ಕುರುಗೋಡು: ಉದ್ಯೋಗ ಖಾತ್ರಿಯಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ಸುರಕ್ಷಿತ ವ್ಯವಸ್ಥೆಗೆ ಮತ್ತು ಅಪಘಾತ ಸಂಭವಿಸಿದರೆ ಸರಕಾರದಿಂದ ಸೂಕ್ತ ಪರಿಹಾರ ನೀಡಲು 22 ಶಾಸಕರಿಂದ ಒಪ್ಪಿಗೆ ಪತ್ರ ನೀಡಬೇಕು ಎಂದು ಕೂಲಿ ಕಾರ್ಮಿಕರು ಅಧಿಕಾರಿಗಳಿಗೆ ಒತ್ತಾಯಿಸಿದರು.
ಸಮೀಪದ ಏಳುಬೆಂಚೆ ಗ್ರಾಮದಲ್ಲಿ ನಡೆದ ಗ್ರಾಮಸಭೆಯಲ್ಲಿ ಸದಸ್ಯರು ಮಾತನಾಡಿ, ಈ ಹಿಂದೆ ಉದ್ಯೋಗ ಖಾತ್ರಿಯಲ್ಲಿ ಕೆಲಸ ಮಾಡುವ ವೇಳೆ ಮತ್ತು ಗ್ರಾಮ ತೊರೆದು ಬೇರೆ ಕಡೆ ಕೆಲಸ ಮಾಡಲು ತೆರಳಿದ ಸಂದರ್ಭದಲ್ಲಿ ಅಪಘಾತಕ್ಕೀಡಾಗಿದ್ದ ಕಾರ್ಮಿಕರಿಗೆ ಸರಕಾರದಿಂದ ನೆರವು ಹಾಗೂ ಸುರಕ್ಷಿತ ವ್ಯವಸ್ಥೆ ಕಲ್ಪಿಸಿಲ್ಲ. ಆದ್ದರಿಂದ ಅದನ್ನು ಜಾರಿ ಮಾಡಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ ಮಂಜುನಾಥ್, ಈಗಾಗಲೇ ಸರಕಾರದ ಮಟ್ಟದಲ್ಲಿ ಚರ್ಚೆ ನಡೆದಿದ್ದು, ಕೂಲಿ ಕಾರ್ಮಿಕರಿಗೆ ಇನ್ಸೂರೆನ್ಸ್ ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ 13 ರೂ ಖಾತೆ, 330 ರೂ ಖಾತೆ ಇದ್ದು ಒಟ್ಟು 2 ಲಕ್ಷ ವೆಚ್ಚದ ಇನ್ಶೂರೆನ್ಸ್ ಒದಗಿಸಲಾಗಿದೆ.ಇದನ್ನು ಪ್ರತಿಯೊಬ್ಬ ಕೂಲಿ ಕಾರ್ಮಿಕರು ಮಾಡಿಸಬೇಕಾಗಿದೆ ಎಂದರು.
ನಂತರ ಗ್ರಾಮಸ್ಥರು ಮಾತನಾಡಿ, ಏಳುಬೆಂಚಿ ಗ್ರಾಮದ ಎದುರು ಬಸವಣ್ಣನಿಂದ ಚನ್ನಯ್ಯನ ಅಂಗಡಿವರೆಗೆ ಚರಂಡಿ ದುರಸ್ತಿಯಲ್ಲಿದ್ದು, ಅದನ್ನು ಆದಷ್ಟು ಬೇಗ ದುರಸ್ತಿ ಮಾಡಬೇಕು. ಇದರಿಂದ ನಿತ್ಯ ಜನರಿಗೆ ತೊಂದರೆ ಆಗುತ್ತಿದೆ ಎಂದರು. ಗ್ರಾಪಂ ಪಿಡಿಒ ಮತ್ತು ಅಧ್ಯಕ್ಷ ಮಾತನಾಡಿ, ಸ್ಥಳವನ್ನು ಪರಿಶೀಲನೆ ಮಾಡಿ ಎಸ್ಟಿಮೇಟ್ ಮಾಡಿ ಮುಂದಿನ ದಿನಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು. ತಿಮ್ಮಲಾಪುರ ಗ್ರಾಮದಲ್ಲಿ ಕುಡಿಯುವ ನೀರಿನ
ಬೋರ್‌ವೆಲ್‌ಗಳು ನನೆಗುದಿಗೆ ಬಿದ್ದುಹೋಗಿವೆ.
ಬೇಸಿಗೆ ಸಮೀಪಿಸುತ್ತಿದ್ದು ಬೋರ್‌ವೆಲ್ ವ್ಯವಸ್ಥೆ ಮಾಡಿಕೊಡಬೇಕೆಂದು ಗ್ರಾಮಸ್ಥರು ಪ್ರಸ್ತಾಪಿಸಿದರು. ಈಗಾಗಲೇ ತಿಮ್ಮಲಾಪುರ ಗ್ರಾಮಕ್ಕೆ 4 ಬೋರ್ ವೆಲ್ ಮಂಜೂರು ಮಾಡಲಾಗಿದೆ. ಅದಕ್ಕೆ ಬೇಕಾದ ಸಾಮಗ್ರಿಗಳು ಬಂದಿದ್ದು ಶೀಘ್ರವೇ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು. ಗ್ರಾಪಂಗೆ ತ್ಯಾಜ್ಯ ವಿಲೇವಾರಿ ವಾಹನಗಳು ಬಂದು ತಿಂಗಳುಗಳೇ ಗತಿಸಿದರೂ ಗ್ರಾಮದಲ್ಲಿ ವಾಹನಗಳು ತ್ಯಾಜ್ಯ ವಿಲೇವಾರಿ ಮಾಡಲು ಮುಂದಾಗದೆ ಎಲ್ಲೆಂದರಲ್ಲಿ ಬಿದ್ದು ಗಬ್ಬು ನಾರುತ್ತಿವೆ ಎಂದು ಆರೋಪಿಸಿದರು.
2021-22ನೇ ಸಾಲಿನಲ್ಲಿ ವಸತಿರಹಿತ 40 ಪಲಾನುಭವಿಗಳಿಗೆ ಆಶ್ರಮ ಮನೆಗಳನ್ನು ಆಯ್ಕೆ ಮಾಡಲಾಯಿತು. ಇದರಲ್ಲಿ ಅಂಬೇಡ್ಕರ್ ಯೋಜನೆಯಡಿಯಲ್ಲಿ 10 ಹಾಗೂ ಬಸವ ವಸತಿ ಯೋಜನೆಯಡಿಯಲ್ಲಿ 30 ಮನೆಗಳನ್ನು ಆಯ್ಕೆ ಪ್ರಕ್ರಿಯೆ ನಡೆಯಿತು. ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒ, ಸರ್ವ ಗ್ರಾಪಂ ಸದಸ್ಯರು, ಗ್ರಾಮದ ಮುಖಂಡರು, ಸಂಘ ಸಂಸ್ಥೆಯ ಮುಖಂಡರು ಸಭೆಯಲ್ಲಿ ಹಾಜರಿದ್ದರು.