ಆನೇಕಲ್: ಅರಣ್ಯದಲ್ಲಿದ್ದ 50 ಅಡಿ ಆಳದ ಕೂಪಕ್ಕೆ ಬಿದ್ದು ಪರದಾಡುತ್ತಿದ್ದ ಆನೆ ಮರಿಯನ್ನು ಅರಣ್ಯ ಸಿಬಂದಿಗಳು ಕಾರ್ಯಾಚರಣೆ ನಡೆಸಿ ತಾಯಿಯ ಮಡಿಲು ಸೇರಿಸಿದ ಘಟನೆ ಕರ್ನಾಟಕ -ತಮಿಳುನಾಡು ಗಡಿ ಭಾಗಕ್ಕೆ ಹೊಂದಿಕೊಂಡಿರುವ ಪಾವಡಪಟ್ಟಿ ಎಂಬಲ್ಲಿ ನಡೆದಿದೆ.
ಆಹಾರ ಅರಸಿ ನಾಡಿನತ್ತ ಬಂದಿದ್ದ ಕಾಡಾನೆ ಹಿಂಡಿನಲ್ಲಿದ್ದ ಆನೆ ಮರಿ ಆಯ ತಪ್ಪಿ ಕೂಪಕ್ಕೆ ಬಿದ್ದಿದೆ. ಈ ವೇಳೆ ಜೊತೆಯಲ್ಲಿದ್ದ ಆನೆಗಳು ಮುಂದಕ್ಕೆ ಸಾಗಿದ್ದು ಮರಿ ಆನೆ ಮೇಲಕ್ಕೆ ಬರಲು ಸಾಧ್ಯವಾಗದೆ ರೋದಿಸುತ್ತಿತ್ತು.
ಮರಿಯಾನೆಯ ರೋದನ ಗಮನಿಸಿದ ಸಾರ್ವಜನಿಕರು ಮತ್ತು ತಮಿಳುನಾಡು ಅರಣ್ಯ ಇಲಾಖೆ ಸಿಬಂದಿಗಳು ಹಗ್ಗದಿಂದ ನೇಯ್ದ ಬಲೆಯನ್ನು ಬಳಸಿಕೊಂಡು ಕೂಪಕ್ಕೆ ಇಳಿದು ಆನೆ ಮರಿಯನ್ನು ಹರಸಾಹಸ ಪಟ್ಟು ಮೇಲಕ್ಕೆತರುವಲ್ಲಿ ಯಶಸ್ವಿಯಾಗಿದ್ದಾರೆ.ಕಾರ್ಯಾಚರಣೆ ವೇಳೆ ಆನೆ ಮರಿ ಹೆದರ ಬಾರದು ಎಂದು ಕಣ್ಣಿಗೆ ಬಟ್ಟೆಯನ್ನು ಕಟ್ಟಲಾಗಿತ್ತು.
ಸಾನಮಾವು ಅರಣ್ಯ ವ್ಯಾಪ್ತಿಯಲ್ಲಿ ಮರಿಯನ್ನು ತಾಯಿ ಜೊತೆ ಸೇರಿಸಿರುವುದಾಗಿ ಅರಣ್ಯ ಸಿಬಂದಿಗಳು ತಿಳಿಸಿದ್ದಾರೆ.