Advertisement
ಮುಂದಿನ ದಿನಗಳಲ್ಲಿ ಮಂಗಳ ಗ್ರಹದ ಮೇಲೆ ಮನುಷ್ಯರ ಕಾಲನಿ ಸೃಷ್ಟಿಸುತ್ತೇನೆ ಎಂಬ ಕನಸಿನೊಂದಿಗೆ ಮುನ್ನಡೆಯುತ್ತಿರುವ ಎಲಾನ್ ಮಸ್ಕ್ ರನ್ನು ಹುಚ್ಚ ಎನ್ನುವವರೂ ಇದ್ದಾರೆ. ಆದರೆ ಅವರು ಸಾಗಿ ಬಂದ ದಾರಿಯನ್ನು, ಸಾಧಿಸಿದ ಅಸಾಮಾನ್ಯ ಗುರಿಗಳನ್ನು ನೋಡಿದರೆ ಎಲಾನ್ ಮಸ್ಕ್ ಎಲ್ಲ ಉದ್ಯಮಿಗಳಂತಲ್ಲ, ಹಣ ಮಾಡುವುದೇ ಅವರ ಉದ್ದೇಶವಲ್ಲ ಹಾಗೂ ಅವರದ್ದು ಹುಚ್ಚು ಕನಸುಗಳು ಖಂಡಿತ ಅಲ್ಲ ಎನ್ನುವುದು ಅರ್ಥವಾಗುತ್ತದೆ.
1971ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಜನಿಸಿದರು ಮಸ್ಕ್. ಮಸ್ಕ್ ರ ತಾಯಿ ಬಹುದೊಡ್ಡ ಮಾಡೆಲ್ ಆಗಿದ್ದವರು. ಮಕ್ಕಳಿಗೆ ಅವರು ನೀಡಿದ ಪ್ರೋತ್ಸಾಹ, ಸ್ವಾತಂತ್ರ್ಯ ಅಷ್ಟಿಷ್ಟಲ್ಲ. ಬಾಲ್ಯದಿಂದಲೇ ಮಸ್ಕ್ ಕೈಗೆ ಸಿಕ್ಕ ವಿಜ್ಞಾನ, ತಂತ್ರಜ್ಞಾನದ ಪುಸ್ತಕಗಳನ್ನೆಲ್ಲ ಹಗಲುರಾತ್ರಿ ಓದುತ್ತಿದ್ದರಂತೆ, ತಂದೆ ಎಲೆಕ್ಟ್ರೋ ಮೆಕ್ಯಾನಿಕಲ್ ಎಂಜಿನಿಯರ್ ಮತ್ತು ಪೈಲಟ್ ಆಗಿದ್ದವರು. ತಂದೆಯ ಜತೆಗಿನ ಅಲ್ಪ ಅವಧಿಯ ಒಡನಾಟದಲ್ಲಿ(ಮುಂದೆ ಪೋಷಕರು ವಿಚ್ಛೇದನ ಪಡೆದರು) ಮಸ್ಕ್ ಮಶೀನುಗಳ ಒಲವು ಬೆಳೆಸಿಕೊಂಡರು. ಇನ್ನು ತಮ್ಮ ಹತ್ತನೇ ವಯಸ್ಸಿನಲ್ಲೇ ಕಂಪ್ಯೂಟರ್ ಪ್ರೋಗ್ರಾಮಿಂಗ್‌ನಲ್ಲಿ ಆಸಕ್ತಿ ತಳೆದು ಕೆಲವೇ ಸಮಯದಲ್ಲಿ ಪ್ರೋಗ್ರಾಮಿಂಗ್ ಕಲಿತು, 12ನೇ ವಯಸ್ಸಿಗೇ ಒಂದು ವೀಡಿಯೋ ಗೇಮ್‌ಗೆ ಕೋಡ್ ಬರೆದು, ತಮ್ಮೂರಿನ ಕಂಪ್ಯೂಟರ್ ನಿಯತಕಾಲಿಕಕ್ಕೆ ಅದನ್ನು 500 ಡಾಲರ್‌ಗೆ ಮಾರಿದ್ದರು! ಅದು ಅವರ ಮೊದಲ ಗಳಿಕೆ.
Related Articles
ದ.ಆಫ್ರಿಕಾದಲ್ಲೇ ಇದ್ದರೆ ತಮಗೆ ಭವಿಷ್ಯವಿಲ್ಲ ಎಂದು ಭಾವಿಸಿದ ಮಸ್ಕ್, ತಮ್ಮ 17ನೇ ವಯಸ್ಸಿಗೆ ಕೆನಡಾಗೆ ಹೋಗಿ, ಅನಂತರ ಅಲ್ಲಿಂದ ಅಮೆರಿಕಕ್ಕೆ ತೆರಳಿ, ಭೌತಶಾಸ್ತ್ರ ಮತ್ತು ಬ್ಯುಸಿನೆಸ್‌ನಲ್ಲಿ ಪದವಿ ಪಡೆದರು. ತದನಂತರ ಸ್ಟಾನ್‌ಫೋರ್ಡ್ ವಿಶ್ವವಿದ್ಯಾನಿಲಯಕ್ಕೆ ಸೇರಿದರಾದರೂ, ತರಗತಿಗಳು ಆರಂಭವಾಗುವ ಮುನ್ನವೇ ಕಾಲೇಜಿಂದ ಡ್ರಾಪ್‌ಔಟ್ ಆದರು. ಅದು ಅಂತರ್ಜಾಲದ ಯುಗಾರಂಭವಾಗಿತ್ತು, ತಮ್ಮ ಬದುಕನ್ನು ಅಂತರ್ಜಾಲದಿಂದಲೇ ಕಟ್ಟಿಕೊಳ್ಳಬೇಕೆಂದು ನಿರ್ಧರಿಸಿದ ಮಸ್ಕ್, ಒಂದು ಚಿಕ್ಕ ಕೊಠಡಿಯಲ್ಲಿ ಸಹೋದರನ ಜತೆಗೂಡಿ ನಾಲ್ಕು ವರ್ಷದ ಪರಿಶ್ರಮದಿಂದ ಜಿಪ್2 ಎನ್ನುವ ಕಂಪೆನಿ ಆರಂಭಿಸಿದರು. ಅಂತರ್ಜಾಲದಲ್ಲಿ ನಕ್ಷೆಗಳನ್ನು, ಡೈರೆಕ್ಟರಿಗಳನ್ನು ಹಾಕಲು ಜಿಪ್2 ಅನುವು ಮಾಡಿಕೊಡುತ್ತಿತ್ತು.
Advertisement
ಜಿಪ್2 ಎಷ್ಟು ಸದ್ದು ಮಾಡಿತೆಂದರೆ, ಆ ಕಾಲದ ಇಂಟರ್ನೆಟ್ ದೈತ್ಯ ಕಾಂಪ್ಯಾಕ್ ಕಂಪೆನಿ 2000 ಕೋಟಿ ರೂಪಾಯಿ ಪಾವತಿಸಿ ಜಿಪ್2 ಕಂಪೆನಿಯನ್ನು ಖರೀದಿಸಿಬಿಟ್ಟಿತು. ಹೂಡಿಕೆದಾರರಿಗೆಲ್ಲ ಹಣ ಹಂಚಿದ ಮೇಲೆ 28ರ ಹರೆಯದ ಮಸ್ಕ್ ಖಾತೆಯಲ್ಲಿ 22 ಮಿಲಿಯನ್ ಡಾಲರ್(ಈಗಿನ ಮೊತ್ತ 162 ಕೋಟಿ ರೂಪಾಯಿ) ಬಂದುಬಿದ್ದಿತ್ತು!
ಅಷ್ಟಕ್ಕೇ ನಿಲ್ಲಲಿಲ್ಲ ಕನಸು: ಅಂತರ್ಜಾಲದ ಶಕ್ತಿಯ ಅರಿವಿದ್ದ ಮಸ್ಕ್, ಅನಂತರ ಎಕ್ಸ್.ಕಾಂ ಎನ್ನುವ ಕಂಪೆನಿಯನ್ನು ಸ್ಥಾಪಿಸಿದರು. ಈ ಕಂಪೆನಿ, ಆನ್‌ಲೈನ್‌ನಲ್ಲಿ ವಿತ್ತ ಸೇವೆಗಳನ್ನು ನೀಡುತ್ತಿತ್ತು. ಕೆಲವೇ ವರ್ಷಗಳಲ್ಲಿ ಎಕ್ಸ್.ಕಾಂ ಕಾನ್ಫಿನಿಟಿ ಕಂಪೆನಿಯಲ್ಲಿ ಮಿಳಿತವಾಯಿತು. ಕಾನ್ಫಿನಿಟಿ ಈಗ ಜನಪ್ರಿಯವಾಗಿರುವ ಪೇಪಾಲ್ ಎನ್ನುವ ಅಂತರ್ಜಾಲ ಪೇಮೆಂಟ್ ಸೇವೆಯನ್ನು ಆರಂಭಿಸಿತ್ತು(ಪೇಟಿಎಂ, ಗೂಗಲ್ ಪೇ ಮಾದರಿಯಲ್ಲಿ). 2002ರಲ್ಲಿ ಇ-ಬೇ ಕಂಪೆನಿ ಪೇಪಾಲ್ ಅನ್ನು ಖರೀದಿಸಿತು. ಆಗ ಮಸ್ಕ್ ಗೆ ಪಾವತಿಯಾದದ್ದು ಬರೋಬ್ಬರಿ 1.5 ಶತಕೋಟಿ ಡಾಲರ್!
ಎಲೆಕ್ಟ್ರಿಕ್ ಕಾರುಗಳ ಜಗತ್ತು ಬದಲಿಸಿದಪೇಪಾಲ್ ಮಾರಾಟದ ಅನಂತರ ಮುಂದೇನು ಮಾಡಬೇಕು ಎನ್ನುವ ಪ್ರಶ್ನೆ ಎದುರಾದಾಗ ಮಸ್ಕ್ ಅಂತರ್ಜಾಲ ಲೋಕವನ್ನು ತೊರೆದು ತಮ್ಮ ಬಹುದಿನಗಳ ಕನಸಾದ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಹಾಗೂ ಬಾಹ್ಯಾಕಾಶ ಸಂಶೋಧನ ಸಂಸ್ಥೆಯ ಸ್ಥಾಪನೆಯ ಕನಸು ಕಂಡರು! ಅವರ ಈ ಎರಡೂ ಐಡಿಯಾಗಳೂ ವಿಪರೀತ ಮೂದಲಿಕೆಗೆ ಗುರಿಯಾದವು. ಅಲ್ಲಿಯವರೆಗೂ ಎಲೆಕ್ಟ್ರಿಕ್ ಕಾರುಗಳೆಂದರೆ ಚಿಕ್ಕ ಆಟೋ ಮಾದರಿಯ, ನಿಧಾನಕ್ಕೆ ಚಲಿಸುವ ವಾಹನಗಳೇ ಆಗಿದ್ದವು. ಈ ಕಾರಣಕ್ಕಾಗಿಯೇ, ಜನರಿಗೂ ಅವುಗಳ ಬಗ್ಗೆ ಆಸಕ್ತಿ ಇರಲಿಲ್ಲ. ಎಲೆಕ್ಟ್ರಿಕ್ ಕಾರುಗಳನ್ನು ಅತ್ಯಂತ ವೇಗವಾಗಿ ಸಾಗುವ ಐಷಾರಾಮಿ ಸೂಪರ್‌ಕಾರ್‌ಗಳಂತೆ ಬದಲಿಸಿದರೆ, ಖಂಡಿತ ಜನ ಖರೀದಿಸುತ್ತಾರೆ ಎನ್ನುವ ನಂಬಿಕೆ ಮಸ್ಕ್ ಗೆ ಇತ್ತು. ಆಗಲೇ ಜನ್ಮ ತಾಳಿದ್ದು ಟೆಸ್ಲಾ. 2008ರಲ್ಲಿ ಎದುರಾದ ಜಾಗತಿಕ ಆರ್ಥಿಕ ಕುಸಿತದ ಪರಿಣಾಮ ಟೆಸ್ಲಾ ನೆಲ ಕಚ್ಚುವ ಹಂತ ತಲುಪಿತ್ತು. ಆಗ ಮಸ್ಕ್ ತಮ್ಮ ಬಹುತೇಕ ಹಣವನ್ನೆಲ್ಲ ಈ ಕಂಪೆನಿಗೆ ಸುರಿದು ಅದನ್ನು ಉಳಿಸಿದರು. 2008ರಲ್ಲಿ ಬಂದ ಟೆಸ್ಲಾದ ಮೊದಲ ಕಾರು ರೋಡ್‌ಸ್ಟರ್ ಒಂದು ಬಾರಿ ಚಾರ್ಜ್ ಮಾಡಿದರೆ 394 ಕಿಲೋಮೀಟರ್ ಸಾಗುವ ಐಷಾರಾಮಿ ಎಲೆಕ್ಟ್ರಿಕ್ ಕಾರಾಗಿತ್ತು. ಅಮೆರಿಕದಾದ್ಯಂತ ಟೆಸ್ಲಾ ಕಂಪೆನಿಯು ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಿದ್ದು, ಉಚಿತವಾಗಿ ಚಾರ್ಜಿಂಗ್ ಮಾಡಿಸಿಕೊಳ್ಳಬಹುದಾಗಿದೆ! ಬಾಹ್ಯಾಕಾಶದಲ್ಲಿ ಸ್ಪೇಸ್ ಎಕ್ಸ್ ಗುರುತು
2002ರಲ್ಲಿ ಸ್ಪೇಸ್ ಎಕ್ಸ್ ಸ್ಥಾಪನೆ ಮಾಡಿದರು ಮಸ್ಕ್. ನಾವೇ ಯಾಕೆ ರಾಕೆಟ್ ಉತ್ಪಾದಿಸಬಾರದೆಂಬ ಯೋಚನೆ ಮೊಳೆತು, ಅಮೆರಿಕ ಸೇರಿದಂತೆ ಜಗತ್ತಿನ ಮೇಧಾವಿ ವಿಜ್ಞಾನಿಗಳನ್ನೆಲ್ಲ ಕರೆತಂದರು. ಈಗ ನಾಸಾ ಸಂಸ್ಥೆಯ ಸಹಭಾಗಿತ್ವ ಹಾಗೂ ಬೃಹತ್ ಅನುದಾನದಿಂದಾಗಿ ಸ್ಪೇಸ್ ಎಕ್ಸ್ ರಾಕೆಟ್‌ಗಳು ತಮ್ಮ ಅಪೂರ್ವ ತಂತ್ರಜ್ಞಾನದಿಂದ ಹೆಸರುವಾಸಿಯಾಗಿವೆ. ಜಗತ್ತಿನಾದ್ಯಂತ ಸಂಶೋಧನ ಸಂಸ್ಥೆಗಳ ರಾಕೆಟ್‌ಗಳೆಲ್ಲ ಉಪಗ್ರಹವನ್ನು ಕಕ್ಷೆಗೆ ಸೇರಿಸಿದ ಅನಂತರ ಬೇರ್ಪಟ್ಟು ನಾಶವಾಗಿಬಿಡುತ್ತವೆ. ಆದರೆ ಸ್ಪೇಸ್ ಎಕ್ಸ್‌ನ ರಾಕೆಟ್ ಉಪಗ್ರಹವನ್ನು ಕಕ್ಷೆಗೆ ಸೇರಿಸಿ, ವಾಪಸ್ ಬಂದು ನೇರವಾಗಿಯೇ ನಿಲುತ್ತದೆ (ಅದೂ ಸಾಗರದಲ್ಲಿನ ನೌಕೆಯ ಮೇಲೆ). ಕೆಲವೇ ದಿನಗಳ ಹಿಂದಷ್ಟೇ, ಸ್ಪೇಸ್ ಎಕ್ಸ್ ಮೊದಲ ಮಾನವ ಸಹಿತ ಉಡಾವಣೆ ಕೈಗೊಂಡು, ಅಮೆರಿಕದ ಗಗನಯಾತ್ರಿಗಳನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಯಶಸ್ವಿಯಾಗಿ ಇಳಿಸಿದೆ. ಮುಂದಿನ ವರ್ಷಗಳಲ್ಲಿ ಮಂಗಳ ಮೇಲೆ ಮನುಷ್ಯನನ್ನು ಕೊಂಡೊಯ್ಯುವ ಗುರಿ ಇದೆ. ಸೋಲಾರ್ ಸಿಟಿ
ಮಸ್ಕ್ ರ ಮತ್ತೂಂದು ಅತಿದೊಡ್ಡ ಯೋಜನೆಯೆಂದರೆ, ಸೋಲಾರ್‌ಸಿಟಿ ಪ್ರಾಜೆಕ್ಟ್. ಹಲವಾರು ಸೋಲಾರ್ ಪವರ್ ಕಂಪೆನಿಗಳನ್ನು ಒಟ್ಟುಗೂಡಿಸಿ ಅವರು ಸೋಲಾರ್ ಸಿಟಿ ಸ್ಥಾಪಿಸಿದ್ದಾರೆ. ಅತೀ ಕಡಿಮೆ ದರದಲ್ಲೇ ಜನರಿಗೆ ಸೋಲಾರ್ ಪ್ಯಾನಲ್‌ಗಳನ್ನು ಈ ಕಂಪೆನಿ ಒದಗಿಸುತ್ತದೆ. ಅಲ್ಲದೇ, ಎಲಾನ್ ಮಸ್ಕ್ ರ ಬಾಹ್ಯಾಕಾಶ ಸಂಶೋಧನ ಸಂಸ್ಥೆ ಸ್ಪೇಸ್‌ಎಕ್ಸ್‌ನ ಘಟಕಗಳಿಗೂ, ಟೆಸ್ಲಾ ಸೂಪರ್‌ಚಾರ್ಜಿಂಗ್ ಸ್ಟೇಷನ್‌ಗಳಿಗೂ ಸೋಲಾರ್‌ಸಿಟಿಯ ಸೌರ ವಿದ್ಯುತ್‌ನಿಂದಲೇ ಶಕ್ತಿ ಪೂರೈಕೆಯಾಗುತ್ತಿದೆ. ಆಚಾರ್ಯ