Advertisement

ಮಳೆಹಾನಿ ಪರಿಹಾರಕ್ಕೆ ತುರ್ತು ಕ್ರಮ

10:57 AM May 27, 2022 | Team Udayavani |

ಬಾಗಲಕೋಟೆ: ಜಿಲ್ಲೆಯಲ್ಲಿ ಸುರಿದ ಮಳೆಯಿಂದ ಹಾನಿಗೀಡಾಗಿರುವ ಮನೆ, ಜನ-ಜಾನುವಾರು, ಕೃಷಿ ಮತ್ತು ತೋಟಗಾರಿಕೆ ಬೆಳೆ ಪರಿಹಾರಕ್ಕಾಗಿ ತುರ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಗುರುವಾರ ಅತಿವೃಷ್ಟಿಯಿಂದ ಉಂಟಾದ ಹಾನಿ ಕುರಿತು ಜರುಗಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅತಿವೃಷ್ಟಿಯಿಂದಾದ ಹಾನಿ ವಿವರ ನಿಗದಿತ ನಮೂನೆಯಲ್ಲಿ ಮಾಹಿತಿ ನೀಡಬೇಕು. ಎಸ್‌ಡಿಎಫ್‌-ಎನ್‌ಡಿಎಫ್‌ ಮಾರ್ಗಸೂಚಿ ಪ್ರಕಾರ ಪರಿಹಾರ ವಿತರಣೆಗೆ ಕ್ರಮ ವಹಿಸಬೇಕು. ಪರಿಹಾರದಲ್ಲಿ ಯಾವುದೇ ರೀತಿಯ ಬಾಕಿ ಉಳಿಸಿಕೊಳ್ಳದಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಿಡಿಲು ಬಡಿದು ಮೃತಪಟ್ಟಾಗ ತಕ್ಷಣ ವರದಿ ಪಡೆದು 24 ಗಂಟೆಯೊಳಗೆ ಪರಿಹಾರ ಒದಗಿಸುವ ಕಾರ್ಯವಾಗಬೇಕು. ಈ ಬಗ್ಗೆ ಮುಖ್ಯಮಂತ್ರಿ ಪರಿಹಾರ ನೀಡುವಲ್ಲಿ ಯಾವುದೇ ರೀತಿಯಲ್ಲಿ ವಿಳಂಬ ಆಗಬಾರದೆಂದು ನಿರ್ದೇಶನ ನೀಡಿದ್ದು, ಅವಶ್ಯಕತೆ ಇದ್ದಾಗ ಮಾತ್ರ ಶವದ ಪೋಸ್ಟ್‌ ಮಾರ್ಟಮ್‌ ವರದಿ ಪಡೆದುಕೊಳ್ಳಬೇಕು ಎಂದ ಅವರು, ಅತಿವೃಷ್ಟಿಯಿಂದ ಉಂಟಾದ ಹಾನಿಗೆ ಈಗಾಗಲೇ ನೀಡಿರುವ ಪರಿಹಾರ ಕುರಿತು ಮಾಹಿತಿ ಪಡೆದರು.

ಜಿಲ್ಲೆಯಲ್ಲಿ ಉಂಟಾದ ಅತಿವೃಷ್ಟಿಯಿಂದ 4 ಜೀವಹಾನಿ ಆಗಿದ್ದು, ತಲಾ 5 ಲಕ್ಷದಂತೆ 20 ಲಕ್ಷ ಪರಿಹಾರ ನೀಡಿರುವುದಾಗಿ ತಿಳಿಸಿದ ಅವರು, ಒಟ್ಟು 34 ಜಾನುವಾರುಗಳು ಹಾನಿಗೊಳಗಾಗಿದ್ದು, ಒಟ್ಟಾರೆಯಾಗಿ ಇಲ್ಲಿವರೆಗೆ 4.48 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. ತೋಟಗಾರಿಕೆ ಬೆಳೆ 59.4 ಹೆಕ್ಟೇರ್‌, ಕೃಷಿ 85 ಹೆಕ್ಟೇರ್‌ ಬೆಳೆ ಹಾನಿಗೊಳಗಾಗಿದೆ.

ಅದೇ ರೀತಿ 669 ಮನೆಗಳು ಭಾಗಶಃ ಮನೆಗಳು ಹಾನಿಗೊಳಗಾಗಿವೆ. ಎಸ್‌ ಡಿಎಫ್‌ ಮಾರ್ಗಸೂಚಿ ಪ್ರಕಾರ ಪರಿಹಾರಕ್ಕೆ 2 ದಿನದೊಳಗಾಗಿ ಕ್ರಮವಹಿಸಲು ಸೂಚಿಸಿದರು. ಪರಿಹಾರ ವಿತರಣೆಗೆ ಬಾಕಿ ಉಳಿಸಿಕೊಂಡಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ನೋಟಿಸ್‌ ಜಾರಿಮಾಡಲಾಗುವುದು ಎಂದರು.

Advertisement

ಈ ವೇಳೆ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿಪಂ ಉಪ ಕಾರ್ಯದರ್ಶಿ ಬಸರಿಗಿಡದ, ಅಗ್ನಿಶಾಮಕ ದಳದ ಅಧಿಕಾರಿ ಮಲ್ಲಿಕಾರ್ಜುನಪ್ಪ, ತೋಟಗಾರಿಕೆ ಉಪ ನಿರ್ದೇಶಕ ರಾಹುಲ್‌ ಕುಮಾರ ಬಾವಿದಡ್ಡಿ, ಪಶು ಇಲಾಖೆ ಅಧಿಕಾರಿ ಪದರಾ, ತಹಶೀಲ್ದಾರ್‌ ಗುರುಸಿದ್ದಯ್ಯ ಹಿರೇಮಠ ಇತರರಿದ್ದರು.

ಪ್ರವಾಹ ಸಂಭವಿಸುವ ಪೂರ್ವದಲ್ಲಿ ನಿರ್ವಹಣೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು. ಈ ಕುರಿತು ಕ್ರಿಯಾ ಯೋಜನೆ ಸಿದ್ಧಪಡಿಸಿಕೊಳ್ಳಬೇಕು. ರೆಸ್ಕೂಗೆ ಸಂಬಂಧಿಸಿದ ಎಲ್ಲ ವಸ್ತು ಪರಿಶೀಲಿಸಬೇಕು. ನಡುಗಡ್ಡೆ ಪ್ರದೇಶಗಳಾದ ಜಮಖಂಡಿ ತಾಲೂಕಿನ ಮುತ್ತೂರು ಮತ್ತು ಕಂಕಣವಾಡಿ ಗ್ರಾಮಗಳಲ್ಲಿ ಹೆಚ್ಚಿನ ನಿಗಾವಹಿಸುವ ಕಾರ್ಯವಾಗಬೇಕು. ಬೋಟ್‌ಗಳನ್ನು ಸುಸ್ಥಿತಿಯಲ್ಲಿಟ್ಟುಕೊಂಡು ಪೂರ್ಣ ತಯಾರಿಯಲ್ಲಿರಬೇಕು. ಪಿ. ಸುನೀಲ್‌ಕುಮಾರ, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next