ಮೈಸೂರು: ಕೇಂದ್ರ ಸರ್ಕಾರದ ಈ ಬಾರಿಯ ಬಜೆಟ್‌ನಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗುವ ಸಾಕಷ್ಟು ಯೋಜನೆಗಳಿದ್ದು, ಅವುಗಳನ್ನು ಸಾರ್ವಜನಿಕರಿಗೆ ತಿಳಿಸುವ ಉದ್ದೇಶದಿಂದ ಪುಸ್ತಕ ಹೊರತರಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ನಗರ ಬಿಜೆಪಿ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಕೇಂದ್ರ ಸರ್ಕಾರದ 2021-22ನೇ ಸಾಲಿನ ಆಯವ್ಯಯ ಕುರಿತ ವಿಮರ್ಶೆ ಮತ್ತು ವಿಶ್ಲೇಷಣೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ಸಾಕಷ್ಟು ಉತ್ತಮ ಅಂಶಗಳಿವೆ. ಅವುಗಳ ಜಾರಿ ಹಾಗೂ ಅನುಕೂಲದ ಬಗ್ಗೆ ತಿಳಿಸುವ ಅಗತ್ಯವಿದೆ. ಇದಕ್ಕಾಗಿ ಕನ್ನಡದಲ್ಲಿ ಪುಸ್ತಕ ಮುದ್ರಿಸಲಾಗುವುದು ಎಂದರು.
ಮೈಸೂರಿಗೆ ಈ ಬಜೆಟ್‌ನಲ್ಲಿ ವಿಮಾನ ನಿಲ್ದಾಣ ಅಭಿವೃದ್ಧಿ ಮತ್ತು ವಿಸ್ತರಣೆ, ವರುಣಾ ಕ್ಷೇತ್ರದ ವ್ಯಾಪ್ತಿಗೆ ಬರುವ ಇಮ್ಮಾವು ಬಳಿ 160 ಎಕರೆ ಜಾಗದಲ್ಲಿ ಚಿತ್ರನಗರಿ ನಿರ್ಮಾಣಕ್ಕೆ ಅನುದಾನ ಕಲ್ಪಿಸಬೇಕೆಂಬ ಪಕ್ಷದ ಹಾಲಿ, ಮಾಜಿ ಪದಾಧಿಕಾರಿಗಳ ಅಭಿಪ್ರಾಯ ಸಂಗ್ರಹಿಸಿ ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ ಅವರ ಗಮನಕ್ಕೆ ಲುಪಿಸಲಾಗುತ್ತಿದೆ. ಮೈಸೂರಿಗೆ ಏನೇನು ಕೊಡುಗೆಗಳನ್ನು ನೀಡಬೇಕು ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. ಸಿಎಂ ಕರೆಯುವ ಸಭೆಯಲ್ಲಿ ಎಲ್ಲವನ್ನು ಪ್ರಸ್ತಾಪಿಸಲಾಗುವುದು ಎಂದರು.
ಎಪಿಎಂಸಿ ಮಾರುಕಟ್ಟೆ ಹೊರತಾಗಿ ರೈತರು ಬೆಳೆದಿರುವ ಬೆಳೆಗಳನ್ನು ಮಾರಾಟ ಮಾಡಲು ಯಾವುದೇ ಪರವಾನಗಿ ಅಗತ್ಯವಿಲ್ಲ ಎಂಬ ಬದಲಾವಣೆ ಮಾಡಲಾಗಿದೆ. ಇದರ ಉದ್ದೇಶ ರೈತರಿಗೆ ಒಳ್ಳೆಯ ಬೆಲೆ ಸಿಗಲಿ ಎಂಬುದಾಗಿದೆ. ರೈತರಿಗೆ ಯಾವುದೇ ನಿರ್ಬಂಧ ಇರದಂತೆ ಎಪಿಎಂಸಿ ಕಾಯಿದೆಗೆ ತಿದ್ದುಪಡಿ ತರಲಾಗಿದೆ. ಬೆಂಬಲ ಬೆಲೆಯನ್ನು ರದ್ದುಪಡಿಸುವುದಿಲ್ಲ. ಎಪಿಎಂಸಿ ಮುಚ್ಚುವುದಿಲ್ಲ. ಎಪಿಎಂಸಿ ತಿದ್ದುಪಡಿ ಕಾಯಿದೆಯಲ್ಲಿ ಏನಾದರೂ ತೊಂದರೆ ಇದ್ದರೆ ಈಗಲೂ ಸರಿಪಡಿಸಲು ಮುಖ್ಯಮಂತ್ರಿಗಳು ಸಿದ್ಧವಿದ್ದಾರೆ ಎಂದು ಹೇಳಿದರು.
ಕೇಂದ್ರ ಬಜೆಟ್ ವಿಶ್ಲೇಷೆಣೆ, ವಿಮರ್ಶೆ ಕುರಿತಂತೆ ನಡೆದ ಈ ಸಭೆಯಲ್ಲಿ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು. ಹಲವರು ಬಜೆಟ್ ವಿಷಯ ಹೊರತಾಗಿ ಸ್ಥಳೀಯ ಸಮಸ್ಯೆಗಳ ಬಗ್ಗೆ ಮಾತನಾಡಿ ಸಚಿವರ ಗಮನಕ್ಕೆ ತಂದರು. ಮಾಜಿ ಶಾಸಕ ಡಾ.ಭಾರತಿಶಂಕರ್, ಬಿಜೆಪಿ ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್, ಪಕ್ಷದ ಮುಖಂಡ ಗಂಗಾಧರ್‌ಪ್ರಸಾದ್ ಇತರರಿದ್ದರು.