ಸುಬ್ರಹ್ಮಣ್ಯ: ಕಡಬ ತಾಲೂಕಿನ ನೂಜಿಬಾಳ್ತಿಲ ಹಾಗೂ ರೆಂಜಿಲಾಡಿ ಗ್ರಾಮಗಳಲ್ಲಿ ಕಾಡಾನೆಗಳು ಬೀಡು ಬಿಟ್ಟಿದ್ದು ರಾತ್ರಿ ವೇಳೆ ತೋಟಗಳಿಗೆ ಲಗ್ಗೆ ಇಟ್ಟು ಕೃಷಿ ಹಾನಿ ಮಾಡುತ್ತಿವೆ. ರೆಂಜಿಲಾಡಿ ಗ್ರಾಮದ ಕೆಲವಡೆ ಹಗಲಲ್ಲೇ ಕಾಣ ಸಿಗುತ್ತಿದ್ದು, ಶಾಲಾ ಮಕ್ಕಳು ಸೇರಿದಂತೆ ಜನತೆ ಆತಂಕಕ್ಕೊಳಗಾಗಿದ್ದಾರೆ.
ರೆಂಜಿಲಾಡಿ ಗ್ರಾಮದ ಬಾಂತಾಜೆ, ಸಾಕೋಟೆ, ಪಳ್ಳತ್ತಡ್ಕ, ಕಾನೋಳಿ ಭಾಗದಲ್ಲಿ, ಪಾಡ್ಲ ಪರಿಸರದಲ್ಲಿ ಆನೆಗಳು ಬೀಡುಬಿಟ್ಟಿವೆ. ಎರಡು ಕಾಡಾನೆ ಹಿಂಡುಗಳು ಇವೆ ಎನ್ನಲಾಗಿದ್ದು, ಒಂದು ಹಿಂಡಿನಲ್ಲಿ ಮರಿ ಆನೆಯೂ ಇದೆ ಎನ್ನಲಾಗಿದೆ. ದೊಡ್ಡ ಆನೆಯೊಂದು ಸಂಚರಿಸುವ ವೀಡಿಯೋ ಕೂಡ ಹರಿದಾಡುತ್ತಿದೆ. ಕೆಲವು ಮನೆಗಳ ಅಂಗಳಕ್ಕೂ ಆನೆ ಬಂದಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಅರಣ್ಯ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.