Advertisement

ನೀರು ಕುಡಿಯಲು ಬಂದಿದ್ದೇ ಈ ಆನೆಗಳ ಜೀವಕ್ಕೆ ಕಂಟಕವಾಯಿತು…ಆದರೆ ಕೊನೆಗೆ ಆಗಿದ್ದೇ ಬೇರೆ

11:30 AM Sep 17, 2022 | sudhir |

ಕೀನ್ಯಾ : ಆಯುಷ್ಯ ಗಟ್ಟಿ ಇದ್ದರೆ ಸಾವಿನ ದವಡೆಯಿಂದ ಹೇಗಾದರೂ ಪಾರಾಗುತ್ತಾರೆ ಎಂಬುದಕ್ಕೆ ಕೀನ್ಯಾದಲ್ಲಿ ನಡೆದ ಒಂದು ಘಟನೆಯನ್ನು ನೋಡಿದರೆ ಗೊತ್ತಾಗುತ್ತದೆ.
ಕೆಸರಿನ ಹೊಂಡದಲ್ಲಿ ಹೂತುಹೋಗಿ ಎರಡು ದಿನಗಳು ಕಳೆಯಿತು… ಇನ್ನೇನು ಪ್ರಾಣ ಪಕ್ಷಿ ಹಾರಿಹೋಗುವ ಸಮಯ ದೂರ ಇಲ್ಲ ಎನ್ನುವ ಹಂತದಲ್ಲಿದ್ದ ಎರಡು ಹೆಣ್ಣಾನೆಗಳು ಕೊನೆಯ ಕ್ಷಣದಲ್ಲಿ ಸಾವಿನ ದವಡೆಯಿಂದ ಪಾರಾದ ಕತೆ ಇದು.

Advertisement

ನಿಜಕ್ಕೂ ಈ ವಿಡಿಯೋ ನೋಡಿದರೆ ಎಂತವರಿಗೂ ಕಣ್ಣು ತುಂಬಿ ಬರದೇ ಇರದು… ಬಿರು ಬೇಸಿಗೆಯಲ್ಲಿ ತಮ್ಮ ದಾಹವನ್ನು ತೀರಿಸಿಕೊಳ್ಳಲು ನೀರಿನ ಆಸರೆಯನ್ನು ಹುಡುಕಿಕೊಂಡು ಹೋದ ಎರಡು ಹೆಣ್ಣಾನೆಗಳು ತಮ್ಮ ಪ್ರಾಣವನ್ನೇ ಅಪಾಯಕ್ಕೆ ಸಿಲುಕಿಸಿಕೊಂಡಿದೆ. ಕೀನ್ಯಾದ ಶೆಲ್ಡ್ರಿಕ್ ವೈಲ್ಡ್ ಲೈಫ್ ಟ್ರಸ್ಟ್ ಹೆಣ್ಣಾನೆಗಳು ಕೆಸರಿನಲ್ಲಿ ಸಿಲುಕಿ ಪ್ರಾಣ ರಕ್ಷಣೆಗಾಗಿ ಒದ್ದಾಡುತ್ತಿದ್ದು ಅವುಗಳನ್ನು ಕೆಡಬ್ಲ್ಯೂ ಎಸ್ ಮತ್ತು ವನ್ಯಜೀವಿ ಸಂರಕ್ಷಣೆಯ ಕಾರ್ಯಕರ್ತರ ಸತತ ಕಾರ್ಯಾಚರಣೆಯಿಂದ ರಕ್ಷಣೆ ಮಾಡಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಶೆಲ್ಡ್ರಿಕ್ ಟ್ರಸ್ಟ್ ಹಂಚಿಕೊಂಡ ವಿಡಿಯೋದಲ್ಲಿ ಎರಡು ಆನೆಗಳು ನೀರಿನ ಆಸರೆ ಅರಸಿಕೊಂಡು ಬಂದು ಕೆಸರಿನ ಕೂಪಕ್ಕೆ ಬಿದ್ದು ಮೇಲೆ ಬರಲಾಗದೆ ಒದ್ದಾಡಿ ಒದ್ದಾಡಿ ಕೊನೆಗೆ ಇಡೀ ಜೀವವೇ ಕೆಸರಿನಲ್ಲಿ ಮುಳುಗುವ ಹಂತಕ್ಕೆ ತಲುಪಿತ್ತು ಇನ್ನು ಯಾವ ಪ್ರಯತ್ನವೂ ಸಾಧ್ಯವಾಗದ ಸ್ಥಿತಿ ಆ ಎರಡು ಆನೆಗಳದ್ದಾಗಿತ್ತು ಆದರೆ ಕೆಡಬ್ಲ್ಯೂ ಎಸ್ ಮತ್ತು ವನ್ಯಜೀವಿ ಸಂರಕ್ಷಣೆಯ ಕಾರ್ಯಕರ್ತರು ತಮ್ಮ ಪ್ರಾಣದ ಹಂಗನ್ನು ತೊರೆದು ಹೆಣ್ಣಾನೆಗಳನ್ನು ರಕ್ಷಿಸಿ ಮರುಜೀವ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ : ಮಧ್ಯಪ್ರದೇಶ : ಆಸ್ಪತ್ರೆಯ ಬೆಡ್ ಮೇಲೆ ಆರಾಮವಾಗಿ ಮಲಗಿದ ಶ್ವಾನ : ವಿಡಿಯೋ ವೈರಲ್…

Advertisement

ಘಟನಾ ಸ್ಥಳಕ್ಕೆ ಹೆಲಿಕಾಪ್ಟರ್ ಮೂಲಕ ತಲುಪಿದ ರಕ್ಷಣಾ ತಂಡ ಆನೆಗಳನ್ನು ಮೇಲೆ ಎತ್ತಲು ಒಂದು ಟ್ರ್ಯಾಕ್ಟರ್ , ಎರಡು ಕಾರುಗಳನ್ನು ಬಳಸಿ ಸತತ ಕಾರ್ಯಾಚರಣೆ ನಡೆಸಿದ್ದಾರೆ, ಕೆಸರಿನಲ್ಲಿ ಪೂರ್ತಿ ಜೀವ ಮುಳುಗಿದ ಸ್ಥಿತಿಯಲ್ಲಿದ್ದ ಆನೆಗಳ ಬಳಿ ಕಷ್ಟ ಪಟ್ಟು ಹೋದ ರಕ್ಷಣಾ ತಂಡ ಮೊದಲು ಆನೆಯ ಸುತ್ತ ಇದ್ದ ಕೆಸರು ಮಣ್ಣನು ಹೊರತೆಗೆಯುವ ಕೆಲಸ ಮಾಡಿ ಬಳಿಕ ಹಗ್ಗದ ಮೂಲಕ ಟ್ರ್ಯಾಕ್ಟರ್ ಗೆ ಕಟ್ಟಿ ದಡಕ್ಕೆ ಎಳೆಯಲಾಯಿತು ಅದೇ ರೀತಿ ಇನ್ನೊಂದು ಆನೆಯನ್ನು ಕಾರಿಗೆ ಕಟ್ಟಿ ಕೆಸರಿನಿಂದ ಮೇಲಕ್ಕೆತ್ತಲಾಯಿತು. ಕೊನೆಗೆ ಎರಡೂ ಆನೆಗಳು ಬದುಕಿದೆಯೇ ಬಡಜೀವ ಎಂದು ಕಾಡಿನತ್ತ ಹೆಜ್ಜೆ ಹಾಕಿದೆ.

ರಕ್ಷಣಾ ತಂಡದ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.. ಜಗತ್ತಿನಲ್ಲಿ ಮಾನವೀಯತೆ ಇನ್ನೂ ಜೀವಂತವಿದೆ ಎಂಬುದಕ್ಕೆ ನಿಮ್ಮ ಕಾರ್ಯವೇ ಸಾಕ್ಷಿ ಎಂದು ಓರ್ವರು ಬರೆದಿದ್ದರೆ, ನಿಜಕ್ಕೂ ಆನೆಗಳ ಪಾಲಿಗೆ ನೀವೇ ದೇವರಾಗಿ ಬಂದಿದ್ದೀರಿ ಎಂದು ಇನ್ನೋರ್ವರು ಬರೆದುಕೊಂಡಿದ್ದಾರೆ..

Advertisement

Udayavani is now on Telegram. Click here to join our channel and stay updated with the latest news.

Next