Advertisement
ಜಾಗತಿಕ ವಾಜ್ಮಯದಲ್ಲಿ ಪತ್ರ ಪ್ರಕಾರವೂ ಒಂದಾಗಿದೆ. ಪತ್ರವೆಂಬುದು ವ್ಯಕ್ತಿ ಅಥವಾ ಸಮುದಾಯಗಳ ಮಧ್ಯದ ಸಂಪರ್ಕ-ಸಂವಹನ ಮಾಧ್ಯಮ. ಪತ್ರಗಳಲ್ಲಿ ಮುಖ್ಯವಾಗಿ ಎರಡು ವಿಧ. ನಾನಾ ರೀತಿಯ ವ್ಯವಹಾರ ಸಂಬಂಧವಾದದ್ದು ಒಂದಾದರೆ, ಮನುಷ್ಯ ಮಧ್ಯದ ಹೃದಯಸಂವಾದಿಯಾದದ್ದು ಮತ್ತೂಂದು. ಈ ಎರಡನೆಯ ಪತ್ರಗಳಲ್ಲಿ ಭಾಷೆ, ಶೈಲಿ, ಅಲಂಕಾರಗಳೆಲ್ಲವೂ ಸೇರಿಕೊಳ್ಳುತ್ತಿವೆ- ಎಂದರೆ ಹೇಳಬೇಕಾದುದನ್ನು ಸಾಹಿತ್ಯಕವಾಗಿ ನಿರೂಪಿಸುವುದು ಅಥವಾ ವರ್ಣಿಸುವುದು. ಗದ್ಯ ಅಥವಾ ಪದ್ಯ ರೂಪದಲ್ಲಿ ಕಥೆ ಹೇಳುವಂತೆ, ಕವನ ಬರೆಯುವಂತೆ ಪತ್ರರೂಪದಲ್ಲಿ ಒಂದು ವಸ್ತು ಅಥವಾ ವಿಷಯವನ್ನು ಕಥಿಸುವುದೂ, ಕವನಿಸುವುದೂ ಉಂಟು. ಎಂದರೆ ವ್ಯಕ್ತಿಗಳ ಮಧ್ಯದ ಕೇವಲ ಸಂವಹನ ಪ್ರಕ್ರಿಯೆ ಯಷ್ಟೇ ಆಗದಂತೆ ನೈಜ ವಿಷಯಗಳಿಗೂ ಭಾಷಾಶೈಲಿ ಅಲಂಕಾರ ವರ್ಣನೆಗಳ ಸತ್ವವನ್ನು ತುಂಬಿ ಸೌಗಂಧವನ್ನೇ ಸವರಿ ಬರೆದಾಗ ಅಂತಹ ಪತ್ರಕ್ಕೂ ಸಾಹಿತ್ಯದ ಸಂಸ್ಕಾರ ಸಿದ್ಧಿಸುತ್ತದೆ. ಆ ಬಗೆಯ ಪತ್ರಗುತ್ಛಗಳು ಪುಸ್ತಕ ರೂಪದಲ್ಲೂ ಪ್ರಕಟವಾಗುತ್ತವೆ. ಕನ್ನಡದಲ್ಲಿ ಸಾಂದ್ರವಾಗಿ ಅಲ್ಲವಾದರೂ ಇರುವಷ್ಟು ಪತ್ರಸಾಹಿತ್ಯ ಸುಂದರವಾಗಿಯೇ ಇದೆ. ನನ್ನದೇ ಆಗಿರುವ ಪತ್ರಾವಳಿ (ಪಂಡಿತ ಶ್ರೇಷ್ಠ ಸೇಡಿಯಾಪು ಕೃಷ್ಣಭಟ್ಟರ ನೂರಾರು ಪತ್ರಗಳು) ಎಂಬ ಸಂಪುಟಕ್ಕೆ ಹಾ.ಮಾ. ನಾಯಕರು ಬರೆದಿರುವ ಮುನ್ನುಡಿಯಲ್ಲಿ ಪತ್ರಸಾಹಿತ್ಯವನ್ನು ಕುರಿತಂತೆ ಉಪಯುಕ್ತ ವಿವರಗಳನ್ನು ನೀಡಿದ್ದಾರೆ.
ನಾನು ಪತ್ರ ಸಂಗ್ರಹವನ್ನು ಒಂದು ಹವ್ಯಾಸ ಎಂದು ತಿಳಿದು ಮಾಡಿದವನಲ್ಲ. ನನ್ನಲ್ಲಿರುವ ಪತ್ರಗಳನ್ನು ಸಂಕಲಿಸಿ ಪುಸ್ತಕವಾಗಿ ಪ್ರಕಟಿಸುವ ಯೋಚನೆಯೂ ಇರಲಿಲ್ಲ. 1960ರಲ್ಲಿ ಎಂ.ಎ. ಅಧ್ಯಯನಕ್ಕಾಗಿ ನಾನು ಮಂಗಳೂರಿನಿಂದ ಧಾರವಾಡಕ್ಕೆ ಹೋದ ಬಳಿಕ, ಆ ಕಾಲದಲ್ಲಿ ಮಂಗಳೂರಲ್ಲಿದ್ದ ಪೂಜ್ಯಗುರು ಸೇಡಿಯಾಪು ಕೃಷ್ಣ ಭಟ್ಟರಿಗೆ ನಾನಾ ವಿಷಯಕವಾಗಿ ಆಗಾಗ ಪತ್ರ ಬರೆಯುತ್ತಿದ್ದೆ. ಅವರು ಅವುಗಳಿಗೆಲ್ಲ ಕಾಲವಿಳಂಬವಿಲ್ಲದೆ ಸಮರ್ಪಕವಾಗಿ ಉತ್ತರ ಬರೆಯುತ್ತಿದ್ದರು. ಅವರ ಒಂದೊಂದು ಪತ್ರದಲ್ಲೂ ಏನಾದರೊಂದು ಮೌಲಿಕ ವಿಚಾರ ಇದ್ದೇ ಇರುತ್ತಿದ್ದುದರಿಂದ ಅದನ್ನು ಓದಿ, ಹರಿದು ಎಸೆಯದೆ ಉಳಿಸಿಕೊಂಡೆ. ಹೀಗೆ ಪ್ರಾರಂಭವಾದ ಪತ್ರವ್ಯವಹಾರ 1964ರಲ್ಲಿ ಮಂಗಳೂರು ಬಿಟ್ಟು ಅವರು ಊರೂರು ಸುತ್ತಿ ಕೊನೆಗೆ 1917ರಲ್ಲಿ ಮಣಿಪಾಲದಲ್ಲಿ ನೆಲೆಯೂರಿ ಅಲ್ಲಿಯೇ 1996ರಲ್ಲಿ ಅವರು ನಿಧನ ಹೊಂದುವವರೆಗೂ ಕಾರ್ಕಳ ನಿವಾಸಿಯಾದ ನಾನು ಅವರೊಂದಿಗೆ ಪತ್ರ ಸಂಪರ್ಕದಲ್ಲಿದ್ದೆ. ನನ್ನ ಪತ್ರಗಳಿಗೆ ಉತ್ತರವಾಗಿ ಅವರು ಕೈಯಾರೆ ಬರೆದ ಅಥವಾ ಬರೆಯಿಸಿದ ಪತ್ರಗಳ ಸಂಖ್ಯೆ ನಾನ್ನೂರ ಐವತ್ತನ್ನೂ ಮೀರಿದೆ ! ಅವರಿಗೆ ತೊಂಬತ್ತು ವರ್ಷ (1991) ಹಿಡಿದಾಗ, ಅವರ ಪತ್ರ ಪುಷ್ಪಗಳ ಬೃಹತ್ ರಾಶಿಯಿಂದ ಒಂದು ನೂರ ಆರನ್ನು ಆರಿಸಿ ಹಿಂದೆ ಹೇಳಿದಂತೆ ಪತ್ರಾವಳಿ ಎಂಬ ಹೆಸರಿನಲ್ಲಿ ಪ್ರಕಟಿಸಿದೆ, ಧನ್ಯನಾದೆ. ಗುರು ಸೇಡಿಯಾಪು ಅವರ ಪತ್ರಗಳನ್ನು ನನ್ನಲ್ಲಿ ಉಳಿಸಿಕೊಂಡಂತೆಯೇ ನಾನು ಅನ್ಯ ಮಹನೀಯರಿಂದ ಪಡೆದ ಪತ್ರಗಳಲ್ಲೂ ಮೌಲಿಕವಾದ ಒಂದೆರಡು ವಿಷಯಗಳು ಉಲ್ಲೇಖವಾಗಿದ್ದರೆ ಅವುಗಳನ್ನು ಸಂರಕ್ಷಿಸಿಕೊಳ್ಳುವ ಮನಸ್ಸಾಯಿತು. ನನ್ನ ಕಾಲೇಜು ಅಧ್ಯಾಪನ (1962-1997)ದ ಮೂವತ್ತೈದು ವರ್ಷ ಮತ್ತು ನಿವೃತ್ತಿಯ ಅನಂತರದ ಈವರೆಗಿನ ಕಾಲಾವಧಿಯೂ ಸೇರಿ ಸುಮಾರು ಅರವತ್ತು ವರ್ಷಗಳಲ್ಲಿ ನನಗೆ ಬಂದಿರುವ ಅಸಂಖ್ಯ ಪತ್ರಗಳಲ್ಲಿ ಸುಮಾರು ಐದುನೂರರಷ್ಟನ್ನು ನನ್ನಲ್ಲಿ ಉಳಿಸಿಕೊಂಡಿದ್ದೇನೆ. ಆ ಪತ್ರಗಳಲ್ಲಿ ಉಭಯ ಕುಶಲೋಪರಿ-ಸಾಂಪ್ರತ-ಲೋಕಾಭಿರಾಮದ ಪ್ರಸಕ್ತಿಯೊಂದಿಗೆ ಇತರ ವಿಷಯಗಳ ಪ್ರಸ್ತಾವವೂ ಇರುತ್ತಿದ್ದದ್ದೇ ಅದಕ್ಕೆ ಮುಖ್ಯ ಕಾರಣ.
Related Articles
Advertisement
ಪಾಥೇಯವೆಂದರೆ ದಾರಿ ಬುತ್ತಿ. ಒಂದು ಕಾಲದಲ್ಲಿ ಕಾಲ್ನಡಿಗೆಯಲ್ಲೇ ಊರಿಂದೂರಿಗೆ ಹೋಗಿಬರಬೇಕಿತ್ತು. ದೂರ ಪ್ರಯಾಣವಾದರೆ ದಾರಿಹೋಕರು ತಮ್ಮ ಮನೆಗಳಿಂದ ಆಹಾರ ಪದಾರ್ಥಗಳ ಬುತ್ತಿ (ಎಂದರೆ ಭುಕ್ತಿ, ಆಹಾರ) ಕಟ್ಟಿಕೊಂಡು ಹೆಗಲಲ್ಲಿ ತೂಗುಹಾಕಿ ನಡೆಯುತ್ತ, ಬಳಲಿಕೆಯಾದಾಗ ದಾರಿಬದಿಯಲ್ಲಿ ಕೂತು ಬುತ್ತಿ ಬಿಚ್ಚಿ ಉಣ್ಣುತ್ತಿದ್ದರು. ನನ್ನ ಸಂಗ್ರಹವೂ ಒಂದೂ ಪಾಥೇಯವೇ ಆಗಿದೆ. ನನ್ನಲ್ಲಿರುವ ಓಲೆಗಳೇ ಬಾಳಬುತ್ತಿಯ ಬಗೆ ಬಗೆಯ ತುತ್ತುಗಳು. ನಾವೆಲ್ಲರೂ ಜೀವನ ಪಥಗಾಮಿಗಳೇ ಆಗಿದ್ದೇವೆ. ನಾನೂ ಒಬ್ಬ ಪಥಿಕ, ದಾರಿಗ. ನಾನೂ ಒಂದು ಬುತ್ತಿಕಟ್ಟಿಕೊಂಡಿದ್ದೇನೆ. ಆಗಾಗ ಆ ಬುತ್ತಿಯನ್ನು ಬಿಚ್ಚಿ ಒಂದೊಂದೇ ತುತ್ತನ್ನು ಜಗಿಯುತ್ತೇನೆ. ಅವೆಲ್ಲವೂ ಯಾರು ಯಾರೋ ನೀಡಿದ ತುತ್ತುಗಳು. ಆ ತುತ್ತುಗಳಲ್ಲಿ ಬಗೆಬಗೆಯ ಮಸಾಲೆಗಳು ಸೇರಿಕೊಂಡಿವೆ; ಬುತ್ತಿಯನ್ನು ಸವಿಗೊಳಿಸಿವೆ. ಪಾಕಗಳೆಲ್ಲವೂ ಏಕರೀತಿಯವಾದರೂ ಪಾಕಗಳಲ್ಲಿ ಬಹುತ್ವವಿದೆ. ಅದಕ್ಕೆ ಕಾರಣ ಕೈಗುಣ. ಸಂಸ್ಕೃತಿಯ ಜೀವಸತ್ವ, ಸಾಹಿತ್ಯದ ಸೌಗಂಧ, ಲೋಕಾನುಭವದ ಬೇಷಜ, ಮನುಷ್ಯ ಪ್ರೀತಿಯ ಬಂಧ-ಬಂಧುರತೆ ಇವೇ ಮೊದಲಾದ ಗುಣವಿಶೇಷಗಳು ಆ ಪತ್ರ ಪಂಕ್ತಿಗಳಲ್ಲಿ ಹರಳುಗಟ್ಟಿವೆ. ಡಿ.ವಿ.ಜಿ. ಯವರ ಒಂದು ಹೃದ್ಯವಾದ ಗದ್ಯ ಪ್ರಬಂಧವಿದೆ. ಅದು ಕಳೆದ ಐವತ್ತು ವರ್ಷಗಳಲ್ಲಿ ನಮ್ಮ ಸಂಸ್ಕೃತಿಯ ರಂಗ. ಅದರಲ್ಲಿ ಒಂದು ಕಡೆ ಅವರು ಯಂತ್ರನಾಗರಿಕತೆಯ ಕೃತಕತೆ ಹೇಗೆ ನಮ್ಮ ಜೀವನರಂಗವನ್ನು ಆಶ್ರಯಿಸಿ, ಸಹಜತೆ, ಸರಳತೆ, ಮುಗ್ಧತೆಗಳನ್ನು ಹಿಸುಕಿ ಹಿಂಡುತ್ತಿವೆ ಎಂಬುದನ್ನು ಪ್ರಸ್ತಾವಿಸಿ “ಹಿಂದೆ ಬೆರಳು ಮಾಡುತ್ತಿದ್ದ ಕೆಲಸವನ್ನು ಇಂದು ಒರಳು ಮಾಡುತ್ತಿದೆ. ಬೆರಳಿನ ಹಿಂದೆ ಕರುಳು ಇರುತ್ತಿತ್ತು. ಕರುಳಿಗೂ ಒರಳಿಗೂ ಬಹುದೂರ’ ಎನ್ನುತ್ತಾರೆ. ಹಿಂದೆ ಪತ್ರಗಳೆಲ್ಲ ಕೈಬರಹದಲ್ಲಿ ಇರುತ್ತಿದ್ದವು. ಆ ಓಲೆಕಾರನ ಪ್ರೀತಿ, ವಿಶ್ವಾಸ, ಅಭಿರುಚಿ, ಆಸಕ್ತಿ ಮುಂತಾದುವು ಓಲೆಗಳಲ್ಲಿ ಸೇರಿಕೊಂಡಿರುತ್ತಿದ್ದುವು. ಅಂತಹ ಪತ್ರಗಳನ್ನು ಓದುವಾಗ ನಮಗೊಂದು “ಸಾಕ್ಷಾತ್ತಿನ ಸ್ಪರ್ಶ’ ಆಗುತ್ತದೆ. ನನ್ನಲ್ಲಿರುವ ಪತ್ರ ಪಂಕ್ತಿಗಳಲ್ಲಿ ನನಗೆ ವ್ಯಕ್ತಿದರ್ಶನ ಆಗುತ್ತದೆ; ಭಾವಸ್ಪಂದನ ಕೇಳುತ್ತದೆ.
ನಾಲ್ಕುನೂರು ಪತ್ರಗಳ ಸಂಚಯಸುಮಾರು ಇನ್ನೂರು ಮಂದಿಯ ನಾನ್ನೂರರಷ್ಟು ಪತ್ರಗಳನ್ನು ನಾನು ಪುಸ್ತಕಕ್ಕಾಗಿ ಆರಿಸಿದ್ದೇನೆ. ಪತ್ರಲೇಖಕರಲ್ಲಿ ಮಂಜೇಶ್ವರ ಗೋವಿಂದ ಪೈ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಸೇಡಿಯಾಪು ಕೃಷ್ಣ ಭಟ್ಟ , ಶಿವಾನಂದ ಕಾರಂತರ, ಕಡೆಂಗೋಡ್ಲು ಶಂಕರ ಭಟ್ಟ , ವಿ. ಸೀತಾರಾಮಯ್ಯ, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಜಿ.ಪಿ. ರಾಜರತ್ನಂ, ರಂ.ಶ್ರೀ ಮುಗಳಿ, ಎಸ್.ವಿ. ರಂಗಣ್ಣ, ಎಸ್.ವಿ. ಪರಮೇಶ್ವರ ಭಟ್ಟ , ಜಿ. ವೆಂಕಟಸುಬ್ಬಯ್ಯ, ಕುಲಪತಿಗಳಾದ ದೇ. ಜವರೇಗೌಡ, ಎಸ್. ಗೋಪಾಲ್, ಜಿ.ಎಸ್. ಶಿವರುದ್ರಪ್ಪ , ಕೆ.ವಿ. ಅಯ್ಯರ್, ಕೆ.ಎಸ್. ನರಸಿಂಹಸ್ವಾಮಿ, ಚೆನ್ನವೀರ ಕಣವಿ, ಕೆ.ಎಸ್. ನಿಸಾರ್ ಅಹಮ್ಮದ್, ಹಾ.ಮಾ. ನಾಯಕ, ನಿರಂಜನ, ವ್ಯಾಸರಾಯ ಬಲ್ಲಾಳ, ಅನುಪಮಾ ನಿರಂಜಯನ, ಎಸ್.ಎಲ್. ಶೇಷಗಿರಿ ರಾವ್, ಪ್ರಭುಶಂಕರ, ಕು.ಶಿ. ಹರಿದಾಸ ಭಟ್ಟ , ಜಿ.ಟಿ. ನಾರಾಯಣ ರಾವ್, ಯಶವಂತ ಚಿತ್ತಾಲ ಮೊದಲಾದವರಲ್ಲದೆ ಹೆಚ್ಚು ಕಮ್ಮಿ ನನ್ನ ತಲೆಮಾರಿನವರೇ ಆಗಿರುವ ಪೂರ್ಣಚಂದ್ರ ತೇಜಸ್ವಿ, ಚಂದ್ರಶೇಖರ ಕಂಬಾರ, ಎಂ.ಎಂ. ಕಲಬುರ್ಗಿ, ಜಯಂತ ಕಾಯ್ಕಿಣಿ ಮುಂತಾದವರ ಕಾಗದಗಳಿವೆ. ಗುರು ವೃಷಭೇಂದ್ರ ಸ್ವಾಮಿಯವರ ಪತ್ರಗಳು ಗಣನೀಯ ಸಂಖ್ಯೆಯಲ್ಲಿವೆ. ನ್ಯೂಜಿಲ್ಯಾಂಡ್‌ನಲ್ಲಿ ಭಾರತದ ರಾಯಭಾರಿಯಾಗಿದ್ದ, ಮೂಲತಃ ದಕ್ಷಿಣಕನ್ನಡದವರೇ ಆಗಿದ್ದ, ಬಾಗಲೋಡಿ ದೇವರಾವ್, ಭಾರತದ ಭೂತಪೂರ್ವ ಪ್ರಧಾನಿ ರಾಜೀವಗಾಂಧಿಯವರಿಗೆ ಸಲಹೆಗಾರರಾಗಿದ್ದ ಇನ್ನ ರಾಮಮೋಹನ ರಾವ್ ಅವರ ಪತ್ರಗಳಿವೆ. ನ್ಯಾಯಮೂರ್ತಿ ಬಿನ್. ಶ್ರೀಕೃಷ್ಣರ ಪತ್ರವಿದೆ. ಮಣಿಪಾಲದ ಮಹಾಶಿಲ್ಪಿ ಡಾ| ಟಿ. ಎಂ. ಎ. ಪೈ, ಶ್ರೇಷ್ಠ ಆಂಗ್ಲ ಲೇಖಕ- ಪ್ರಾಧ್ಯಾಪಕ ಡಾ| ಸಿ. ಡಿ. ನರಸಿಂಹಯ್ಯ, ನೃತ್ಯ ವಿದುಷಿಯರಾದ ಪದ್ಮಾಸುಬ್ರಹ್ಮಣ್ಯಂ, ಚಿತ್ರಾ ವಿಶ್ವೇಶ್ವರನ್ ಇವರ ಪತ್ರಗಳಿವೆ. ಸಾಧು-ಸಂತರ, ಕವಿ-ಸಾಹಿತಿಗಳ ವಿಮರ್ಶಕ, ಸಂಶೋಧಕರ, ಸಾಹಿತ್ಯ ಸಹೃದಯರು ಕಲಾರಸಿಕರ ಅನೇಕ ಪತ್ರಗಳಿವೆ. ಪತ್ರಗಳನ್ನು ಮೂರು ವಿಭಾಗಗಳಲ್ಲಿ ಪ್ರಕಟಿಸುವುದು ನನ್ನ ಯೋಜನೆಯಾಗಿದೆ. ಮೊದಲಿನದು ಅಭಿವಂದ್ಯರು. ಇದರಲ್ಲಿ ನಾನು ಉನ್ನತ ಸ್ಥಾನದಲ್ಲಿರಿಸಿ, ವಂದಿಸುತ್ತಿದ್ದ ಈಗಲೂ ಇರುವ ಗುರು-ಗುರುಸದೃಶರ ಪತ್ರಗಳಿವೆ. ಎರಡನೆಯದು ಆದರಣೀಯರು. ವಯೋಮಾನದಲ್ಲಿ ನನಗಿಂತ ಸ್ವಲ್ಪ ಹಿರಿಯ ಅಥವಾ ಸಮವಯಸ್ಕರಾದರೂ ಸ್ಥಾನದಲ್ಲಿ ಮಾನನೀಯರು ಎಂದು ನಾನು ಪರಿಗಣಿಸಿದವರ ಪತ್ರಗಳು ಈ ವಿಭಾಗದಲ್ಲಿದೆ. ಮೂರನೆಯದು ಆತ್ಮೀಯರು. ಮುಖ್ಯವಾಗಿ ಸಾಹಿತ್ಯ-ಸಂಸ್ಕೃತಿಗಳಲ್ಲಿ ನಾನು ಮಾಡಿದ ಸಣ್ಣಪುಟ್ಟ ಕೈಂಕರ್ಯವನ್ನು ಉದಾರ ಭಾವದಿಂದ ಕಂಡು ಕೊಂಡಾಡಿದವರ, ಅವ್ಯಾಜ ಸ್ನೇಹ ಅನಿಮಿತ್ತ ಬಂಧುತ್ವವನ್ನು ತೋರಿದವರ ಪತ್ರಗಳು ಈ ಭಾಗದಲ್ಲಿವೆ. ಹಳಗನ್ನಡದ ಜನ್ನ ಮಹಾಕವಿಯ ಒಂದು ಉದ್ಗಾರ ಹೀಗಿದೆ : ಕಟ್ಟಿಯುಮೇನೊ ಮಾಲೆಗಾರನ ಪೊಸ ಬಾಸಿಗಮಂ | ಮುಡಿದ ಭೋಗಿಗಳಿಲ್ಲದೆ ಬಾಡಿ ಪೋಗದೇ? ನನ್ನ ಭಾವವೂ ಅದೇ ಆಗಿದೆ. ಪತ್ರಗಳ ಒಂದು ಮಾಲೆಯನ್ನು ನಾನೇನೋ ಕಟ್ಟಬಹುದು. ಅದನ್ನು ಎತ್ತಿ ಮೂಸಿ ಮುಡಿಯುವ ಸಜ್ಜನ ಸಹೃದಯರಿಲ್ಲವಾದರೆ ಪ್ರಯತ್ನ ವ್ಯರ್ಥ. ಆದರೆ ಹಾಗೆ ಆಗಲಾರದು ಎಂಬ ವಿಶ್ವಾಸವೂ ನನ್ನಲ್ಲಿದೆ. ಎಂ. ರಾಮಚಂದ್ರ