ಬೆಂಗಳೂರು: ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ಮಾಲೀಕರು “ಸ್ವಯಂ ಮೌಲ್ಯಮಾಪನ ಯೋಜನೆ’ ಅಡಿ ಘೋಷಣೆ (ಆಸ್ತಿ ಮಾಲೀಕರೇ ಅವರ ಆಸ್ತಿ ವಿವರ ಘೋಷಿಸಿಕೊಳ್ಳುವುದು) ಮಾಡಿಕೊಂಡಿರುವ ಆಸ್ತಿ ವಿವರದ ಬಗ್ಗೆ ಪರಿಶೀಲನೆ ನಡೆಸುವಂತೆ ಕಂದಾಯ ವಿಭಾಗದ ಅಧಿಕಾರಿಗಳಿಗೆ ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತಾ ಸೂಚನೆ ನೀಡಿದರು.
ಮಲ್ಲೇಶ್ವರದ ಐಪಿಪಿ ಕೇಂದ್ರದಲ್ಲಿ ಪಾಲಿಕೆ ಆಡಳಿತಾಧಿಕಾರಿ ಗೌರವ್‌ಗುಪ್ತಾ ಹಾಗೂ ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಅವರ ನೇತೃತ್ವದಲ್ಲಿ ಶುಕ್ರವಾರ ಪಾಲಿಕೆ ಕಂದಾಯ ವಿಭಾಗದ ಆಸ್ತಿ ತೆರಿಗೆ ಸಂಗ್ರಹ ಪರಿಶೀಲನಾ ಸಭೆ ನಡೆಯಿತು. ಈ ವೇಳೆ ಮಾತನಾಡಿದ ಗೌರವ್ ಗುಪ್ತಾ, ನಗರದಲ್ಲಿ “ಸ್ವಯಂ ಮೌಲ್ಯಮಾಪನ ಯೋಜನೆ’ ಅಡಿ ಆಸ್ತಿ ಘೋಷಿಸಿಕೊಂಡಿರುವವರ ಬಗ್ಗೆ ಕೆಲವು ನಿರ್ದಿಷ್ಟ ಪ್ರಕರಣಗಳಲ್ಲಿ ಗೊಂದಲ ಹಾಗೂ ತಪ್ಪು ಮಾಹಿತಿ ಇದ್ದು, ಇದನ್ನು ಪರಿಶೀಲಿಸಿ ತಪ್ಪಿದ್ದಲ್ಲಿ ಸರಿಪಡಿಸಿಕೊಳ್ಳುವಂತೆ ಸೂಚನೆ ನೀಡಿದರು.
ಅಲ್ಲದೆ, ಪ್ರತಿ ವಲಯದಲ್ಲೂ “ಖಾತಾ ಮೇಳ’ ಏರ್ಪಡಿಸಿ, ಆಸ್ತಿ ಮಾಲೀಕರಿಗೆ ನಿಗದಿಯ ಸಮಯದಲ್ಲಿ ಖಾತೆಗಳನ್ನು ನೀಡಬೇಕು. ಈ ಮೂಲಕ ಹೆಚ್ಚು ಆಸ್ತಿಗಳನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ಸೇರ್ಪಡೆ ಮಾಡಬೇಕು. ಆಸ್ತಿ ತೆರಿಗೆ ಸಂಗ್ರಹದ ಬಗ್ಗೆ ಪ್ರತಿ ವಾರ ಪರಿಶೀಲನಾ ಸಭೆ ನಡೆಸುವಂತೆ ನಿರ್ದೇಶಿಸಿದರು.
ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರ ಪಟ್ಟಿ ಸಿದ್ಧಪಡಿಸಿ ನೋಟಿಸ್ ಜಾರಿಗೊಳಿಸಬೇಕು. ನೋಟಿಸ್ ನೀಡಿಯೂ ತೆರಿಗೆ ಕಟ್ಟದಿದ್ದರೆ, ಆ ಆಸ್ತಿಗಳನ್ನು ಮುಟ್ಟುಗೋಲು ಅಥವಾ ಬೀಗಮುದ್ರೆ ಹಾಕಬೇಕು. ಇನ್ನೂ ಆಸ್ತಿ ತೆರಿಗೆ ವ್ಯಾಪ್ತಿಗೆ ಸೇರ್ಪಡೆಯಾಗದ ಆಸ್ತಿಗಳನ್ನು ಕೂಡಲೇ ತೆರಿಗೆ ವ್ಯಾಪ್ತಿಗೆ ಸೇರ್ಪಡೆಗೊಳಿಸಬೇಕು. ಆಸ್ತಿ ತೆರಿಗೆ ಸಂಗ್ರಹಿಸಲು ಸಮಗ್ರ ಯೋಜನೆ ರೂಪಿಸಿ, ಆಸ್ತಿಗಳನ್ನು ಪರಿಶೀಲಿಸಿ ತೆರಿಗೆ ಸಂಗ್ರಹಿಸಬೇಕು. ಜಿಐಎಸ್ ಮ್ಯಾಪಿಂಗ್, ಡ್ರೋನ್ ಸೇರಿದಂತೆ ಇತರೆ ತಂತ್ರಜ್ಞಾನ ಬಳಸಿಕೊಳ್ಳಲು ಸೂಚಿಸಿದರು.
ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಮಾತನಾಡಿ, ವಲಯವಾರು ಅತಿ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ 100 ಸುಸ್ತಿದಾರರ ಪಟ್ಟಿ ಸಿದ್ಧಪಡಿಸಿ, ಅವರಿಗೆ ನೋಟಿಸ್ ಜಾರಿಗೊಳಿಸಬೇಕು. ಆಸ್ತಿ ತೆರಿಗೆ ಸಂಗ್ರಹ ಕಾರ್ಯ ಸಮರ್ಪಕವಾಗಿ ನಿರ್ವಹಿಸಬೇಕು.ಹೊಸಆಸ್ತಿಗಳನ್ನುಆಸ್ತಿ ತೆರಿಗೆ ವ್ಯಾಪ್ತಿಗೆ ತರಲು ಹಾಗೂ ಖಾತಾ ನೀಡುವ ಸಂಬಂಧ ಕ್ರಮ ವಹಿಸಲು ನಿರ್ದೇಶನ ನೀಡಿದರು.
2,039 ಕೋಟಿರೂ.ಆಸ್ತಿಗೆ ತೆರಿಗೆ ಸಂಗ್ರಹ : ನಗರದಲ್ಲಿ ಒಟ್ಟು 19.80 ಲಕ್ಷ ಆಸ್ತಿಗಳು ತೆರಿಗೆ ವ್ಯಾಪ್ತಿಯಲ್ಲಿವೆ. 2020-21 ಸಾಲಿನ ಆರ್ಥಿಕ ವರ್ಷದಲ್ಲಿ ಇಲ್ಲಿಯವರೆಗೆ 2,039 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸಲಾಗಿದೆ. ಈಗಾಗಲೇ ವಲಯ ಹಾಗೂ ವಾರ್ಡ್‌ವಾರು 100 ಸುಸ್ತಿದಾರರ ಪಟ್ಟಿ ಸಿದ್ಧಪಡಿಸಲಾಗಿದೆ. ಆಸ್ತಿಗೆ ತೆರಿಗೆ ವ್ಯಾಪ್ತಿಗೆ ಸೇರ್ಪಡೆಯಾಗದ ಆಸ್ತಿಗಳನ್ನು ಒಂದು ತಿಂಗಳಲ್ಲಿ ಸರ್ವೆ ಮಾಡಿಸಿ ತೆರಿಗೆ ವ್ಯಾಪ್ತಿಗೆ ಸೇರ್ಪಡೆಗೊಳಿಸಲಾಗುವುದು ವಿಶೇಷ ಆಯುಕ್ತ ಬಸವರಾಜು ಮಾಹಿತಿ ನೀಡಿದರು.