ತಿ.ನರಸೀಪುರ: ಪಟ್ಟಣದ ರೇಷ್ಮೆ ಕಾರ್ಖಾನೆಯಲ್ಲಿ ತಾಂತ್ರಿಕ ಪರಿಣಿತಿ ಇಲ್ಲದ ಹೊರಗುತ್ತಿಗೆ ನೌಕರರನ್ನು ತಾಂತ್ರಿಕ ಕೆಲಸಕ್ಕೆ ನಿಯೋಜಿಸಿದ್ದರಿಂದ ನೌಕರನೋರ್ವ ಕಾಲಿಗೆ ಗಂಭೀರ ಗಾಯ ಮಾಡಿಕೊಂಡಿದ್ದು, ಚಿಕಿತ್ಸೆಗೆ ಪರದಾಡುತ್ತಿದ್ದಾರೆ. ಕರ್ನಾಟಕ ರೇಷ್ಮೆ ಉದ್ಯಮ ನಿಗಮ(ಕೆಎಸ್‌ಐಸಿ)ದ ಅಧಿಕಾರಿಗಳ ಈ ಕೆಟ್ಟ ನಿರ್ಧಾರದಿಂದ ನೂರಾರು ನೌಕರರು ಭಯಭೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಪಟ್ಟಣದ ಭೈರಾಪುರ ಬಳಿಯ ಕೆಎಸ್‌ಐಸಿ ಸ್ವಾಮ್ಯದ ರೇಷ್ಮೆ ಕಾರ್ಖಾನೆಯಲ್ಲಿ ತಾಂತ್ರಿಕ ಕೆಲಸಕ್ಕೆ ಪರಿಣಿತಿ ಪಡೆದವರನ್ನೇ ಉದ್ಯೋಗಕ್ಕೆ ನಿಯೋಜಿಸಿಕೊಳ್ಳದೇ ಸಾಮಾನ್ಯ ಹೊರ ಗುತ್ತಿಗೆ ನೌಕರನನ್ನು ಬಳಸಿಕೊಳ್ಳುತ್ತಿದ್ದಾರೆ. ಪರಿಣಾಮ ತಾಲೂಕಿನ ಮೂಗೂರು ಹೊಸಹಳ್ಳಿಯ ನಿಂಗರಾಜು ಪುತ್ರ ಎನ್.ಚಾಮರಾಜು (22) ಕಾಲಿಗೆ ಗಂಭೀರ ಗಾಯವಾಗಿದೆ.
ಕಳೆದ ಸೆ.21 ರಂದು ಕಬಿನಿ ನದಿ ತೀರದಲ್ಲಿರುವ ಪಂಪ್‌ಹೌಸ್‌ನಲ್ಲಿ ಕರ್ತವ್ಯನಿರತನಾಗಿದ್ದ ವೇಳೆ ನೀರೆತ್ತುವ ಯಂತ್ರಕ್ಕೆ ಕಾಲು ಸಿಲುಕಿಕೊಂಡು ಸಿಡಿದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಚಾಮರಾಜು ಎಡಗಾಲು ತೀವ್ರತರದ ಪೆಟ್ಟು ಬಿದ್ದಿದ್ದರಿಂದ ನಿಲ್ಲಲು ಆಗುತ್ತಿಲ್ಲ. ಬಲಗಾಲಿನ ಅರ್ಧಭಾಗಕ್ಕೆ ಗಾಯವಾಗಿ ಓಡಾಡಲು ಆಗದ ಸ್ಥಿತಿಯಲ್ಲಿದ್ದಾರೆ.
ನಿಗದಿತ ಸಂಸ್ಥೆಯೊಂದರ ಹೆಸರಲ್ಲಿ ಹೊರಗುತ್ತಿಗೆ ನೌಕರನಾಗಿ ದುಡಿಯುತ್ತಿದ್ದ ಈತನಿಗೆ ಇಎಸ್‌ಐ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಯನ್ನಷ್ಟೇ ಕೊಡಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗೆ ಕೊಡಿಸಲು ರೇಷ್ಮೆ ಕಾರ್ಖಾನೆ ಆಡಳಿತ ಹಾಗೂ ಗುತ್ತಿಗೆ ಸಂಸ್ಥೆ ಇಬ್ಬರೂ ಹಿಂದೇಟು ಹಾಕುತ್ತಿದ್ದು, ಯುವಕನ ಕುಟುಂಬವೂ ಕೂಡ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡು ಚಿಕಿತ್ಸೆ ಕೊಡಿಸಲಿಕ್ಕೆ ಪರದಾಡುತ್ತಿದ್ದಾರೆ.
ನಿಯಮಗಳ ಉಲ್ಲಂಘನೆ: ಪಟ್ಟಣದ ಕೆಎಸ್‌ಐಸಿ ರೇಷ್ಮೆ ಕಾರ್ಖಾನೆಯಲ್ಲಿ ನಿಯಮಗಳನ್ನು ಉಲ್ಲಂಘಿಸಿ, ರೋಸ್ಟರ್ ಪದ್ಧತಿಗೆ ಸಂಪೂರ್ಣವಾಗಿ ಎಳ್ಳುನೀರು ಬಿಟ್ಟು, ರಾಜಕಾರಣಿಗಳ ಒತ್ತಡಕ್ಕೆ ಮಣಿದು ಕಾನೂನು ಬಾಹಿರವಾಗಿ ಹೊರ ಗುತ್ತಿಗೆ ನೌಕರರಿಗೆ ಕನಿಷ್ಠ ವೇತನ ಅಥವಾ ಸೇವಾ ಭದ್ರತೆ ನೀಡದೆ ನಿಯೋಜಿಸಿಕೊಳ್ಳುತ್ತಿರುವ ಪರಿಣಾಮ ಅಮಾಯಕರು ಇಂತಹ ಕಷ್ಟಕ್ಕೆ ಸಿಲುಕಿಕೊಳ್ಳುತ್ತಿದ್ದಾರೆ ಎಂದು ದಸಂಸ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್ ಮತ್ತಿತರರು ದೂರಿದ್ದಾರೆ.