ಮೈಸೂರು: ಕೃಷ್ಣರಾಜ ಕ್ಷೇತ್ರದ ಎಲ್ಲಾ ವಾರ್ಡ್‌ಗಳಲ್ಲೂ ಮುಂದಿನ ಒಂದು ತಿಂಗಳೊಳಗೆ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು. ಪ್ರತಿ ಭಾನುವಾರದಂತೆ ನ.18ರ ಭಾನುವಾರದಂದು ಶಾಸಕ ಎಸ್.ಎ.ರಾಮದಾಸ್ ನೇತೃತ್ವದಲ್ಲಿ ವಾರ್ಡ್ ಸಂಖ್ಯೆ 53ರ ಸಿದ್ಧಾರ್ಥ ಲೇಔಟ್‌ನ ಸಿಐಟಿಬಿ ಕಲ್ಯಾಣ ಭವನದ ಸುತ್ತಮುತ್ತಲೂ ಸ್ವತ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.
ಕ್ಲೀನ್ ಸಂಡೆ-ಗ್ರೀನ್ ಸಂಡೆ ಎಂಬ ಉದ್ದೇಶದೊಂದಿಗೆ ಪ್ರತಿ ಒಂದು ವಾರ್ಡ್‌ನಲ್ಲೂ ಕೂಡ ಅಲ್ಲಿನ ಪೌರ ಕಾರ್ಮಿಕರು, ಸಂಘ ಸಂಸ್ಥೆಗಳು, ಸಾರ್ವಜನಿಕರೆಲ್ಲನ್ನೂ ಜೋಡಿಸಿಕೊಂಡು ಒಂದೊಂದು ಪ್ರದೇಶದಲ್ಲಿ ಸ್ವತ್ಛತೆಯನ್ನು ಮಾಡುವುದರ ಜೊತೆಗೆ ವಿಶೇಷವಾಗಿ ಅಲ್ಲಿರುವ ನಾಗರಿಕರಿಗೆ ಸ್ವತ್ಛತೆಯ ಬಗ್ಗೆ ತಿಳಿಸುವಂತಹ ಒಂದು ಔಚಿತ್ಯವನ್ನು ಮಾಡುತ್ತಿದ್ದೇವೆ. ಎಷ್ಟೆಷ್ಟು ಗಿಡಗಳನ್ನು ನೆಡಬೇಕೆನ್ನುವುದನ್ನು ನಿರ್ಧರಿಸಿ ಪಾಯಿಂಟ್ ಗುರುತು ಮಾಡಿ ಗುಂಡಿ ತೆಗೆಸುವ ಕಾರ್ಯವನ್ನು ಪ್ರಾರಂಭ ಮಾಡಲಾಗುವುದು ಎಂದರು.
ವಿಶೇಷ ತರಬೇತಿ: ಮೈಸೂರು ನಗರವನ್ನು ವಿಶೇಷವಾಗಿ ಮಾಲಿನ್ಯರಹಿತ ನಗರವಾಗಿ ನೋಡಿಕೊಳ್ಳಬೇಕಾದರೆ ಹಸಿರೀಕರಣಮಾಡಬೇಕೆಂಬ ವಿಚಾರವನ್ನು ಇಟ್ಟುಕೊಂಡಿದ್ದೇವೆ. ಈ ವಿಚಾರದಲ್ಲಿ ಭಾಗವಹಿಸುವಂತಹ ಎಲ್ಲರನ್ನೂ ಗುರುತಿಸಿ ಅವರಿಗೆ ಬೇಕಾದ ವಿಶೇಷವಾದ ತರಬೇತಿಯನ್ನು ನೀಡಿ ಅವರನ್ನು ಪ್ಲಾಂಟ್ ಡಾಕ್ಟರ್ ಆಗಿ ಕಳುಹಿಸಬೇಕೆಂಬ ಕಲ್ಪನೆ ಕೂಡ ಇದೆ. ಈಗಾಗಲೇ ಇದಕ್ಕೆ ಸುಮಾರು 10 ಜನ ಯುವಕರು ನೋಂದಣಿ ಮಾಡಿಕೊಂಡಿದ್ದಾರೆ. ಆ ರೀತಿಯಲ್ಲಿ ಎಲ್ಲಾ ವಾರ್ಡ್‌ಗಳಲ್ಲೂ ಕೂಡ ಜೋಡಿಸುವಂತಹ ಕೆಲಸವನ್ನು ಮಾಡಲಾಗುವುದು ಎಂದು ತಿಳಿಸಿದರು.
ಅನಂತ್ ಸ್ಮರಣೆ: ಕೇಂದ್ರ ಸಚಿವ ಅನಂತ ಕುಮಾರ್ ಇವತ್ತು ನಮ್ಮ ಮುಂದೆ ಇಲ್ಲ. ಆದರೆ, ಇಡೀ ರಾಜ್ಯದಲ್ಲಿ ಮೊದಲಿಗೆ ಬೆಂಗಳೂರಿನಲ್ಲಿ ಗ್ರೀನ್‌ಸಂಡೆ ಪ್ರಾರಂಭ ಮಾಡಿ ಈಗ 157 ಭಾನುವಾರಗಳನ್ನು ಮಾಡಿದ್ದಾರೆ. ಕೋಟಿ ಗಿಡಗಳನ್ನು ನೆಡಬೇಕು ಎಂಬ ಉದ್ದೇಶವನ್ನಿಟ್ಟುಕೊಂಡಿದ್ದರು. ನಮ್ಮನ್ನು ಅಗಲಿ ಒಂದು ವಾರ ಆಗಿದೆ. ಅವರ ಅದಮ್ಯ ಚೇತನದಲ್ಲಿ ಈ ಭಾನುವಾರವು ಕೂಡ ಗ್ರೀನ್‌ಸಂಡೆ ಕಾರ್ಯಕ್ರಮವನ್ನು ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ನಗರಪಾಲಿಕೆ ಸದಸ್ಯೆ ಜಿ. ರೂಪಾ, ವಲಯ ಆಯುಕ್ತ ಮುರಳೀಧರ್, ಆರೋಗ್ಯ ಪರಿವೀಕ್ಷಕ ರವಿಶಂಕರ್, ತೋಟಗಾರಿಕೆ ಇಲಾಖೆ ಪರಿವೀಕ್ಷಕ ಶಿವಸ್ವಾಮಿ, ಬಾಬು, ಸೇಫ್ ವೀಲ್ ಪ್ರಶಾಂತ್, ವಿನಯ್, ಮಧು, ಕಾರ್ತಿಕ್, ಪದಂ, ಮಹೇಶ್ ರಾಜೇ ಅರಸ್, ರವಿ, ಪ್ರಕಾಶ್ ಜೈನ್, ಸುಧೀರ್ ಇತರರಿದ್ದರು.