Advertisement

ಉಗ್ರರ ಶೋಧಕ್ಕಾಗಿ ಕಮಾಂಡೋಗಳ ಏರ್‌ಡ್ರಾಪ್‌!

10:03 AM Oct 08, 2019 | Team Udayavani |

ಜಮ್ಮು: ಜಮ್ಮು ಮತ್ತು ಕಾಶ್ಮೀರದ ದಟ್ಟಾರಣ್ಯವೊಂದರಲ್ಲಿ ಅವಿತಿರುವ ಉಗ್ರರ ಪತ್ತೆಗೆ ದೊಡ್ಡ ಮಟ್ಟದ ಕಾರ್ಯಾಚರಣೆ ನಡೆಯುತ್ತಿದ್ದು, ಇದರ ಮತ್ತೂಂದು ಹಂತವಾಗಿ ರವಿವಾರ ಭಾರತೀಯ ಸೇನೆಯ ಕಮಾಂಡೋಗಳನ್ನು ವಿಮಾನಗಳ ಮೂಲಕ ಪರ್ವತಪ್ರದೇಶದಲ್ಲಿ ಕೆಳಕ್ಕಿಳಿಸಲಾಗಿದೆ.

Advertisement

ಬಂಡಿಪೋರಾ ಜಿಲ್ಲೆಯ ಗುರೇಜ್‌ ಪ್ರದೇಶದಿಂದ ಎಲ್‌ಒಸಿ ದಾಟಿ ನುಸುಳಿರುವ ಉಗ್ರರ ಒಂದು ದೊಡ್ಡ ಸಮೂಹವು ಜಮ್ಮುವಿನ ಗಾಂದರ್‌ಬಲ್‌ ಅರಣ್ಯ ಪ್ರದೇಶದಲ್ಲಿ ಅವಿತಿರುವ ಸುಳಿವು ಸಿಕ್ಕಿದ್ದು, 10 ದಿನಗಳಿಂದ ಭದ್ರತಾ ಪಡೆಗಳು ಶೋಧ ಕಾರ್ಯ ನಡೆಸುತ್ತಿವೆ. ಕೆಲವು ಉಗ್ರರ ಚಲನವಲನದ ಬಗ್ಗೆ ರವಿವಾರ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಕಮಾಂಡೋಗಳನ್ನು ಏರ್‌ಡ್ರಾಪ್‌ ಮಾಡಲಾಗಿದೆ.

ಗುರೇಜ್‌ನ ಎಲ್‌ಒಸಿಯಿಂದ ಗಾಂದರ್‌ಬಲ್‌ಗೆ ತೆರಳ ಬೇಕೆಂದರೆ ಅನೇಕ ಪರ್ವತಗಳನ್ನು ಏರಿಯೇ ಸಾಗಬೇಕಾಗು ತ್ತದೆ. ಇಲ್ಲಿ ರಸ್ತೆಗಳೇ ಇಲ್ಲ. ಉಗ್ರರು ಇದೇ ದಾರಿಯ ಮೂಲಕ ಭಾರತ ಪ್ರವೇಶಿಸಿರುವ ಸಾಧ್ಯತೆಯಿರುವ ಕಾರಣ ಅವರ ಶೋಧಕ್ಕಾಗಿ ಕಮಾಂಡೋಗಳನ್ನು ಬಳಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಉಗ್ರರು ಪಾಕಿಸ್ಥಾನದಿಂದ ಎಲ್‌ಒಸಿ ದಾಟಿ ದೇಶ ದೊಳಕ್ಕೆ ನುಸುಳಿದ್ದು, ದಕ್ಷಿಣ ಕಾಶ್ಮೀರದ ತ್ರಾಲ್‌ನತ್ತ ಹೊರಟಿದ್ದಾರೆ ಎಂದು ಅಂದಾಜಿಸಲಾಗಿದೆ.

ಇಬ್ಬರ ಹತ್ಯೆ ಬಳಿಕ ಕಾರ್ಯಾಚರಣೆ ತೀವ್ರ
ಸೆ.27ರಂದು ಗಾಂದರ್‌ಬಲ್‌ನಲ್ಲಿ ಇಬ್ಬರು ಉಗ್ರರನ್ನು ಭದ್ರತಾ ಪಡೆ ಹೊಡೆದುರುಳಿಸಿತ್ತು. ಇವರು ಕೂಡ ಇದೇ ಮಾರ್ಗವಾಗಿ ಒಳನುಸುಳಿದ್ದರು. ಇದಾದ ಬಳಿಕ ಉಗ್ರರ ಗುಂಪೊಂದು ಅರಣ್ಯದಲ್ಲಿ ಅವಿತಿರುವ ಸುಳಿವು ದೊರೆಯುತ್ತಲೇ ಅತಿದೊಡ್ಡ ಉಗ್ರ ನಿಗ್ರಹ ಕಾರ್ಯಾಚರಣೆಗೆ ಸೇನೆ ಇಳಿದಿದೆ.

200ರಿಂದ 300 ಉಗ್ರರು ಸಕ್ರಿಯ
ಜಮ್ಮು ಮತ್ತು ಕಾಶ್ಮೀರದಲ್ಲಿ 200ರಿಂದ 300 ಉಗ್ರರು ಸಕ್ರಿಯರಾಗಿದ್ದಾರೆ ಎಂದು ಕಾಶ್ಮೀರ ರಾಜ್ಯದ ಪೊಲೀಸ್‌ ಮುಖ್ಯಸ್ಥ ದಿಲ್‌ಬಾಗ್‌ ಸಿಂಗ್‌ ಅವರು ತಿಳಿಸಿದ್ದಾರೆ.
ಮುಂದಿನ ಚಳಿಗಾಲದ ಒಳಗೆ ಇನ್ನಷ್ಟು ಉಗ್ರರನ್ನು ಗಡಿಯೊಳಗೆ ನುಸುಳಿಸುವ ಯತ್ನವಾಗಿ ಪಾಕ್‌ ಗಡಿಯಲ್ಲಿ ಗುಂಡಿನ ದಾಳಿಯನ್ನು ಹೆಚ್ಚಿಸಿದೆ ಎಂದು ಅವರು ಹೇಳಿದರು. ಪಾಕ್‌ನ ಈ ಕುತಂತ್ರವನ್ನು ತಡೆಯಲು ಗಡಿಯಲ್ಲಿ ಹೆಚ್ಚಿನ ಸಿಬಂದಿಯನ್ನು ನಿಯೋಜಿಸಿ ಕಣ್ಗಾವಲು ಬಿಗಿಗೊಳಿಸಲಾಗಿದೆ ಎಂದು ಅವರು ವಿವರಿಸಿದರು.

Advertisement

650 ಬಾರಿ ಶೋಧ ಕಾರ್ಯ
ಆ. 5ರಿಂದೀಚೆಗೆ ಅಲ್ಲಲ್ಲಿ ಉಗ್ರರು ಕಣ್ಣಿಗೆ ಬೀಳುತ್ತಿದ್ದಾರೆ. ಆದರೆ ವಸತಿ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಲು ಸೇನೆಗೆ ಸಾಧ್ಯವಾಗುತ್ತಿಲ್ಲ. ಪೊಲೀಸ್‌ ಮೂಲಗಳ ಪ್ರಕಾರ ಸುಮಾರು 450 ಬಾರಿ ಉಗ್ರರು ಇಲ್ಲಿನವರ ಕಣ್ಣಿಗೆ ಬಿದ್ದಿದ್ದು, 650 ಬಾರಿ ಶೋಧ ಕಾರ್ಯ ಕೈಗೊಳ್ಳಲಾಗಿದೆ. ಈ ಪೈಕಿ ಮೂರು ಕಾರ್ಯಾಚರಣೆಗಳಲ್ಲಿ ಗುಂಡಿನ ಚಕಮಕಿ ನಡೆದು, ಉಗ್ರರನ್ನು ಹೊಡೆದುರುಳಿಸಲಾಗಿದೆ. ಕಳೆದ 2 ತಿಂಗಳಲ್ಲಿ ಕನಿಷ್ಠ 60 ಉಗ್ರರು ಕಣಿವೆ ರಾಜ್ಯಕ್ಕೆ ನುಸುಳಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next