ನವದೆಹಲಿ: ಕೇಂದ್ರದ ಮಾಜಿ ಕಾನೂನು ಸಚಿವ, ಖ್ಯಾತ ನ್ಯಾಯವಾದಿ ಶಾಂತಿ ಭೂಷಣ್(97) ಅವರು ಮಂಗಳವಾರ ರಾತ್ರಿ ದೆಹಲಿಯ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. 1977ರಿಂದ 1979ರವರೆಗೆ ಮೊರಾರ್ಜಿ ದೇಸಾಯಿ ಸಂಪುಟದಲ್ಲಿ ಕಾನೂನು ಸಚಿವರಾಗಿ ಅವರು ಕಾರ್ಯನಿರ್ವಹಿಸಿದ್ದರು.
ಇತ್ತೀಚಿನವರೆಗೂ ಸಕ್ರಿಯರಾಗಿದ್ದ ಶಾಂತಿಭೂಷಣ್ ಅವರು, ರಫೇಲ್ ಯುದ್ಧ ವಿಮಾನ ಒಪ್ಪಂದ ಪ್ರಕರಣವನ್ನು ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂಬ ಅರ್ಜಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದ್ದರು. ಇಂದಿರಾಗಾಂಧಿಯವರು ಚುನಾವಣಾ ಅಕ್ರಮ ಎಸಗಿ ಚುನಾವಣೆ ಗೆದ್ದಿದ್ದರು ಎಂಬ ಎಸ್‌ಎಸ್‌ಪಿ ನಾಯಕ ರಾಜ್ ನರೈನ್ ಅವರ ಪರ ಅಲಹಾಬಾದ್ ಹೈಕೋರ್ಟ್‌ನಲ್ಲಿ ವಾದಿಸಿದ್ದ ಶಾಂತಿಭೂಷಣ್ ಅವರು ಇಂದಿರಾರ ಪದಚ್ಯುತಿಗೂ ಕಾರಣರಾಗಿದ್ದರು.
ಭ್ರಷ್ಟಾಚಾರದ ವಿರುದ್ಧ ಸದಾ ಧ್ವನಿಯೆತ್ತುತ್ತಿದ್ದ ಶಾಂತಿಭೂಷಣ್ ಅವರು ಕೆಲಕಾಲ ಆಮ್ ಆದ್ಮಿ ಪಕ್ಷದ ಜತೆಗೂ ಗುರುತಿಸಿಕೊಂಡಿದ್ದರು.
ಭೂಷಣ್ ಅವರ ಇಬ್ಬರು ಪುತ್ರರೂ (ಪ್ರಶಾಂತ್ ಭೂಷಣ್, ಜಯಂತ್ ಭೂಷಣ್) ವಕೀಲರಾಗಿದ್ದಾರೆ.