ಹುಣಸೂರು: ಮೇವಿಗಾಗಿ ನಾಡಿಗೆ ಬಂದಿದ್ದ ಸಲಗವು ಬೆಳಗಾದರೂ ಅರಣ್ಯಕ್ಕೆ ಮರಳದೆ ಭತ್ತದ ಗದ್ದೆಯಲ್ಲಿ ಬೆಳೆ ತಿಂದು-ತುಳಿದು ಅಡ್ಡಾಡುತ್ತಿದ್ದ ಒಂಟಿ ಸಲಗವನ್ನು ಅರಣ್ಯ ಇಲಾಖೆ ಸಿಬಂದಿ ರೈತರ ಸಹಕಾರದೊಂದಿಗೆ ಕಾಡಿಗಟ್ಟುವಲ್ಲಿ ಯಶಸ್ವಿಯಾಗಿರುವ ಘಟನೆ ತಾಲೂಕಿನ ನೇರಳಕುಪ್ಪೆಯಲ್ಲಿ ನಡೆದಿದೆ.
ನಾಗರಹೊಳೆ ಉದ್ಯಾನವನದ ಹುಣಸೂರು ವನ್ಯಜೀವಿ ವಲಯ ವ್ಯಾಪ್ತಿಯ ನೇರಳಕುಪ್ಪೆ ಗ್ರಾಮದ ಬಸವರಾಜ್, ಶಿವಸ್ವಾಮಿ, ಮಹದೇವಮ್ಮರಿಗೆ ಸೇರಿದ ಭತ್ತದ ಗದ್ದೆಗೆ ರಾತ್ರಿ ಒಂಟಿ ಸಲಗವೊಂದು ದಾಂಗುಡಿ ಇಟ್ಟು ಬೆಳೆಯನ್ನು ತಿಂದು-ತುಳಿದು ನಾಶಪಡಿಸಿದೆ. ಬೆಳಗ್ಗೆಯಾದರೂ ಕಾಡಿನತ್ತ ತೆರಳದೆ ಕಟಾವು ಮಾಡಿದ್ದ ಭತ್ತದ ಬೆಳೆಯನ್ನು ತಿನ್ನುತ್ತ ಕಾಲ ಕಳೆದಿದೆ. ಮುಂಜಾನೆ ಭತ್ತದ ಹೊರೆ ಕಟ್ಟಲು ಗದ್ದೆಯತ್ತ ತೆರಳಿದ ಶಿವಸ್ವಾಮಿ ಕಾಡಾನೆ ಕಂಡು ಕೂಡಲೆ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ.
ಕಾಡಿಗಟ್ಟಲು ಪ್ರಯತ್ನಿಸಿ ವಿಫಲವಾಗಿ ಕೊನೆಗೆ ಅರಣ್ಯ ಇಲಾಖೆ ಸಿಬಂದಿಗಳಿಗೆ ಮಾಹಿತಿ ನೀಡಿದ ಮೇರೆಗೆ ಅರಣ್ಯ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಗ್ರಾಮಸ್ಥರ ನೆರವಿನೊಂದಿಗೆ ಕಾಡಿಗಟ್ಟುವಲ್ಲಿ ಯಶಸ್ವಿಯಾದರು. ಸ್ಥಳಕ್ಕೆ ಅರಣ್ಯ ಸಿಬಂದಿಗಳು ಬೆಳೆ ನಾಶವಾಗಿರುವ ಬಗ್ಗೆ ಮಹಜರು ನಡೆಸಿದ್ದಾರೆ.
ಕಾಡಾನೆ ಕಾಟ ತಡೆಗೆ ಆಗ್ರಹ
ಈ ಭಾಗದಲ್ಲಿ ಪ್ರತಿನಿತ್ಯ ಕಾಡಾನೆಗಳು ಬೆಳೆ ನಾಶ ಪಡಿಸುತ್ತಿವೆ. ಆದರೆ ಇಲಾಖೆವತಿಯಿಂದ ಸೂಕ್ತ ಪರಿಹಾರ ಸಿಗುತ್ತಿಲ್ಲ. ಬೆಳೆ ನಾಶವಾಗಿರುವ ರೈತರಿಗೆ ಸೂಕ್ತ ಪರಿಹಾರವನ್ನು ನೀಡಬೇಕು ಹಾಗೂ ಕಾಡಾನೆ ಹೊರಬಾರದಂತೆ ನೋಡಿಕೊಳ್ಳಲು ತಾತ್ಕಾಲಿಕವಾಗಿ ರಾತ್ರಿ ಕಾವಲು ಪಡೆಯನ್ನು ನೇಮಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.