Advertisement

ರಕ್ಷಣೆಗೆ ತುರ್ತುಕ್ರಮ: ಸಚಿವ ಡಿವಿಎಸ್‌

01:36 AM Aug 10, 2019 | mahesh |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ಜೀವ ಮತ್ತು ಆಸ್ತಿಪಾಸ್ತಿ ರಕ್ಷಣೆಗೆ ತುರ್ತು ಕ್ರಮ ಕೈಗೊಳ್ಳುವಂತೆ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.

Advertisement

ಡಿಸಿ ಕಚೇರಿಯಲ್ಲಿ ಶುಕ್ರವಾರ ಸಭೆ ನಡೆಸಿದ ಸಚಿವರು ಜೀವಹಾನಿ, ಆಸ್ತಿಪಾಸ್ತಿ ಹಾನಿಯಾಗದಂತೆ ತುರ್ತು ನೆಲೆಯಲ್ಲಿ ಕಾರ್ಯಾಚರಣೆ ನಡೆಸ ಬೇಕು. ಕಡಲ್ಕೊರೆತ ಸ್ಥಳಗಳಲ್ಲಿ ಮನೆ ಹಾನಿಯಾಗದಂತೆ ಕ್ರಮ ಕೈಗೊಳ್ಳಬೇಕು ಸೂಚಿಸಿದರು.

ಸಮಗ್ರ ವರದಿಗೆ ಸೂಚನೆ

ಪ್ರಕೃತಿ ವಿಕೋಪ ಹಾನಿಯ ಬಗ್ಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸಭೆಯನ್ನು 15 ದಿನಗಳಲ್ಲಿ ತಾಲೂಕು ಮಟ್ಟದಲ್ಲಿ ನಡೆಸಬೇಕು. ಸಮಗ್ರ ವಿವರ ವರದಿ ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಬೇಕು. ಹಾನಿ ಅಂದಾಜಿಸುವ ವೇಳೆ ವಾಸ್ತವಿಕ ಪರಿಸ್ಥಿತಿಯನ್ನು ಮನಗಂಡು ಮಾನವೀಯತೆ ಮೆರೆಯಬೇಕು ಎಂದು ಸಚಿವರು ಸೂಚಿಸಿದರು. ರಾ. ಹೆದ್ದಾರಿ ಹಾನಿಯ ಬಗ್ಗೆ ಈಗಾಗಲೇ ಸಚಿವ ನಿತಿನ್‌ ಗಡ್ಕರಿ ಅವರಿಗೆ ವಿವರಿಸಿದ್ದು, ವಿವರ ವರದಿ ಸಲ್ಲಿಸಲು ಸೂಚಿಸಿದ್ದಾರೆ ಎಂದರು.

ಸರ್ವಸನ್ನದ್ಧ, ತುರ್ತು ಕ್ರಮ

Advertisement

ಕಲ್ಮಕಾರು, ಸುಬ್ರಹ್ಮಣ್ಯ ಮತ್ತು ಬಂಟ್ವಾಳದಲ್ಲಿ ಗಂಜಿ ಕೇಂದ್ರ ಸ್ಥಾಪಿಸಲಾಗಿದೆ. ಜೀವನಾವಶ್ಯಕ ಸಾಮಗ್ರಿಯ ಕಿಟ್ ಸಿದ್ಧಪಡಿಸಲಾಗಿದೆ. ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಧಳಾಂತರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.

ನೋಡಲ್ ಅಧಿಕಾರಿಗಳು ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಸುಮಾರು 20 ಬೋಟುಗಳನ್ನು ನಿಯೋಜಿಸಲಾಗಿದೆ. ಅಗ್ನಿಶಾಮಕ, ಪೊಲೀಸ್‌ ಸಿಬಂದಿಯಲ್ಲದೆ 40 ಎನ್‌ಡಿಆರ್‌ಎಫ್‌ ಸಿಬಂದಿ ಮತ್ತು 100ಕ್ಕೂ ಅಧಿಕ ಗೃಹರಕ್ಷಕ ಸಿಬಂದಿಯನ್ನು ನಿಯೋಜಿಸಲಾಗಿದೆ. ಪ್ರಕೃತಿ ವಿಕೋಪ ಪರಿಹಾರದಡಿಯಲ್ಲಿ ಒಟ್ಟು 21.63 ಕೋ.ರೂ. ಮೊತ್ತ ಇದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲೆಯಲ್ಲಿ ಮಳೆಯಿಂದ ಇಬ್ಬರು ಮೃತಪಟ್ಟಿದ್ದಾರೆ. ಆ.9ರ ವರೆಗೆ ಒಟ್ಟು 207 ಮನೆಗಳಿಗೆ ಹಾನಿಯಾಗಿದ್ದು, ಒಟ್ಟು 28.56 ಲಕ್ಷ ರೂ. ಹಾನಿ ಸಂಭವಿಸಿದೆ. 6 ಜಾನುವಾರುಗಳು ಸಾವಿಗೀಡಾಗಿವೆ ಎಂದು ಜಿಲ್ಲಾಧಿಕಾರಿ ವಿವರಿಸಿದರು. 813 ಮಂದಿ ಡೆಂಗ್ಯೂ ಬಾಧಿತರಾಗಿದ್ದು, 4 ಸಾವು ಸಂಭವಿಸಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಮಾಹಿತಿ ನೀಡಿದರು.

ಭೂಕುಸಿತ ಆದಾಗ ತುರ್ತು ಸ್ಪಂದನೆ ಆಗಬೇಕು. ಅಪಾಯಕಾರಿ ಮರಗಳ ತೆರವು ಮತ್ತು ಹಳೆ ವಿದ್ಯುತ್‌ ತಂತಿಗಳ ತೆರವಿಗೆ ಕ್ರಮಗಳ ಆಗಬೇಕು ಎಂದ ಸಂಸದ ನಳಿನ್‌ ಹೇಳಿದರು.

ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿ ಗೋಡು, ಶಾಸಕರಾದ ಸಂಜೀವ ಮಠಂದೂರು, ರಾಜೇಶ್‌ ನಾೖಕ್‌, ಉಮಾನಾಥ ಕೋಟ್ಯಾನ್‌, ಯು.ಟಿ. ಖಾದರ್‌, ಎಸ್‌ಪಿ ಲಕ್ಷ್ಮೀ ಪ್ರಸಾದ್‌ ಉಪಸ್ಥಿತರಿದ್ದರು.

ಕೊಡಗಿಗೂ ಭೇಟಿ; ಸಭೆ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ನೆರೆ ಪೀಡಿತ ಪ್ರದೇಶಗಳಿಗೆ ಅಗತ್ಯ ನೆರವನ್ನು ಒದಗಿಸಲು ಹಣದ ಕೊರತೆ ಇಲ್ಲ ಎಂದು ಸಚಿವ ಸದಾನಂದ ಗೌಡ ಸ್ಪಷ್ಟಪಡಿಸಿದ್ದಾರೆ. ಶುಕ್ರವಾರ ಮಡಿಕೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸೂಚನೆಯಂತೆ ಈಶ್ವರಪ್ಪ ನೇತೃತ್ವದಲ್ಲಿ ಶಾಸಕರ ತಂಡ ಜಿಲ್ಲೆಗೆ ಆಗಮಿಸಿ ಅವಲೋಕಿಸಿರುವುದಾಗಿ ಮಾಹಿತಿ ನೀಡಿದರು.

ಘಾಟಿ ರಸ್ತೆಗಳಲ್ಲಿ ವಾಹನ ಸಂಚಾರ ಬಂದ್‌
ಮಂಗಳೂರು:
ಭೂಕುಸಿತ ಸಂಭವಿಸಿರುವುದರಿಂದ ಚಾರ್ಮಾಡಿ ಘಾಟಿಯಲ್ಲಿ ಆ.12ರ ವರೆಗೆ ವಾಹನ ಸಂಚಾರವನ್ನು ಸಂಪೂರ್ಣವಾಗಿ ಬಂದ್‌ ಮಾಡಲಾಗಿದೆ. ಶಿರಾಡಿ ಘಾಟಿಯಲ್ಲಿ ಆ.12ರವರೆಗೆ ಕೆಎಸ್ಸಾರ್ಟಿಸಿ ಬಸ್‌ಗಳು ಮತ್ತು ಆವಶ್ಯಕ ಸಾಮಗ್ರಿಗಳ ವಾಹನಗಳನ್ನು ಹೊರತು ಪಡಿಸಿ ಸಂಜೆ 7 ಗಂಟೆಯಿಂದ ಬೆಳಗ್ಗೆ 7 ಗಂಟೆಯ ವರೆಗೆ ಸಂಚಾರವನ್ನು ರದ್ದುಪಡಿಸಲಾಗಿದೆ. ಸಂಪಾಜೆ ಘಾಟಿಯಲ್ಲಿ ಕೆಎಸ್ಸಾರ್ಟಿಸಿ ಬಸ್‌ಗಳು ಮತ್ತು ಲಘುವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್ ತಿಳಿಸಿದ್ದಾರೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಅವರು, ಶಿರಾಡಿಘಾಟಿಯ ಸಕಲೇಶಪುರದಲ್ಲಿ ಭೂಕುಸಿತ ಸಂಭವಿಸಿದ್ದು, ರಾತ್ರಿ ವಾಹನ ಸಂಚಾರವನ್ನು ನಿಷೇಧಿಸುವಂತೆ ಹಾಸನ ಜಿಲ್ಲಾಧಿಕಾರಿ ಈಗಾಗಲೇ ಆದೇಶ ಹೊರಡಿಸಿದ್ದಾರೆ. ಗುಂಡ್ಯ ಭಾಗದಿಂದಲೂ ಸಂಚಾರ ನಿಷೇಧಿಸಲಾಗಿದೆ ಎಂದರು. ಚಾರ್ಮಾಡಿ ಘಾಟಿಯಲ್ಲಿ ಭೂಕುಸಿತ ಜತೆಗೆ ಕಲ್ಲುಗಳು ಕೂಡ ರಸ್ತೆಗೆ ಉರುಳುತ್ತಿವೆ. ಹೀಗಾಗಿ ಆ.14ರ ವರೆಗೆ ಸಂಚಾರ ನಿಷೇಧಿಸಲಾಗಿದೆ. ಸಂಪಾಜೆ ಘಾಟಿಯಲ್ಲಿ ಕೆಎಸ್ಸಾರ್ಟಿಸಿ ಬಸ್‌ಗಳು ಮತ್ತು ಲಘುವಾಹನಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ ಎಂದು ವಿವರಿಸಿದರು. ಬೆಳ್ತಂಗಡಿ ತಾಲೂಕಿನ ದಿಡುಪೆ, ಮಿತ್ತಬಾಗಿಲು, ಕಡಿರುದ್ಯಾವರ, ಕೊಲ್ಲೂರು ಬೈಲು ಪ್ರದೇಶದಲ್ಲಿ ಪ್ರವಾಹಕ್ಕೆ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ತಿಳಿಸಿದರು. ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ನಿವಾಸಿಗಳು ನೀರು ಇಳಿಯುವರೆಗೆ ಪರಿಹಾರ ಕೇಂದ್ರಗಳಿಗೆ, ಸಂಬಂಧಿಕರ ಮನೆಗಳಿಗೆ ತೆರಳುವಂತೆ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next