Advertisement

ಒತ್ತುವರಿಯಾಗಿದ್ದ ಕೆರೆ ಪ್ರದೇಶ ತೆರವು

09:13 PM Jun 25, 2019 | Lakshmi GovindaRaj |

ಚಿಂತಾಮಣಿ: ಕಂದಾಯ ಇಲಾಖೆಯಲ್ಲಿನ ದಾಖಲೆಗಳ ಅನುಸಾರ ಕೆರೆ ಒತ್ತುವರಿ ಮಾಡಿಕೊಂಡಿದ್ದು, ಒತ್ತುವರಿದಾರರಿಗೆ ತೆರವು ಮಾಡುವಂತೆ ಎಚ್ಚರಿಕೆ ನೀಡಿ ನೋಟಿಸ್‌ ನೀಡಿದ್ದರೂ ತೆರವು ಮಾಡದ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತ್‌ ಅಧಿಕಾರಿಗಳು ಕೆರೆ ಪ್ರದೇಶ ಒತ್ತುವರಿ ತೆರವು ಮಾಡಿದ ಪ್ರಸಂಗ ನಡೆಯಿತು.

Advertisement

ಕಸಬಾ ಹೋಬಳಿ ಬುಕ್ಕನಹಳ್ಳಿ ಸರ್ವೇ ನಂ.54 ರಲ್ಲಿ 13.3 ಎಕರೆ ಪ್ರದೇಶದಲ್ಲಿ ಕೆರೆ ಇದ್ದು ಅದರಲ್ಲಿ ಬುಕ್ಕನಹಳ್ಳಿಯ ರಾಮರೆಡ್ಡಿ ಎಂಬುವವರು 10 ಗುಂಟೆ ಜಮೀನನ್ನು ಒತ್ತುವರಿ ಮಾಡಿಕೊಂಡು ವ್ಯವಸಾಯ ಮಾಡಿಕೊಂಡಿದ್ದರು.

ಕೃಷಿಹೊಂಡ ಮುಚ್ಚಿದ ಅಧಿಕಾರಿಗಳು: ಒತ್ತುವರಿ ಪ್ರದೇಶದಲ್ಲಿ ಕೃಷಿ ಹೊಂಡ ನಿರ್ಮಿಸಿಕೊಂಡಿದ್ದರು. ಒತ್ತುವರಿ ಆಗಿರುವುದನ್ನು ಕಂದಾಯ, ಸರ್ವೆ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ಕೆಲ ದಿನಗಳ ಹಿಂದೆ ತೆರವು ಮಾಡಲು ಹೋದಾಗ ರಾಮರೆಡ್ಡಿ ಸಮವಾಯಕಾಶ ನೀಡಿ, ನಾವೇ ಸ್ವಯಂ ಪ್ರೇರಿತವಾಗಿ ತೆರವುಗೊಳಿಸುತ್ತವೆ ಎಂದು ಹೇಳಿದ್ದರು. ಆದರೆ ಸಮಯವಾಕಾಶ ಮುಗಿದಿದ್ದರೂ ತೆರವು ಮಾಡದ ಪರಿಣಾಮ ಅಧಿಕಾರಿಗಳು ಮತ್ತು ಪೊಲೀಸರೊಂದಿಗೆ ತೆರಳಿ ಜೆಸಿಬಿಯಿಂದ ಕೃಷಿಹೊಂಡ ಮುಚ್ಚಿಸಿದರು.

ಕ್ರಮ ಕೈಗೊಳ್ಳಲಿ: ಸದರಿ ಕೆರೆ ಪ್ರದೇಶದ ಸರ್ವೆ ನಂ 54 ಪಹಣಿಯಲ್ಲಿ ಸರ್ಕಾರಿ ಜಮೀನೆಂದು ದಾಖಲಾಗಿದ್ದರೂ ಕೃಷಿ ಇಲಾಖೆ ಅಧಿಕಾರಿಗಳು ಸದರಿ ಜಾಗದಲ್ಲಿ ಕೃಷಿಹೊಂಡ ನಿರ್ಮಿಸಿರುವ ಪರಿಯನ್ನು ಗಮನಿಸಿದರೆ ಅಧಿಕಾರಿಗಳು ಎಷ್ಟರ ಮಟ್ಟಿಗೆ ದಾಖಲೆ ಪರಿಶೀಲನೆ ಮಾಡಿದ್ದಾರೆ ಎಂಬುದಕ್ಕೆ ಹಿಡಿದ ಕೈಗನ್ನಡಿ.

ಕೃಷಿಹೊಂಡ ನಿರ್ಮಾಣ ಮಾಡಿದರೆ ರೈತರಿಗೆ ಸರ್ಕಾರದ ವತಿಯಿಂದ ದೊರೆಯುವ ಹಣ ಒತ್ತುವರಿದಾರನ ಜೇಬು ಸೇರಿದೆಯೋ ಅಥವಾ ಅಧಿಕಾರಿಗಳ ಜೇಬು ಸೇರಿದೆಯೋ ಎಂಬುದು ಹಿರಿಯ ಅಧಿಕಾರಿಗಳ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

Advertisement

ಒತ್ತುವರಿ ಜಾಗದಲ್ಲಿ 2 ಕೊಳವೆ ಬಾವಿ: ಒತ್ತುವರಿಯಾಗಿರುವ ಬುಕ್ಕನಹಳ್ಳಿ ಕೆರೆ ಅಂಗಳ ಪ್ರದೇಶದಲ್ಲಿ 2 ಕೊಳವೆ ಬಾವಿಗಳನ್ನು ಕೊರೆದಿದ್ದು, ಕೊರೆಯಬೇಕಾದರೆ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸದಿರುವುದು ಅಧಿಕಾರಿಗಳ ಮತ್ತೂಂದು ಬೇಜಾವಬ್ದಾರಿಗೆ ಹಿಡಿದ ಕನ್ನಡಿಯಾಗಿದೆ.

ರಾಜಕೀಯ ಮುಖಂಡರಿಂದ ಒತ್ತುವರಿ: ಒತ್ತುವರಿ ಮಾಡಿಕೊಂಡಿರುವ ರಾಮರೆಡ್ಡಿ ಮಾತನಾಡಿ, ಕೆರೆಯ ಪಕ್ಕದಲ್ಲಿನ ಸರ್ವೆ ನಂ 51,57, ಮತ್ತು 58ರ ಖಾಸಗಿ ಜಮೀನಿನವರಿಗೆ ತಮ್ಮ ಜಮೀನಿಗೆ ಹಾದು ಹೋಗಲು ಸೂಕ್ತ ದಾರಿ ಇಲ್ಲದಾಗಿದ್ದು, ನಮ್ಮ ಜಮೀನುಗಳಿಗೆ ದಾರಿ ಮಾಡಿಕೊಡಿ ಎಂದು ಕಳೆದ ಒಂದು ವರ್ಷದಿಂದ ತಹಶೀಲ್ದಾರ್‌ ಮತ್ತು ಜಿಲ್ಲಾಧಿಕಾರಿಗಳಿಗೆ ಪತ್ರದ ಮೂಲಕ ವಿನಂತಿಸಿಕೊಂಡಿದ್ದರೂ ಕ್ರಮ ಕೈಗೊಂಡಿಲ್ಲ.

ಬುಕ್ಕನಹಳ್ಳಿ ವ್ಯಾಪ್ತಿಯಲ್ಲಿ ಮತ್ತೂಂದು ಕೆರೆ ಪ್ರದೇಶವಿದ್ದು, ಅದರಲ್ಲಿ ಹಿರಿಯ ರಾಜಕೀಯ ಮುಖಂಡರೊಬ್ಬರು ಇದೇ ರೀತಿ ಕೆರೆ ಒತ್ತುವರಿ ಮಾಡಿಕೊಂಡು ಕೃಷಿಹೊಂಡ ಮತ್ತು ಕೊಳವೆ ಬಾವಿ ಕೊರೆಸಿಕೊಂಡು ದರ್ಬಾರ್‌ ಮಾಡುತ್ತಿದ್ದಾರೆ. ಅವರ ಬಗ್ಗೆಯೂ ಸಹ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿದೆ. ಆದರೆ ಅಧಿಕಾರಿಗಳು ಮಾತ್ರ ನಮ್ಮಂತಹವರ ಮೇಲೆ ತಮ್ಮ ದರ್ಪ ತೋರುತ್ತಾರೆ ಎಂದು ದೂರಿದರು.

ಒತ್ತುವರಿ ತೆರವು ಕಾರ್ಯದಲ್ಲಿ ಪಂಚಾಯತ್‌ ರಾಜ್‌ ಇಲಾಖೆ ಅಭಿಯಂತರರ ರವೀಂದ್ರ, ಸಹಾಯಕ ಕಿರಿಯ ಇಂಜಿನಿಯರ್‌ ವೆಂಕಟೇಶ್‌ ಮೂರ್ತಿ ಮತ್ತು ಕಸಬಾ ಹೋಬಳಿ ಕಂದಾಯ ವೃತ್ತ ನೀರಿಕ್ಷಕರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next