Advertisement

ದೇಶದೆಲ್ಲೆಡೆ ನವೋದ್ಯಮಿಗಳ ಉತ್ತೇಜನಕ್ಕೆ ಒತ್ತು

12:00 PM Oct 27, 2017 | Team Udayavani |

ಹುಬ್ಬಳ್ಳಿ: ದೇಶದಲ್ಲೇ ಅತಿ ದೊಡ್ಡ ಇನ್ಯುಬೇಷನ್‌ ಕೇಂದ್ರ ಹೊಂದಿದ ಖ್ಯಾತಿಯ ದೇಶಪಾಂಡೆ ಪ್ರತಿಷ್ಠಾನದ ಸ್ಯಾಂಡ್‌ಬಾಕ್ಸ್‌ ಸಾರ್ಟ್‌ಅಪ್ಸ್‌, ದೇಶದೆಲ್ಲೆಡೆ ನವೋದ್ಯಮಿಗಳನ್ನು ಗುರುತಿಸುವ ಹಾಗೂ ನವೋದ್ಯಮ ಉತ್ತೇಜನಕ್ಕೆ ಅಗತ್ಯ ನೆರವಿನ ಅಭಿಯಾನ ಕೈಗೊಂಡಿದೆ. ಇದಕ್ಕೆ ಪೂರಕವಾಗಿ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಅ.27ರಂದು “ಸ್ಟಾರ್ಟ್‌ಅಪ್‌ ಯೋಧ’ ಹೆಸರಲ್ಲಿ ಉದ್ಯಮ ಚಿಂತನೆ ಸ್ಪರ್ಧೆ ಹಮ್ಮಿಕೊಂಡಿದೆ. 

Advertisement

ಕೊಲ್ಲಾಪುರ ಅಲ್ಲದೆ ಮಹಾರಾಷ್ಟ್ರದ ಹಲವು ಕಡೆ ಹಾಗೂ ಆಂಧ್ರ, ತೆಲಂಗಾಣ, ಉತ್ತರ ಪ್ರದೇಶ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲೂ ಉದ್ಯಮಶೀಲತೆ ಚಿಂತನೆಗಳ ಪ್ರದರ್ಶನ ಸ್ಪರ್ಧೆ ಆಯೋಜಿಸಿ, ಉತ್ತಮ ಉದ್ಯಮ ಚಿಂತನೆಗಳನ್ನು ಆಯ್ಕೆ ಚಿಂತನೆಗಳು ಉದ್ಯಮ ರೂಪ ಪಡೆಯಲು ಅಗತ್ಯ ನೆರವು ನೀಡಲು ಮುಂದಾಗಿದೆ. 

ನವೋದ್ಯಮಿಗಳನ್ನು ಗುರುತಿಸುವ, ಉದ್ಯಮಶೀಲತೆ ಮನಸ್ಸುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸ್ಯಾಂಡ್‌ಬಾಕ್ಸ್‌ ಸಾರ್ಟ್‌ಅಪ್ಸ್‌ ರಾಜ್ಯದಲ್ಲಿ ಈಗಾಗಲೇ ಹಲವು ತರಬೇತಿ, ಕಾರ್ಯಾಗಾರಗಳನ್ನು ಕೈಗೊಂಡಿದ್ದು, ಅನೇಕ ನವೋದ್ಯಮಿಗಳ ಆರಂಭಕ್ಕೆ ಎಲ್ಲ ರೀತಿಯ ನೆರವು ಕಲ್ಪಿಸಿದೆ.

ನವೋದ್ಯಮ ಉತ್ತೇಜನಕ್ಕೆಂದೇ ದೇಶಪಾಂಡೆ ಪ್ರತಿಷ್ಠಾನ ಕೇಂದ್ರ ಸರಕಾರದ ಸಹಕಾರದೊಂದಿಗೆ ದೇಶದಲ್ಲೇ ಅತಿ ದೊಡ್ಡ ಇನ್ಯುಬೇಷನ್‌ ಕೇಂದ್ರ ಆರಂಭಿಸಿದ್ದು, ದೇಶದ ಎಲ್ಲ ಕಡೆಯ ನವೋದ್ಯಮಿಗಳಿಗೆ ತರಬೇತಿ ಹಾಗೂ ಪ್ರಯೋಗಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಲುಮುಂದಾಗಿದೆ.  

14 ನವೋದ್ಯಮಿಗಳು ಭಾಗಿ: ಕೊಲ್ಲಾಪುರದಲ್ಲಿ ಅ.27ರಂದು ನಡೆಯುವ ಸಾರ್ಟ್‌ಅಪ್‌ ಯೋಧ ಸ್ಪರ್ಧೆಯಲ್ಲಿ ಕೊಲ್ಲಾಪುರ ಜಿಲ್ಲೆ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳ ಸುಮಾರು 14 ನವೋದ್ಯಮಿಗಳು ಭಾಗಿಯಾಗಿ ತಮ್ಮ ಉದ್ಯಮ ಚಿಂತನೆಗಳನ್ನು ಪ್ರದರ್ಶಿಸಲಿದ್ದಾರೆ.

Advertisement

ಇದರಲ್ಲೂ ಅತ್ಯುತ್ತಮ ಹಾಗೂ ಪ್ರಯೋಜನಕಾರಿ ಚಿಂತನೆಗಳನ್ನು ಆಯ್ಕೆ ಮಾಡಿ ಉದ್ಯಮ ಪ್ರಾರಂಭಕ್ಕೆ ಅವಕಾಶ, ತಂತ್ರಜ್ಞಾನ ನೆರವು, ಉದ್ಯಮ ಮಾರ್ಗದರ್ಶನ, ಮಾರುಕಟ್ಟೆ  ಪರ್ಕ, ಅಗತ್ಯವೆನಿಸಿದರೆ ಬೀಜ ಬಂಡವಾಳ ಇನ್ನಿತರ ಪ್ರೋತ್ಸಾಹದಾಯಕ ಕ್ರಮ ಕೈಗೊಳ್ಳಲಾಗುತ್ತದೆ.

ಕೊಲ್ಲಾಪುರದ ನಂತರದಲ್ಲಿ ಪುಣೆಯಲ್ಲೂ ಉದ್ಯಮಶೀಲತೆ ಸ್ಪರ್ಧೆ ಆಯೋಜಿಸಲಾಗಿದ್ದು, ಅಲ್ಲಿಯೂ ಪ್ರಯೋಜನಕಾರಿ ಉದ್ಯಮ ಚಿಂತನೆಗಳನ್ನು ಆಯ್ಕೆ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಆಂಧ್ರಪ್ರದೇಶ, ತೆಲಂಗಾಣ, ಉತ್ತರ ಪ್ರದೇಶ ಇನ್ನಿತರ ರಾಜ್ಯಗಳಲ್ಲಿ ಇಂತಹ ಸ್ಪರ್ಧೆ ನಡೆಯಲಿದೆ. ಇದರೊಂದಿಗೆ ದೇಶದ ಇಡೀ ನವೋದ್ಯಮ ಹುಬ್ಬಳ್ಳಿ ಕಡೆ ನೋಡುವಂತೆ ಆಗಲಿದೆ. 

60ಕೋಟಿ ರೂ. ವಹಿವಾಟು: ದೇಶಪಾಂಡೆ ಪ್ರತಿಷ್ಠಾನದ ಸ್ಯಾಂಡ್‌ಬಾಕ್ಸ್‌ ಸ್ಟಾರ್ಟ್‌ಅಪ್ಸ್‌ 2009ರಲ್ಲಿ ಆರಂಭವಾಯಿತು. ನವೋದ್ಯಮಿಗಳನ್ನು ಪ್ರೋತ್ಸಾಹಿಸುವ ಕಾರ್ಯ ಕೈಗೊಂಡ ಪರಿಣಾಮ  ಹುಬ್ಬಳ್ಳಿಯಲ್ಲಿ ಅನೇಕ ನವೋದ್ಯಮಗಳು ತಲೆ ಎತ್ತಿದವು.

ಇದರಲ್ಲಿ ಕೆಲ ಉದ್ಯಮಗಳು ಇಂದು ಉತ್ತಮ ಸ್ಥಿತಿ ಕಂಡಿದ್ದು, ವಿದೇಶಕ್ಕೂ ತಮ್ಮ ಉತ್ಪನ್ನಗಳನ್ನು ರಫ್ತು ಮಾಡುವ ಮಟ್ಟಿಗೆ ಬೆಳೆದು ನಿಂತಿವೆ. ದೇಶಪಾಂಡೆ ಪ್ರತಿಷ್ಠಾನದ ಸ್ಯಾಂಡ್‌ಬಾಕ್ಸ್‌ ಸಾರ್ಟ್‌ಅಪ್ಸ್‌ ಅಡಿಯಲ್ಲಿ ಇದುವರೆಗೆ ಸುಮಾರು 200ಕ್ಕೂ ಹೆಚ್ಚು ಉದ್ಯಮ ಚಿಂತನೆಗಳನ್ನು ಪ್ರೋತ್ಸಾಹಿಸಲಾಗಿದ್ದು, 10 ನವೋದ್ಯಮಗಳಿಗೆ ಬೀಜ ಬಂಡವಾಳ ನೀಡಲಾಗಿದೆ.

38 ನವೋದ್ಯಮ ಉದ್ಯಮ ರೂಪ ಪಡೆದಿದ್ದು, ಅಂದಾಜು ವಾರ್ಷಿಕ 60ಕೋಟಿ ರೂ. ವಹಿವಾಟು ನಡೆಸುತ್ತಿವೆ. ನವೋದ್ಯಮಕ್ಕೆ ದೊಡ್ಡ ಪ್ರಮಾಣದಲ್ಲಿ ಪ್ರೋತ್ಸಾಹಿಸಲೆಂದೇ 2016ರಲ್ಲಿ ಕೇಂದ್ರ ಸರಕಾರದ ನೆರವಿನೊಂದಿಗೆ ಪ್ರತ್ಯೇಕ ಕೇಂದ್ರ ಮಾಡಲಾಗಿದೆ. ವಿವಿಧ ಸೌಲಭ್ಯಗಳ ಅತ್ಯುತ್ತಮ ಕಟ್ಟಡವನ್ನು ಗೋಕುಲ ರಸ್ತೆಯ ವಿಮಾನ ನಿಲ್ದಾಣ ಬಳಿ ನಿರ್ಮಿಸಲಾಗಿದೆ.

ದೇಶದಲ್ಲೇ ಅತಿ ದೊಡ್ಡ ಇನ್‌ ಕ್ಯುಬೇಷನ್‌ ಕೇಂದ್ರ ಇದಾಗಿದೆ. ನವೋದ್ಯಮಿಗಳು ತಮ್ಮ ಉತ್ಪನ್ನಗಳ ಪ್ರಯೋಗಕ್ಕೆ ಮೇಕರ್ ಲ್ಯಾಬ್‌ ಆರಂಭಿಸಲಾಗಿದ್ದು, ಇದರಲ್ಲಿ 3ಡಿ ಪ್ರಿಂಟಿಂಗ್‌ ಯಂತ್ರಗಳು, ಸಿಎನ್‌ಸಿ ಯಂತ್ರೋಪಕರಣಗಳು, ಇಲೆಕ್ಟ್ರಿಕಲ್‌ ಮತ್ತು ಐಒಟಿ ಲ್ಯಾಬ್‌ ಇನ್ನಿತರ ಸೌಲಭ್ಯಗಳನ್ನು ಉಚಿತ ಹಾಗೂ ಅತ್ಯಂತ ಕಡಿಮೆ ದರದಲ್ಲಿ ನೀಡಲಾಗುತ್ತದೆ. 

* ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next