ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಿನ್ನೆ ತಮ್ಮ ಭಾಷಣದಲ್ಲಿ ಘೋಷಿಸಿದ್ದ ‘ಆತ್ಮ ನಿರ್ಭರ ಭಾರತ’ ವಿಶೇಷ ಆರ್ಥಿಕ ಪ್ಯಾಕೇಜ್ ನ ಸ್ವರೂಪಗಳನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ್ದಾರೆ.
ವಿತ್ತ ಸಚಿವರ ಘೋಷಣೆಯಲ್ಲಿ ಪ್ರಮುಖವಾಗಿ ಗಮನ ಸೆಳೆದಿದ್ದು ಉದ್ಯೋಗಿಗಳು ಹಾಗೂ ಉದ್ಯೋಗದಾತರು ಭವಿಷ್ಯ ನಿಧಿ ಖಾತೆಗಳಿಗೆ ಸಲ್ಲಿಸುವಂತಹ ಕೊಡುಗೆ.
ಸದ್ಯಕ್ಕೆ ಉದ್ಯೋಗಿಗಳ ಭವಿಷ್ಯ ನಿಧಿ ಖಾತೆಗೆ ಉದ್ಯೋಗಿಗಳ ಪಾಲು ಹಾಗೂ ಉದ್ಯೋಗದಾತರ ಪಾಲು ತಲಾ 12% ಸಲ್ಲಿಕೆಯಾಗುತ್ತಿದೆ.
ಆದರೆ ಇನ್ನು ಮುಂದಿನ ಮೂರು ತಿಂಗಳುಗಳ ಕಾಲ ಈ ಪಾಲನ್ನು 10% ಇಳಿಕೆ ಮಾಡಲಾಗಿದೆ. ಈ ಮೂಲಕ ಉದ್ಯೋಗಿಗಳಿಗೆ ಕೈಗೆ ಸಿಗುವ ವೇತನದ ಹಣದಲ್ಲಿ ಸ್ವಲ್ಪ ಹೆಚ್ಚಳವಾಗಲಿದ್ದು ಇದರಿಂದ ಹಣದ ಚಲಾವಣೆ ಹೆಚ್ಚಾಗಲಿದೆ ಎಂಬುದು ಸರಕಾರದ ಲೆಕ್ಕಾಚಾರವಾಗಿದೆ.
ಈ ಮೂಲಕ ಉದ್ಯಮಿಗಳಿಗೆ ಹಾಗೂ ಉದ್ಯೋಗಿಗಳಿಗೆ ಮುಂದಿನ ಮೂರು ತಿಂಗಳುಗಳ ಕಾಲ ಭವಿಷ್ಯ ನಿಧಿ ಖಾತೆಗೆ ಜಮಾ ಮಾಡುವ ಮೊತ್ತವನ್ನು ತಲಾ 2% ಕಡಿಮೆಗೊಳಿಸುವ ಮೂಲಕ ಮಾರುಕಟ್ಟೆಗೆ ಸರಿಸುಮಾರು 6750 ಕೋಟಿ ರೂಪಾಯಿಗಳ ಹಣದ ಹರಿವು ಉಂಟಾಗುವಲ್ಲಿ ಸಹಕಾರಿಯಾಗುವುದು ಎಂದು ವಿತ್ತಸಚಿವರು ಅಭಿಪ್ರಾಯಪಟ್ಟಿದ್ದಾರೆ.
ಆದರೆ ಕೇಂದ್ರದ ನಿಯಂತ್ರಣದಲ್ಲಿರುವ ಸಾರ್ವಜನಿಕ ರಂಗದ ಉದ್ದಿಮೆಗಳು ಹಾಗೂ ರಾಜ್ಯ ಸರಕಾರದ ಅಡಿಯಲ್ಲಿ ಬರುವ ಸಾರ್ವಜನಿಕ ರಂಗದ ಉದ್ಯಮಗಳು ತಮ್ಮ ಉದ್ಯೋಗಿಗಳ ಪಿ.ಎಫ್. ಖಾತೆಗೆ ಯಥಾಪ್ರಕಾರ 12% ಪಾಲನ್ನು ಜಮಾ ಮಾಡಲಿವೆ.
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್ ನಡಿಯಲ್ಲಿ 24% ಭವಿಷ್ಯನಿಧಿ ಬೆಂಬಲಕ್ಕೊಳಪಡದ ಉದ್ಯೋಗಿಗಳಿಗೆಲ್ಲಾ ಈ ಸೌಲಭ್ಯ ಅನ್ವಯಿಸಲಿದೆ.
ಇದರಿಂದಾಗಿ ಇಪಿಎಫ್ಒನಡಿಯಲ್ಲಿ ಬರುವ 6.5 ಲಕ್ಷ ಉದ್ಯಮಗಳಿಗೆ ಹಾಗೂ 4.3 ಕೋಟಿ ಉದ್ಯೋಗಿಗಳಿಗೆ ಇದರ ಪ್ರಯೋಜನ ಲಭಿಸಲಿದೆ.