ಗುಂಡ್ಲುಪೇಟೆ: ಬೆಳೆ ಕಾವಲಿಗೆಂದು ಜಮೀನಿನಲ್ಲಿ ಮಲಗಿದ್ದ ವೇಳೆ ಕಾಡಾನೆ ದಾಳಿಗೆ ಸಿಲುಕಿ ವ್ಯಕ್ತಿಯೊರ್ವ ಮೃತಪಟ್ಟಿದ್ದು, ಆತನ ಮಗ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಶಿವಪುರ ಗ್ರಾಮದಲ್ಲಿ ಗುರುವಾರ (ಜೂ.16) ಮುಂಜಾನೆ ನಡೆದಿದೆ.
ಶಿವಪುರ ಗ್ರಾಮದ ನಿವಾಸಿ ಬೆಳ್ಳಶೆಟ್ಟಿ(55) ಮೃತ ವ್ಯಕ್ತಿಯಾಗಿದ್ದು, ಇವರ ಮಗ ಮಹೇಶ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೆಳೆ ರಕ್ಷಣೆ ಮಾಡುವ ಸಲುವಾಗಿ ಜಮೀನಿನಲ್ಲಿ ಕಾವಲು ಕಾಯುವಾಗ ಬೆಳಗಿನ ಜಾವ ದಿಢೀರನೆ ಆನೆಯೊಂದು ದಾಳಿ ನಡೆಸಿದೆ. ದಾಳಿ ಪರಿಣಾಮ ಬೆಳ್ಳಶೆಟ್ಟಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಸುದ್ದಿ ತಿಳಿದು ಸ್ಥಳಕ್ಕೆ 112 ಪೊಲೀಸ್ ಸಿಬ್ಬಂದಿ ದೌಡಾಯಿಸಿ ಗಾಯಾಳು ಮಹೇಶ್‌ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದಿದ್ದು, ಪರಿಹಾರದ ಭರವಸೆ ನೀಡಿದ್ದಾರೆ.
Related Articles
ಇದನ್ನೂ ಓದಿ:ಚಾರ್ಮಾಡಿ ಘಾಟ್‌ನಲ್ಲಿ ಗೂಡ್ಸ್ ವಾಹನ ಪಲ್ಟಿ: ಮೂವರು ಗಂಭೀರ
ರೈತರ ಆಕ್ರೋಶ: ಶಿವಪುರ ಗ್ರಾಮದ ಸುತ್ತಮುತ್ತಲು ಪದೇ ಪದೇ ಕಾಡು ಪ್ರಾಣಿಗಳು ದಾಳಿ ನಡೆಸಿ ಫಸಲು ನಾಶಪಡಿಸುತ್ತಿದ್ದವು. ಈ ಬಗ್ಗೆ ಮನವಿ ಮಾಡಿದರೂ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೇತ್ತುಕೊಳ್ಳದ ಹಿನ್ನೆಲೆ ರೈತರು ಬೆಳೆ ಕಾವಲಿಗಾಗಿ ಜಮೀನಿಗೆ ತೆರಳುತ್ತಿದ್ದರು. ಇದೀಗ ರೈತ ಬೆಳ್ಳಶೆಟ್ಟಿ ಅವರನ್ನು ಆನೆ ತುಳಿದು ಸಾಯಿಸಿದೆ. ಈ ಘಟನೆ ಅರಣ್ಯ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಸಂಭವಿಸಿದೆ. ಆದ್ದರಿಂದ ಮೃತ ರೈತನ ಕುಟುಂಬಕ್ಕೆ ಸೂಕ್ತ ಪರಿಹಾರ ಹಾಗೂ ಗಾಯಾಳುವಿಗೆ ಚಿಕಿತ್ಸಾ ವೆಚ್ಚ ಭರಿಸಬೇಕು. ಜೊತೆಗೆ ಅರಣ್ಯ ಇಲಾಖೆಯಲ್ಲಿ ನೌಕರಿ ನೀಡಬೇಕು ಎಂದು ರೈತ ಮುಖಂಡ ಶಿವಪುರ ಮಹದೇವಪ್ಪ ಒತ್ತಾಯಿಸಿದ್ದಾರೆ.