Advertisement

ಸ್ಥಳೀಯರಿಗೆ ನೌಕರಿ; ಚಿಂತನಾರ್ಹ ನಿರ್ಧಾರ

12:30 AM Feb 07, 2019 | |

ಉದ್ದಿಮೆಗಳಲ್ಲಿ ಶೇ. 70 ನೌಕರಿಗಳನ್ನು ಸ್ಥಳೀಯರಿಗೆ ಮೀಸಲಿಡುವ ಮಧ್ಯಪ್ರದೇಶ ಸರಕಾರದ ಆದೇಶ ಚುನಾವಣಾ ಕಾಲದಲ್ಲಿ ಸಣ್ಣದೊಂದು ಸಂಚಲನಕ್ಕೆ ಕಾರಣವಾಗಿದೆ. ವಿಧಾನಸಭೆ ಚುನಾವಣೆಯ ಪ್ರಣಾಳಿಕೆಯಲ್ಲೇ ಕಾಂಗ್ರೆಸ್‌ ಸ್ಥಳೀಯರಿಗೆ ನೌಕರಿ ಮೀಸಲಿಡುವ ವಾಗ್ಧಾನ ಮಾಡಿತ್ತು. ಅದನ್ನೀಗ ಈಡೇರಿಸಿದ್ದೇವೆ ಎಂದು ಸರಕಾರ ಹೇಳುತ್ತಿದೆ. 

Advertisement

ಸ್ಥಳೀಯ ಯುವಕರಿಗೆ ಸಿಗಬೇಕಾಗಿದ್ದ ನೌಕರಿಯನ್ನು ಬಿಹಾರ ಮತ್ತು ಉತ್ತರ ಪ್ರದೇಶದವರು ಕಸಿದುಕೊಳ್ಳುತ್ತಿರುವುದರಿಂದ ಈ ಆದೇಶ ಹೊರಡಿಸಬೇಕಾಯಿತು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್‌ನಾಥ್‌ ತನ್ನ ನಿರ್ಧಾರಕ್ಕೆ ಸಮರ್ಥನೆಯನ್ನೂ ನೀಡಿದ್ದಾರೆ. ಈ ಆದೇಶ ಅನ್ವಯಿಸುವುದು ಡಿ ದರ್ಜೆ ನೌಕರಿಗಳಿಗೆ. ಈ ನೌಕರಿಗಳನ್ನು ಅನ್ಯ ರಾಜ್ಯದವರೂ ಕಿತ್ತುಕೊಳ್ಳುತ್ತಿದ್ದಾರೆ ಎಂದಿರುವ ಕಮಲ್‌ನಾಥ್‌ ಆರೋಪ ನಿಜವೂ ಹೌದು. ಮಧ್ಯಪ್ರದೇಶ ಎಂದಲ್ಲ, ಈಗ ಬಹುತೇಕ ಎಲ್ಲ ರಾಜ್ಯಗಳು ಈ ಸಮಸ್ಯೆಯನ್ನು ಎದುರಿಸುತ್ತಿವೆ. ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದ ಹೆಚ್ಚಿನೆಲ್ಲ ರಾಜ್ಯಗಳಲ್ಲಿ ಉತ್ತರ ಭಾರತದ ಕಾರ್ಮಿಕರು ತುಂಬಿಕೊಂಡಿದ್ದು, ಇವರಲ್ಲಿ ಬಾಂಗ್ಲಾದೇಶದ ಅಕ್ರಮ ನುಸುಳುಕೋರರು ಇದ್ದಾರೆ ಎನ್ನುವ ಆರೋಪವೂ ಇದೆ. 

ಹಾಗೆಂದು ಉದ್ದಿಮೆಗಳಲ್ಲಿ ಸ್ಥಳೀಯರಿಗೆ ನೌಕರಿ ಮೀಸಲಿಟ್ಟಿರುವ ರಾಜ್ಯಗಳಲ್ಲಿ ಮಧ್ಯಪ್ರದೇಶ ಮೊದಲೇನಲ್ಲ. ಈ ಹಿಂದೆಯೇ ಹಲವು ರಾಜ್ಯಗಳು ಈ ಪ್ರಯತ್ನವನ್ನು ಮಾಡಿವೆ.2008ರಲ್ಲೇ ಮಹಾರಾಷ್ಟ್ರದ ಕಾಂಗ್ರೆಸ್‌ ಸರಕಾರ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ತೀವ್ರ ಸ್ಥಳೀಯ ವಾದವನ್ನು ಎದುರಿಸುವ ಸಲುವಾಗಿ ಶೇ.80 ನೌಕರಿಯನ್ನು ಸ್ಥಳೀಯರಿಗೆ ಮೀಸಲಿಡುವ ಆದೇಶ ಹೊರಡಿಸಿತ್ತು. 2016ರಲ್ಲಿ ಕರ್ನಾಟಕ ಸರಕಾರವೂ ಈ ಮಾದರಿಯ ಪ್ರಯತ್ನ ಮಾಡಿದೆ. ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸರೋಜಿನಿ ಮಹಿಷಿ ವರದಿಯ ಆಧಾರದಲ್ಲಿ ಕನ್ನಡಿಗರಿಗೆ ಶೇ. 70 ನೌಕರಿ ಒದಗಿಸುವ ಪ್ರಸ್ತಾವ ಇಟ್ಟಿದ್ದರು. ಇದು ಆ ದಿನಗಳಲ್ಲಿ ಭಾರೀ ವಿವಾದಕ್ಕೊಳಗಾಗಿತ್ತು. ಅಲ್ಲದೆ ಕನ್ನಡಿಗರು ಯಾರು ಎಂಬ ಜಿಜ್ಞಾಸೆಗೂ ಕಾರಣವಾಗಿತ್ತು. ಕರ್ನಾಟಕ ಎಂದಲ್ಲ, ಪ್ರತಿ ರಾಜ್ಯದಲ್ಲೂ ಈಗ ಸ್ಥಳೀಯರು ಯಾರು ಎಂಬ ಜಿಜ್ಞಾಸೆ ಇದೆ. ಆ ರಾಜ್ಯದಲ್ಲೇ ಹುಟ್ಟಿದವರು ಮಾತ್ರ ಸ್ಥಳೀಯರಾಗುತ್ತಾರೆಯೇ ಅಥವಾ ಬೇರೆ ರಾಜ್ಯಗಳಿಂದ ಬಂದು ಹಲವಾರು ವರ್ಷಗಳಿಂದ ನೆಲೆಸಿದವರನ್ನೂ ಸ್ಥಳೀಯರೆಂದು ಪರಿಗಣಿಸಲು ಸಾಧ್ಯವೆ ಎಂಬ ಪ್ರಶ್ನೆಗೆ ಇನ್ನೂ ಸಮರ್ಪಕವಾದ ಉತ್ತರ ಸಿಕ್ಕಿಲ್ಲ. ಸ್ಥಳೀಯರಿಗೆ ನೌಕರಿ ಮೀಸಲಿಡುವಾಗ ಇಂಥ ಮೂಲಭೂತ ವಿಷಯಗಳತ್ತ ಗಮನ ಹರಿಸುವ ಅಗತ್ಯವೂ ಇದೆ. 

ಸಿಕ್ಕಿಂ, ತೆಲಂಗಾಣ ಮತ್ತಿತರ ರಾಜ್ಯಗಳೂ ನೌಕರಿಗಳನ್ನು ಸ್ಥಳೀಯರಿಗೆ ಮೀಸಲಿಡುವ ಪ್ರಯತ್ನಗಳನ್ನು ಮಾಡಿದ್ದವು. ಆದರೆ ಯಾವ ರಾಜ್ಯಕ್ಕೂ ಇದನ್ನು ಪರಿಪೂರ್ಣವಾಗಿ ಅನುಷ್ಠಾನಿಸಲು ಸಾಧ್ಯವಾಗಿಲ್ಲ ಎನ್ನುವುದು ವಾಸ್ತವ. ಇದಕ್ಕೆ ಹಲವಾರು ಕಾರಣಗಳಿರಬಹುದು. ಒಕ್ಕೂಟ ವ್ಯವಸ್ಥೆಯಲ್ಲಿ ಯಾರು ಯಾವ ರಾಜ್ಯದಲ್ಲೇ ಬೇಕಾದರೂ ಹೋಗಿ ನೌಕರಿ ಮಾಡುವ ಹಕ್ಕು ಹೊಂದಿರುವುದರಿಂದ ಈ ಮಾದರಿಯ ನಿರ್ಧಾರಗಳನ್ನು ಶೇ. 100ರಷ್ಟು ಕಟ್ಟುನಿಟ್ಟಾಗಿ ಜಾರಿಗೆ ತರುವುದು ಕಷ್ಟವೂ ಹೌದು. ಹೀಗೆ ಮಾಡಿದರೆ ಸಂವಿಧಾನ ಉಲ್ಲಂಘನೆಯ ಆರೋಪಕ್ಕೂ ಗುರಿಯಾಗಬೇಕಾಗುತ್ತದೆ. 

ಸ್ಥಳೀಯರಿಗೆ ನೌಕರಿ ಮೀಸಲಿಡುವ ಕುರಿತಾದ ಕಾನೂನಿನ ಅಂಶಗಳು ಮತ್ತು ಪರ ಹಾಗೂ ವಿರುದ್ಧವಾದ ನಿಲುಗಳೇನೇ ಇರಲಿ ಸದ್ಯದ ಪರಿಸ್ಥಿತಿಯಲ್ಲಿ ಹೀಗೊಂದು ನಿಯಮದ ಅಗತ್ಯ ಇದೆ ಎನ್ನುವುದರಲ್ಲಿ ತಕರಾರಿಲ್ಲ. ನಿರುದ್ಯೋಗವೇ ಈಗ ದೇಶ ಎದುರಿಸುತ್ತಿರುವ ಜ್ವಲಂತ ಸಮಸ್ಯೆ. ಹೀಗಿರುವಾಗ ಇರುವ ಒಂದಷ್ಟು ನೌಕರಿಯನ್ನು ಬೇರೆ ರಾಜ್ಯದವರು ಕಿತ್ತುಕೊಂಡರೆ ಸ್ಥಳೀಯರು ಏನು ಮಾಡಬೇಕು? ಉದ್ದಿಮೆಗಳಲ್ಲಿ ಅನ್ಯ ರಾಜ್ಯದವರೆ ತುಂಬಿಕೊಂಡರೆ ಏನಾಗಬಹುದು ಎನ್ನುವುದಕ್ಕೆ ಬೆಂಗಳೂರಿನ ಉದಾಹರಣೆಯೊಂದೇ ಸಾಕು. ಕ್ರಮೇಣ ಇದು ಸ್ಥಳೀಯ ಭಾಷೆ, ಸಂಸ್ಕೃತಿ, ಆಚಾರವಿಚಾರಗಳ ಮೇಲೂ ಪ್ರಭಾವ ಬೀರುತ್ತದೆ. ಈ ಪರಿಣಾಮವಾಗಿಯೇ ಬೆಂಗಳೂರಿನಲ್ಲಿ ಇಂದು ಕನ್ನಡಕ್ಕಿಂತ ಅನ್ಯಭಾಷೆಗಳ ಕಾರುಬಾರು ಜೋರಾಗಿದೆ.  ಕನ್ನಡಿಗರು ಅಸಮಾಧಾನದಿಂದ ಕುದಿಯುತ್ತಿದ್ದಾರೆ. ಆಗಾಗ ಈ ಅಸಮಾಧಾನ ಸಿಡಿಯುತ್ತಲೂ ಇದೆ. ಕ್ರಮೇಣ ಈ ರೀತಿಯ ಅಸಮಾಧಾನ ಅಸ್ಮಿತೆಯ ಪ್ರಶ್ನೆಯಾಗಿ ಬದಲಾಗುತ್ತದೆ. ರಾಜಕಾರಣಿಗಳು ಈ ಅಸ್ಮಿತೆಯನ್ನು ಹಿಡಿದುಕೊಂಡು ತಮ್ಮ ಬೇಲೆ ಬೇಯಿಸಿಕೊಳ್ಳುತ್ತಾರೆ. ಮಹಾರಾಷ್ಟ್ರದಲ್ಲಿ, ಕೆಲ ಸಮಯದ ಹಿಂದೆ ಬೆಂಗಳೂರಿನಲ್ಲಿ ಆದದ್ದು ಇದೇ. ಈ ಕಾರಣಕ್ಕಾದರೂ ಮಧ್ಯಪ್ರದೇಶದ ಮಾದರಿಯಲ್ಲಿ ಇತರ ರಾಜ್ಯಗಳು ಚಿಂತಿಸುವ ಅಗತ್ಯವಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next