ಲಾಲ್‌ಬಾಗ್: ನಗರದಲ್ಲಿ ಉತ್ಪಾದನೆ ಆಗುವ ತ್ಯಾಜ್ಯವನ್ನೇ ಬಳಸಿಕೊಂಡು ವಿದ್ಯುತ್ ಉತ್ಪಾದಿಸುವ ಮಹತ್ವದ ಯೋಜನೆ ಇನ್ನೂ ಕೈಗೂಡುವ ಲಕ್ಷಣ ಸದ್ಯಕ್ಕೆ ಕಾಣುತ್ತಿಲ್ಲ! ವೆಚ್ಚ ದುಬಾರಿ ಎಂಬ ಕಾರಣದಿಂದ ಕಸದಿಂದ ವಿದ್ಯುತ್ ಮಾಡುವ ಯೋಜನೆಯ ಕಡತ ಸದ್ಯಕ್ಕೆ ಟೇಬಲ್ ಮೇಲೆಯೇ ಬಾಕಿ ಯಾಗಿದೆ. ಮುಂದೇನು ಎಂಬ ಬಗ್ಗೆ ಇನ್ನೂ ಸರಕಾರ ತೀರ್ಮಾನಿಸಿಲ್ಲ.
ದುಬಾರಿ ವೆಚ್ಚ?
ಮಂಗಳೂರು ಮಹಾನಗರ ಪಾಲಿಕೆ ಸಹಿತ ದ.ಕ. ಜಿಲ್ಲೆಯ ನಗರಾಡಳಿತ ಸಂಸ್ಥೆಗಳಲ್ಲಿ ಪ್ರತೀ ದಿನ ಉತ್ಪಾದನೆಯಾಗುವ ಸುಮಾರು 220 ಟನ್ ಕಸವನ್ನು ಬಳಸಿಕೊಂಡು ವಿದ್ಯುತ್ ಉತ್ಪಾದಿಸಲು ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆ.ಪಿ.ಸಿ.ಎಲ್.)ಉದ್ದೇಶಿಸಿತ್ತು. ತ್ಯಾಜ್ಯದಿಂದ ಬೇರ್ಪಡಿಸಬಹುದಾದ ಪ್ಲಾಸ್ಟಿಕ್‌ನ ವಿವಿಧ ಪ್ರಕಾರಗಳು, ಮರದ ವಸ್ತುಗಳು, ಬಟ್ಟೆ, ಟಯರ್ ಸಹಿತ ಸುಡಲು ಸೂಕ್ತವಾಗುವ (ಆರ್‌ಡಿಎಫ್) ವಸ್ತುಗ ಳಿಂದ ವಿದ್ಯುತ್ ಉತ್ಪಾದನೆಗೆ ಚಿಂತನೆ ನಡೆಸಲಾ ಗಿತ್ತು. ಸುಮಾರು 15 ಎಕರೆ ಪ್ರದೇಶದಲ್ಲಿ ಈ ಯೋಜನೆ ಜಾರಿಗೊಳ್ಳುವ ನಿರೀಕ್ಷೆಯಿತ್ತು. ಆದರೆ, ಈ ಕುರಿತ ಕಡತ ‘ದುಬಾರಿ ವೆಚ್ಚ’ ಎಂಬ ಕಾರಣದಿಂದ ಅಲ್ಲೇ ಬಾಕಿ ಆಗಿದೆ.
ಕೆಪಿಸಿಎಲ್ ನಡೆಸಿದ ಚಿಂತನೆ ಕುರಿತಂತೆ ಒಂದು ಹಂತದ ಸರ್ವೇಯನ್ನೂ ನಡೆಸಲಾಗಿದೆ. 5 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಗೆ ಕನಿಷ್ಠ 250ರಿಂದ 300 ಟನ್ ಕಸ ಪ್ರತೀದಿನ ಅಗತ್ಯವಿದೆ. ಆದರೆ ಪಾಲಿಕೆಯಿಂದ ಕೇವಲ 170 ಟನ್ ಕಸ ಮಾತ್ರ ಸಿಗಲಿದೆ. ಹೀಗಾಗಿ ದ.ಕ. ಜಿಲ್ಲೆಯ ಎಲ್ಲ ನಗರಾಡಳಿತ ಸಂಸ್ಥೆಗಳಿಂದ 50 ಟನ್ ಹಾಗೂ ಉಡುಪಿ ಜಿಲ್ಲೆಯಿಂದ ಸುಮಾರು 100 ಟನ್‌ನಷ್ಟು ಕಸವನ್ನು ಪಡೆಯುವ ಬಗ್ಗೆಯೂ ಮಾತುಕತೆ ನಡೆದಿತ್ತು. ಆದರೆ ಈ ಪ್ರಕ್ರಿಯೆಯು ದುಬಾರಿಯಾಗಬಹುದು ಎಂಬ ಕಾರಣದಿಂದ ಯೋಜನೆ ಮುಂದುವರಿಯಲಿಲ್ಲ. ಹೀಗಾಗಿ ಇನ್ನೂ ಯೋಜನೆ ಜಾರಿ ಹಂತಕ್ಕೆ ಬಂದಿಲ್ಲ.
ಹಲವು ತಿಂಗಳ ಹಿಂದೆ ಮಂಗಳೂರಿಗೆ ಆಗಮಿಸಿದ್ದ ಸರಕಾರದ ಅಂದಿನ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರು ಮಂದಾರ ತ್ಯಾಜ್ಯ ದುರಂತ ಸ್ಥಳಕ್ಕೆ ಭೇಟಿ ನೀಡಿ, ತ್ಯಾಜ್ಯದಿಂದ ವಿದ್ಯುತ್ ತಯಾರಿ ಸುವ ಘಟಕ ನಿರ್ಮಿಸುವ ಕುರಿತು ಅವಲೋಕಿಸಿದ್ದರು. ಕೆ.ಪಿ.ಸಿ.ಎಲ್.ನ ವ್ಯವಸ್ಥಾಪಕ ನಿರ್ದೇಶಕ ವಿ. ಪೊನ್ನುರಾಜ್ ಅವರಿಗೆ ಪತ್ರ ಬರೆದು ಈ ಬಗ್ಗೆ ಪರಿಶೀಲಿಸುವಂತೆ ಕೋರಿ ದ್ದರು. ಇದರಂತೆ ಮಂಗಳೂರಿಗೆ ಆಗಮಿಸಿದ್ದ ಕೆಪಿಸಿಎಲ್ ಅಧಿಕಾರಿಗಳು ಪರಿಶೀಲಿಸಿ ದ.ಕ. ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದು, ಮಂಗಳೂರಿನ ಕಸ ಮಾತ್ರ ಅಲ್ಲದೆ, ಉಡುಪಿ ಭಾಗದ ಕಸವನ್ನು ಕೂಡ ಬಳಸಿಕೊಂಡರೆ ಯೋಜನೆ ಮಾಡಲು ಸಾಧ್ಯವಿದೆ ಎಂದಿದ್ದರು.
ಪರಿಶೀಲನ ಹಂತದಲ್ಲಿ
ತ್ಯಾಜ್ಯದಿಂದ ವಿದ್ಯುತ್ ತಯಾರಿ ಸುವ ಬಗ್ಗೆ ಕರ್ನಾಟಕ ವಿದ್ಯುತ್ ನಿಗಮ ನಿ.ದಿಂದ ಪ್ರಸ್ತಾವನೆ ಬಂದಿತ್ತು. ಜಿಲ್ಲೆಯಲ್ಲಿ ಒಟ್ಟು ಲಭ್ಯವಾಗುವ ಕಸ, ಉಡುಪಿ ಜಿಲ್ಲೆಯಲ್ಲಿ ಉತ್ಪಾದನೆಯಾಗುವ ಕಸವನ್ನು ಒಟ್ಟು ಸೇರಿಸಿ ವಿದ್ಯುತ್ ತಯಾರಿಸಲು ಅಂದು ಮಾತುಕತೆ ನಡೆಸಲಾಗಿತ್ತು. ಆದರೆ ಇದು ದುಬಾರಿ ವೆಚ್ಚವಾಗಲಿದೆ ಎಂಬ ಬಗ್ಗೆ ಮಾಹಿತಿ ಲಭಿಸಿದೆ. ಹೀಗಾಗಿ ಇನ್ನೂ ಇದು ಪರಿಶೀಲನ ಹಂತದಲ್ಲಿಯೇ ಇದೆ.
–ಡಾ| ರಾಜೇಂದ್ರ ಕೆ.ವಿ., ಜಿಲ್ಲಾಧಿಕಾರಿ, ದ.ಕ.