Advertisement

ಉದ್ಯೋಗ ಖಾತ್ರಿ: ಗುರಿಗೂ ಮೀರಿ ಸಾಧನೆ

10:40 AM Jul 16, 2019 | Suhan S |

ಕೊಪ್ಪಳ: ಅಸಂಘಟಿತ ಕಾರ್ಮಿಕ ವರ್ಗಕ್ಕೆ ಉದ್ಯೋಗದ ಭದ್ರತೆ ಒದಗಿಸಲು ಸರ್ಕಾರವು ಆರಂಭಿಸಿದ ಉದ್ಯೋಗ ಖಾತ್ರಿ ಯೋಜನೆಯಡಿ 2018-19ನೇ ಸಾಲಿನಲ್ಲಿ ಕೊಪ್ಪಳ ಜಿಲ್ಲೆ ಗುರಿಗೂ ಮೀರಿ ಸಾಧನೆ ಮಾಡಿದೆ. ಒಂದೇ ವರ್ಷದಲ್ಲಿ ನರೇಗಾದಲ್ಲಿ 135 ಕೋಟಿ ರೂ. ವ್ಯಯವಾಗಿದೆ. ಆದರೂ ಜನರ ಗುಳೆ ತಪ್ಪಿಲ್ಲ.

Advertisement

ಹೌದು. ಜಿಲ್ಲೆಯಲ್ಲಿ ಜಿಪಂ ವತಿಯಿಂದ ವಾರ್ಷಿಕ ಯೋಜನೆ ಪ್ರಕಾರ, ನರೇಗಾದಲ್ಲಿ 2018-19ನೇ ಸಾಲಿಗೆ 36 ಲಕ್ಷ ಮಾನವ ದಿನ ಸೃಜನೆಯ ಗುರಿ ಹಾಕಿಕೊಳ್ಳಲಾಗಿತ್ತು. ಆದರೆ ಕಳೆದ ನವೆಂಬರ್‌ನಲ್ಲೇ ಹಾಕಿಕೊಂಡ ಗುರಿ ತಲುಪಿದ ಹಿನ್ನೆಲೆಯಲ್ಲಿ ಹೆಚ್ಚುವರಿ 4 ಲಕ್ಷ ಮಾನವ ದಿನ ಸ‌ೃಜನೆಗೆ ಸರ್ಕಾರ ಅನುಮೋದನೆ ನೀಡಿದ ಹಿನ್ನೆಲೆಯಲ್ಲಿ ಒಟ್ಟು 40 ಲಕ್ಷ ಮಾನವ ದಿನದ ಗುರಿಯಾಯಿತು. ಆದರೆ ಜನವರಿಯಿಂದ ಮಾರ್ಚ್‌ನಲ್ಲಿ ಬೇಸಿಗೆಯ ಭವಣೆ ಹೆಚ್ಚಾಗಿದ್ದರಿಂದ ಜನ ದುಡಿಮೆ ಅರಸಿ ಗುಳೆ ಹೋಗಲಾಗರಂಭಿಸಿದರು. ಬರದ ಪರಿಸ್ಥಿತಿಯಿಂದ ಹೆಚ್ಚುವರಿ ಮಾನವ ದಿನ ಸ‌ೃಜನತೆಗೆ ಅಸ್ತು ಎಂದ ಹಿನ್ನೆಲೆಯಲ್ಲಿ ಕಳೆದ ಬಾರಿ ಜಿಲ್ಲೆಯಲ್ಲಿ 40 ಲಕ್ಷ ಮಾನವ ದಿನಕ್ಕೆ 42 ಲಕ್ಷ ಮಾನವ ದಿನ ಸ‌ೃಜನೆ ಮಾಡಿ ಗುರಿಗೂ ಮೀರಿ ಸಾಧನೆ ಮಾಡಿದೆ.

ನರೇಗಾದಡಿ ನಿಯಮಾವಳಿ ಪ್ರಕಾರ ಬರುವ ಕಾಮಗಾರಿಗಳನ್ನು ಕೈಗೆತ್ತಿಕೊಂಡು ನೇರವಾಗಿ ಕೂಲಿ ಕಾರ್ಮಿಕರಿಗೆ ಹಣ ಖಾತೆಗೆ ವರ್ಗಾವಣೆ ಮಾಡಲಾಗಿದೆ.

135 ಕೋಟಿ: 42 ಲಕ್ಷ ಮಾನವ ದಿನದ ಕೆಲಸವು ಪೂರ್ಣಗೊಂಡ ಹಿನ್ನೆಲೆಯಲ್ಲಿ ಕೆಲಸ ಮಾಡಿದ ಕಾರ್ಮಿಕ ಸೇರಿದಂತೆ ಯಂತ್ರಗಳ ಮೂಲಕ ಮಾಡಿಸಿದ ಕೆಲವೊಂದು ಕಾಮಗಾರಿಗಳು ವೇತನ ಬಿಡುಗಡೆ ಮಾಡಲಾಗಿದ್ದು, ಬರೊಬ್ಬರಿ ಜಿಲ್ಲೆಯಲ್ಲಿ ಒಂದೇ ವರ್ಷಕ್ಕೆ 135 ಕೋಟಿ ರೂ. ನರೇಗಾದಡಿ ಹಣ ಖರ್ಚಾಗಿದೆ. ಗಂಗಾವತಿ ತಾಲೂಕಿನಲ್ಲಿ 42 ಕೋಟಿ, ಕೊಪ್ಪಳ ತಾಲೂಕಿನಲ್ಲಿ 17 ಕೋಟಿ, ಕುಷ್ಟಗಿ ತಾಲೂಕಿನಲ್ಲಿ 61 ಕೋಟಿ, ಯಲಬುರ್ಗಾದಲ್ಲಿ 10 ಕೋಟಿ ರೂ. ನರೇಗಾ ಹಣ ಖರ್ಚಾಗಿದೆ. ಒಟ್ಟು 157 ಕೋಟಿ ರೂ. ನರೇಗಾದ ಅನುದಾನದಲ್ಲಿ 135 ಕೋಟಿ ರೂ. ಬಿಡುಗಡೆಯಾಗಿದ್ದು, ಇನ್ನೂ 22 ಕೋಟಿ ರೂ. ಹಣವು ಕೂಲಿಕಾರರ ಖಾತೆಗೆ ಜಮೆಯಾಗಬೇಕಿದೆ. ಇದರಲ್ಲಿ ಯಂತ್ರಗಳ ಮೂಲಕ ಮಾಡಿಸಿದ ಕಾಮಗಾರಿ ಸೇರಿಕೊಂಡಿವೆ.

ತಪ್ಪುತ್ತಿಲ್ಲ ಗುಳೆ: ಸರ್ಕಾರವು ಪ್ರತಿ ವರ್ಷ ಜನತೆಗೆ 100 ಮಾನವ ದಿನಗಳ ಸ‌ೃಜನೆ ಮಾಡಿ ಉದ್ಯೋಗ ಕೊಡುತ್ತಿದೆ. ಜೊತೆಗೆ ಬರಗಾಲದ ಪರಿಸ್ಥಿತಿ ಸಂದರ್ಭದಲ್ಲಿ 150 ದಿನಗಳಿಗೆ ಮಾನವ ದಿನ ಸ‌ೃಜನೆ ಮಾಡಿ ಹೆಚ್ಚುವರಿ 50 ದಿನ ಕೆಲಸವನ್ನು ನೀಡುತ್ತದೆ. ಆದರೆ ಜನತೆ ಮಾತ್ರ ನರೇಗಾ ಕೆಲಸವನ್ನು ನೆಚ್ಚದೆ ಗುಳೆ ಹೋಗುತ್ತಿದ್ದಾರೆ. ನರೇಗಾದಿಂದ ನಮಗೆ ಸಕಾಲಕ್ಕೆ ವೇತನ ಬರಲ್ಲ ಎನ್ನುವ ಮಾತನ್ನಾಡುತ್ತಿದ್ದರೆ, ಇನ್ನೊಂದೆಡೆ ಖಾತ್ರಿಯಲ್ಲಿ ವೇತನ ಕಡಿಮೆಯಾಗುತ್ತದೆ. ಹೊರಗೆ ನಮಗೆ ಹೆಚ್ಚಿನ ಕೂಲಿ ಹಣ ಸಿಗುತ್ತೆ. ಇಂದು ನಿತ್ಯದ ಬದುಕಿಗೆ ಖಾತ್ರಿ ಹಣ ನಮಗೆ ಯಾವುದಕ್ಕೂ ಸಾಲಲ್ಲ. ಹೊರಗೆ ನಮಗೆ 400-500 ರೂ. ಹಣ ದೊರೆಯುತ್ತದೆ ಎನ್ನುವ ಮಾತನ್ನಾಡಿ ಜನರೂ ಸಹ ಗುಳೆ ಹೋಗುತ್ತಿದ್ದಾರೆ.

Advertisement

ಒಟ್ಟಿನಲ್ಲಿ ಸರ್ಕಾರವು ಕೂಲಿಕಾರರಿಗೆ ಕೆಲಸ ನೀಡುತ್ತೇವೆ ಎಂದು ಕೋಟಿ ಕೋಟಿ ಅನುದಾನ ಬಿಡುಗಡೆ ಮಾಡುತ್ತಿದೆ. ಜಿಲ್ಲೆಯ ಜನರ ಬವಣೆ ಮಾತ್ರ ತಪ್ಪುತ್ತಿಲ್ಲ. ಪ್ರತಿ ವರ್ಷವೂ 140 ಕೋಟಿಗೂ ಹೆಚ್ಚಿನ ಅನುದಾನ ನರೇಗಾದಲ್ಲಿಯೇ ಖರ್ಚಾಗುತ್ತಿದೆ ಎನ್ನುವುದು ಗಮನಾರ್ಹ ಸಂಗತಿಯಾಗಿದೆ.

 

•ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next