Advertisement
ಪಾಲಿಕೆಯ 2021-22ನೇ ಸಾಲಿನ ಬಜೆಟ್ ಮಂಡನೆಗೆ ಪಾಲಿಕೆಯಿಂದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಈ ಹಂತದಲ್ಲಿ ಬಿಬಿಎಂಪಿಯ ವಿವಿಧ ಇಲಾಖೆಗಳ ಆದಾಯ ಮೂಲಗಳು ಹಾಗೂ ಆರ್ಥಿಕ ಸೋರಿಕೆ ತಡೆ ಸೇರಿದಂತೆ ಹಲವು ವಿಚಾರಗಳು ಚರ್ಚೆ ಆಗಿವೆ. ಈ ಸಂದರ್ಭದಲ್ಲಿ ನಗರದ ಮಾರುಕಟ್ಟೆಗಳಲ್ಲಿ ಮೂಲಸೌಕರ್ಯ ಹೆಚ್ಚಿಸುವುದಕ್ಕೆ ಆದ್ಯತೆ ನೀಡುವುದು ಹಾಗೂ ಮಾರುಕಟ್ಟೆಗಳ ಮಳಿಗೆಗಳಿಗೆ ಬಾಡಿಗೆ ನಿಗದಿ ಮಾಡುವ ಸಂಬಂಧ ಇರುವ ಗೊಂದಲಗಳನ್ನು ಹಂತ- ಹಂತವಾಗಿ ಪರಿಹರಿಸುವ ನಿಟ್ಟಿನಲ್ಲಿ ಚರ್ಚೆ ನಡೆದಿದೆ. ನಗರದ ಪೂರ್ವ, ಪಶ್ಚಿಮ ಹಾಗೂ ದಕ್ಷಿಣ ವಲಯದಲ್ಲಿ ಒಟ್ಟು 117 ಮಾರುಕಟ್ಟೆಗಳಿದ್ದು, ಇದರಲ್ಲಿ ಒಟ್ಟು 5886 ಮಳಿಗೆಗಳಿವೆ. ಕೆಲವು ನಿರ್ದಿಷ್ಟ ಮಳಿಗೆಗಳಿಗೆ ಬಾಡಿಗೆ ನಿಗದಿ ಮಾಡುವ ವಿಚಾರವಾಗಿ ಗೊಂದಲಗಳು ಸೃಷ್ಟಿ ಆಗಿದ್ದು, ಕೆಲವು ವ್ಯಾಪಾರಿಗಳು ಕೋರ್ಟ್ ಮೆಟ್ಟಿಲೇರಿದ್ದಾರೆ.
Related Articles
Advertisement
ಕೌನ್ಸಿಲ್ ನಿರ್ಣಯಗಳಲ್ಲಿ ಗೊಂದಲ: ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ಈ ಹಿಂದೆ ತೆಗೆದುಕೊಳ್ಳಲಾಗಿದ್ದ ನಿರ್ಣಯಗಳು ಹಾಗೂ ಅದರ ಅನುಷ್ಠಾನದಲ್ಲಿ ಗೊಂದಲ ಇರುವುದು ಸಹ ಸಮಸ್ಯೆಗೆ ಕಾರಣವಾಗಿದೆ. ನಿರ್ದಿಷ್ಟ ವರ್ಷದಿಂದ ಪೂರ್ವ ಅನ್ವಯವಾಗುವಂತೆ ಬಡ್ಡಿ ಮತ್ತು ಅಸಲು ಸೇರಿಸಿ ಬಾಡಿಗೆ ಪಾವತಿ ಮಾಡುವ ಪಾಲಿಕೆ ತೆಗೆದುಕೊಂಡಿದ್ದ ನಿರ್ಣಯವನ್ನು ಪ್ರಶ್ನೆ ಮಾಡಿ 114ಕ್ಕೂ ಹೆಚ್ಚು ಮಳಿಗೆಗಳ ವ್ಯಾಪಾರಿಗಳು ಕೋರ್ಟ್ ಮೊರೆ ಹೋಗಿದ್ದಾರೆ. ಒಮ್ಮೆಗೆ ಮಳಿಗೆ ಬಾಡಿಗೆ ಮೂರು ಪಟ್ಟು ಹೆಚ್ಚಾಗುತ್ತದೆ. ಇದರಿಂದ ನಮಗೆ ಹೊರೆಯಾಗುತ್ತದೆ ಎನ್ನುವುದು ಮಳಿಗೆಗಳ ವ್ಯಾಪಾರಿಗಳ ವಾದವಾಗಿದೆ. ಮೂರು ವಿಭಾಗಗಳಾಗಿ ವಿಂಗಡಿಸಿಕೊಳ್ಳಲು ಸೂಚನೆ: ಮಾರುಕಟ್ಟೆಗಳ ಮಳಿಗೆಗಳಿಂದ ಆದಾಯ ಬರುವ ಹಾಗೂ ಸಮಸ್ಯೆ ಆಗಿರುವ ಮಳಿಗೆಗಳನ್ನು ಎ, ಬಿ ಮತ್ತು ಸಿ ಎಂದು ಮೂರು ವಿಭಾಗಗಳಾಗಿ ಮಾಡಿಕೊಂಡು ಪಾಲಿಕೆಗೆ ಹೆಚ್ಚು ಆದಾಯ ಬರುವ ಮಾರುಕಟ್ಟೆಗಳ ಪ್ರಕರಣಗಳು ಆದ್ಯತೆ ಮೇಲೆ ಪರಿಹರಿಸಿಕೊಳ್ಳುವಂತೆ ಹಾಗೂ ಇದೇ ಸಂದರ್ಭದಲ್ಲಿ ಮಾರುಕಟ್ಟೆಗಳ ಮೂಲಸೌಕರ್ಯ ಅಭಿವೃದ್ಧಿಗೂ ಪೂರಕವಾಗಿ ಯೋಜನೆ ರೂಪಿಸಿಕೊಳ್ಳಲು ಪಾಲಿಕೆ ಮುಂದಾಗಿದೆ.
ಮಾರುಕಟ್ಟೆಗಳ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಆದಾಯ ಬಾಡಿಗೆ ಗೊಂದಲ ಪರಿಹಾರಕ್ಕೆ ಆಡಳಿತಾಧಿಕಾರಿ ನಿರ್ದೇಶನ ನೀಡಿದ್ದು, ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ. – ತುಳಸಿ ಮದ್ದಿನೇನಿ. ಬಿಬಿಎಂಪಿ ವಿಶೇಷ ಆಯುಕ್ತೆ (ಹಣಕಾಸು).
ಪಾಲಿಕೆಯಿಂದ ಮಾರುಕಟ್ಟೆಗಳ ಸುಧಾರಣೆ ಹಾಗೂ ಸಮಸ್ಯೆ ಪರಿಹಾರಕ್ಕೆ ಒಲವು ತೋರಿಸಿರುವುದು ಸ್ವಾಗತಾರ್ಹ. ಮಾತುಕತೆಯ ಮೂಲಕ ಸಮಸ್ಯೆಗಳ ಪರಿಹಾರಕ್ಕೆ ನಾವು ಸಿದ್ಧವಾಗಿದ್ದೇವೆ. – ದಿವಾಕರ್, ಕೆ.ಆರ್. ಮಾರುಕಟ್ಟೆ ವರ್ತಕರ ಸಂಘದ ಅಧ್ಯಕ್ಷ.
-ಹಿತೇಶ್ ವೈ