಸಂಖ್ಯೆಯಲ್ಲಿ ಹೆಚ್ಚಳ­ವಾಗುತ್ತಿದೆ. ಆದರೆ ಆ ಪ್ರಕರಣಗಳನ್ನು ತನಿಖೆ ಮಾಡಿ ಕ್ರಮ ಕೈಗೊಳ್ಳಲು ಸಿಬಂದಿ ಕೊರತೆ ಎದುರಾಗಿರುವುದು ವಿಷಾದನೀಯ.

Advertisement

ರಾಜ್ಯ ಸರಕಾರ ಲೋಕಾಯುಕ್ತಕ್ಕೆ ಅಗತ್ಯ ಸಿಬಂದಿ ಸಹಿತ ಇತರ ಮೂಲಸೌಕರ್ಯ ಒದಗಿಸಬೇಕಿತ್ತು. ಎಸಿಬಿ ರದ್ದುಗೊಂಡ ಅಲ್ಲಿನ ಅಧಿಕಾರಿ ಸಿಬಂದಿಯನ್ನು ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಬಹು­ದಿತ್ತು. ಆ ಕೆಲಸ ಸಹ ಮಾಡಿಲ್ಲ. ಅತ್ತ ಎಸಿಬಿ ಅಸ್ತಿತ್ವದಲ್ಲೇ ಇಲ್ಲ. ಆದರೂ ಅಲ್ಲಿ ಸಿಬಂದಿ ಮತ್ತು ಅಧಿಕಾರಿ ಯಾಕೆ ಎಂಬ ಪ್ರಶ್ನೆ ಹಾಗೆಯೇ ಇದೆ. ಅಲ್ಲಿನ ಸಿಬಂದಿಯನ್ನು ವರ್ಗಾವಣೆ ಮಾಡಿಲ್ಲ. ಕೆಲವು ಸಿಬಂದಿಯನ್ನು ಮಾತ್ರ ಲೋಕಾಯುಕ್ತಕ್ಕೆ ನಿಯೋಜಿಸಿ ಕೈ ತೊಳೆದುಕೊಳ್ಳಲಾಗಿದೆ.

ಹೈಕೋರ್ಟ್‌ ಆದೇಶದಲ್ಲಿ ಎಸಿಬಿಯ ಎಲ್ಲ ಸಿಬಂದಿ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲು ತಿಳಿಸಿದ್ದರೂ ಸರಕಾರ ಮೀನಾಮೇಷ ಎಣಿಸುತ್ತಿರುವುದು ಯಾಕೆ ಎಂಬುದೇ ಅರ್ಥವಾಗುತ್ತಿಲ್ಲ. ಭ್ರಷ್ಟಾಚಾರ ನಿಯಂತ್ರಣ ವಿಚಾರದಲ್ಲಿ ರಾಜ್ಯ ಸರಕಾರ ಇಚ್ಛಾಶಕ್ತಿ ಪ್ರದರ್ಶಿಸ­ಬೇಕಾಗಿದೆ. ಲೋಕಾಯುಕ್ತಕ್ಕೆ ಅಗತ್ಯವಾದ ಸಿಬಂದಿ ಮತ್ತು ಇತರ ಸವಲತ್ತು ಒದಗಿಸಲು ಆದ್ಯತೆ ನೀಡಬೇಕಾಗಿದೆ. ಇಲ್ಲದಿದ್ದರೆ ಲೋಕಾ­ಯುಕ್ತ ಸಂಸ್ಥೆ ಹಲ್ಲಿಲ್ಲದ ಹಾವು ಎಂಬಂತೆ ಆಗುವುದರಲ್ಲಿ ಸಂಶಯವಿಲ್ಲ.

ಲೋಕಾಯುಕ್ತಕ್ಕೆ ಅಗತ್ಯ ಸಿಬಂದಿ ಹಾಗೂ ಇತರ ವ್ಯವಸ್ಥೆ ಕಲ್ಪಿಸಲು ಖುದ್ದು ಲೋಕಾಯುಕ್ತರೇ ಪತ್ರ ಬರೆದು ಅದಕ್ಕೆ ಪತ್ರದ ಮೂಲಕ ಆಶ್ವಾಸನೆ ನೀಡಲಾಗಿತ್ತು. ಆದರೆ ತಿಂಗಳುಗಳು ಕಳೆದರೂ ಆಶ್ವಾಸನೆ ಹಾಗೆಯೇ ಇದೆ. ಇದರ ಬಗ್ಗೆ ಮುಖ್ಯಮಂತ್ರಿಯವರು ಗಮನಹರಿಸಬೇಕಾಗಿದೆ. ಎಸಿಬಿ ರದ್ದುಗೊಂಡ ಬಳಿಕ ಲೋಕಾಯುಕ್ತಕ್ಕೆ ಅಧಿಕಾರ ಸಿಕ್ಕ ಅನಂತರ ಭ್ರಷ್ಟಾಚಾರದ ವಿರುದ್ಧದ ದೂರುಗಳು ಹೆಚ್ಚಾಗು­ತ್ತಿದೆ. ಪ್ರತೀದಿನ ದೂರುಗಳು ಬರುತ್ತಿವೆ. ಹೀಗಿರುವಾಗ ಆ ಸಂಸ್ಥೆ ಬಲ­ವರ್ಧನೆ ದೃಷ್ಟಿಯಿಂದ ಸಿಬಂದಿ ಕೊರತೆ ಕಾಡದಂತೆ ನೋಡಿ­ಕೊಳ್ಳಬೇಕಾಗಿದೆ. ಇಲ್ಲದಿದ್ದರೆ ಆ ಸಂಸ್ಥೆಯೂ ಏನೂ ಮಾಡದ ಅಸಹಾಯಕ ಸ್ಥಿತಿಗೆ ತಲುಪುತ್ತದೆ.

ಲೋಕಾಯುಕ್ತಕ್ಕೆ ಸಿಬಂದಿ ಇಲ್ಲ ಎಂಬ ಸಂದೇಶ ಹೋಗಬಾರದು. ಇದು ಬೇರೆ ರೀತಿಯಲ್ಲೂ ಪರಿಣಾಮ ಬೀರಬಹುದು. ರಾಜ್ಯಾದ್ಯಂತ 31 ಜಿಲ್ಲೆಗಳಲ್ಲೂ ಲೋಕಾಯುಕ್ತ ಪೊಲೀಸ್‌ ವಿಭಾಗವಿದ್ದು, ಎಲ್ಲ ಕಡೆ ವಾಹನ, ಸಿಬಂದಿ, ಕಚೇರಿ ಸಹಿತ ಇತರ ಸವಲತ್ತು ಒದಗಿಸುವ ಬಗ್ಗೆ ಗಮನಹರಿಸಬೇಕಾಗಿದೆ. ಲೋಕಾಯುಕ್ತದಲ್ಲಿರುವ 1,402 ಹುದ್ದೆಗಳ ಪೈಕಿ 380 ಹುದ್ದೆಗಳು ಖಾಲಿ ಇವೆ. ಸಿ ಗ್ರೂಪ್‌ನ 264 ಹುದ್ದೆಗಳು ವರ್ಷಗಳಿಂದ ಹಾಗೆ ಉಳಿದಿದೆ ಎಂಬುದು ನಿರ್ಲಕ್ಷ್ಯ ಮಾಡುವ ಸಂಗತಿಯೇನಲ್ಲ.

Advertisement

ಲೋಕಾಯುಕ್ತ ನ್ಯಾಯಮೂರ್ತಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ. ಇದಕ್ಕೆ ಸರಕಾರವೂ ಅಗತ್ಯ ಸಿಬಂದಿ, ಸೌಲಭ್ಯ ಒದಗಿಸುವ ಮೂಲಕ ಅವರ ಕೈ ಬಲಪಡಿಸಬೆಕಾಗಿದೆ. ಎಸಿಬಿಯಲ್ಲಿ ಖಾಲಿಯಾಗಿ ಕುಳಿತಿರುವ ಸಿಬಂದಿಯನ್ನು ತತ್‌ಕ್ಷಣ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡುವ ಕೆಲಸ ಆಗಬೇಕು. ಜತೆಗೆ ಒಂದಷ್ಟು ಪ್ರಾಮಾಣಿಕ ಅಧಿಕಾರಿಗಳನ್ನು ಲೋಕಾಯುಕ್ತ ಪೊಲೀಸ್‌ ವಿಭಾಗಕ್ಕೆ ನಿಯೋಜಿಸಬೇಕಾಗಿದೆ. ಹಾಗೆ ಮಾಡಿದಾಗ ಮಾತ್ರ ಕರ್ನಾಟಕ ಲೋಕಾಯುಕ್ತ ಬಲಯುತವಾಗಲು ಸಾಧ್ಯ.

Advertisement

Udayavani is now on Telegram. Click here to join our channel and stay updated with the latest news.

Next