Advertisement

ಆನೆಕಾಲು ರೋಗ: ಡಿಇಸಿ ಮಾತ್ರೆ ನುಂಗಿಸುವ ಕಾರ್ಯಕ್ಕೆ ಚಾಲನೆ

09:42 AM Feb 22, 2022 | Team Udayavani |

ಕಲಬುರಗಿ: ಇಲ್ಲಿನ ಮಾಣಿಕೇಶ್ವರಿ ನಗರದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಆನೆಕಾಲು ರೋಗ ನಿರ್ಮೂಲನೆಗಾಗಿ ಐವರ್‌ಮೇಕ್ಟಿನ್‌, ಡಿಇಸಿ ಮತ್ತು ಅಲ್ಬೆಂಡೋಜೋಲ್‌ ತ್ರಿವಳಿ ಮಾತ್ರೆಗಳನ್ನು ನುಂಗಿಸುವ ಕಾರ್ಯಕ್ರಮಕ್ಕೆ ವಿಧಾನ ಪರಿಷತ್‌ ಮಾಜಿ ಸದಸ್ಯ ತಿಪ್ಪಣ್ಣಪ್ಪ ಕಮಕನೂರು ಚಾಲನೆ ನೀಡಿದರು.

Advertisement

ನಂತರ ಮಾತನಾಡಿದ ಅವರು, ಜಿಲ್ಲೆಯನ್ನು ಆನೆಕಾಲು ರೋಗದಿಂದ ಮುಕ್ತಗೊಳಿಸಲು ಆರೋಗ್ಯ ಇಲಾಖೆ ಹಾಗೂ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರು, ಸಹಾಯಕಿಯರು ಜಂಟಿಯಾಗಿ ಕಾರ್ಯನಿರ್ವಹಿಸಿ ಶ್ರಮಿಸಬೇಕು. ಸಾರ್ವಜನಿಕರು ತಪ್ಪದೇ ವಯಸ್ಸು ಮತ್ತು ಎತ್ತರದ ಅನುಗುಣವಾಗಿ ಈ ತ್ರಿವಳಿ ಮಾತ್ರೆಗಳನ್ನು ಸೇವಿಸಬೇಕೆಂದರು.

ಪಾಲಿಕೆ ಸದಸ್ಯೆ ಅನುಪಮಾ ರಮೇಶ ಮಾತನಾಡಿ, ಪ್ರತಿಯೊಬ್ಬರು ಮೇಲ್ನೋಟಕ್ಕೆ ಆರೋಗ್ಯವಂತರಾಗಿ ಕಂಡರೂ ತಮಗೆ ತಿಳಿಯದಂತೆಯೇ ತಮ್ಮ ರಕ್ತದಲ್ಲಿ ಆನೆಕಾಲು ರೋಗ ಉಂಟು ಮಾಡುವ ಮೈಕ್ರೋ ಫೈಲೇರಿಯಾ ಜಂತುಗಳು ಇರುವ ಸಾಧ್ಯತೆ ಇದೆ. ಕ್ಯೂಲೇಕ್ಸ್‌ ಸೊಳ್ಳೆಗಳು ಆನೆಕಾಲು ರೋಗ ಇದ್ದವರಿಗೆ ಕಚ್ಚಿ ಆರೋಗ್ಯವಂತರಿಗೆ ಕಚ್ಚಿದರೆ ಈ ಕಾಯಿಲೆ ಒಬ್ಬರಿಂದ ಒಬ್ಬರಿಗೆ ಬರುತ್ತದೆ. ವರ್ಷದಲ್ಲಿ ಕೇವಲ ಒಂದು ಬಾರಿ ತ್ರಿವಳಿ ಮಾತ್ರೆಗಳನ್ನು ಸೇವನೆ ಮಾಡುವುದರಿಂದ ಆನೆಕಾಲು ರೋಗ ನಿರ್ಮೂಲನೆ ಮಾಡಲು ಸಾಧ್ಯವಿದೆ ಎಂದರು.

ಆರೋಗ್ಯ ಇಲಾಖೆಯ ಸಹನಿರ್ದೇಶಕ ಡಾ| ಶಂಕ್ರಪ್ಪ ಮೈಲಾರಿ ಮಾತನಾಡಿ, ಸಾರ್ವಜನಿಕರು, ಶಾಲಾ, ಕಾಲೇಜು ಮತ್ತು ರಾಜ್ಯ ಸರ್ಕಾರಿ ಕಚೇರಿ, ಹಾಸ್ಟೆಲ್‌, ಕಾರ್ಮಿಕ ಕಾರ್ಖಾನೆಗಳಿಗೆ ತ್ರಿವಳಿ ಮಾತ್ರೆಗಳನ್ನು ನುಂಗಿಸಲು ಬಂದಾಗ ಆರೋಗ್ಯ ಇಲಾಖೆ ಸಿಬ್ಬಂದಿಗೆ ಸಹಕರಿಸಿ ಮಾತ್ರೆಗಳನ್ನು ನುಂಗಬೇಕೆಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ಶರಣಬಸಪ್ಪ ಗಣಜಲಖೇಡ ಮಾತನಾಡಿ, ಆನೆಕಾಲು ರೋಗ ನಿರ್ಮೂಲನೆ ಮಾಡಲು ಸಾರ್ವಜನಿಕರು ಸಹಕಾರ ನೀಡಬೇಕು. ಈ ರೋಗಕ್ಕೆ ಈ ತ್ರಿವಳಿ ಮಾತ್ರೆಗಳೇ ರಾಮಬಾಣವಾಗಿದ್ದು, ತಪ್ಪದೇ ಮಾತ್ರೆಗಳನ್ನು ನುಂಗಬೇಕೆಂದರು.

Advertisement

ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ| ಬಸವರಾಜ ಗುಳಗಿ ಮಾತನಾಡಿ, ತ್ರಿವಳಿ ಮಾತ್ರೆಗಳನ್ನು ನುಂಗಿಸುವ ಕಾರ್ಯಕ್ರಮ ಫೆ.25ರವರೆಗೆ ಶಾಲಾ-ಕಾಲೇಜು ಹಾಗೂ ಮಾ.3ರಿಂದ 21 ರವರೆಗೆ ಮನೆ-ಮನೆಗೆ ತೆರಳಿ ಮಾತ್ರೆಗಳನ್ನು ನುಂಗಿಸಲಾಗುತ್ತದೆ ಎಂದರು.

ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ| ವಿವೇಕಾನಂದ ರೆಡ್ಡಿ, ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ| ರಾಜುಕುಮಾರ ಕುಲಕರ್ಣಿ, ತಾಲೂಕು ಆರೋಗ್ಯಾಧಿಕಾರಿ ಡಾ| ಮಾರುತಿರಾವ ಕಾಂಬಳೆ, ಮಾಣಿಕೇಶ್ವರಿ ನಗರ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಚೇತನ ಹಾಗೂ ಕೀಟಶಾಸ್ತ್ರಜ್ಞರಾದ ಗಂಗೋತ್ರಿ, ಚಾಮರಾಜ ದೊಡಮನಿ, ಜಿಲ್ಲಾ ವಿಬಿಡಿ ಸಮಾಲೋಚಕ ಕಾರ್ಣಿಕ ಕೋರೆ, ಬಸವರಾಜ ಕಾಂತ, ದಯಾನಂದ ಬೆಂಗಳೂರು, ಗಣೇಶ ಚಿನ್ನಾಕಾರ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯಧ್ಯಕ್ಷ ಚಂದ್ರಕಾಂತ ಯೇರಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಾರ್ವಜನಿಕರು, ಜಿಮ್ಸ್‌ ವೈದ್ಯಕೀಯ ವಿದ್ಯಾಲಯದ ವಿದ್ಯಾರ್ಥಿಗಳು ಶಾಲಾ ಶಿಕ್ಷಕರು ಹಾಗೂ ಅಂಗನವಾಡಿ, ಆಶಾ-ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next