Advertisement

ಕೃಷಿಯಲ್ಲಿ ತಾಂತ್ರಿಕತೆ-ಜೈವಿಕ ಪದ್ಧತಿಗೆ ಒತ್ತು ನೀಡಿ: ರಾಜ್ಯಪಾಲ ಗೆಹ್ಲೋತ್‌

06:43 PM Mar 11, 2023 | Team Udayavani |

ಗದಗ: ಕೃಷಿ ದೇಶದ ಆರ್ಥಿಕತೆಯ ಬೆನ್ನೆಲುಬಾಗಿದ್ದು, ಇಂದಿನ ಕೃಷಿ ಕ್ಷೇತ್ರದಲ್ಲಿ ಬದಲಾವಣೆಯಾಗಬೇಕಾಗಿದೆ. ಕೃಷಿ ರಂಗದಲ್ಲೂ ತಾಂತ್ರಿಕತೆ ಅಳವಡಿಸಿಕೊಳ್ಳುವ ಜೊತೆಗೆ ಜೈವಿಕ ಕೃಷಿ ಪದ್ಧತಿಗೆ ಒತ್ತು ನೀಡಬೇಕೆಂದು ರಾಜ್ಯಪಾಲ ಥಾವರ ಚಂದ್‌ ಗೆಹ್ಲೋತ್‌ ಅಭಿಪ್ರಾಯಪಟ್ಟರು.

Advertisement

ತಾಲೂಕಿನ ನಾಗಾವಿಯ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯದ 3ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೆಟ್‌ ಪದವಿ ಹಾಗೂ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಿ ಅವರು ಮಾತನಾಡಿದರು.

ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್‌ ವಿವಿಯಲ್ಲಿ ಗ್ರಾಮೀಣಾಭಿವೃದ್ಧಿಗೆ ಸಂಬಂ ಧಿಸಿದ ಶಿಕ್ಷಣ ನೀಡಲಾಗುತ್ತಿದೆ. ಇಲ್ಲಿ ನೀಡಲಾಗುತ್ತಿರುವ ಶಿಕ್ಷಣವನ್ನು ದೇಶದ ಬೇರಾವ ವಿಶ್ವವಿದ್ಯಾಲಯದಲ್ಲೂ ನೀಡಲಾಗುತ್ತಿಲ್ಲ ಎಂದರು. ವಿದ್ಯಾರ್ಥಿಗಳು ವಿಶ್ವವಿದ್ಯಾಲಯದಲ್ಲಿ ಕೃಷಿ ಹಾಗೂ ಗ್ರಾಮಗಳ ಅಭಿವೃದ್ಧಿಗಾಗಿ ನೀಡುವಂತಹ ಶಿಕ್ಷಣದೊಂದಿಗೆ ಮಹಾತ್ಮ ಗಾಂಧೀಜಿ ಅವರು ಕಂಡ ಗ್ರಾಮ ಸ್ವರಾಜ್‌ ಕನಸನ್ನು ನನಸಾಗಿಸಲು ಮುಂದಾಗಬೇಕು. ಜೊತೆಗೆ ಈ ವಿಶ್ವವಿದ್ಯಾಲಯದಿಂದ ಪಡೆದ ಶಿಕ್ಷಣದಿಂದ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿಗಾಗಿ ಸಂಕಲ್ಪ ಮಾಡಬೇಕೆಂದರು.

ಇಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕೃಷಿ ಕ್ಷೇತ್ರಗಳ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು, ಗ್ರಾಮೀಣ ಭಾಗದಲ್ಲಿ ಅವುಗಳ ಸದುಪಯೋಗವಾಗುವಂತೆ ಪ್ರೇರೇಪಿಸಬೇಕು. ನವಭಾರತ ನಿರ್ಮಾಣದಲ್ಲಿ ಹೊಸ ಶಿಕ್ಷಣ ನೀತಿ ಮಹತ್ತರ ಪಾತ್ರ ವಹಿಸಿದೆ. ಜೊತೆಗೆ ಮಾತೃ ಭಾಷೆಗೆ ಪ್ರೋತ್ಸಾಹ ನೀಡುವುದರ ಮೂಲಕ ವಿಕಾಸ ಹೊಂದಿದ ದೇಶಗಳ ಸಾಲಿನಲ್ಲಿ ಭಾರತ ಬರುವಂತಾಗಬೇಕೆಂದರು.

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಅಧ್ಯಕ್ಷ ಹಾಗೂ ಇಂಫಾಲ್‌ ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ|ಸುಬ್ಬಣ್ಣ ಅಯ್ಯಪ್ಪನ್‌ ಮಾತನಾಡಿ, ರೈತ ಸಮುದಾಯ, ಅನ್ನದಾತರು ತಮ್ಮ ಸಮರ್ಪಣೆ ಮತ್ತು ಕಠಿಣ ಪರಿಶ್ರಮದ ಮೂಲಕ ದೇಶದ 140 ಕೋಟಿ ಜನರ ಆಹಾರ ಭದ್ರತೆ ಖಚಿತಪಡಿಸುವ ಜೊತೆಗೆ ಸದೃಢ ಹಾಗೂ ಶಕ್ತಿಯುತ ರಾಷ್ಟ್ರ ರೂಪಿಸುತ್ತಿದ್ದಾರೆ ಎಂದರು.

Advertisement

ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್‌ ವಿಶ್ವವಿದ್ಯಾಲಯ ರಾಜ್ಯದಲ್ಲಿ ಮಾತ್ರವಲ್ಲದೇ ಇಡೀ ದೇಶದಲ್ಲಿ ಒಂದು ವಿಶಿಷ್ಟ ಶಿಕ್ಷಣ ಸಂಸ್ಥೆಯಾಗಿದೆ. ಭಾರತ ಹಳ್ಳಿಗಳ ನಾಡಾಗಿದ್ದು, ದೇಶದ ಶೇ.60ಕ್ಕಿಂತ ಹೆಚ್ಚು ಜನರು ಗ್ರಾಮೀಣ ವಾಸಿಗಳಾಗಿ, ಸಮಾಜದ ಜೀವನಾಡಿಯಾಗಿದ್ದಾರೆ. ಈ ವಿಶ್ವವಿದ್ಯಾಲಯದಲ್ಲಿ ವಿಜ್ಞಾನ, ತಂತ್ರಜ್ಞಾನ ಮತ್ತು ಅವಿಷ್ಕಾರಗಳ ಮೂಲಕ ಗ್ರಾಮೀಣ ಜನರ ಸಮಸ್ಯೆಗಳನ್ನು ಪರಿಸಹರಿಸುವ ವಿಧಾನಗಳು ಮತ್ತು ಪರಿಹಾರಗಳನ್ನು ಒದಗಿಸುವ ನಿಟ್ಟಿನಲ್ಲಿ ಯುವಜನರ ಜ್ಞಾನ ಮತ್ತು ಕೌಶಲ್ಯ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡುತ್ತಿದೆ ಎಂದರು. ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್‌ ವಿಶ್ವವಿದ್ಯಾಲಯದ ಕುಲಪತಿ ವಿಷ್ಣುಕಾಂತ ಚಟಪಲ್ಲಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಲಸಚಿವ ಬಸವರಾಜ ಲಕ್ಕಣ್ಣವರ, ವಿಶ್ವವಿದ್ಯಾಲಯದ ಪರಿಷತ್‌ ಹಾಗೂ ಶೈಕ್ಷಣಿಕ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ| ಸುಶೀಲಾ ಬಿ., ಅಪರ ಜಿಲ್ಲಾ ಧಿಕಾರಿ ಎಂ.ಪಿ. ಮಾರುತಿ ಸೇರಿದಂತೆ ಗಣ್ಯರು, ವಿದ್ಯಾರ್ಥಿಗಳು, ವಿಶ್ವ ವಿದ್ಯಾಲಯ ಭೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಜರಿದ್ದರು.

ಕನ್ನಡದಲ್ಲೇ ಭಾಷಣ ಆರಂಭಿಸಿದ ರಾಜ್ಯಪಾಲರು: ವಿಶ್ವವಿದ್ಯಾಲಯದ ಆವರಣದಲ್ಲಿರುವ ಸಬರಮತಿ ಪ್ರತಿಕೃತಿ ಆಶ್ರಮಕ್ಕೆ ಭೇಟಿ ನೀಡಿದ ರಾಜ್ಯಪಾಲ ಥಾವರ ಚಂದ್‌ ಗೆಹ್ಲೋತ್‌ ಅವರು, ನಂತರ ವಿವಿಯ ಕೌಶಲ್ಯ ಭವನದಲ್ಲಿ ನಡೆದ ಸಮಾರಂಭದಲ್ಲಿ ಎಲ್ಲರಿಗೂ ನಮಸ್ಕಾರ ಗಳು, ತಮ್ಮೆಲ್ಲರಿಗೂ ಅಭಿನಂದನೆಗಳು ಎನ್ನುತ್ತಲೇ ಕನ್ನಡದಲ್ಲೇ ಭಾಷಣ ಆರಂಭಿಸಿ ಗಮನ ಸೆಳೆದರು.

ಗೌರವ ಡಾಕ್ಟರೆಟ್‌ ಪ್ರಶಸ್ತಿ ಪ್ರದಾನ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿವಿ ಕೌಶಲ್ಯ ಭವನದಲ್ಲಿ ನಡೆದ ವಿಶ್ವವಿದ್ಯಾಲಯದ 3ನೇ ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯಪಾಲ ಥಾವರ ಚಂದ್‌ ಗೆಹ್ಲೋತ್‌ ಅವರು ಬೆಳಗಾವಿ ಜಿಲ್ಲೆಯ ಕಟ್ಟಣಭಾವಿ ಗ್ರಾಮದ ಗಾಂ ಧೀವಾದಿ ಮತ್ತು ಹಿರಿಯ ಸಾಮಾಜಿಕ ಕಾರ್ಯಕರ್ತ ಶಿವಾಜಿ ಕಾಗಣಿಕರ್‌ ಅವರಿಗೆ ಗೌರವ ಡಾಕ್ಟರೆಟ್‌ ಪದವಿ ಪ್ರದಾನ ಮಾಡಿದರು.

ಚಿನ್ನದ ಪದಕ ಪ್ರದಾನ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯದ ವಿವಿಧ ಸ್ನಾತ್ತಕೋತ್ತರ ವಿಭಾಗಗಳಲ್ಲಿ ಉತ್ತಮ ಅಂಕ ಗಳಿಸಿದ ಪ್ರೀತಂ ಸಿ.ಜಿ., ದಿವ್ಯ ಬಿ.ಯು., ಚಿದಾನಂದ ಆಶ್ಯಾಳ, ವೀಣಾ ಭಜಂತ್ರಿ, ಕೆ.ಆರ್‌.ಮೋಹನ, ಎಸ್‌. ತೇಜಸ್‌, ಪ್ರಿಯಾ ನೀರಲಕಟ್ಟಿ, ಶೋಭಾ ಪೂಜೆರ, ಪೂಜಾ ಕಣವಿ, ಅಫ್ರಿನಸನಾ ಹಂಪಾಪಟ್ಟಣ ಅವರಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು.

ವಿದ್ಯಾರ್ಥಿಗಳು ಜೀವನಪರ್ಯಂತ ಜ್ಞಾನದ ಅನ್ವೇಷಣೆಯಲ್ಲಿ ಪ್ರಾಮಾಣಿಕವಾಗಿ ಹಾಗೂ ಕಟ್ಟುನಿಟ್ಟಾಗಿ ಸಮರ್ಪಣಾ ಭಾವದಿಂದ ಮಾನವೀಯ ಸೇವೆ ಮಾಡಬೇಕು. ಸಾಂಪ್ರದಾಯಿಕ ಬುದ್ಧಿವಂತಿಕೆಯೊಂದಿಗೆ ಆಧುನಿಕ ಜ್ಞಾನ ಸೇರಿಸುವ ಮೂಲಕ ಅಧ್ಯಯನ ಮಾಡುತ್ತಿರುವ ವಿಶ್ವವಿದ್ಯಾಲಯಕ್ಕೆ ಕೀರ್ತಿ ತರುವ ಕಾರ್ಯ ಮಾಡಬೇಕು.
ಡಾ|ಸುಬ್ಬಣ್ಣ ಅಯ್ಯಪ್ಪನ್‌,
ಕುಲಪತಿ, ಇಂಫಾಲ್‌ ಕೇಂದ್ರೀಯ ಕೃಷಿ ವಿವಿ

ಮನುಷ್ಯನ ಜೀವನ ಪ್ರಕೃತಿ ಮೇಲೆ ಅವಲಂಬಿತವಾಗಿದೆ. ಪರಿಸರ ಸಂರಕ್ಷಣೆ ಹಾಗೂ ಸಂವರ್ಧನೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ದೇಶವನ್ನು ಸ್ವಸ್ಥ ಭಾರತವನ್ನಾಗಿಸಬೇಕು. ವಿದ್ಯಾರ್ಥಿಗಳು ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಮಾಜ ಸುಧಾರಣೆಯ ಜೊತೆಗೆ ತಮ್ಮ ಚಿಂತನೆಗಳೊಂದಿಗೆ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಮುಂದಾಗಬೇಕು.
ಥಾವರ್‌ಚಂದ್‌ ಗೆಹ್ಲೋತ್‌, ರಾಜ್ಯಪಾಲರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next