ವಾಷಿಂಗ್ಟನ್: ಟ್ವಿಟರ್‌ನಿಂದ ಜಾಹೀರಾತುದಾರರು ದೂರ ಸರಿಯುತ್ತಿರುವ ಹಾಗೂ ಹಲವು ಬಳಕೆದಾರರು ಇತರೆ ಪ್ಲಾಟ್‌ಫಾರಂಗಳತ್ತ ವಲಸೆ ಹೋಗುತ್ತಿರುವಂತೆಯೇ, ಟ್ವಿಟರ್ ಮಾಲೀಕ ಎಲಾನ್ ಮಸ್ಕ್ ಮಾತ್ರ “ಹೊಸ ಬಳಕೆದಾರರ ಸಂಖ್ಯೆ ಸಾರ್ವಕಾಲಿಕ ದಾಖಲೆ ಬರೆದಿದೆ’ ಎಂದು ಘೋಷಿಸಿಕೊಂಡಿದ್ದಾರೆ!
ಕಳೆದ 7 ದಿನಗಳಿಂದ ದಿನಕ್ಕೆ ಸುಮಾರು 20 ಲಕ್ಷ ಮಂದಿ ಹೊಸದಾಗಿ ಟ್ವಿಟರ್‌ಗೆ ಸೇರ್ಪಡೆಯಾಗಿದ್ದಾರೆ. 2021ರ ಇದೇ ಅವಧಿಗೆ ಹೋಲಿಸಿದರೆ ಸೈನ್‌ಅಪ್ ಆದವರ ಪ್ರಮಾಣ ಶೇ.66ರಷ್ಟು ಹೆಚ್ಚಳವಾಗಿದೆ. ಅಷ್ಟೇ ಅಲ್ಲ, ಬಳಕೆದಾರರ ಸಕ್ರಿಯ ಪಾಲ್ಗೊಳ್ಳುವಿಕೆಯೂ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ.
ಒಂದು ವಾರದಿಂದ ದಿನಕ್ಕೆ 8 ಶತಕೋಟಿ ಸಕ್ರಿಯ ನಿಮಿಷಗಳು ದಾಖಲಾಗಿದ್ದು, ಕಳೆದ ವರ್ಷದ ಇದೇ ವಾರಕ್ಕೆ ಹೋಲಿಸಿದರೆ ಶೇ.30ರಷ್ಟು ಹೆಚ್ಚಳವಾಗಿದೆ ಎಂದೂ ಮಸ್ಕ್ ಹೇಳಿದ್ದಾರೆ. ಜತೆಗೆ, ದ್ವೇಷಪೂರಿತ ಅಂಶಗಳೂ ಇಳಿಕೆಯಾಗಿವೆ ಎಂದಿದ್ದಾರೆ.
ಉ.ಪ್ರ. ಪೊಲೀಸರ ಟ್ವೀಟ್ ವೈರಲ್:
ವ್ಯಂಗ್ಯಭರಿತ ಪ್ರತಿಕ್ರಿಯೆಗೆ ಮಸ್ಕ್ ಅವರೇ ಹೆಸರುವಾಸಿ. ಆದರೆ, ಈ ಬಾರಿ ಮಸ್ಕ್ಗೇ ಉತ್ತರಪ್ರದೇಶ ಪೊಲೀಸರು ಟಾಂಗ್ ಕೊಟ್ಟಿದ್ದಾರೆ. “ನಾನು ಮಾಡುವ ಟ್ವೀಟ್ ಅನ್ನು ಕೆಲಸ ಎಂದು ಪರಿಗಣಿಸಲಾಗುತ್ತದೆಯೇ?’ ಎಂದು ಇತ್ತೀಚೆಗೆ ಮಸ್ಕ್ ಟ್ವೀಟಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ಉ.ಪ್ರ. ಪೊಲೀಸರು, “ನಿಮ್ಮ ಈ ಟ್ವೀಟ್ ಸಮಸ್ಯೆಯನ್ನು ಯುಪಿ ಪೊಲೀಸರು ಪರಿಹರಿಸಿದರೆ, ಅದು ಕೂಡ ಕೆಲಸ ಎಂದು ಪರಿಗಣಿಸಲ್ಪಡುತ್ತದೋ’ ಎಂದು ಬರೆದಿದ್ದಾರೆ. ಇದು ಭಾರೀ ವೈರಲ್ ಆಗಿದ್ದು, ಪೊಲೀಸರ ಹಾಸ್ಯಪ್ರಜ್ಞೆಯನ್ನು ಎಲ್ಲರೂ ಮೆಚ್ಚಿದ್ದಾರೆ.
Related Articles