Advertisement

ಪಾಠ-ಪಠ್ಯಕ್ರಮದೊಂದಿಗೆ ಸಂಶೋಧನೆಗೂ ಮಹತ್ವ ನೀಡಿ

06:23 PM Jan 21, 2022 | Team Udayavani |

ಬೆಳಗಾವಿ: ವಿಶ್ವವಿದ್ಯಾಲಯದ ವಿಭಾಗಗಳು ಮತ್ತು ಪ್ರಾಧ್ಯಾಪಕರು ನಿತ್ಯದ ಪಾಠ ಮತ್ತು ಪಠ್ಯಕ್ರಮದೊಂದಿಗೆ ಸಂಶೋಧನೆಗೂ ಹೆಚ್ಚಿನ ಮಹತ್ವ ನೀಡಬೇಕು ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಕುಲಪತಿ ಪ್ರೊ| ರಾಮಚಂದ್ರಗೌಡ ಹೇಳಿದರು.

Advertisement

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಇಂಗ್ಲಿಷ್‌ ಅಧ್ಯಯನ ವಿಭಾಗ ಏರ್ಪಡಿಸಿದ್ದ ಒಂದು ದಿನದ ರಾಜ್ಯಮಟ್ಟದ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಸಕಾರಾತ್ಮಕ ಧೋರಣೆ ಬೆಳೆಸಿಕೊಳ್ಳಬೇಕು. ವಿಷಮ ಪರಿಸ್ಥಿತಿಯಲ್ಲೂ ಧೈರ್ಯದಿಂದ ಸವಾಲು ಎದುರಿಸಲು ಮುಂದಾಗಬೇಕು ಎಂದರು.

ಹಿರಿಯ ಪತ್ರಕರ್ತ ಸಂಗಮೇಶ ಮೆಣಸಿನಕಾಯಿ ಮಾತನಾಡಿ, ಇಂಗ್ಲಿಷ್‌ ಕಲಿಕೆ ಇಂದಿನ ಮೂಲ ಅಗತ್ಯತೆಗಳಲ್ಲಿ ಒಂದಾಗಿದೆ. ಇಂಗ್ಲಿಷ್‌ ಬಾರದಿರುವ ಬಗ್ಗೆ ಕೀಳರಿಮೆ ವಿದ್ಯಾರ್ಥಿಗಳು ತೊರೆಯಬೇಕು. ಆಗ ಮಾತ್ರ ಇಂಗ್ಲಿಷ್‌ನ್ನು ಸುಲಭವಾಗಿ ಕರಗತ ಮಾಡಿಕೊಳ್ಳಬಹುದು ಎಂದರು.

ಇದೇ ಸಂದರ್ಭದಲ್ಲಿ ಡಾ| ಕವಿತಾ ಕುಸುಗಲ್ಲ ಸಂಪಾದಿಸಿದ “ಇಂಗ್ಲಿಷ್‌ ಫಾರ್‌ ಎಂಪಾವರ್‌ ಮೆಂಟ್‌’ ಕೃತಿ ಬಿಡುಗಡೆಗೊಳಿಸಲಾಯಿತು. ಸಹಾಯಕ ಪ್ರಾಧ್ಯಾಪಕಿ ಪೂಜಾ ಹಲ್ಯಾಳ ಕೃತಿ ಕುರಿತು ಮಾತನಾಡಿದರು. ಪ್ರೊ| ವಿಜಯ ನಾಗನ್ನವರ, ಡಾ| ಮಧುಶ್ರೀ ಕಳ್ಳಿಮನಿ, ಎಸ್‌.ಬಿ. ಕಮತಿ, ಎಂ.ಎಚ್‌. ಜೋಗಿ, ಎ.ಎ. ಮುಲ್ಲಾ, ಬಿ.ಎನ್‌. ಶಾಡದಳ್ಳಿ ಇತರರಿದ್ದರು.

ಕಾರ್ಯಾಗಾರದ ಸಂಘಟನಾ ಕಾರ್ಯದರ್ಶಿ ಡಾ| ಕವಿತಾ ಕುಸುಗಲ್ಲ ಪರಿಚಯಿಸಿ ಸ್ವಾಗತಿಸಿದರು. ನಂತರ ನಡೆದ ವಿವಿಧ ಗೋಷ್ಠಿಗಳಲ್ಲಿ ಸಂದರ್ಶನ ಕೌಶಲ ಮತ್ತು ಸವಾಲುಗಳು ಕುರಿತು ಮಾತನಾಡಿದ ಡಾ| ಡಿ. ಗೌತಮ ಅವಕಾಶಗಳನ್ನು ಬಳಸಿ ಸಕಾರಾತ್ಮಕ ವರ್ತನೆ ಬೆಳೆಸಿಕೊಳ್ಳುವ ಮೂಲಕ ಹೇಗೆ ಸಂದರ್ಶನ ಗೆಲ್ಲಬಹುದು ಎಂಬುದರ ಬಗ್ಗೆ ಸಲಹೆ ನೀಡಿದರು.

Advertisement

ಸಂದರ್ಶನ ಎದುರಿಸುವ ಕುರಿತು ಪ್ರೊ| ಅಶೋಕ ಡಿಸೋಜಾ ಮಾತನಾಡಿ, ಸಂದರ್ಶನ ಎಂದರೆ ಭಯಬೀಳುವ ಅವಶ್ಯಕತೆಯಿಲ್ಲ. ಅದರ ಬದಲಾಗಿ ಧೈರ್ಯದಿಂದ ಎದುರಿಸಬೇಕು. ಸಂದರ್ಶನ ನಿಮ್ಮ ಅನುಕೂಲಕ್ಕೆ ತಕ್ಕಂತೆ ಪರಿಸ್ಥಿತಿ ಸೃಷ್ಟಿಸಿಕೊಳ್ಳಬೇಕು ಎಂದರು. ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಪ್ಲೆಸ್‌ಮೆಂಟ್‌ ಆಫೀಸರ್‌ ಪ್ರೊ| ಆರ್‌. ಎನ್‌. ಮನಗೂಳಿ ಮಾತನಾಡಿ, ಈ ಬಗೆಯ ಕಾರ್ಯಾಗಾರಗಳು ವಿದ್ಯಾರ್ಥಿಗಳಿಗೆ ಶಿಕ್ಷಣದ ನಂತರ
ಅವರಿಗೆ ಉದ್ಯೋಗ ದೊರೆಕಿಸಿಕೊಡುವಲ್ಲಿ ಅತ್ಯಂತ ಪ್ರಯೋಜನಕಾರಿಯಾಗಿವೆ ಎಂದರು. ಡಾ| ನಾಗರತ್ನಾ ಪರಾಂಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಉದ್ಯೋಗಕ್ಕೆ ಅವಶ್ಯವಿರುವ ಕೌಶಲ ಪಡೆದರೆ ಶೀಘ್ರ ಮತ್ತು ಸುಲಭವಾಗಿ ಉದ್ಯೋಗ ಪಡೆಯಬಹುದು ಎಂದರು. ಡಾ| ಕವಿತಾ ಕುಸುಗಲ್ಲ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next