ಬೆಂಗಳೂರು: ಕರ್ನಾಟಕ ಮತ್ತು ತಮಿಳುನಾಡು ಗಡಿಯಲ್ಲಿರುವ ಮಲೆ ಮಹದೇಶ್ವರ ಬೆಟ್ಟದಲ್ಲಿ ಆನೆಗಳನ್ನು ಕೊಂದು, ಅವುಗಳ ದಂತ ತೆಗೆದು ನಗರದಲ್ಲಿ ಮಾರಾಟ ಮಾಡಲು ಸಿದ್ಧತೆ ನಡೆಸಿದ್ದ ತಮಿಳುನಾಡು ಮೂಲದ ನಾಲ್ವರು ಆರೋಪಿಗಳನ್ನು ಜಾಲಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಕೊಯಮತ್ತೂರು ಜಿಲ್ಲೆಯ ಉನ್ನಿಕೃಷ್ಣನ್ (35), ಚೆನ್ನೈನ ಜಯಶೀಲನ್ (38), ತಮಿಳುನಾಡು ಸರ್ಕಾರದ ನಿವೃತ್ತ ಸಹಾಯಕ ಎಂಜಿನಿಯರ್, ಸೇಲಂ ಜಿಲ್ಲೆಯ ಮಾದೇಶ್ವರನ್ (59), ವಿಜಯ್ (37) ಬಂಧಿತರು.
ಆರೋಪಿಗಳಿಂದ ಲಕ್ಷಾಂತರ ರೂ. ಮೌಲ್ಯದ ಎಂಟು ಆನೆ ದಂತಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರ ಪೈಕಿ ಉನ್ನಿಕೃಷ್ಣನ್ ಮತ್ತು ಜಯಶೀಲನ್ ಜು.17ರಂದು ಜಾಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕಾಳಿಂಗ ರಾವ್ ವೃತ್ತದ ಸಮೀಪ ಗೋಣಿ ಚೀಲದಲ್ಲಿ ಆನೆ ದಂತಗಳನ್ನು ಇಟ್ಟುಕೊಂಡು ಮಾರಾಟ ಮಾಡುವ ಪ್ರಯತ್ನದಲ್ಲಿದ್ದರು. ಈ ಕುರಿತು ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಕೃತ್ಯ ಬಯಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ನಾಲ್ವರನ್ನೂ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.
ಆರೋಪಿಗಳಾದ ಉನ್ನಿಕೃಷ್ಣನ್ ಮತ್ತು ಜಯಶೀಲನ್ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದು, ವಿಜಯ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದಾನೆ. ಮಾದೇಶ್ವರನ್ ತಮಿಳುನಾಡು ಸರ್ಕಾರದ ಇಲಾಖೆಯೊಂದರಲ್ಲಿ ಸಹಾಯಕ ಎಂಜಿನಿಯರ್ ಆಗಿ ಕೆಲಸ ಮಾಡಿ, ನಿವೃತ್ತಿ ಹೊಂದಿದ್ದಾನೆ. ಕರ್ನಾಟಕ ಮತ್ತು ತಮಿಳುನಾಡು ಗಡಿ ಭಾಗದಲ್ಲಿರುವ ಮಲೆ ಮಹದೇಶ್ವರ ಬೆಟ್ಟದಲ್ಲಿ ಕೆಲ ತಿಂಗಳ ಹಿಂದೆ ಹಂತಕರು ಆನೆಗಳನ್ನು ಕೊಂದು ಅವುಗಳ ದಂತಗಳನ್ನು ಅರಣ್ಯ ಪ್ರದೇಶದ ರಹಸ್ಯ ಸ್ಥಳದಲ್ಲಿ ಅವಿತಿಟ್ಟಿದ್ದರು.
ನಂತರ ಕೆಲ ದಿನಗಳ ಹಿಂದೆ ಹಂತಕರು ಮಾದೇಶ್ವರನ್ ಮತ್ತು ವಿಜಯ್‌ಗೆ ದಂತಗಳನ್ನು ಮಾರಾಟ ಮಾಡಿದ್ದು, ಅನಂತರ ಅವರು ಉನ್ನಿಕೃಷ್ಣನ್ ಮತ್ತು ಜಯಶೀಲನ್‌ಗೆ ಮಾರಾಟ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಗಳು ನಗರಕ್ಕೆ ತಂದು ಮಾರಾಟ ಮಾಡಲು ಯತ್ನಿಸಿದ್ದರು. ವಾಸ್ತು, ದೃಷ್ಟಿ ದೋಷ ನಿವಾರಣೆಗಾಗಿ ಕೆಲವರು ಆನೆ ದಂತಗಳನ್ನು ಮನೆಯಲ್ಲಿ ಇಟ್ಟಿಕೊಳ್ಳುವುದನ್ನೇ ಆರೋಪಿಗಳು ಬಂಡವಾಳ ಮಾಡಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.