Advertisement

ಸೀರೆ ಮೇಲೆ ಲಲಿತಸಹಸ್ರನಾಮ

05:13 PM Mar 21, 2018 | |

ಇದು ಲಲಿತಾಸಹಸ್ರನಾಮದ ಮೇಲಿನ ಭಕ್ತಿ ಸೃಷ್ಟಿಸಿದ ಪವಾಡ. ಪುಸ್ತಕದ ಮೇಲೆ, ಓಲೆಗರಿಯಲ್ಲೆಲ್ಲ ಲಲಿತಸಹಸ್ರನಾಮ ಅಚ್ಚಾಗಿದ್ದನ್ನು ನೀವು ನೋಡಿಯೇ ಇರುತ್ತೀರಿ. ಆದರೆ, ಇಲ್ಲೊಬ್ಬರು ಸೀರೆಯ ಮೇಲೆಯೇ ಲಲಿತಸಹಸ್ರನಾಮದ ಸಾಲು ಸಾಲುಗಳನ್ನು ಮೂಡಿಸಿದ್ದಾರೆ!

Advertisement

ಪದ್ಮ ಮಂಜುನಾಥ್‌ ಅವರ ಧಾರ್ಮಿಕ ಕಲಾಸೃಷ್ಟಿ ಇದು. ಮೂಲತಃ ಚನ್ನರಾಯಪಟ್ಟಣದ ಕೆಂಬಾಳುವಿನ ಪದ್ಮಾ, ಈಗ ಬೆಂಗಳೂರಿನ ಕನಕಪುರ ರಸ್ತೆಯ ವಾಜರಹಳ್ಳಿಯ ನಿವಾಸಿ. ಬಿಡುವಿನಲ್ಲಿ ಹರಟೆ ಹೊಡೆಯುವುದಕ್ಕೆ ಅವರ್ಯಾವತ್ತೂ ಸಮಯವನ್ನು ಮೀಸಲಿಡಲಿಲ್ಲ. ಕಲಾ ತರಗತಿಗಳಿಗೆ ಹೋಗದೇ, ಚಿತ್ರ ಬಿಡಿಸುವುದನ್ನು ಕಲಿತರು.

ಕೊಬ್ಬರಿ ಮೇಲೆ ಚಿತ್ತಾರ, ಮದುವೆ ಕಾರ್ಯಕ್ರಮದ ಸಿಂಗಾರ- ಇವರ ಆರಂಭದ ಚಮತ್ಕಾರ. ಸಂಪ್ರದಾಯಸ್ಥ ಕುಟುಂಬ ಬೇರೆ. ದಿನಾ ಹೇಳುತ್ತಿದ್ದ ಲಲಿತಾ ಸಹಸ್ರನಾಮವನ್ನೇ ಏಕೆ ಸೀರೆಯ ಮೇಲೆ ಕಸೂತಿಯ ಮೂಲಕ ಅರಳಿಸಬಾರದು ಎಂಬ ಯೋಚನೆ ಅವರಿಗೆ ದಿಢೀರನೆ ಸುಳಿಯಿತು. ಕೊನೆಗೂ ಸೂಜಿದಾರ ಕೈಗೆತ್ತಿಕೊಂಡೇಬಿಟ್ಟರು.

ನೂಲನ್ನು ಬಳಸಿ ಪ್ರತಿ ಮಂತ್ರವನ್ನೂ ಚೈನ್‌ ಸ್ಟಿಚ್‌ ತರಹ ಕೈಯಲ್ಲಿ ನೇಯತೊಡಗಿದರು. ಪೂರ್ತಿ ಸೀರೆ ಮೇಲೆ ಮಂತ್ರಾಕ್ಷರಗಳನ್ನು ಮೂಡಿಸಲು ಬರೋಬ್ಬರಿ 3 ವರ್ಷಗಳೇ ಬೇಕಾದವು. ಅಂದಹಾಗೆ, ಈ ಸೀರೆಯಲ್ಲಿ ಅವರು 180 ಶ್ಲೋಕಗಳ 5824 ಅಕ್ಷರಗಳನ್ನು ಮೂಡಿಸಿದ್ದಾರೆ.

ಅಂದಾಜು 2.30 ಲಕ್ಷ ಹೊಲಿಗೆಗಳು ಇದರಲ್ಲಿ ಮುತ್ತು ಮತ್ತು ನವರತ್ನಗಳಿಂದ ಅಲಂಕಾರ ಮಾಡಿದ್ದಾರೆ. ಇದರ ಜೊತೆಗೆ, ಮಹಾಕಾಳಿ, ಮಹಾಲಕ್ಷ್ಮಿ, ಮಹಾಸರಸ್ವತಿ ಸ್ವರೂಪವಾಗಿ 9 ಸಿಂಹ 9 ಕಮಲ 7 ನವಿಲುಗಳನ್ನು ನೇಯ್ದಿರುವುದು ವಿಶೇಷ. ಪದ್ಮ ಮಂಜುನಾಥ್‌ ಅವರ ಸಂಪರ್ಕ, ಮೊ. 9663085850.

Advertisement

* ಬಳಕೂರು ವಿ.ಎಸ್‌. ನಾಯಕ್‌

Advertisement

Udayavani is now on Telegram. Click here to join our channel and stay updated with the latest news.

Next