Advertisement

ಆನೆಗಳ ತವರು ಕರುನಾಡು; ಹೇಗಾಯಿತು ಗಣತಿ

09:47 AM May 23, 2023 | Team Udayavani |

ರಾಜ್ಯದ 15ಕ್ಕೂ ಹೆಚ್ಚು ಜಿಲ್ಲೆಗಳ 30 ಅರಣ್ಯ ವಿಭಾಗಗಳಲ್ಲಿ ಆನೆಗಳ ಗಣತಿ ಬುಧವಾರದಿಂದ ಶುಕ್ರವಾರದ ವರೆಗೆ ನಡೆಸಲಾಗಿದೆ. ಕರ್ನಾಟಕ ಮಾತ್ರವಲ್ಲದೆ, ದಕ್ಷಿಣದ ರಾಜ್ಯಗಳಾದ ಕೇರಳ, ತಮಿಳುನಾಡು, ಗೋವಾ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದಲ್ಲೂ ಅರಣ್ಯ ಇಲಾಖೆಯಿಂದ ಗಣತಿ ಕಾರ್ಯ ನಡೆಸಲಾಗುತ್ತಿದೆ.

Advertisement

ಆನೆ ಗಣತಿ ಉದ್ದೇಶ
ದೇಶದಲ್ಲೇ ಅತೀ ಹೆಚ್ಚು ಹುಲಿ ಮಾತ್ರವಲ್ಲ ಅತೀ ಹೆಚ್ಚು ಆನೆಗಳನ್ನೂ ಹೊಂದಿರುವ ರಾಜ್ಯ ಕರ್ನಾಟಕ. ರಾಜ್ಯದಲ್ಲಿ ಅಂದಾಜು ಆರು ಸಾವಿರಕ್ಕೂ ಹೆಚ್ಚು ಆನೆಗಳಿವೆ. ಈ ಆನೆಗಳ ಸಂಖ್ಯೆ ಹೆಚ್ಚಾಗಿದೆಯೇ? ಕಡಿಮೆಯಾಗಿದೆಯೇ? ಎಂಬುದನ್ನು ತಿಳಿಯುವ ಸಲುವಾಗಿ ಗಣತಿ ನಡೆಯುತ್ತದೆ.

2017ರಲ್ಲಿ ಆಗಿತ್ತು ಗಣತಿ
ಕಳೆದ ಬಾರಿ 2017ರಲ್ಲಿ ಗಣತಿ ನಡೆಸಿದ ಪ್ರಕಾರ ಇಡೀ ಭಾರತದಲ್ಲಿ 25,000ದಷ್ಟು ಆನೆಗಳಿದ್ದರೆ, ಕರ್ನಾಟಕದಲ್ಲಿದ್ದ ಆನೆಗಳ ಸಂಖ್ಯೆ 6,049. ದಕ್ಷಿಣ ಭಾರತದಲ್ಲಿ 15ರಿಂದ 16 ಸಾವಿರ ಆನೆಗಳಿರುವ ಅಂದಾಜು ಮಾಡಲಾಗಿತ್ತು. ಅಂದರೆ ಭಾರತದಲ್ಲಿರುವ ಅರ್ಧದಷ್ಟು ಆನೆಗಳು ದಕ್ಷಿಣ ಭಾರತದಲ್ಲೇ ಇರುವುದು ವಿಶೇಷ. ರಾಜ್ಯದ ಬಂಡೀಪುರ, ಬಿಳಿಗಿರಿ ರಂಗನಾಥಸ್ವಾಮಿ ಹುಲಿ ರಕ್ಷಿತ ಅರಣ್ಯ, ನಾಗರಹೊಳೆ, ಉತ್ತರ ಕನ್ನಡದ ಅಣಶಿ, ಚಿಕ್ಕಮಗಳೂರಿನ ಭದ್ರಾ ಅರಣ್ಯಗಳೂ ಸೇರಿ, ಕೊಡಗು, ಹಾಸನ, ಮೈಸೂರು, ಚಾಮರಾಜನಗರ, ರಾಮನಗರ ಸಹಿತ ದಕ್ಷಿಣ ಕರ್ನಾಟಕದ ಬಹಳಷ್ಟು ಜಿಲ್ಲೆಗಳಲ್ಲಿ ಆನೆಗಳ ಗಣತಿ ನಡೆದಿದೆ.

ಹೇಗಾಯಿತು ಗಣತಿ
1 ಮೊದಲನೇ ದಿನ ನೇರ ಹಾಗೂ ಪರೋಕ್ಷ ಮೌಲ್ಯಮಾಪನ ಮಾಡಲಾಗಿದೆ. ಇದರಲ್ಲಿ ಆನೆಗಳನ್ನು ನೇರವಾಗಿ ನೋಡುವ ಮೂಲಕ ಇವು ಸಾಗಿರುವ ಕುರುಹುಗಳನ್ನು ಪತ್ತೆಹಚ್ಚುವ ಮೂಲಕ ಗಣತಿ ನಡೆಸಲಾಗಿದೆ.

2 ಎರಡನೇ ದಿನ ಆನೆ ನಡೆದಿರುವ ಕಾರಿಡಾರ್‌ಗಳಲ್ಲಿ ಇವು ಹಾಕಿರುವ ಲದ್ದಿಯನ್ನು ಪತ್ತೆ ಹಚ್ಚಿ ಇದನ್ನು ವಿಶ್ಲೇಷಿಸುವ ಮೂಲಕ ಇದರ ಗಣತಿ ನಡೆಸಲಾಗಿದೆ. ಇದು ಪರೋಕ್ಷ ಎಣಿಕೆ ಪದ್ಧ‌ತಿ.

Advertisement

3 ಮೂರನೇ ದಿನ ನೀರಿನ ಮೂಲಗಳಿಗೆ ಆನೆಗಳು ಬರುವ ಮಾಹಿತಿ ಸಂಗ್ರಹಿಸಲಾಗಿದೆ. ಅಂದರೆ ನೀರು ಅರಸಿ ಬರುವ ಆನೆಗಳ ಗುಂಪಿನಲ್ಲಿ ಎಷ್ಟು ಗಂಡು, ಹೆಣ್ಣು ಹಾಗೂ ಮರಿ ಆನೆಗಳಿದ್ದವು ಎನ್ನುವುದನ್ನು ನೇರ ಹಾಗೂ ಹೆಜ್ಜೆಗಳ ಮೂಲಕ ಪತ್ತೆ ಮಾಡಲಾಗಿದೆ.

2017ರಲ್ಲಿ ಬಿಆರ್‌ಟಿಯಲ್ಲಿ 600 ಆನೆಗಳು
ಬಿಆರ್‌ಟಿ ಹುಲಿ ರಕ್ಷಿತ ಅರಣ್ಯ ಪ್ರದೇಶದಲ್ಲಿ 2017ರಂದು ಆನೆಗಣತಿ ನಡೆದಿತ್ತು. ಆಗ ಇಲ್ಲಿ 600ಕ್ಕೂ ಹೆಚ್ಚು ಆನೆಗಳಿರುವುದನ್ನು ಅರಣ್ಯ ಇಲಾಖೆ ಗುರುತಿಸಿತ್ತು. ಈಗ ಮತ್ತೆ ಆನೆ ಗಣತಿಗೆ ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ. ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಿರುವ ಸಾಧ್ಯತೆಗಳು ಇದ್ದು ಬಿಆರ್‌ಟಿ ಅರಣ್ಯ ಪ್ರದೇಶ ಆನೆಗಳ ಆವಾಸಕ್ಕೆ ಯೋಗ್ಯವಾಗಿರುವುದರಿಂದ ಈ ಸಂಖ್ಯೆ ವೃದ್ಧಿಸಿರುವ ನಿರೀಕ್ಷೆಯಲ್ಲಿ ಅರಣ್ಯ ಇಲಾಖೆ ಇದೆ.

ಭಾರತೀಯ ವಿಜ್ಞಾನ ಸಂಸ್ಥೆಯ ಮಾರ್ಗದರ್ಶನ
ಆನೆ ಗಣತಿಗೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ವಿಜ್ಞಾನಿಗಳು ಮಾರ್ಗದರ್ಶನ ನೀಡಿದ್ದಾರೆ. ವನ್ಯಜೀವಿ ತಜ್ಞರಾಗಿರುವ ಡಾ| ರಾಮನ್‌ ಸುಕುಮಾರನ್‌, ಡಾ| ನಿಶಾಂತ್‌ ಅವರು ಆನೆಗಳ ದತ್ತಾಂಶ ಸಂಗ್ರಹ, ಕ್ಷೇತ್ರ ಕಾರ್ಯದಲ್ಲಿ ತೊಡಗುವವರಿಗೆ ಬೇಕಾದ ಮಾರ್ಗಸೂಚಿಗಳನ್ನು ಸಿದ್ಧಪಡಿಸಿದ್ದರು. ಇವರ ಮಾರ್ಗದರ್ಶನದಂತೆಯೇ ಗಣತಿ ನಡೆದಿದ್ದು ಇದಕ್ಕಾಗಿ ಈಗಾಗಲೇ ಸಿಬಂದಿಗೆ ಪೂರ್ವಭಾವಿ ತರಬೇತಿಯನ್ನು ನೀಡಲಾಗಿತ್ತು.

ನಾಗರ ಹೊಳೆಯಲ್ಲೇ ಹೆಚ್ಚು
ರಾಜ್ಯದಲ್ಲಿ ಒಟ್ಟಾರೆಯಾಗಿ 8,976 ಕಿ.ಮೀ. ವಿಸ್ತೀರ್ಣದ ಅರಣ್ಯವಿದೆ. ಈ ಭಾಗದಲ್ಲಿ 2017ರಲ್ಲಿ ಆನೆಗಳ ಗಣತಿ ಮಾಡಲಾಗಿತ್ತು. ಈ ಸಂದರ್ಭದಲ್ಲಿ ನಾಗರಹೊಳೆ ಅಭಯಾರಣ್ಯ ದಲ್ಲೇ ಅತೀ ಹೆಚ್ಚು ಆನೆಗಳಿರುವುದು ಕಂಡು ಬಂದಿತ್ತು. ಅಂದರೆ ಇಲ್ಲಿ ಪ್ರತೀ ಕಿ.ಮೀ. ಅರ ಣ್ಯಕ್ಕೆ 1.54 ಆನೆ  ಅಥವಾ ಪ್ರತೀ ಎರಡು ಕಿ.ಮೀ.ಗೆ ಮೂರು ಆನೆಗಳಿದ್ದವು.

ಬಿಆರ್‌ಟಿಯಲ್ಲಿ 150 ಸಿಬಂದಿ
ಬಿಆರ್‌ಟಿ ಹುಲಿ ರಕ್ಷಿತ ಅರಣ್ಯ ಪ್ರದೇಶವು 600ಕ್ಕೂ ಹೆಚ್ಚು ಚ.ಕಿ.ಮೀ. ವ್ಯಾಪ್ತಿಯನ್ನು ಹೊಂದಿದೆ. ಯಳಂದೂರು, ಕೊಳ್ಳೇಗಾಲ, ಬೈಲೂರು, ಪುಣಜನೂರು, ಕೆ. ಗುಡಿ, ಚಾಮರಾಜನಗರ ವಲಯಗಳನ್ನು ಹೊಂದಿದೆ. 150 ಕ್ಕೂ ಹೆಚ್ಚು ಸಿಬಂದಿ ಗಣತಿ ನಡೆಸಿದ್ದಾರೆ. ಒಂದು ಬೀಟ್‌ನಲ್ಲಿ ಮೂರು ಜನ ನುರಿತ ಅರಣ್ಯ ಸಿಬಂದಿ ಇದ್ದು, ಪ್ರತೀ ದಿನ ಬೆಳಗ್ಗೆ 6 ರಿಂದ ಸಂಜೆ 6 ಗಂಟೆವರೆಗೆ ಆನೆ ಗಣತಿ ಕಾರ್ಯ ನಡೆಯಿತು.

ಎಲ್ಲೆಲ್ಲಿ ಗಣತಿ?
ಚಾಮರಾಜನಗರ ಜಿಲ್ಲೆಯ ಗುಂಡ್ಲು ಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಚಾಮರಾಜನಗರ ತಾಲೂಕಿನ ಬಿಳಿಗಿರಿರಂಗ ನಾಥಸ್ವಾಮಿ ದೇವಾಲಯ ಹುಲಿ ಸಂರಕ್ಷಿತ ಪ್ರದೇಶ, ಹನೂರು ತಾಲೂ ಕು ವ್ಯಾಪ್ತಿಯಲ್ಲಿ ಬರುವ ಮಲೆ ಮಹದೇಶ್ವರ ವನ್ಯಧಾಮ ಮತ್ತು ಕಾವೇರಿ ವನ್ಯಧಾಮದಲ್ಲಿ ಅಧಿಕಾರಿಗಳು ಮತ್ತು ಸಿಬಂದಿ ಆನೆಗಳ ಗಣತಿ ನಡೆಸಿದ್ದಾರೆ.

ಬಂಡೀಪುರದಲ್ಲಿ 115 ಬೀಟ್‌ಗಳಲ್ಲಿ, ಬ್ಲಾಕ್‌ಗಳಿಗೆ 3 ಸಿಬಂದಿಯಂತೆ 345 ಇಲಾಖೆಯ ಸಿಬಂದಿಗಳನ್ನು ಎಣಿಕೆ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳ ಲಾಗಿತ್ತು ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ.ರಮೇಶ್‌ ಕುಮಾರ್‌ ತಿಳಿಸಿದ್ದಾರೆ.

ಮಳೆ ಆರಂಭವಾಗಿರುವುದರಿಂದ ಕಾಡ್ಗಿಚ್ಚಿನ ಭಯ ಇಲ್ಲ. ಹಾಗಾಗಿ ಎಲ್ಲ ಸಿಬಂದಿಯೂ ಗಣತಿ ಕಾರ್ಯದಲ್ಲಿ ನಿರತರಾಗಿದ್ದರು ಎಂದು ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶದ ಡಿಸಿಎಫ್ ಮತ್ತು ನಿರ್ದೇಶಕಿ ದೀಪ್‌ ಜೆ.ಕಾಂಟ್ರ್ಯಾಕ್ಟರ್‌ ತಿಳಿಸಿದ್ದಾರೆ.

ಕೇಂದ್ರ ಸರಕಾರದ ಆದೇಶದ ಪ್ರಕಾರ ಪ್ರತೀ ನಾಲ್ಕು ಅಥವಾ ಐದು ವರ್ಷಗಳಿಗೊಮ್ಮೆ ಆನೆ ಗಣತಿ ನಡೆಸಲಾಗುತ್ತದೆ. ಆದರೆ ಈ ಬಾರಿ ಕೇಂದ್ರದಿಂದ ಯಾವುದೇ ನಿರ್ದೇಶನ ಬಂದಿಲ್ಲ. ಇಲಾಖೆಯಿಂದಲೇ ಗಣತಿ ನಡೆಸಲಾಗಿದೆ. ಕರ್ನಾಟಕದ ಜತೆಗೆ ತಮಿಳು ನಾಡು, ಕೇರಳ, ಆಂಧ್ರ, ಮಹಾ ರಾಷ್ಟ್ರ ಹಾಗೂ ಗೋವಾ ರಾಜ್ಯಗಳಲ್ಲೂ ಆನೆ ಗಣತಿ ಆಯೋಜಿಸುವ ಕುರಿತು ಕೇಳಿಕೊಂಡಿದ್ದರಿಂದ ಅಲ್ಲಿಯೂ ಗಣತಿ ನಡೆದಿದೆ. ಎಲ್ಲ ರಾಜ್ಯಗಳು ಒಂದೆರಡು ತಿಂಗಳಲ್ಲಿ ವರದಿ ಅಂತಿಮಗೊಳಿಸಲಿವೆ.
ಕುಮಾರ್‌ ಪುಷ್ಕರ್‌, ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ವನ್ಯಜೀವಿ)

ಆನೆಗಳ ಸಂಖ್ಯೆ ಹೆಚ್ಚಳ ನಿರೀಕ್ಷೆ
ಜಿಲ್ಲೆಯ ನಾಲ್ಕೂ ವನ್ಯಧಾಮಗಳಲ್ಲಿ ಆನೆಗಳು ಸಾಕಷ್ಟು ಸಂಖ್ಯೆಯಲ್ಲಿವೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದವು ಆನೆಗಳ ಸಂಖ್ಯೆಯಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ಹಿಂದಿನ 2017ರ ಗಣತಿ ಪ್ರಕಾರ ಬಂಡೀಪುರದಲ್ಲಿ 3,046 ಆನೆಗಳಿವೆ. ಬಿಆಟಿರ್‌ ಹುಲಿ ಸಂರಕ್ಷಿತ ಪ್ರದೇಶದಲ್ಲಿ 2017ರ ಗಣತಿ ಪ್ರಕಾರ 617 ಆನೆಗಳಿವೆ. ಮಲೆ ಮಹದೇಶ್ವರ ವನ್ಯಧಾಮದಲ್ಲಿ 300ರಷ್ಟು ಆನೆಗಳಿವೆ.ಆರು ವರ್ಷಗಳಿಂದ ಗಣತಿ ನಡೆಯದೇ ಇರುವುದರಿಂದ ಈ ಬಾರಿಯ ಗಣತಿಯಲ್ಲಿ ಆನೆಗಳ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ. ಬಂಡೀಪುರದಲ್ಲಿ ಆನೆಗಳ ಸಂಖ್ಯೆ 3,100 ದಾಟುವ ನಿರೀಕ್ಷೆ ಇದೆ. ಬಿಆರ್‌ಟಿಯಲ್ಲಿರುವ ಆನೆಗಳ ಸಂಖ್ಯೆ 650 ಮೀರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

-ಕೆ.ಎಸ್‌. ಬನಶಂಕರ ಆರಾಧ್ಯ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next