Advertisement

ದೆಹಲಿಯಲ್ಲಿಂದು ಬಿಜೆಪಿ ಭಿನ್ನಮತ ನಿವಾರಣೆ ಸಭೆ

03:45 AM Jan 27, 2017 | Team Udayavani |

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಉದ್ಭವಿಸಿರುವ ಭಿನ್ನಾಭಿಪ್ರಾಯ ಶಮನಕ್ಕೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಶುಕ್ರವಾರ ದೆಹಲಿಯಲ್ಲಿ ಸಂಧಾನ ಸಭೆ ಕರೆದಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮತ್ತು ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ಇಬ್ಬರೂ ಪರಸ್ಪರರ ವಿರುದ್ಧ ದೂರು-ಪ್ರತಿದೂರು ನೀಡಲಿದ್ದಾರೆ.

Advertisement

ಇಬ್ಬರ ನಡುವಿನ ಭಿನ್ನಮತ ಪಕ್ಷಕ್ಕೆ ಭಾರೀ ಪ್ರಮಾಣದಲ್ಲಿ ಹಾನಿ ಉಂಟುಮಾಡುತ್ತಿರುವುದರಿಂದ ಪಂಚ ರಾಜ್ಯಗಳ ಚುನಾವಣೆಯ ಒತ್ತಡದ ನಡುವೆಯೂ ಅಮಿತ್‌ ಶಾ ಬಿಕ್ಕಟ್ಟು ಬಗೆಹರಿಸಲು ಮಧ್ಯಪ್ರವೇಶಿಸಿ ಸಭೆ ಕರೆದಿದ್ದಾರೆ. ಆದರೆ, ಅಮಿತ್‌ ಶಾ ಎದುರು ಉಭಯ ನಾಯಕರು ಆರೋಪ-ಪ್ರತ್ಯಾರೋಪ ಮಾಡುವ ಸಾಧ್ಯತೆಯೇ ಹೆಚ್ಚಾಗಿರುವುದರಿಂದ ಈ ಸಭೆ ರಾಜಕೀಯವಾಗಿ ಕುತೂಹಲ ಕೆರಳಿಸಿದೆ.

ಇಬ್ಬರು ನಾಯಕರ ನಡುವಿನ ಭಿನ್ನಾಭಿಪ್ರಾಯವರನ್ನು ರಾಜಿ ಸಂಧಾನದ ಮೂಲಕ ತುರ್ತಾಗಿ ಬಗೆಹರಿಸಲು ಅಮಿತ್‌ ಶಾ- ಶತಾಯ-ಗತಾಯ ಪ್ರಯತ್ನ ಮಾಡಲಿದ್ದು, ಇಬ್ಬರಿಗೂ ಪಕ್ಷದ ಶಿಸ್ತು ಮತ್ತು ಸಂಘಟನೆ ಬಗ್ಗೆ ಕಿವಿಮಾತು ಹೇಳಲಿದ್ದಾರೆ. ಬಿಜೆಪಿ ವರಿಷ್ಠರ ಎದುರು ಯಡಿಯೂರಪ್ಪ ಅವರ ಏಕಪಕ್ಷೀಯ ನಿರ್ಧಾರಗಳನ್ನು ಈಶ್ವರಪ್ಪ ಪ್ರಶ್ನಿಸಲಿದ್ದಾರೆ. ಹಾಗೆಯೇ, ಜವಾಬ್ದಾರಿ ಸ್ಥಾನದಲ್ಲಿರುವ ಈಶ್ವರಪ್ಪ ಅವರು ಪಕ್ಷದ ಕಟ್ಟಳೆಗಳನ್ನು ಮೀರಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಸಂಘಟನೆಯಲ್ಲಿ ತೊಡಗಿಕೊಂಡಿರುವ ಬಗ್ಗೆ ಯಡಿಯೂರಪ್ಪ ಪ್ರಸ್ತಾಪಿಸಲಿದ್ದಾರೆ.

ಯಡಿಯೂರಪ್ಪ ಅವರ ಆರೋಪವೇನು
– ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಮೂಲಕ ಈಶ್ವರಪ್ಪ ಅವರು ಬಿಜೆಪಿ ಸಂಘಟನೆಗೆ ಹಾನಿ ಮಾಡುತ್ತಿದ್ದಾರೆ.
– ಬ್ರಿಗೇಡ್‌ ಬೇಡ ಎಂದು ತಾವು ಸ್ಪಷ್ಟವಾಗಿ ಸೂಚಿಸಿದರೂ ಮುಂದುವರಿಸಿ ಪಕ್ಷದ ಮುಖಂಡರನ್ನೂ ಅದಕ್ಕೆ ಆಹ್ವಾನಿಸುವ ಮೂಲಕ ಬಿಜೆಪಿ ಒಡೆಯುವ ಯತ್ನಕ್ಕೆ ಕೈಹಾಕಿದ್ದಾರೆ.
– ಬ್ರಿಗೇಡ್‌ ಸಭೆಗಳಲ್ಲಿ ತಮ್ಮ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ ಮತ್ತು ಬೆಂಬಲಿಗರ ಮೂಲಕ ಮುಂದಿನ ಮುಖ್ಯಮಂತ್ರಿ ತಾವೇ ಎಂದು ಹೇಳಿಸಿಕೊಂಡು ಗೊಂದಲ ಸೃಷ್ಟಿಸುತ್ತಿದ್ದಾರೆ.
– ಪಕ್ಷದಲ್ಲಿ ಮೂಲೆಗುಂಪಾಗಿರುವ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತಿರುವವರನ್ನು ಜತೆ ಸೇರಿಸಿಕೊಂಡು ತಮ್ಮ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ.
– ಈಶ್ವರಪ್ಪ ಅವರು ಬ್ರಿಗೇಡ್‌ನ‌ಲ್ಲಿ ಮುಂದುವರಿಯಲು ಸಂಘಟನೆಯ ಕೆಲವು ಪ್ರಮುಖರು ಪರೋಕ್ಷವಾಗಿ ಕುಮ್ಮಕ್ಕು ನೀಡುತ್ತಿದ್ದು, ಇದು ಗುಂಪುಗಾರಿಕೆಗೆ ಕಾರಣವಾಗಿದೆ.
– ಈಶ್ವರಪ್ಪ ಅವರು ಹಿಂದುಳಿದ ವರ್ಗಗಳ ಮೋರ್ಛಾ ಮೂಲಕವೇ ಹಿಂದುಳಿದವರನ್ನು ಸಂಘಟಿಸಲು ಅವಕಾಶವಿದ್ದರೂ ವಿನಾ ಕಾರಣ ಬ್ರಿಗೇಡ್‌ ಹೆಸರು ಹೇಳಿಕೊಂಡು ಆ ವರ್ಗದವರನ್ನು ತಮ್ಮ ವಿರುದ್ಧ ಛೂ ಬಿಡುತ್ತಿದ್ದಾರೆ.

ಈಶ್ವರಪ್ಪ ಅವರ ಆರೋಪವೇನು?
– ಯಡಿಯೂರಪ್ಪ ಅವರು ಪಕ್ಷದ ರಾಜ್ಯಾಧ್ಯಕ್ಷರಾದ ಬಳಿಕ ಪ್ರಮುಖ ನಿರ್ಧಾರಗಳನ್ನು ಏಕಪಕ್ಷೀಯವಾಗಿ ಕೈಗೊಳ್ಳುತ್ತಿದ್ದಾರೆ.
–  ಶೋಭಾ ಕರಂದ್ಲಾಜೆ ಸೇರಿದಂತೆ ತಮ್ಮ ಹಿಂಬಾಲಕರ ಮಾತು ಕೇಳಿ ಪಕ್ಷದ ಪದಾಧಿಕಾರಿಗಳ ನೇಮಕದಲ್ಲಿ ಪಕ್ಷಕ್ಕೆ ದುಡಿದವರನ್ನು ನಿರ್ಲಕ್ಷಿಸಿ ಕೆಜೆಪಿಯಿಂದ ಬಂದವರಿಗೆ ಮಣೆ ಹಾಕುತ್ತಿದ್ದಾರೆ.
– ಬಿಜೆಪಿಗೆ ಬೆಂಬಲವಾಗಿ ಮತ್ತು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವ ಉದ್ದೇಶದೊಂದಿಗೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಸ್ಥಾಪಿಸಿದರೂ ಅದನ್ನು ತಿರಸ್ಕರಿಸಿದ್ದಾರೆ.
– ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ ಪಕ್ಷದ ಕಾರ್ಯಕ್ರಮಕ್ಕೆ ತಮ್ಮನ್ನು ಆಹ್ವಾನಿಸದೆ ಅವಮಾನ ಮಾಡಿದ್ದಾರೆ. ಅಲ್ಲದೆ, ತಮ್ಮ ವಿರುದ್ಧ ಬೆಂಬಲಿಗರ ಮೂಲಕ ಇಲ್ಲ ಸಲ್ಲದ ಆರೋಪ ಮಾಡಿಸುತ್ತಿದ್ದಾರೆ.
– ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನಿಂದ ಏಕಾಏಕಿ ದೂರವಾದರೆ ಹಿಂದುಳಿದ ವರ್ಗದವರಲ್ಲಿ ತಮ್ಮ ಬಗ್ಗೆ ತಪ್ಪು ಅಭಿಪ್ರಾಯ ಮೂಡಲಿದ್ದು, ಅದು ಗೊತ್ತಿದ್ದರೂ ಯಡಿಯೂರಪ್ಪ ಅವರು ಉದ್ದೇಶಪೂರ್ವಕವಾಗಿ ಬ್ರಿಗೇಡ್‌ ವಿರೋಧಿಸುತ್ತಿದ್ದಾರೆ.
– ಬರ ಪರಿಶೀಲನಾ ತಂಡದಿಂದ ತಮ್ಮನ್ನು ದೂರವಿಟ್ಟು ಬ್ರಿಗೇಡ್‌ ತಾವು ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿದ್ದೇನೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ.

Advertisement

ಅಮಿತ್‌ ಶಾ ಕರೆದಿರುವ ಸಭೆಯಲ್ಲಿ ಯಡಿಯೂರಪ್ಪ, ಈಶ್ವರಪ್ಪ, ಕೇಂದ್ರ ಸಚಿವ ಅನಂತಕುಮಾರ್‌, ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್‌, ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್‌.ಸಂತೋಷ್‌ ಸೇರಿದಂತೆ ರಾಜ್ಯದ ಆರ್‌ಎಸ್‌ಎಸ್‌ ಮುಖಂಡರನ್ನು ಆಹ್ವಾನಿಸಿದ್ದಾರೆ. 

ಈಗಾಗಲೇ ಮುರಳೀಧರರಾವ್‌ ಅವರಿಂದ ಭಿನ್ನಮತದ ವರದಿ ಪಡೆದಿರುವ ಅಮಿತ್‌ ಶಾ, ಸಭೆಯಲ್ಲಿ ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರ ಮಾತುಗಳನ್ನು ಅಲಿಸಲಿದ್ದಾರೆ. ಜತೆಗೆ ಇತರೆ ನಾಯಕರಿಂದಲೂ ಪ್ರತ್ಯೇಕವಾಗಿ ಮಾಹಿತಿ ಪಡೆಯಲಿದ್ದಾರೆ. ಬಳಿಕ ಇಬ್ಬರನ್ನೂ ಕರೆಸಿ ಭಿನ್ನಮತ ಮರೆತು ಒಟ್ಟಾಗಿ ಹೋಗುವಂತೆ ಸೂಚನೆ ನೀಡುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next