ಚಿಕ್ಕಮಗಳೂರು: ದೇಶದಲ್ಲಿ ಬಿಜೆಪಿ ತುರ್ತು ಪರಿಸ್ಥಿತಿ ನಿರ್ಮಿಸಿದೆ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್‌ಗೆ ಕಿಡಿ ಕಾರಿರುವ ಸಚಿವ ಸಿ.ಟಿ.ರವಿ, ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದೇ ಕಾಂಗ್ರೆಸ್ ಎಂದು ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಶನಿವಾರ ಪತ್ರಕರ್ತರ ಜತೆ ಮಾತನಾಡಿದ ಅವರು ಸಿದ್ದರಾಮಯ್ಯ ಮತ್ತು ಖಾದರ್ ವಿರುದ್ಧ ಹರಿಹಾಯ್ದರು. ಬಿಜೆಪಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ನಂಬಿಕೆಯಿದೆ. ಇದಕ್ಕೆ ಅಡ್ಡ ಬಂದವರಿಗೆ ಪ್ರಜಾಪ್ರಭುತ್ವದ ಮೂಲಕವೇ ಉತ್ತರ ನೀಡಲಾಗುವುದು ಎಂದರು.
ದೇಶದಲ್ಲಿ ಬಿಜೆಪಿ ತುರ್ತು ಪರಿಸ್ಥಿತಿ ನಿರ್ಮಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ಆದರೆ ಅಲಹಾಬಾದ್ ತೀರ್ಪು ಬಂದಾಗ ಕಾಂಗ್ರೆಸ್‌ನವರೇ ತುರ್ತು ಪರಿಸ್ಥಿತಿ ಹೇರಿದ್ದರು. ಬಿಜೆಪಿ ಎಂದೂ ಅಂಥ ಕೆಲಸ ಮಾಡಿಲ್ಲ. ತಾವು ಒಮ್ಮೆ ನೀಡಿದ್ದ ಹೇಳಿಕೆಯನ್ನು ಬಿಜೆಪಿಯವರು ಪದೇಪದೆ ಹೇಳುವ ಮೂಲಕ ಜನರನ್ನು ಪ್ರಚೋದಿಸುತ್ತಿದ್ದಾರೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ಆದರೆ ಖಾದರ್ ಹೇಳಿಕೆ ನೀಡುವುದಕ್ಕೂ, ಮಂಗಳೂರಿನಲ್ಲಿ ನಡೆದ ಗಲಭೆಗೂ ಸಾಮ್ಯತೆಯಿದೆ. ಅವರ ಹೇಳಿಕೆ ಕಾಕತಾಳೀಯವಲ್ಲ ಎಂದವರು ಹೇಳಿದರು.
ಕಲ್ಲಡ್ಕ ಪ್ರಭಾಕರ ಭಟ್ ಅವರೇ ಗಲಭೆಗೆ ಕಾರಣ ಎಂಬ ಸಿದ್ದರಾಮಯ್ಯ ಹೇಳಿಕೆ “ಕಳ್ಳನಿಗೊಂದು ಪಿಳ್ಳೆ ನೆವ’ ಎಂಬ ರೀತಿಯದು.ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಬೇಕೆಂಬುದಷ್ಟೇ ಕಾಂಗ್ರೆಸ್‌ನವರ ಉದ್ದೇಶ ಎಂದು ಆರೋಪಿಸಿದರು.
ಪೌರತ್ವ ಕಾಯ್ದೆ ಯಾರ ಹಕ್ಕನ್ನೂ ಕಿತ್ತುಕೊಳ್ಳುವುದಿಲ್ಲ. ಅಕ್ರಮವಾಗಿ ಇಲ್ಲಿಗೆ ಬಂದು ನೆಲೆ ನಿಂತಿರುವ ಲಕ್ಷಾಂತರ ಜನರನ್ನು ಇಟ್ಟುಕೊಳ್ಳಲು ಕಾಂಗ್ರೆಸ್‌ನವರು ಸಿದ್ಧರಿದ್ದಾರೆ. ಆದರೆ ನಿರಾಶ್ರಿತರಾಗಿ ಬಂದವರಿಗೆ ಆಶ್ರಯ ಕೊಡಲು ಸಿದ್ಧರಿಲ್ಲ ಎಂದು ಸಿ.ಟಿ.ರವಿ ವಾಗ್ಧಾಳಿ ನಡೆಸಿದರು.