ಮೇಯಲು ಬಿಟ್ಟಿದ್ದ ವೇಳೆ ಮದವೇರಿ ನಾಪತ್ತೆಯಾಗಿದ್ದ ಆನೆ ಲಕ್ಷ್ಮೀಶ, ಕಲ್ಲಳ್ಳ ವಲಯದಲ್ಲಿ ಮೃತಪಟ್ಟಿದೆ. ಉಡುಪಿ ಶಿರೂರು ಮಠಕ್ಕೆ ಸೇರಿದ ಆನೆಯಾಗಿದ್ದ ಲಕ್ಷ್ಮೀಶನನ್ನು ಪುಂಡಾಟ ತಾಳಲಾರದೆ 5 ವರ್ಷಗಳ ಹಿಂದೆ ಕರೆ ತಂದು ಮತ್ತಿಗೋಡು ಶಿಬಿರದಲ್ಲಿ ಆಶ್ರಯ ನೀಡಲಾಗಿತ್ತು.
Advertisement
20 ದಿನಗಳ ಹಿಂದೆ ಮೇಯಲು ಬಿಟ್ಟಿದ್ದ ವೇಳೆ ನಾಪತ್ತೆಯಾಗಿತ್ತು. ಮದವೇರಿದ್ದ ಆನೆ, ಕಾಡಾನೆಗಳ ಹಿಂಡಿನಲ್ಲಿ ಸೇರಿಕೊಂಡು, ಗುದ್ದಾಡಿ ಸಾಕಷ್ಟು ಪೆಟ್ಟು ಮಾಡಿಕೊಂಡಿತ್ತು. ಈ ಮಧ್ಯೆ, ಮಂಗಳವಾರ ಸಂಜೆ ವೇಳೆ ಕಲ್ಲಳ್ಳ ವಲಯದ ಕೊಳಂಗೇರಿ ಹಾಡಿ ಬಳಿ ಆನೆಯನ್ನು ಪತ್ತೆ ಹಚ್ಚಲಾಗಿತ್ತು. ಆನೆಯನ್ನು ಮತ್ತೆ ಸೆರೆ ಹಿಡಿದು, ಶಿಬಿರಕ್ಕೆ ಕರೆ ತರುವ ಸಲುವಾಗಿ ಪಶುವೈದ್ಯ ಡಾ.ಮುಜೀಬ್ ರೆಹಮಾನ್ ಅವರು ಅರವಳಿಕೆ ಚುಚ್ಚುಮದ್ದು ನೀಡಿದ್ದರು. ಇದರಿಂದ ಜ್ಞಾನತಪ್ಪಿ, ನಂತರ ಎಚ್ಚರಗೊಂಡಿದ್ದ ಆನೆ, ಮತ್ತೆ ಅಸ್ವಸ್ಥಗೊಂಡು ಮೃತಪಟ್ಟಿದೆ. ನಾಗರಹೊಳೆ ಹುಲಿ ಯೋಜನೆ ಕ್ಷೇತ್ರ ನಿರ್ದೇಶಕ ಆರ್.ರವಿಶಂಕರ್, ಎ.ಸಿ.ಎಫ್. ಪ್ರಸನ್ನಕುಮಾರ್ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಶವ ಪರೀಕ್ಷೆ ವರದಿ ನಂತರವಷ್ಟೆ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.