Advertisement

ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಿ: ಕುಮಾರಸ್ವಾಮಿ

11:03 AM Jun 23, 2018 | Team Udayavani |

ಮೂಡಿಗೆರೆ: ಕ್ಷೇತ್ರದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಒಟ್ಟಾಗಿ ಸಾರ್ವಜನಿಕರ ಸೇವೆ ಮಾಡಿದಾಗ ಮಾತ್ರ ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸಗಳು ಆಗಲು ಸಾಧ್ಯ ಎಂದು ಶಾಸಕ ಎಂ.ಪಿ. ಕುಮಾರಸ್ವಾಮಿ ಹೇಳಿದರು.

Advertisement

ತಾಲೂಕು ಪಂಚಾಯತ್‌ ವತಿಯಿಂದ ಶುಕ್ರವಾರ ಅಡ್ಯಂತಾಯ ರಂಗಮಂದಿರದಲ್ಲಿ ಬಯಲು ಬಹಿರ್ದಸೆ ಮುಕ್ತ ಗ್ರಾಪಂ ಅಧ್ಯಕ್ಷರು ಮತ್ತು ಆಧಿಕಾರಿಗಳು ನೂತನ ಶಾಸಕರು, ವಿಧಾನಪರಿಷತ್‌ ಸದಸ್ಯ ಎಂ.ಕೆ. ಪ್ರಾಣೇಶ್‌ ಅವರಿಗೆ ಅಭಿನಂದನೆ ಹಾಗೂ ವಿವಿಧ ಇಲಾಖೆಗಳ ಫಲಾನುಭವಿಗಳಿಗೆ ಸೌಲಭ್ಯ ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಾಲೂಕಿನಲ್ಲಿ ಬಹಳಷ್ಟು ಸಮಸ್ಯೆಗಳಿದ್ದು, ಅವುಗಳ ನಿವಾರಣೆಗೆ ಜನಪ್ರತಿನಿಧಿಗಳ ಜೊತೆ ಅಧಿಕಾರಿಗಳು ಕೈಜೋಡಿಸಬೇಕು. ಕೆಲ ಬಡವರಿಗೆ ಬಿಪಿಎಲ್‌ ಕಾರ್ಡ್‌ ಇನ್ನೂ ವಿತರಣೆಯಾಗಿಲ್ಲ. ಸುಮಾರು 8000 ದಷ್ಟು 94 ಸಿ ಅರ್ಜಿಗಳು ನನೆಗುದಿಗೆ ಬಿದ್ದಿವೆ. ಇವುಗಳನ್ನು ಪರಿಶೀಲಿಸಿ ಅರ್ಹರಿಗೆ ಶೀಘ್ರ ವಿತರಿಸುವ ಕಾರ್ಯವಾಗಬೇಕು ಎಂದರು.

ಎಲ್ಲ ಇಲಾಖೆಯಲ್ಲೂ ಅಧಿಕಾರಿಗಳು ರೈತರು ಮತ್ತು ಕೂಲಿಕಾರ್ಮಿಕರ ಯಾವುದೇ ಕೆಲಸವನ್ನು ಉದಾಸೀನ ಮಾಡದೇ ಕಾನೂನಾತ್ಮಕವಾಗಿ ಮಾಡಿಕೊಡಬೇಕು. ಅರಣ್ಯ, ಕಂದಾಯ ಇಲಾಖೆಗಳು ಡೀಮ್ಡ್ ಫಾರೆಸ್ಟ್‌ ಎಂದು ಉಲ್ಲೇಖ ಮಾಡದೇ ಬಡಜನರ ವಸತಿಗೆ ಅನುಕೂಲವಾಗುವಂತೆ ಕೆಲಸ ಮಾಡಬೇಕು. ಗ್ರಾಪಂ ಅಧ್ಯಕ್ಷರು, ಸದಸ್ಯರು ಅಧಿಕಾರಿಗಳು ಎನ್‌ ಆರ್‌ಐಜಿ ಅನುದಾನ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಎಂ.ಕೆ ಪ್ರಾಣೇಶ್‌ ಮಾತನಾಡಿ, ಪ್ರತಿಯೊಬ್ಬರೂ ಸಾವನ್ನಪ್ಪಿದ ಮೇಲೆ ತಮ್ಮ ಹೆಸರು ಉಳಿಯಲು ಜೀವಿತಾವಧಿಯಲ್ಲಿ ಸಾರ್ವಜನಿಕರೊಂದಿಗೆ ಅನೋನ್ಯವಾಗಿ ಒಳ್ಳೆಯ ಕೆಲಸ ಮಾಡಬೇಕು. ಜನಪ್ರತಿನಿ ಧಿಗಳು ಮತ್ತು ಅಧಿಕಾರಿಗಳು ನಾವು ಸಾರ್ವಜನಿಕ ಸೇವೆಗೆ ಬಂದಿರುವುದೆಂದು ಅರಿಯಬೇಕು. ಹುದ್ದೆಗೆ ಚ್ಯುತಿ ಬಾರದಂತೆ ಭ್ರಷ್ಟಾಚಾರ ರಹಿತವಾಗಿ ಕೆಲಸ ಮಾಡಿದಲ್ಲಿ ಸಾರ್ವಜನಿಕರ ಮನಸ್ಸಿನಲ್ಲಿ ಉಳಿಯುಲು ಸಾಧ್ಯವಾಗುತ್ತದೆ ಎಂದರು.

Advertisement

ಜಿಲ್ಲೆಯ ಎಲ್ಲ ಗ್ರಾಪಂಗಳಲ್ಲಿನ ವಿದ್ಯುತ್‌ ಸಮಸ್ಯೆ ಅರಿತು ಸರ್ಕಾರದ ಯೋಜನೆಯಲ್ಲಿ ಇಲ್ಲದಿರುವ ಹೊಸ ಯೋಜನೆಯಾದ ಜನರೇಟ್‌ ವಿತರಣೆಗೆ ಸತತ ಒಂದೂವರೆ ವರ್ಷದ ನನ್ನ ಪ್ರಯತ್ನದಿಂದ ಜಿಲ್ಲೆಯ ಬಹುತೇಕ ಗ್ರಾಪಂಗಳಿಗೆ ಜನರೇಟರ್‌ ವಿತರಿಸಲಾಗಿದೆ. ಕ್ಷೇತ್ರದ 29 ಪಂಚಾಯ್ತಿಗಳ ಪೈಕಿ 25 ಪಂಚಾಯ್ತಿಗಳಿಗೆ ಈಗಾಗಲೇ ಜನರೇಟರ್‌ ವಿತರಿಸಲಾಗಿದೆ. ವಿಕಲಚೇತನರಿಗೆ ಹೆಚ್ಚಿನ ಬೈಸಿಕಲ್‌ನ್ನು ವಿತರಿಸಲಾಗಿದೆ. ಫಲಾನುಭವಿಗಳು
ಕಾನೂನು ಪಾಲಿಸಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೃಷಿ ಇಲಾಖೆಯಿಂದ ತಾಡಪಾಲು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಭಾಗ್ಯಲಕ್ಷ್ಮೀ ಬಾಂಡ್‌, ಅರಣ್ಯ ಇಲಾಖೆಯಿಂದ ಜೇನುಪೆಟ್ಟಿಗೆ, ಶಿಕ್ಷಣ ಇಲಾಖೆಯಿಂದ ಪಠ್ಯಪುಸ್ತಕ, ವಿಧಾನ ಪರಿಷತ್‌
ಸದಸ್ಯರ ಅನುದಾನದಲ್ಲಿ 13 ಅಂಗವಿಕಲರಿಗೆ ಬೈಸಿಕಲ್‌, ತಾಪಂನಿಂದ ಮೂವರು ಅಂಗವಿಕಲರಿಗೆ ಬೈಸಿಕಲ್‌ ವಿತರಿಸಲಾಯಿತು. ಎಲ್ಲ ಗ್ರಾಪಂ ಅಧ್ಯಕ್ಷರು ಹಾಗೂ ಪಿಡಿಒಗಳನ್ನು ಸನ್ಮಾನಿಸಲಾಯಿತು.

ತಾಪಂ ಅಧ್ಯಕ್ಷ ಕೆ.ಸಿ. ರತನ್‌, ಜಿಪಂ ಸದಸ್ಯರಾದ ಪ್ರಭಾಕರ್‌, ಅಮಿತಾ ಮುತ್ತಪ್ಪ, ಸುಧಾ ಯೋಗೇಶ್‌, ತಾಪಂ ಉಪಾಧ್ಯಕ್ಷೆ ಸವಿತಾ ರಮೇಶ್‌, ಸದಸ್ಯರಾದ ಸುಂದರ್‌ ಕುಮಾರ್‌, ರಂಜನ್‌ ಅಜಿತ್‌, ವೇದಾ ಲಕ್ಷಣ್‌, ಭಾರತಿ ರವೀಂದ್ರ, ವೀಣಾ ಉಮೇಶ್‌, ದೇವರಾಜ್‌, ತಾಪಂ ಇಒ ಕಿಶೋರ್‌ ಕುಮಾರ್‌, ಬಿಇಒ ತಾರಾನಾಥ್‌, ಪಿ.ಎಂ. ರಘು ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next