Advertisement

ಆದಿವಾಸಿ ಅಭ್ಯುದಯದ ಅಭಯ: “ದುರ್ಬಲ ಬುಡಕಟ್ಟು ಸಮುದಾಯ’ದ ಸಶಕ್ತೀಕರಣಕ್ಕೆ ಹೊಸ ಯೋಜನೆ

12:41 AM Feb 02, 2023 | Team Udayavani |

ಕರ್ನಾಟಕ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಇನ್ನೂ ಪೂರ್ಣ ಪ್ರಮಾಣದಲ್ಲಿ ಹೊರಜಗತ್ತಿಗೆ ತೆರೆದುಕೊಳ್ಳದೆ, ಆಧುನಿಕತೆಯ ಅರಿವೇ ಇಲ್ಲದೆ ಬದುಕುತ್ತಿರುವ ಎಷ್ಟೋ ಸಮುದಾಯಗಳಿವೆ. ಇಂಥ ಅರಣ್ಯವಾಸಿಗಳು, ಆದಿವಾಸಿಗಳ ಕಲ್ಯಾಣದ ಸಂಕಲ್ಪ ತೊಟ್ಟಿರುವ ಕೇಂದ್ರ ಸರಕಾರ, ಈಗ ಇವರ ಜೀವನಮಟ್ಟವನ್ನು ಸುಧಾರಿಸುವ ಮಹದುದ್ದೇಶದೊಂದಿಗೆ “ಪ್ರಧಾನಮಂತ್ರಿ ಪಿವಿಟಿಜಿ ಡೆವಲಪ್‌ಮೆಂಟ್‌ ಮಿಷನ್‌’ ಎಂಬ ಯೋಜನೆಯನ್ನು ಘೋಷಿಸಿದೆ. ಈ ಯೋಜನೆಗಾಗಿ 15 ಸಾವಿರ ಕೋಟಿ ರೂ.ಗಳ ಅನುದಾನವನ್ನೂ ಘೋಷಿಸಲಾಗಿದೆ.

Advertisement

ಪಿವಿಟಿಜಿ ಎಂದರೆ “ವಿಶೇಷ ದುರ್ಬಲ ಬುಡಕಟ್ಟು ಸಮುದಾಯ’. ಕರ್ನಾಟಕದಲ್ಲಿರುವ ಜೇನುಕುರುಬ, ಕೊರಗ ಸಮುದಾಯ ಸೇರಿದಂತೆ ದೇಶಾದ್ಯಂತ ಮಾನ್ಯತೆ ಪಡೆದಿರುವ ಒಟ್ಟು 75 ಪಿವಿಟಿಜಿ ಬುಡಕಟ್ಟು ಸಮುದಾಯಗಳಿವೆ. ಇದರ ವ್ಯಾಪ್ತಿಯಲ್ಲಿ ಬರುವ ಅತಿ ಹೆಚ್ಚು ಮಂದಿ ಇರುವುದು ಒಡಿಶಾದಲ್ಲಿ. ಮುಂದಿನ 3 ವರ್ಷಗಳಲ್ಲಿ ಪಿವಿಟಿಜಿ ಅಭಿವೃದ್ಧಿ ಯೋಜನೆಯನ್ನು ಅನುಷ್ಠಾನಗೊಳಿಸುವ ಗುರಿಯನ್ನು ಸರಕಾರ ಹಾಕಿಕೊಂಡಿದೆ.

ಅನುಕೂಲತೆಯೇನು?: ಸರಕಾರ ಘೋಷಿಸಿರುವ 15 ಸಾವಿರ ಕೋಟಿ ರೂ.ಗಳ ವಿಶೇಷ ಪ್ಯಾಕೇಜ್‌ನಿಂದ ಆದಿವಾಸಿಗಳಿಗೆ ಮನೆ, ಆರೋಗ್ಯ, ಪೌಷ್ಟಿಕಾಂಶ, ಶುದ್ಧ ಕುಡಿಯುವ ನೀರು, ನೈರ್ಮಲ್ಯ, ಶಿಕ್ಷಣ, ರಸ್ತೆ ಮತ್ತು ದೂರಸಂಪರ್ಕ, ಅಗತ್ಯ ಮೂಲಸೌಕರ್ಯಗಳು ದೊರೆಯಲಿವೆ. ಜತೆಗೆ, ಈ ಜನಾಂಗಗಳು ಸುಸ್ಥಿರ ಜೀವನಾಧಾರದ ಮೂಲಕ ಸಬಲೀಕರಣ ಹೊಂದಲು ಸಾಧ್ಯವಾಗಲಿದೆ. ಈ ಸಮುದಾಯದ ಸಾಮಾಜಿಕ-ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವುದೇ ಯೋಜನೆಯ ಉದ್ದೇಶವಾಗಿದೆ.

ಬುಡಕಟ್ಟು ಜನರತ್ತ ಸರಕಾರ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರವು ಕಳೆದ ಕೆಲವು ವರ್ಷಗಳಿಂದಲೂ ಬುಡಕಟ್ಟು ಸಮುದಾಯದ ಅಭಿವೃದ್ಧಿ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಕೈಗೊಳ್ಳುತ್ತಾ ಬಂದಿದೆ.

ಕಳೆದ ವರ್ಷದ ಬಜೆಟ್‌ನಲ್ಲಿ ಆದಿವಾಸಿಗಳ ಅಭಿವೃದ್ಧಿಗೆಂದೇ ಕೇಂದ್ರ ಸರಕಾರವೇ ಅನುದಾನ ನೀಡುವಂಥ 16 ಯೋಜನೆಗಳು ಹಾಗೂ ಕಾರ್ಯಕ್ರಮಗಳಿಗಾಗಿ 2,945.53 ಕೋಟಿ ರೂ.ಗಳನ್ನು ಘೋಷಿಸಲಾಗಿತ್ತು. ಈ ಪೈಕಿ, 2 ಸಾವಿರ ಕೋಟಿ ರೂ.ಗಳನ್ನು ಏಕಲವ್ಯ ಮಾದರಿ ವಸತಿ ಶಾಲೆಗಳಿಗೆ ಹಂಚಿಕೆ ಮಾಡಲಾಗಿತ್ತು. ಬುಡಕಟ್ಟು ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸನ್ನು ನನಸು ಮಾಡುವುದೇ ಇದರ ಉದ್ದೇಶವಾಗಿತ್ತು. ಇದಕ್ಕೂ ಮೊದಲು 2014ರಲ್ಲಿ ಮೋದಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗ ವನಬಂಧು ಕಲ್ಯಾಣ ಯೋಜನೆಯನ್ನು ಆರಂಭಿಸಲಾಗಿತ್ತು.

Advertisement

ರಾಜಕೀಯ ಮಹತ್ವ: ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಡ, ತೆಲಂಗಾಣ, ಮೇಘಾಲಯ, ನಾಗಾಲ್ಯಾಂಡ್‌ ಮತ್ತು ತ್ರಿಪುರ… ಹೀಗೆ ಒಟ್ಟು 9 ರಾಜ್ಯಗಳಲ್ಲಿ ಈ ವರ್ಷ ವಿಧಾನಸಭೆ ಚುನಾವಣೆಗಳು ನಡೆಯಲಿದ್ದು, ಎಲ್ಲ ರಾಜಕೀಯ ಪಕ್ಷಗಳಿಗೂ ಬುಡಕಟ್ಟು ಸಮುದಾಯವು ಪ್ರಮುಖ ವೋಟ್‌ಬ್ಯಾಂಕ್‌ ಕೂಡ ಆಗಿದೆ. ಈ ಪೈಕಿ, ಛತ್ತೀಸ್‌ಗಡ ಮತ್ತು ತ್ರಿಪುರದಲ್ಲಿ ಶೇ. 30ಕ್ಕಿಂತಲೂ ಹೆಚ್ಚು ಬುಡಕಟ್ಟು ಜನಸಂಖ್ಯೆಯಿದ್ದರೆ, ಮೇಘಾಲಯ, ಮಿಜೋರಾಂ ಮತ್ತು ನಾಗಾಲ್ಯಾಂಡ್‌ನ‌ಲ್ಲಿ ಶೇ. 85ಕ್ಕಿಂತಲೂ ಹೆಚ್ಚು ಜನರು ಇದೇ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಹೀಗಾಗಿ, ಬಜೆಟ್‌ನಲ್ಲಿ ಘೋಷಿಸಿರುವ ಅಂಶಗಳು ರಾಜಕೀಯವಾಗಿ ಮಹತ್ವ ಪಡೆದಿದೆ.

ದುರ್ಬಲ ಬುಡಕಟ್ಟು ಗುಂಪುಗಳೆಂದರೆ…?
ಸರ್ಕಾರದಿಂದ ಹೆಚ್ಚಿನ ನೆರವು ಮತ್ತು ಬೆಂಬಲ ಅಗತ್ಯವಿರುವಂಥ ವಿಶೇಷ ದುರ್ಬಲ ಬುಡಕಟ್ಟು ಜನಾಂಗಗಳನ್ನು “ಪಿವಿಟಿಜಿ’ಗಳೆಂದು ಕರೆಯುತ್ತಾರೆ. ಭಾರತದಲ್ಲಿರುವ ಒಟ್ಟಾರೆ 705 ಪರಿಶಿಷ್ಟ ಪಂಗಡಗಳ ಪೈಕಿ 75 ಪಂಗಡಗಳನ್ನು ಪಿವಿಟಿಜಿ (ವಿಶೇಷ ದುರ್ಬಲ ಬುಡಕಟ್ಟು ಜನಾಂಗಗಳು) ಎಂದು ಗುರುತಿಸಲಾಗಿದೆ. ಈ ಜನಾಂಗಗಳು ಒಟ್ಟಾರೆ 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಂಚಿಹೋಗಿವೆ. ಅತ್ಯಂತ ಕಡಿಮೆ ಸಾಕ್ಷರತೆ ಪ್ರಮಾಣ, ಆರ್ಥಿಕವಾಗಿ ಹಿಂದುಳಿದಿರುವಿಕೆ, ಸ್ಥಿರ ಅಥವಾ ಕುಸಿಯುತ್ತಿರುವ ಜನಸಂಖ್ಯೆಯನ್ನು ಆಧರಿಸಿ ಈ ಜನಾಂಗಗಳನ್ನು ಗುರುತಿಸಲಾಗಿದೆ. ಕರ್ನಾಟಕದಲ್ಲಿ ಜೇನುಕುರುಬ ಮತ್ತು ಕೊರಗ ಸಮುದಾಯವನ್ನು “ಪಿವಿಟಿಜಿ’ ವ್ಯಾಪ್ತಿಗೆ ಸೇರಿಸಲಾಗಿದೆ.

ತಾಲೂಕುಗಳತ್ತ ಚಿತ್ತ
“ಮಹತ್ವಾಕಾಂಕ್ಷೆಯ ಜಿಲ್ಲೆಗಳು’ ಯೋಜನೆಯು ಯಶಸ್ವಿಯಾದ ಬೆನ್ನಲ್ಲೇ ಸರಕಾರವು “ಮಹತ್ವಾಕಾಂಕ್ಷೆಯ ಬ್ಲಾಕ್‌ಗಳು’ ಎಂಬ ಹೆಸರಿನಲ್ಲಿ ತಾಲೂಕು ಮಟ್ಟದತ್ತ ಗಮನ ಹರಿಸಿದೆ. ಆರೋಗ್ಯ, ಪೋಷಣೆ, ಕೃಷಿ, ಶಿಕ್ಷಣ, ಜಲ ಸಂಪನ್ಮೂಲಗಳು, ಕೌಶಲಾಭಿವೃದ್ಧಿ, ಆರ್ಥಿಕ, ಮೂಲ ಸೌಕರ್ಯಗಳಡಿ ಸರಕಾರದ ಯೋಜನೆ ಮತ್ತು ಸೇವೆಗಳು ಪರಿಪೂರ್ಣವಾಗಿ ಜನರಿಗೆ ತಲುಪಿಸುವ ಕಾರ್ಯಕ್ರಮ ಇದಾಗಿದೆ. ಈ ಯೋಜನೆಗಳ ಸೇವೆ, ಸೌಕರ್ಯ ಇದೀಗ 500 ತಾಲೂಕು ಕೇಂದ್ರಗಳಲ್ಲಿ ಪರಿಪೂರ್ಣವಾಗಿ ತಲುಪಲು ಹಾಗೂ ಸಮರ್ಪಕ ಅನುಷ್ಠಾನ ಹಮ್ಮಿಕೊಳ್ಳಲಾಗಿದೆ ಎಂದು ಸರಕಾರ ಘೋಷಿದೆ.

ಏಕಲವ್ಯ ಶಾಲೆಗಳಿಗೆ 38,800 ಶಿಕ್ಷಕರ ನೇಮಕ
ಶಿಕ್ಷಣ, ಉದ್ಯೋಗದ ಅವಕಾಶವು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಲಭ್ಯವಾಗಬೇಕು. ಆಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಇದನ್ನು ಮನ ಗಂಡಿರುವ ಸರ್ಕಾರ, 740 ಏಕಲವ್ಯ ಮಾದರಿ ವಸತಿ ಶಾಲೆ ಗಳಿಗೆ 38,800 ಶಿಕ್ಷಕರು, ಸಿಬ್ಬಂದಿ ನೇಮಕದ ಬಗ್ಗೆ ಘೋಷಿಸಿದೆ.

ಮುಂದಿನ 3 ವರ್ಷಗಳಲ್ಲಿ ಶಿಕ್ಷಕರ ನೇಮಕ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಪ್ರಸ್ತುತ ದೇಶಾದ್ಯಂತ ಏಕಲವ್ಯ ಶಾಲೆಗಳಲ್ಲಿ ಸುಮಾರು 3.5 ಲಕ್ಷ ಬುಡಕಟ್ಟು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 6ರಿಂದ 12ನೇ ತರಗತಿವರೆಗೆ ಇಲ್ಲಿ ಶಿಕ್ಷಣ ದೊರೆಯುತ್ತಿದ್ದು, ಪ್ರತಿ ಶಾಲೆಯಲ್ಲೂ ಒಟ್ಟು 480 ವಿದ್ಯಾರ್ಥಿಗಳು ವ್ಯಾಸಂಗ ಮಾಡಬಹುದಾಗಿದೆ.

ಇದೇ ವೇಳೆ, ಮಕ್ಕಳಿಗೆ ಗುಣಮಟ್ಟದ ಪುಸ್ತಕಗಳನ್ನು ಲಭ್ಯವಾಗಿಸಲು ರಾಷ್ಟ್ರೀಯ ಡಿಜಿಟಲ್‌ ಲೈಬ್ರರಿ ಸ್ಥಾಪನೆ ಬಗ್ಗೆಯೂ ಘೋಷಿಸಲಾಗಿದೆ. ದೇಶದ ಕುಗ್ರಾಮಗಳಲ್ಲಿ ಪರಿಶಿಷ್ಟ ಪಂಗಡ(ಎಸ್‌ಟಿ)ಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ 1997-98ರಲ್ಲೇ ಏಕಲವ್ಯ ಮಾದರಿ ವಸತಿ ಶಾಲೆಗಳನ್ನು (ಇಎಂಆರ್‌ಎಸ್‌) ಸ್ಥಾಪಿಸಲಾಯಿತು. ಈ ಸಮುದಾಯದ ಮಕ್ಕಳು ಶಿಕ್ಷಣದಿಂದ ವಂಚಿತರಾಗದೇ, ಅವರೂ ಉನ್ನತ ಮತ್ತು ವೃತ್ತಿಪರ ಶಿಕ್ಷಣ ಕೋರ್ಸ್‌ಗಳಿಗೆ ಸೇರುವಂತಾಗಬೇಕು ಮತ್ತು ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಪಡೆಯಬೇಕು ಎಂಬ ಉದ್ದೇಶದಿಂದ ಈ ಶಾಲೆಗಳನ್ನು ಸ್ಥಾಪಿಸಲಾಗಿತ್ತು.

ಬಡ ಕೈದಿಗಳಿಗೆ ಅಭಯ
ಶಿಕ್ಷೆಯ ಅವಧಿ ಪೂರ್ಣಗೊಂಡರೂ ದಂಡ ಪಾವತಿಸಲು ಸಾಧ್ಯವಾಗಲೇ, ಜಾಮೀನು ಸಿಕ್ಕಿದರೂ ಜಾಮೀನು ಮೊತ್ತ ಪಾವತಿಸಲು ಆಗದೇ ಸಾವಿರಾರು ಕೈದಿಗಳು ಜೈಲಿನಲ್ಲೇ ಕೊಳೆಯುತ್ತಿರುವಂಥ ವಿಚಾರ ಹೊಸದಲ್ಲ. ಇಂಥ ಬಡ ಕೈದಿಗಳ “ಕೈ’ ಹಿಡಿಯಲು ಸರಕಾರ ಮುಂದೆ ಬಂದಿದೆ. ಇಂಥ ಕೈದಿಗಳಿಗೆ ಆರ್ಥಿಕ ನೆರವು ನೀಡುವ ಮತ್ತು ಜಾಮೀನು ಮೊತ್ತವನ್ನು ಪಾವತಿಸುವ ಯೋಜನೆಯನ್ನು ಸರಕಾರ ಘೋಷಿಸಿದೆ. ಕಳೆದ ವರ್ಷ ಮುಖ್ಯಮಂತ್ರಿಗಳ ಹಾಗೂ ಹೈಕೋರ್ಟ್‌ ಮುಖ್ಯ ನ್ಯಾಯಾಧೀಶರ ಜಂಟಿ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ್ದ ಮೋದಿ, ಜೈಲು ವಾಸ ಅನುಭವಿಸುತ್ತಿರುವ ವಿಚಾರಣಾಧೀನ ಕೈದಿಗಳ ಪ್ರಕರಣಗಳನ್ನು ಆದ್ಯತೆ ಅನುಸಾರ ಪರಿಗಣಿಸಿ, ಕಾನೂನು, ಮಾನವೀಯ ಸೂಕ್ಷ್ಮತೆಗಳ ಆಧಾರದಲ್ಲಿ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರು. ಇತ್ತೀಚೆಗೆ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ಸುಪ್ರೀಂ ಕೋರ್ಟ್‌ಗೆ ತಿಳಿಸಿರುವ ಮಾಹಿತಿಯಲ್ಲಿ, ದೇಶದಲ್ಲಿ ಜಾಮೀನು ಸಿಕ್ಕಿದ್ದರೂ ದಂಡದ ಮೊತ್ತ ಪಾವತಿಸಲಾಗದೇ ಸುಮಾರು 5 ಸಾವಿರ ಕೈದಿಗಳು ಜೈಲಿನಲ್ಲೇ ಉಳಿದಿದ್ದಾರೆ. ಈ ಪೈಕಿ ಕೇವಲ 1,417 ಮಂದಿ ಮಾತ್ರ ಬಿಡುಗಡೆ ಹೊಂದಿದ್ದಾರೆ ಎಂದು ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next