Advertisement

ವೇತನ ಹೆಚ್ಚಳಕ್ಕೆ ಆಗ್ರಹಿಸಿ ಬಿಸಿಯೂಟ ನೌಕರರ ಪ್ರತಿಭಟನೆ

05:35 PM Mar 01, 2022 | Shwetha M |

ವಿಜಯಪುರ: ಚರ್ಚೆ ಇಲ್ಲದೇ ಶಾಸಕರು-ಸಚಿವರ ವೇತನ ಹೆಚ್ಚಿಸಿರುವ ರಾಜ್ಯ ಸರ್ಕಾರ, ಬರುವ ಬಬೆಟ್‌ನಲ್ಲಿ ಅಕ್ಷರ ದಾಸೋಹ ಕಾರ್ಮಿಕರ ವೇತನ ಹೆಚ್ಚಿಸುವಂತೆ ಆಗ್ರಹಿಸಿ ಸೋಮವಾರ ಬಿಸಿಯೂಟ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

Advertisement

ಅಕ್ಷರ ದಾಸೋಹ ಕಾರ್ಮಿಕರು ಗೌರವಯುತ ಜೀವನ ನಡೆಸಲು ಯೋಗ್ಯವಾದ ವೇತನ ನಿಗದಿ ಮಾಡಿ. ಕೂಡಲೇ ಬಾಕಿಯಿರುವ 3 ತಿಂಗಳ ಮಾಸಿಕ ಗೌರವಧನ ಪಾವತಿಸಬೇಕು. ನಿವೃತ್ತಿವರೆಗೆ ಕಾರ್ಮಿಕರ ಪಾಲಿನ ಹಣವನ್ನೂ ಸರ್ಕಾರವೇ ಭರಿಸಿ ಪಿಂಚಣಿ ಸೌಲಭ್ಯ ಒದಗಿಸಿ. ಅಕ್ಷರ ದಾಸೋಹ ಕಾರ್ಮಿಕರಿಗೆ ಅಗತ್ಯ ಸಮವಸ್ತ್ರ, ಗುರುತಿನ ಚೀಟಿ ನೀಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಕ್ಷರ ದಾಸೋಹ ಕಾರ್ಮಿಕರ ಸಂಘದ ಜಿಲ್ಲಾ ಸಂಚಾಲಕಿ ಶಶಿಕಲಾ ಮ್ಯಾಗೇರಿ, ರಾಜ್ಯಾದ್ಯಂತ ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ತಯಾರಿಸಿ, ತಾಯಂದಿರಂತೆ ಪ್ರೀತಿಯಿಂದ ಉಣಬಡಿಸುವ ಅಕ್ಷರ ದಾಸೋಹ ಕಾರ್ಮಿಕರು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯ ಅನುಷ್ಠಾನದಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಆದರೆ ಪುಡಿಗಾಸಿನ ವೇತನದಲ್ಲಿ ದುಡಿಯುತ್ತಿದ್ದಾರೆ. ನಮ್ಮ ಸಮಸ್ಯೆಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಹ ಸಂಚಾಲಕಿ ಬಸಮ್ಮ ಬೋಳಿ ಮಾತನಾಡಿ, ಲಾಕ್‌ಡೌನ್‌ಗಿಂತ ಮೊದಲೇ ಶಾಲೆಗಳು ಮುಚ್ಚಿದ್ದರೂ ಶಾಲೆಗಳು ಆರಂಭದ ಹಂತದಲ್ಲಿ ಶಾಲಾ ಕೊಠಡಿಗಳು, ಆವರಣ ಸ್ವಚ್ಛತೆ ಮಾಡುವುದರ ಹಿಂದೆ ಬಿಸಿಯೂಟ ಕಾರ್ಯಕರ್ತರ ಪರಿಶ್ರಮವಿದೆ. ಅಲ್ಲದೇ ಆಹಾರ ಕಿಟ್‌ಗಳ ವಿತರಣೆಯಲ್ಲೂ ಪಾಲ್ಗೊಂಡು ಶಾಲೆ ಆರಂಭವಿದ್ದರೂ ಸರಿ, ಮುಚ್ಚಿದ್ದರೂ ಸರಿ ಬಿಸಿಯೂಟ ಕಾರ್ಯಕರ್ತರು ಸೇವೆ ನೀಡುತ್ತಲೇ ಇದ್ದಾರೆ ಎಂದು ವಿವರಿಸಿದರು.

ಬಿಸಿಯೂಟ ಅನುಷ್ಠಾನದಲ್ಲಿ ಮಕ್ಕಳಿಗೆ ಊಟ, ಹಾಲು ನೀಡುವ ಕೆಲಸವಲ್ಲದೇ ಇಡಿ ಶಾಲಾ ಆವರಣದ ಸ್ವತ್ಛತೆ, ಕೈತೋಟದ ಕೆಲಸ, ಅಷ್ಟೇ ಏಕೆ ಶೌಚಾಲಯಗಳ ನಿರ್ವಹಣೆ ಕೆಲಸದಲ್ಲೂ ನೆರವಾಗುತ್ತಾರೆ. ಹೀಗಾಗಿ ಸರ್ಕಾರ ಪ್ರಸಕ್ತ ಬಜೆಟ್‌ನಲ್ಲಿ ವೇತನ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

Advertisement

ಎಐಯುಟಿಯಸಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಮಾತನಾಡಿ, ಬಿಸಿಯೂಟ ಯೋಜನೆಯಲ್ಲಿ ಬಹುತೇಕ ಒಂಟಿ ಮಹಿಳೆಯರು, ವಿಧವೆಯರು, ಇಡಿ ಕುಟುಂಬದ ಜವಾಬ್ದಾರಿ ಹೊತ್ತಿರುವರೇ ಇದ್ದಾರೆ. ಆದರೆ ಸರ್ಕಾರ ಬಿಸಿಯೂಟ ನೌಕರರಿಗೆ ಮಾಸಿಕ ಗೌರವಧನವಾಗಿ ಕೇವಲ 2700 ರೂ., ಅಡುಗೆ ಸಹಾಯಕರಿಗೆ 2600 ರೂ. ನೀಡುತ್ತಿದೆ. ಪ್ರಸ್ತುತ ಬೆಲೆ ಏರಿಕೆ ದಿನಗಳಲ್ಲಿ ಈ ಗೌರವ ಸಂಭಾವನೆ ಸಾಲುತ್ತದೆಯೇ ಎಂಬುದನ್ನು ಸರ್ಕಾರವೇ ಯೋಚಿಸಬೇಕು ಎಂದು ಆಗ್ರಹಿಸಿದರು.

ಕಾರ್ಮಿಕರ ವೇತನ ಹೆಚ್ಚಿಸದೇ ಜನಪ್ರತಿನಿಧಿಗಳು ತಮ್ಮ ವೇತನವನ್ನು ಯಾವುದೆ ಚರ್ಚೆ ಇಲ್ಲದೆ ಹೆಚ್ಚಳ ಮಾಡಿಕೂಂಡಿರುವ ಕ್ರಮ ಖಂಡನಾರ್ಹ. ಪ್ರಸ್ತುತ ಸಂದರ್ಭದಲ್ಲಿ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳ ಸಮಸ್ಯೆಗಳು ಒಂದೊಂದು ರೀತಿಯಲ್ಲಿವೆ. ಈ ಕನಿಷ್ಠವೂ ಅಲ್ಲದ ವೇತನದಲ್ಲಿ ಬಿಸಿಯೂಟ ನೌಕರರು ಮಕ್ಕಳ ಶಿಕ್ಷಣ, ಆರೋಗ್ಯ ಸೇರಿದಂತೆ ಕುಟುಂಬದ ನಿರ್ವಹಣೆ ಅಸಾಧ್ಯವಾಗಿದೆ ಎಂದು ಸಮಸ್ಯೆ ನಿವೇದಿಸಿಕೊಂಡರು.

ಸಂಘಟನೆಯ ಚನ್ನಮ್ಮ, ಮಂಜುಳಾ ಕುಳಗೇರಿ, ಮಹಾದೇವಿ ಡೂಣೂರ, ಸುನಂದಾ ಕಮದಾಳ, ಅನುಸುಬಾಯಿ ಬಾಗೇವಾಡಿ, ಸುನೀತಾ ಡೆಂಗಿ, ಅಮೀನಾ, ಸಂಗಮ್ಮ, ಜ್ಯೋತಿ, ರಾಜಬಿ ಚಪ್ಪರಬಂದ, ಬೋರಮ್ಮ ಕೋಲಕಾರ, ಸರಸ್ವತಿ ಬಡಗೇರ, ಮಹಾದೇವಿ ಬಿಜ್ಜರಗಿ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next