ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ನಿರ್ವಹಿಸುವ ನೋಂದಾಯಿತ ಕಾರ್ಮಿಕರಿಗೆ ದುಡಿಯುವ ಕೆಲಸದ ಪ್ರಮಾಣದಲ್ಲಿ ರಿಯಾಯಿತಿ ನೀಡಿ ಸರಕಾರ ಆದೇಶಿಸಿದೆ.
Advertisement
ಇದರಂತೆ ಈ ತಿಂಗಳಿನಲ್ಲಿ ಉದ್ಯೋಗ ಖಾತರಿ ಯೋಜನೆಯ ಕೆಲಸಗಾರರಿಗೆ ಶೇ. 25ರಷ್ಟು ರಿಯಾಯಿತಿ ದೊರೆಯಲಿದೆ. ಅಂದರೆ, 1 ದಿನದಲ್ಲಿ ಶೇ. 100ರಷ್ಟು ಕಾಮಗಾರಿ ಮಾಡಬೇಕಾದ ಇವರು ಈ ತಿಂಗಳಿನಲ್ಲಿ ಶೇ. 75ರಷ್ಟು ಪ್ರಮಾಣದಲ್ಲಿ ಮಾತ್ರ ಕೆಲಸ ಮಾಡಬಹುದು. ಎಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಶೇ. 30ರಷ್ಟು, ಜೂನ್‌ನಲ್ಲಿ ಶೇ. 20ರಷ್ಟು ರಿಯಾಯಿತಿ ದೊರೆಯಲಿದೆ.
ರಾಜ್ಯದ 30 ಜಿಲ್ಲೆಗಳ 176 ತಾಲೂಕುಗಳ ಪೈಕಿ 156 ತಾಲೂಕುಗಳನ್ನು ಬರಪೀಡಿತ ಎಂದು ಸರಕಾರ ಘೋಷಿಸಿದೆ. ಈ ತಾಲೂಕುಗಳಲ್ಲಿ ಉಷ್ಣಾಂಶ ಹೆಚ್ಚಾಗಿದ್ದು, ಈ ಕಾರಣದಿಂದ ನರೇಗಾ ಯೋಜನೆಯಡಿ ನಿಗದಿಪಡಿಸಿದ ಕಾಮಗಾರಿಗಳ ಕೆಲಸದ ಪ್ರಮಾಣವನ್ನು ನಿರ್ವಹಿಸುವುದು ಕಷ್ಟ. ಹೀಗಾಗಿ ಮಾ. 16ರಂದು ರಾಜ್ಯ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ರಾಜ್ಯದ ಎಲ್ಲ ಜಿಲ್ಲಾಧಿಕಾರಿ/ಜಿ.ಪಂ. ಸಿಇಒಗಳೊಂದಿಗೆ ನಡೆದ ಸಂವಾದದಲ್ಲಿ ಚರ್ಚಿಸಿ, ಕೆಲಸದ ಪ್ರಮಾಣದಲ್ಲಿ ರಿಯಾಯಿತಿ ಪ್ರಕಟಿಸಲು ಸೂಚಿಸಲಾಗಿದೆ. ಕಳೆದ ವರ್ಷ ಕೂಡ ಈ ರಿಯಾಯಿತಿ ನೀಡಲಾಗಿತ್ತು. ರಾಜ್ಯದಲ್ಲಿ ಒಟ್ಟು 50 ಲಕ್ಷಕ್ಕೂ ಅಧಿಕ ಜಾಬ್ ಕಾರ್ಡ್‌ಗಳನ್ನು ಜಾರಿಗೊಳಿಸಲಾಗಿದ್ದು, ಇದರಲ್ಲಿ 25 ಲಕ್ಷಕ್ಕೂ ಅಧಿಕ ಕಾರ್ಡ್‌ಗಳು ಪ್ರಸ್ತುತ ಕಾರ್ಯನಿರತವಾಗಿವೆ. ಇವರಿಗೆ ಈ ರಿಯಾಯಿತಿ ಲಾಭ ದೊರೆಯಲಿದೆ.
Related Articles
ರಸ್ತೆ, ಬಾವಿ, ಶ್ಮಶಾನ ನಿರ್ಮಾಣ ಸೇರಿದಂತೆ ಗ್ರಾಮದ ಸಮಗ್ರ ಅಭಿವೃದ್ಧಿ, ದನದ ಹಟ್ಟಿ ನಿರ್ಮಾಣ, ಕೆರೆ ಅಭಿವೃದ್ಧಿ ಸೇರಿದಂತೆ ಅರ್ಹ ಫಲಾನುಭವಿ ರೈತರ ಕೃಷಿ ಸಂಬಂಧಿತ ಕೆಲಸಗಳು ಹಾಗೂ ತೋಟಗಾರಿಕೆ ಅಭಿವೃದ್ಧಿ ಚಟುವಟಿಕೆಗಳನ್ನು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೈಗೊಳ್ಳಲು ಅವಕಾಶವಿದೆ. ಗ್ರಾ.ಪಂ. ವ್ಯಾಪ್ತಿಯ ಅರ್ಹ ಪ್ರತೀ ಕುಟುಂಬಕ್ಕೆ ಕನಿಷ್ಠ 100 ದಿನಗಳ ಉದ್ಯೋಗ ನೀಡಲಾಗುತ್ತದೆ. 1 ದಿನಕ್ಕೆ ಇಂತಿಷ್ಟು ವೇತನ ನಿಗದಿಪಡಿಸಲಾಗಿದ್ದು, ವರ್ಷಕ್ಕೆ ಸುಮಾರು 22,400 ರೂ. ದೊರೆಯಲಿದೆ. 1 ದಿನದಲ್ಲಿ 1 ಕ್ಯೂಬಿಕ್ ಮೀಟರ್‌ನಷ್ಟು ಕೆಲಸ ನಡೆಸಬೇಕಾಗುತ್ತದೆ. ಇದರಲ್ಲಿ ಬಿಸಿಲಿನ ಕಾರಣದಿಂದ ಶೇಕಡಾವಾರು ರಿಯಾಯಿತಿ ನೀಡಲು ಇದೀಗ ಸರಕಾರ ನಿರ್ಧರಿಸಿದೆ.
Advertisement
ಉದ್ಯೋಗ ಖಾತರಿ ಯೋಜನೆಯಲ್ಲಿ ಕೆಲಸ ಮಾಡಬೇಕಾದರೆ ಆ ಕಾಮಗಾರಿಯ ಪೂರ್ಣ ಹೆಸರನ್ನು ಗ್ರಾಮ ಸಭೆಯ ಮುಂದಿರಿಸಿ, ಗ್ರಾ.ಪಂ. ಅನುಮತಿ ಪಡೆದು, ತಾ.ಪಂ ಹಾಗೂ ಜಿ.ಪಂ.ನಲ್ಲಿ ಅನುಮೋದನೆ ದೊರೆಯಬೇಕಿದೆ. ಬಳಿಕ ಸಂಬಂಧಿತರಿಗೆ ವೈಯಕ್ತಿಕ “ಜಾಬ್ ಕಾರ್ಡ್’ ಜಾರಿಗೊಳಿಸಲಾಗುತ್ತದೆ. ಬಳಿಕ ಸಂಬಂಧಿತ ಕಾರ್ಮಿಕನ ಬ್ಯಾಂಕ್ ಅಕೌಂಟ್‌ಗೆ ಹಣ ಸಲ್ಲಿಕೆಯಾಗುತ್ತದೆ.