Advertisement
ಈಗಾಗಲೇ ರಾಮನಗರ ನಗರಸಭೆಯಲ್ಲಿ ಕಸದಿಂದ ಬಯೋ ಗ್ಯಾಸ್ ಉತ್ಪಾದಿಸಿ ಬಳಿಕ ಅದರಿಂದ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಈಗ ಬಾಗಲಕೋಟೆ ನಗರಸಭೆ ಕೂಡ ಅದೇ ಮಾದರಿಯಲ್ಲಿ ಮನೆ ಮನೆಯಿಂದಸಂಗ್ರಹಿಸುವ ಕಸದಿಂದಲೇ ವಿದ್ಯುತ್ ಉತ್ಪಾದನೆಗೆ ಮುಂದಾಗಿದ್ದು ಶೀಘ್ರವೇ ಕಾರ್ಯರೂಪಕ್ಕೆ ಬರಲಿದೆ. ನಗರದ
ಹಳೆಯ ಎಪಿಎಂಸಿ ಬಳಿ ನಗರಸಭೆಯ ಘನತ್ಯಾಜ್ಯ ನಿರ್ವಹಣೆ ಘಟಕವಿದ್ದು, ಅಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ 14ನೇ ಹಣಕಾಸು ಯೋಜನೆಯಡಿ 47.25 ಲಕ್ಷ ರೂ. ವೆಚ್ಚದಲ್ಲಿ ಬಯೋಗ್ಯಾಸ್ ಪ್ಲಾಂಟ್ ನಿರ್ಮಾಣ ಮಾಡಲಾಗಿದೆ. ಪುಣೆ ಮೂಲದ ಮೇಲಂ ಐಕೋಸ್ ಎನ್ವಿರಾಮೆಂಟ್ ಪ್ರೈವೆಟ್ ಲಿಮಿಟೆಡ್ ಕಂಪನಿ ಈ ಘಟಕ ನಿರ್ಮಿಸಿದ್ದು, ಎರಡು ವರ್ಷ
ನಿರ್ವಹಣೆ ಕೂಡ ಮಾಡಲಿದೆ.
ಬಾಗಲಕೋಟೆ ನಗರ, ನವನಗರ ಹಾಗೂ ವಿದ್ಯಾಗಿರಿ ಸೇರಿ ಪ್ರತಿದಿನ 48 ಟನ್ ಕಸ ನಿತ್ಯ ಸಂಗ್ರಹವಾಗುತ್ತದೆ. ಇದರಲ್ಲಿ 32 ಟನ್ ಹಸಿ ಕಸ, 12 ಟನ್ ಒಣ ಕಸ ಹಾಗೂ ಸುಮಾರು 4 ಟನ್‌ನಷ್ಟು ನಿರುಪಯುಕ್ತ ಕಸ (ಯಾವುದಕ್ಕೂ ಬಳಕೆಗೆ ಬಾರದ ಕಸ) ಸಂಗ್ರಹವಾಗುತ್ತಿದೆ. ಇದರಲ್ಲಿ ಹಸಿ ಕಸ ಮಾತ್ರ ವಿದ್ಯುತ್ ಉತ್ಪಾದನೆಗೆ ಬಳಸಲಾಗುತ್ತದೆ. ಒಟ್ಟು 32 ಟನ್ ಹಸಿ ಕಸದಿಂದ ಈಗಾಗಲೇ ಸಾವಯವ ಗೊಬ್ಬರ ತಯಾರಿಸುತ್ತಿದ್ದು, ಅದರಲ್ಲಿ ನಿತ್ಯ 2 ಟನ್ ಹಸಿ ಕಸದಿಂದ ಬಯೋ ಗ್ಯಾಸ್‌ಗೆ ಮಾರ್ಪಡಿಸಿ, ಅದರಿಂದ ವಿದ್ಯುತ್ ಉತ್ಪಾದನೆಗೆ ಯೋಜನೆ ಹಾಕಿಕೊಳ್ಳಲಾಗಿದೆ. ಈಗಾಗಲೇ ಘನತ್ಯಾಜ್ಯ ನಿರ್ವಹಣೆ ಘಟಕದ ಸ್ಥಳದಲ್ಲಿ ಬಯೋಗ್ಯಾಸ್ ಪ್ಲಾಂಟ್ ಸಿದ್ಧವಾಗಿದ್ದು, ಪುಣೆಯಿಂದ ವಿದ್ಯುತ್ ಉತ್ಪಾದನೆ ಸಾಮಗ್ರಿಗಳೂ ಬಂದಿವೆ. ಅವುಗಳನ್ನು ಅಳವಡಿಸುವ ಕಾರ್ಯ ನಡೆದಿದ್ದು, ತಿಂಗಳೊಳಗೆ ಕಾರ್ಯಾರಂಭವಾಗಲಿದೆ. ಮಾಸಿಕ 25 ಸಾವಿರ ರೂ. ಉಳಿತಾಯ:
ಈ ಘಟಕದಿಂದ ಉತ್ಪಾದನೆಯಾಗುವ ವಿದ್ಯುತ್‌ನಿಂದ ಆರ್ಥಿಕ ಭಾರ ಕಡಿಮೆಯಾಗಲಿದೆ. ಕುಷ್ಠರೋಗಿಗಳ ಕಾಲೋನಿ, ಘಟಕದ ಆವರಣದಲ್ಲಿ ನಿತ್ಯ ಉರಿಯುವ ಬೀದಿ ದೀಪಗಳಿಂದ ಹೆಸ್ಕಾಂಗೆ ಸುಮಾರು 25 ಸಾವಿರವರೆಗೆ ವಿದ್ಯುತ್ ಬಿಲ್
ಪಾವತಿಸಲಾಗುತ್ತಿದೆ. ಹಸಿ ಕಸದಿಂದ ಉತ್ಪಾದಿಸುವ ವಿದ್ಯುತ್‌ನ್ನೇ ಇಲ್ಲಿ ಬಳಕೆ ಮಾಡುವುದರಿಂದ ಹೆಸ್ಕಾಂಗೆ ಪಾವತಿಸುವ ಹಣ ನಗರಸಭೆಗೆ ಉಳಿತಾಯವಾಗಲಿದೆ. ಅಲ್ಲದೇ ಹಸಿ ಕಸದಿಂದ ವಿದ್ಯುತ್ ಉತ್ಪಾದಿಸುವ ಬಯೋಗ್ಯಾಸ್ ಪ್ಲಾಂಟ್‌ಗೆ ವಿದ್ಯುತ್‌ನ ಅಗತ್ಯವಿಲ್ಲ. ಈಗಾಗಲೇ ಘನತ್ಯಾಜ್ಯ ನಿರ್ವಹಣೆ ಘಟಕದಲ್ಲಿ ಹಸಿ ಕಸ ಮತ್ತು ಒಣ ಕಸ ವಿಂಗಡಿಸುವ ಯಂತ್ರಕ್ಕೆ ವಿದ್ಯುತ್ ಬಳೆಕಯಾಗುತ್ತಿದ್ದು, ಅಲ್ಲಿಂದ ಬೇರ್ಪಡಿಸಿದ ಕಸವನ್ನೇ ತಂದು
ಈ ಪ್ಲಾಂಟ್‌ಗೆ ಹಾಕಲಾಗುತ್ತದೆ. ಹೀಗಾಗಿ ಇದಕ್ಕೆ ಪ್ರತ್ಯೇಕ ವಿದ್ಯುತ್ ಬಳಸುವ ಪ್ರಮೇಯ ಬರುವುದಿಲ್ಲ.
Related Articles
Advertisement
ಕುಷ್ಠರೋಗಿಗಳ ಕಾಲೋನಿಗೆ ವಿದ್ಯುತ್ ನಿತ್ಯ 2 ಟನ್ ಹಸಿ ಕಸದಿಂದ 15 ಕೆವಿ ವಿದ್ಯುತ್ ಉತ್ಪಾದನೆಯಾಗಲಿದ್ದು, ವಾರ್ಷಿಕ 65 ಟನ್ ಗೊಬ್ಬರ ಕೂಡ ತಯಾರಾಗಲಿದೆ. ಈ ವಿದ್ಯುತ್‌ನ್ನು ಪಕ್ಕದಲ್ಲಿಯೇ ಇರುವ ಕುಷ್ಠ ರೋಗಿಗಳ ಕಾಲೋನಿಯ ಬೀದಿ ದೀಪ ಹಾಗೂ ಘನತ್ಯಾಜ್ಯ ನಿರ್ವಹಣೆ ಘಟಕದ ಆವರಣದ ಎಲ್ಲ ಬೀದಿ ದೀಪಗಳಿಗೆ ಬಳಸಲು ನಗರಸಭೆ ನಿರ್ಧರಿಸಿದೆ.
ಕಸದಿಂದ ವಿದ್ಯುತ್ ಉತ್ಪಾದಿಸುವ ಬಯೋಗ್ಯಾಸ್ ಪ್ಲಾಂಟ್ ಈಗಾಗಲೇ ಸಿದ್ಧಗೊಂಡಿದ್ದು, ಘಟಕದ ವಿವಿಧ ಸಾಮಗ್ರಿಅಳವಡಿಸುವ ಅಂತಿಮ ಹಂತದ ಕೆಲಸ ನಡೆಯುತ್ತಿದೆ. ನಿತ್ಯ 2 ಟನ್ ಹಸಿ ಕಸದಿಂದ 15 ಕೆ.ವಿ ವಿದ್ಯುತ್ ಉತ್ಪಾದನೆ, ವಾರ್ಷಿಕ 65 ಟನ್ ಸಾವಯವ ಗೊಬ್ಬರ ಈ ಘಟಕದಿಂದ ಉತ್ಪಾದನೆಯಾಗಲಿದೆ. ರಾಜ್ಯದ ರಾಮನಗರ ನಗರಸಭೆ ಹೊರತುಪಡಿಸಿದರೆ ಬಾಗಲಕೋಟೆ ನಗರಸಭೆಯೇ ಇಂತಹ ಕಾರ್ಯಕ್ಕೆ ಮುಂದಾಗಿದೆ.
ಎಚ್.ವಿ. ಕಲಾದಗಿ,
ಪರಿಸರ ಅಭಿಯಂತರ, ನಗರಸಭೆ-ಬಾಗಲಕೋಟೆ ಶ್ರೀಶೈಲ ಕೆ. ಬಿರಾದಾರ