ಮoಡ್ಯ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಪಾಂಡವಪುರ ತಾಲೂಕಿನ ಮೇಲುಕೋಟೆ ಹೋಬಳಿಯ ಲಕ್ಷ್ಮಿಸಾಗರದಲ್ಲಿ ಮನೆಯೊಂದು ಬೆಂಕಿಗಾಹುತಿಯಾಗಿ ಹೊತ್ತಿ ಉರಿದ ಘಟನೆ ಶನಿವಾರ ಸಂಜೆ ನಡೆದಿದೆ.
ಗ್ರಾಮದ ಸಣ್ಣ ಹನುಮಂತೇಗೌಡರ ಪುತ್ರ ಪ್ರಕಾಶ್ ಎಂಬುವರಿಗೆ ಸೇರಿದ ಹೆಂಚಿನ ಮನೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಸಂಜೆ 4 ಗಂಟೆ ವೇಳೆಗೆ ಬೆಂಕಿ ಕಾಣಿಸಿಕೊಂಡು ಆಹುತಿಯಾಗಿದೆ.
ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಗ್ರಾಮಸ್ಥರು ಆರಿಸಲು ಪ್ರಯತ್ನಿಸಿದ್ದಾರೆ. ಆದರೆ ಬೆಂಕಿಯ ಕೆನ್ನಾಲಿಗೆ ಹೆಚ್ಚಾಗಿ ಮನೆಯ ಹೆಂಚು ಸಿಡಿದು ಜೋರಾಗಿ ಉರಿಯತೊಡಗಿದೆ. ತಕ್ಷಣ ಸ್ಥಳಕ್ಕೆ ಮೇಲುಕೋಟೆ ಎಸ್‌ಐ ಗಣೇಶ್, ಸಹಾಯಕ ಸಬ್‌ಇನ್ಸ್ಪೆಕ್ಟರ್ ಜಯರಾಂ ಭೇಟಿ ನೀಡಿ ಅಗ್ನಿಶಾಮಕ ಸಿಬ್ಬಂದಿಯನ್ನು ಕರೆಸಿ ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಮನೆಯ ಬಹುತೇಕ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.
ಮನೆಯಲ್ಲಿ ದಿನಸಿ, ಬಟ್ಟೆ ಪಾತ್ರೆಗಳು, ಸಾಮಗ್ರಿಗಳು, ಎಲೆಕ್ಟ್ರಾನಿಕ್ಸ್ ಸೇರಿದಂತೆ ಲಕ್ಷಾಂತರ ರೂ. ನಷ್ಟವಾಗಿದೆ. ಮನೆಯಲ್ಲಿ ಯಾರೂ ಇಲ್ಲದಿದ್ದರಿಂದ ಘಟನೆಯಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ :ಕೋವಿಡ್ : ರಾಜ್ಯದಲ್ಲಿಂದು 21614 ಸೋಂಕಿತರು ಗುಣಮುಖ; 9785 ಹೊಸ ಪ್ರಕರಣ ದೃಢ
ಪ್ರಕಾಶ್, ಹೇಮ ಮತ್ತು ಮನೆಯವರಿಗೆ ಕೊರೊನಾ ದೃಢಪಟ್ಟ ಕಾರಣ ಮೂಡಲಕೊಪ್ಪಲು ವಸತಿ ನಿಲಯದ ಕೋವಿಡ್ ಕೇರ್ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದ ಮನೆಗೆ ಬೀಗ ಹಾಕಲಾಗಿತ್ತು. ಶನಿವಾರ ವಿದ್ಯುತ್ ಅವಘಡದಿಂದ ಈ ದುರ್ಘಟನೆ ನಡೆದಿದೆ.
ಈ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ 20ಕ್ಕೂ ಹೆಚ್ಚು ಅಕ್ಕಪಕ್ಕದ ಮನೆಗಳ ಟಿ.ವಿ, ಫ್ರಿಡ್ಜ್, ಸೇರಿದಂತೆ ಎಲೆಕ್ಟ್ರಾನಿಕ್ಸ್ ಉಪಕರಣಗಳು ಸಹ ನಾಶವಾಗಿದ್ದು, ಅಪಾರ ನಷ್ಟ ಸಂಭವಿಸಿರುವ ಬಗ್ಗೆ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ ಎಂದು ಮೇಲುಕೋಟೆ ಎಸ್‌ಐ ಗಣೇಶ್ ಮಾಹಿತಿ ನೀಡಿದ್ದಾರೆ.