Advertisement

ಕರಾವಳಿಯಲ್ಲಿ ವಿದ್ಯುತ್‌ ಕಣ್ಣಾಮುಚ್ಚಾಲೆ: ಜೋರು ಮಳೆ ಬಂದರೆ ತಾಸುಗಟ್ಟಲೆ ಕತ್ತಲು!

01:47 AM Jul 20, 2022 | Team Udayavani |

ಮಂಗಳೂರು/ಉಡುಪಿ: ಮೆಸ್ಕಾಂ ಅಧಿಕಾರಿಗಳ ಪ್ರಕಾರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಲೋಡ್‌ ಶೆಡ್ಡಿಂಗ್‌ ಇಲ್ಲ. ಅಧಿಕೃತವೂ ಇಲ್ಲ, ಅನಧಿಕೃತವೂ ಇಲ್ಲ. ಆದರೂ ಪ್ರತಿದಿನ ಯಾವುದಾದರೂ ಒಂದು ಕಾರಣಕ್ಕೆ ಉಭಯ ಜಿಲ್ಲೆಗಳ ಮನೆಗಳಲ್ಲಿ ವಿದ್ಯುತ್‌ ದೀಪ ಉರಿಯುವುದಿಲ್ಲ, ಮಿಕ್ಸಿ ತಿರುಗುವುದಿಲ್ಲ, ಫ್ರಿಡ್ಜ್ ಚಾಲೂ ಆಗುವುದಿಲ್ಲ!

Advertisement

ಮಂಗಳೂರು, ಉಡುಪಿಯ ನಗರ ಪ್ರದೇಶದಲ್ಲಿ ಈ ಸಮಸ್ಯೆ ಅಷ್ಟಾಗಿ ಗಮನಕ್ಕೆ ಬಾರದಿರಬಹುದು. ಆದರೆ ಉಭಯ ಜಿಲ್ಲೆಗಳ ಗ್ರಾಮಾಂತರದಲ್ಲಿ ಪವರ್‌ ಕಟ್‌ ನಿತ್ಯವೂ ಇದೆ. ಅದಕ್ಕೆ ಗಾಳಿಮಳೆ ಕಾರಣ ಇರಬಹುದು. ಮೆಸ್ಕಾಂ ಪ್ರಕಾರ ವಿದ್ಯುತ್‌ ಕಡಿತಕ್ಕೆ ಮೂಲ ಕಾರಣ ಮಳೆಗಾಲ. ಆದರೆ ನಾಗರಿಕರು ಅನುಭವಿಸುತ್ತಿರುವುದು ಅಘೋಷಿತ ವಿದ್ಯುತ್‌ ಕಡಿತ.

ಸುಳ್ಯ, ಪುತ್ತೂರು, ಕಡಬ, ಬೆಳ್ತಂಗಡಿ, ಬಂಟ್ವಾಳ, ಮೂಡುಬಿದಿರೆ, ಮೂಲ್ಕಿ, ಉಳ್ಳಾಲ ತಾಲೂಕು ವ್ಯಾಪ್ತಿಯಲ್ಲಿ ಅಘೋಷಿತ ವಿದ್ಯುತ್‌ ಕಡಿತಕ್ಕೆ ಕೊನೆ ಯಿಲ್ಲ. ದಿನದಲ್ಲಿ ಕನಿಷ್ಠವೆಂದರೂ 5-10 ಬಾರಿ ವಿದ್ಯುತ್‌ ಕಣ್ಣಾಮುಚ್ಚಾಲೆ ನಡೆದೇ ನಡೆಯುತ್ತದೆ ಎನ್ನುತ್ತಾರೆ ಗ್ರಾಮಾಂತರದ ನಾಗರಿಕರು.

ಉಡುಪಿ ಜಿಲ್ಲೆಯ ಬೈಂದೂರು, ಕುಂದಾ ಪುರ, ಬ್ರಹ್ಮಾವರ, ಹೆಬ್ರಿ ಮತ್ತು ಕಾರ್ಕಳ ತಾಲೂಕಿನ ಗ್ರಾಮೀಣ ಭಾಗದಲ್ಲೂ ವಿದ್ಯುತ್‌ ವ್ಯತ್ಯಯ ವಿರುತ್ತದೆ. ಈ ವರ್ಷ ಮಳೆಗಾಲ ಆರಂಭವಾಗುವ ಮೊದಲೇ ಕಾಪು, ಶಿರ್ವ ಭಾಗದಲ್ಲಿ ವಿದ್ಯುತ್‌ ಸಮಸ್ಯೆ ಯಾಗುತ್ತಿತ್ತು. ಇಂದಿಗೂ ಅದು ಬಗೆಹರಿದಿಲ್ಲ. ಇದು ಲೋಡ್‌ಶೆಡ್ಡಿಂಗ್‌ ಅಲ್ಲ ವಂತೆ. ತಂತಿ ತುಂಡಾಗುವುದು, ಕಂಬ ಬೀಳುವುದು, ಟ್ರಾನ್ಸ್‌ ಫಾರ್ಮರ್‌ ಕಟ್‌ ಆಗುವುದರಿಂದ ಹೀಗಾಗು ತ್ತಿದೆ ಎನ್ನುತ್ತಾರೆ ಮೆಸ್ಕಾಂನವರು.

ಅಪಾಯಕಾರಿ ಮರಗಳ ರೆಂಬೆ, ಕೊಂಬೆಯನ್ನು ಮಳೆಗಾಲಕ್ಕೆ ಮೊದಲೇ ಕಡಿಯುವ ಮೂಲಕ ಮುಂಜಾಗ್ರತೆ ವಹಿಸಿದರೆ ಕೊಲ್ಲೂರು, ಸಿದ್ದಾಪುರ, ಶಂಕರ ನಾರಾಯಣ, ಶಿರೂರು, ಬೈಂದೂರು, ಕುಂದಾಪುರ, ಹಳ್ಳಿಹೊಳೆ, ಕಮಲಶಿಲೆ, ಕೊಕ್ಕರ್ಣೆ, ಹೆಬ್ರಿ, ಕಾಪು, ಮುನಿಯಾಲು, ಬ್ರಹ್ಮಾವರ, ಶಿರ್ವ, ಕಾಪು, ಬೆಳ್ಮಣ್‌, ನಿಟ್ಟೆ ಸಹಿತ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಗಂಟೆಗಟ್ಟಲೆ ವಿದ್ಯುತ್‌ ವ್ಯತ್ಯಯವಾಗುವುದನ್ನು ತಪ್ಪಿಸ ಬಹುದು ಎಂಬುದು ಹಲವು ಗ್ರಾಮಗಳ ಸಾರ್ವಜನಿಕರ ಅಭಿಪ್ರಾಯ.

Advertisement

ಕೈಗಾರಿಕೆಗಳಿಗೆ ನಷ್ಟ
ಕೈಗಾರಿಕೆಗಳಿಗೆ ಆಗುವ ನಷ್ಟ ಅಷ್ಟಿಷ್ಟಲ್ಲ. ಮಂಗಳೂರು ನಗರದಲ್ಲಿ ಪವರ್‌ ಕಟ್‌ ಸದ್ಯಕ್ಕೆ ದೊಡ್ಡ ಮಟ್ಟದಲ್ಲಿ ಇಲ್ಲ. ಹೊರವಲಯದಲ್ಲಿ ಮಾತ್ರ ಸಮಸ್ಯೆ ಇದೆ. ಅಂದಹಾಗೆ; “ಕೈಗಾರಿಕೆ ಗಳಿಗೂ ವಿದ್ಯುತ್‌ ಕಡಿತ ಸಮಸ್ಯೆ ಕಾಡ ತೊಡಗಿದೆ. ಒಂದು ತಿಂಗಳ ಅವಧಿಯಲ್ಲಿ ಆಗೊಮ್ಮೆ-ಈಗೊಮ್ಮೆ ವಿದ್ಯುತ್‌ ಕಡಿತ ಆಗುತ್ತಿದೆ. ಇದರಿಂದ ಕೆಲವು ಕೈಗಾರಿಕೆಗಳಿಗೆ ಸಮಸ್ಯೆ. 24 ತಾಸು ಹೀಟರ್‌ ಬಳಸುವ ಕೈಗಾರಿಕೆಗಳಿಗೆ ಇದು ನಷ್ಟ ಉಂಟು ಮಾಡುತ್ತಿದೆ’ ಎನ್ನುತ್ತಾರೆ ಬೈಕಂಪಾಡಿಯ ಕೈಗಾರಿಕೋದ್ಯಮಿ ನಝೀರ್‌.

ಮಣಿಪಾಲ ಕೈಗಾರಿಕ ಪ್ರದೇಶ ಸಹಿತವಾಗಿ ಜಿಲ್ಲೆಯ ಉದ್ದಗಲಕ್ಕೂ ವ್ಯಾಪಿ ಸಿರುವ ಸಣ್ಣ ಮತ್ತು ದೊಡ್ಡ ಕೈಗಾರಿಕೆ ಗಳಿಗೆ ಪದೇಪದೆ ವಿದ್ಯುತ್‌ ವ್ಯತ್ಯಯ ವಾಗುತ್ತಿರು ವುದ ರಿಂದ ಸಾಕಷ್ಟು ಆರ್ಥಿಕ ಹೊರೆ ಯಾಗು ತ್ತಿದೆ. ಒಮ್ಮೆ ವಿದ್ಯುತ್‌ ವ್ಯತ್ಯಯ ವಾದರೆ ಒಮ್ಮೆಗೆ ಉತ್ಪಾದನೆ ನಿಲು ಗ ಡೆ ಆಗಿ, ಪುನಃ ಆರಂಭಿಸಬೇಕು. ಇದು ಉತ್ಪಾ ದನೆಯ ಪ್ರಮಾಣದ ಮೇಲೂ ಪರಿಣಾಮ ಬೀರುತ್ತದೆ. ಕೈಗಾರಿಕೆಗಳಿಗೆ ದಿನದ 24 ತಾಸು ಕೂಡ ವಿದ್ಯುತ್‌ ಬೇಕು. ಡೀಸೆಲ್‌ ದರವೂ ಹೆಚ್ಚಾಗಿದ್ದು, ದಿನವಿಡೀ ಕೈಗಾರಿಕೆಯನ್ನು ಜನರೇಟರ್‌ನಿಂದ ನಡೆಸಲಾಗದು ಎನ್ನುತ್ತಾರೆ ಉಡುಪಿ ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಪ್ರಶಾಂತ್‌ ಬಾಳಿಗಾ.

ಶಿರ್ವ, ಕಾಪುವಿನ ಸಮಸ್ಯೆ ಹೊಸದಲ್ಲ
ಶಿರ್ವ, ಕಾಪು ಪ್ರದೇಶದಲ್ಲಿ ಹತ್ತಾರು ವರ್ಷಗಳ ವಿದ್ಯುತ್‌ ತಂತಿಗಳು ಹೆಚ್ಚಿರುವ ಜತೆಗೆ ತಂತಿಗಳಿಗೆ ತಾಗಿ ಕೊಂಡಿರುವ ಗಿಡಮರಗಳು ಹೆಚ್ಚು. ಇದರ ಜತೆಗೆ ಈ ಭಾಗದಲ್ಲಿ ವಿದ್ಯುತ್‌ ಉಪಕೇಂದ್ರ ಇಲ್ಲ. ಪಡುಬೆಳ್ಳೆಯ ಪಾಂಬೂರು ಉಪಕೇಂದ್ರದಿಂದ ವಿದ್ಯುತ್‌ ಪೂರೈಸಲಾಗುತ್ತದೆ. ಪಾಂಬೂರಿಗೆ ಮಣಿಪಾಲದಿಂದ ವಿದ್ಯುತ್‌ ಹರಿದು, ಅಲ್ಲಿಂದ ಕಾಪುವಿಗೆ ಹೋಗುವಾಗ ಲೋಡ್‌ ಕಡಿಮೆಯಾಗಿ ವಿದ್ಯುತ್‌ ವ್ಯತ್ಯಯವಾಗುತ್ತಿದೆ. ಕಾಪು ಮತ್ತು ಶಿರ್ವ ವಲಯದಲ್ಲಿ ತಂತಿ ಹಾದು ಹೋಗುವ ಭಾಗದಲ್ಲಿ ಬೃಹತ್‌ ಗಾತ್ರದ ಮರಗಳ ಗೆಲ್ಲುಗಳು ತಂತಿಗಳನ್ನು ಸ್ಪರ್ಶಿಸುವುದರಿಂದ ವಿದ್ಯುತ್‌ ಅಡಚಣೆ ಉಂಟಾಗುತ್ತಿದೆ. ಏಕಕಾಲದಲ್ಲಿ ಹಲವೆಡೆ ಗೆಲ್ಲುಗಳು ಬಿದ್ದು ಅನಾಹುತ ಘಟಿಸುತ್ತದೆ. ಸಣ್ಣ ಪುಟ್ಟ ಪ್ರಕರಣಗಳನ್ನು ಕೂಡಲೇ ದುರಸ್ತಿಗೊಳಿಸಲಾಗುತ್ತದೆ. ಟ್ರಾನ್ಸ್‌ಫಾರ್ಮರ್‌ಗಳು ಸ್ವಲ್ಪ ಸಮಯಾವಕಾಶ ತೆಗೆದುಕೊಳ್ಳುತ್ತವೆ. ಬೆಳಪುವಿನಲ್ಲಿ ವಿದ್ಯುತ್‌ ಉಪಕೇಂದ್ರ ನಿರ್ಮಾಣವಾದರೆ ಸಮಸ್ಯೆ ಬಗೆಹರಿಯಲಿದೆ ಎನ್ನುತ್ತಾರೆ ಮೆಸ್ಕಾಂನ ಅಧೀಕ್ಷಕ ಎಂಜಿನಿಯರ್‌ ನರಸಿಂಹ ಪಂಡಿತ್‌.

ಹೀಗಾದರೆ ಚೆನ್ನ
-ಮಳೆಯ ಆರಂಭಕ್ಕೂ ಮೊದಲೇ ದುರ್ಬಲ ಕಂಬ ಹಾಗೂ ತಂತಿ ಮತ್ತು ನಿರ್ದಿಷ್ಟ ಅವಧಿ ಮೀರಿದ ಟ್ರಾನ್ಸ್‌ಫಾರ್ಮರ್‌ಗಳನ್ನು ಗುರುತಿಸಿ ನಗರದಲ್ಲಿ ವಹಿಸುವ ಮುತುವರ್ಜಿಯಂತೆ ಗ್ರಾಮೀಣ ಪ್ರದೇಶದಲ್ಲೂ ಬದಲಾಯಿಸಬೇಕು.
-ಗ್ರಾಮೀಣ ಭಾಗದಲ್ಲಿ ಸಮಸ್ಯೆ ಹೆಚ್ಚಿರುವುದರಿಂದ ಹೆಚ್ಚಿನ ಲಕ್ಷ್ಯ, ಪೂರ್ವಸಿದ್ಧತೆ ಕೈಗೊಳ್ಳಬೇಕು. ಮಳೆಗಾಲಕ್ಕಿಂತ ಮೊದಲೇ ಅಪಾಯಕಾರಿ ಮರ, ಮರದ ರೆಂಬೆಗಳನ್ನು ತೆರವುಗೊಳಿಸಬೇಕು.
– ಅರಣ್ಯ ಇಲಾಖೆಯ ಅನುಮತಿ ಸಿಕ್ಕಿಲ್ಲ, ಖಾಸಗಿ ಜಮೀನಿನಲ್ಲಿ ಮರವಿದೆ ಎಂಬಿತ್ಯಾದಿ ಕಾರಣಕ್ಕೆ ನಿರ್ಲಕ್ಷ್ಯ ವಹಿಸಬಾರದು.
-ಕೆಲವೊಮ್ಮೆ ತುಂಡಾಗಿ ಬಿದ್ದ ತಂತಿಯನ್ನೇ ಸರಿಪಡಿಸಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗುತ್ತದೆ. ಇದೂ ಸಮಸ್ಯೆ ಮರುಕಳಿಸಲು ಕಾರಣ. ಇದನ್ನು ಕೈಗೊಳ್ಳಬಾರದು.

ಸುಳ್ಯ, ಸುಬ್ರಹ್ಮಣ್ಯ ಭಾಗದಲ್ಲಿ ಅನಿಯಮಿತ ವಿದ್ಯುತ್‌ ಕಡಿತ
ಸುಳ್ಯ, ಸುಬ್ರಹ್ಮಣ್ಯ ಭಾಗದಲ್ಲಿ ಅಧಿಕ. ಒಮ್ಮೆ ವಿದ್ಯುತ್‌ ಹೋದರೆ ಮತ್ತೆ ಯಾವಾಗ ಬಂದೀತೆಂದು ಹೇಳಲಾಗದು. ಶನಿವಾರ ಬೆಳಗ್ಗೆ ಹೋದ ವಿದ್ಯುತ್‌ ಬಂದದ್ದು ರಾತ್ರಿ 10ರ ಸುಮಾರಿಗೆ. ಸುಳ್ಯ ನಗರದಲ್ಲೂ ಇದೇ ಪರಿಸ್ಥಿತಿ. ಮಳೆಗಾಲದಲ್ಲಿ ಈ ಸಮಸ್ಯೆ ಹೆಚ್ಚು ಕಾಡುತ್ತಿದ್ದರೂ ಬೇಸಗೆ ಕಾಲದಲ್ಲೇನೂ ಭಿನ್ನವಾಗಿರದು. ಆಗಲೂ ಇದೇ ಕಾಯುವ ಪರಿಸ್ಥಿತಿ. ವಾರದಿಂದೀಚೆಗೆ ದಿನವೂ ಹಗಲಿನಲ್ಲಿ ಸುಮಾರು 10ಕ್ಕೂ ಅಧಿಕ ಬಾರಿ ಕೆಲವೆಡೆ ವಿದ್ಯುತ್‌ ವ್ಯತ್ಯಯವಾಗಿದೆ. ಕೆಲವೊಮ್ಮೆ ರಾತ್ರಿಯೂ ವಿದ್ಯುತ್‌ ಇಲ್ಲದೆ ಮಳೆಯ ಆತಂಕದ ಸಂದರ್ಭದಲ್ಲಿ ಕತ್ತಲಲ್ಲಿ ಕಳೆಯುವಂತಾಗಿದೆ.

ಪರಿಣಾಮವೇನು?
ಕಾರಣ ಏನೇ ಇರಲಿ, ಆಗಾಗ್ಗೆ ವಿದ್ಯುತ್‌ ಕಡಿತಗೊಳ್ಳುತ್ತಿದ್ದರೆ ಅಥವಾ ಹೋದ ವಿದ್ಯುತ್‌ ತಾಸುಗಟ್ಟಲೆ ಬಾರದಿದ್ದರೆ ಗ್ರಾಮೀಣ ಪ್ರದೇಶದಲ್ಲಿ ನಿರ್ವಹಣೆಯೇ ಕಷ್ಟ. ಕೆಲವು ಮನೆ ಯವರಿಗೆ ಪಂಚಾಯತ್‌ ವತಿಯಿಂದ ಬೋರ್‌ವೆಲ್‌ ನೀರು ಪೂರೈಸಲಾಗುತ್ತದೆ. ವಿದ್ಯುತ್‌ ವ್ಯತ್ಯಯದಿಂದ ಪಂಪ್‌ ಚಾಲನೆಯಾಗದು. ಆಗ ಕುಡಿಯುವ ನೀರು ಸರಬರಾಜಿನಲ್ಲೂ ವ್ಯತ್ಯಯ ವಾಗು ತ್ತದೆ. ಹಾಗಾಗಿ ಮಳೆಗಾಲ ದಲ್ಲೂ ಕುಡಿಯುವ ನೀರಿಗೆ ಪರ ದಾಡುವ ಸ್ಥಿತಿ ಉದ್ಭವಿಸುತ್ತದೆ.

ಜನಾಭಿಪ್ರಾಯ ಕೇಳಿ ಟಿವಿ, ಫ್ರಿಜ್‌ ಹಾಳಾಗುತ್ತಿದೆ
ಮಂಗಳೂರು ನಗರ ಭಾಗದಲ್ಲಿ ವಿದ್ಯುತ್‌ ಹೋದರೆ ಕೂಡಲೇ ಸರಿಯಾಗಬಹುದು. ಆದರೆ ಗ್ರಾಮೀಣ ಪ್ರದೇಶದಲ್ಲಿ ಒಮ್ಮೆ ವಿದ್ಯುತ್‌ ಹೋದರೆ ಮತ್ತೆ ಬರಲು ಒಂದೆರಡು ದಿನ ಬೇಕು. ಅಲ್ಲಿಯವರೆಗೆ ಮೊಬೈಲ್‌, ವಿದ್ಯಾರ್ಥಿಗಳ ಲ್ಯಾಪ್‌ಟಾಪ್‌ ಯಾವುದಕ್ಕೂ ಚಾರ್ಜಿಲ್ಲ. ಬಂದು-ಹೋಗುವ ವಿದ್ಯುತ್‌ನಿಂದ ಟಿ.ವಿ., ಫ್ರಿಜ್‌ಗಳಿಗೂ ಹಾನಿಯಾಗುತ್ತಿದೆ. ಹೊರಗಡೆ ಮಳೆ ಗಾಳಿ ಇರುವಾಗ ರಾತ್ರಿ ವಿದ್ಯುತ್‌ ಇಲ್ಲದೆ ಕತ್ತಲೆಯಲ್ಲೇ ಭಯದಿಂದ ಕಳೆಯಬೇಕಿದೆ.
– ಜನಾರ್ದನ, ಸುಳ್ಯ

ವಾರ್ಡ್‌ಗೊಂದು ಮೆಸ್ಕಾಂ ತಂಡ ಬೇಕು
ಒಂದೊಂದು ಗ್ರಾ.ಪಂ.ನಲ್ಲಿ ಒಂದೆರಡು ಲೈನ್‌ಮ್ಯಾನ್‌ ಹಾಗೂ ತಂಡ ಮಳೆಗಾಲದಲ್ಲಿ ಇದ್ದರೂ ಸಾವಿರಾರು ಜನರು ವಾಸಿಸುವ ಗ್ರಾಮಕ್ಕೆ ಸಾಕಾಗುತ್ತಿಲ್ಲ. ಹೆಚ್ಚುವರಿ ಸಿಬಂದಿಯನ್ನು ಮೆಸ್ಕಾಂ ನೇಮಿಸಬೇಕು. ಪ್ರತೀ ಗ್ರಾಮದ ಪ್ರತೀ ವಾರ್ಡ್‌ಗೆ ಕನಿಷz ಒಬ್ಬ ಸಿಬಂದಿ ಇದ್ದರೆ ಅನುಕೂಲ.
– ಕಿಶೋರ್‌, ಪುತ್ತೂರು

ಪಂಚಾಯತ್‌ನಲ್ಲಿ ಸಹಾಯವಾಣಿ ಇರಲಿ
ವಿದ್ಯುತ್‌ ಹೋದರೆ ಲೈನ್‌ಮ್ಯಾನ್‌ಗೆ ತಿಳಿಸಲು ನಮಗೆ ತಿಳಿಯದು. ಅವರ ನಂಬರ್‌ ಕೂಡ ಇರದು. ಜತೆಗೆ ಅವರು ತಿಂಗಳಿಗೊಮ್ಮೆ ಬದಲಾಗುತ್ತಾರೆ. ಹೀಗಾಗಿ ಆಯಾಯ ಗ್ರಾ.ಪಂ.ನಲ್ಲಿ ಮೆಸ್ಕಾಂ ಸಹಾಯವಾಣಿ ಕೇಂದ್ರವಿದ್ದು, ಗ್ರಾಮಸ್ಥರಿಂದ ದೂರು ಸ್ವೀಕರಿಸಿ, ಲೈನ್‌ಮ್ಯಾನ್‌ಗೆ ವಿವರಿಸಲು ಅನುಕೂಲವಾಗಲಿದೆ.
-ಗುರುವಪ್ಪ, ಕನ್ಯಾನ

ಲೋಡ್‌ಶೆಡ್ಡಿಂಗ್‌ ಯಾ ವಿದ್ಯುತ್‌ ಕೊರತೆ ಇಲ್ಲವೇ ಇಲ್ಲ. ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ, ಮಳೆ -ಗಾಳಿಯಿಂದ ಬೀಳುವ ವಿದ್ಯುತ್‌ ಕಂಬ ಗಳ ತುರ್ತಾಗಿ ಮರು ಸ್ಥಾಪನೆ ವಿವಿಧ ತಾಂತ್ರಿಕ ಕಾರಣಗಳಿಂದ ಸಾಧ್ಯವಾಗುವು ದಿಲ್ಲ. ಆಗ ವಿದ್ಯುತ್‌ ಕಡಿತ ಸಮಸ್ಯೆ ಎದುರಾಗುತ್ತದೆ. ಕೆಲವು ಭಾಗಗಳಿಗೆ ಕಂಬ ಒಯ್ಯಲು ಸಮಸ್ಯೆಯಾಗುತ್ತಿದೆ. ಕಂಬ ಮತ್ತು ಟ್ರಾನ್ಸ್‌ಫಾರ್ಮರ್‌ ದಾಸ್ತಾನು ಇದೆ. ಸಮರೋಪಾದಿಯಲ್ಲಿ ಸರಿಪಡಿಸುವ ಕಾರ್ಯವೂ ಆಗುತ್ತಿದೆ. ಯಾವುದೇ ಸಮಸ್ಯೆ ಆದರೂ ತುರ್ತಾಗಿ ಸ್ಪಂದಿಸಲು ಎಲ್ಲ ಸ್ತರದ ಸಿಬಂದಿಗೆ ಸೂಚಿಸಲಾಗಿದೆ. ಈ ಬಗ್ಗೆ ವಿಶೇಷ ಗಮನ ಹರಿಸಲು ನಿರ್ದೇಶನ ನೀಡಲಾಗುವುದು.
-ವಿ. ಸುನಿಲ್‌ ಕುಮಾರ್‌,
ಇಂಧನ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next