ನವದೆಹಲಿ: ದೇಶೀ ಮಾರುಕಟ್ಟೆಯಲ್ಲಿ ಆರ್ಥಿಕ ಕುಸಿತದ ಲಕ್ಷಣಗಳು ದಟ್ಟವಾಗಿರುವಂತೆಯೇ ಕೈಗಾರಿಕಾ ಉತ್ಪಾದನಾ ರಂಗ ಸಹ ತೀವ್ರ ಸಂಕಷ್ಟವನ್ನು ಎದುರಿಸುತ್ತಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಕಳೆದ ಕೆಲವು ತಿಂಗಳುಗಳಿಂದ ದೇಶದಲ್ಲಿ ವಿದ್ಯುತ್ ಪೂರೈಕೆಯಲ್ಲಿನ ಬೇಡಿಕೆ ತೀವ್ರ ಕುಸಿತವನ್ನು ಕಂಡಿದೆ.
ಅಕ್ಟೋಬರ್ ತಿಂಗಳಿನಲ್ಲಿ ವಿದ್ಯುತ್ ಪೂರೈಕೆ ಬೇಡಿಕೆಯು 13.2 ಪ್ರತಿಶತ ಕುಸಿತ ಕಂಡಿದ್ದು ಇದು ಕಳೆದ 12 ವರ್ಷಗಳಲ್ಲೇ ಅಧಿಕ ಎನ್ನಲಾಗುತ್ತಿದೆ. ಇದು ಏಷ್ಯಾದ ಮೂರನೇ ಬೃಹತ್ ಆರ್ಥಿಕತೆಯಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವುದರ ಸೂಚನೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಕೈಗಾರಿಕೆ ಉದ್ಯಮಗಳು ಹೆಚ್ಚಾಗಿರುವ ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ವಿದ್ಯುತ್ ಬಳಕೆ ಗಣನೀಯವಾಗಿ ಕುಸಿದಿರುವುದು ಈ ಕುಸಿತಕ್ಕೆ ಕಾರಣವೆನ್ನಲಾಗುತ್ತಿದೆ. ಕಳೆದ ತಿಂಗಳು ಮಹಾರಾಷ್ಟ್ರದಲ್ಲಿ ವಿದ್ಯುತ್ ಬಳಕೆ 22.4 ಪ್ರತಿಶತ ಕುಸಿತ ಕಂಡಿದ್ದರೆ ಗುಜರಾತ್ ನ ವಿದ್ಯುತ್ ಬಳಕೆಯಲ್ಲಿ 18.8 ಪ್ರತಿಶತ ಕುಸಿತ ದಾಖಲಾಗಿತ್ತು ಎಂಬ ಅಂಶವನ್ನು ಕೇಂದ್ರ ವಿದ್ಯುಚ್ಛಕ್ತಿ ಪ್ರಾಧಿಕಾರದ ಅಂಕಿ ಅಂಶಗಳು ಸೂಚಿಸುತ್ತಿವೆ.
ದೇಶದ ಪೂರ್ವ ಮತ್ತು ಉತ್ತರದ ನಾಲ್ಕು ಚಿಕ್ಕ ರಾಜ್ಯಗಳನ್ನು ಹೊರತುಪಡಿಸಿ ಇನ್ನುಳಿದಂತೆ ದೇಶದೆಲ್ಲೆಡೆ ವಿದ್ಯುತ್ ಬೇಡಿಕೆಯಲ್ಲಿ ಕುಸಿತ ದಾಖಲಾಗಿದೆ ಎನ್ನುವುದು ಈ ಅಂಕಿ ಅಂಶಗಳಿಂದ ಸಾಬೀತಾಗಿದೆ.
ಕೈಗಾರಿಕಾ ರಂಗದಲ್ಲಿ ನಿರಂತರ ಉತ್ಪಾದನಾ ದಾಖಲಾತಿಗೆ ಅಬಾಧಿತ ವಿದ್ಯುತ್ ಪೂರೈಕೆ ಅತ್ಯಗತ್ಯವಾಗಿದೆ. ಆದರೆ ಇದೀಗ ಭಾರತದಲ್ಲಿ ವಿದ್ಯುತ್ ಪೂರೈಕೆ ಸಾಕಷ್ಟಿದ್ದರೂ ಉತ್ಪಾದಕ ರಂಗದಿಂದ ಇದಕ್ಕೆ ನಿರೀಕ್ಷಿತ ಬೇಡಿಕೆ ಲಭ್ಯವಾಗುತ್ತಿಲ್ಲ ಎಂಬುದೇ ಆತಂಕದ ವಿಚಾರವಾಗಿದೆ.
ಮಾರುಕಟ್ಟೆಯಲ್ಲಿ ಗ್ರಾಹಕ ಬೇಡಿಕೆಯನ್ನು ಉತ್ತೇಜಿಸಲು ಕೇಂದ್ರ ಸರಕಾರವು ಕಳೆದ ಕೆಲವು ತಿಂಗಳುಗಳಿಂದ ಹಲವಾರು ಉಪಕ್ರಮಗಳನ್ನು ಘೋಷಿಸುತ್ತಿದ್ದರೂ ಸೆಪ್ಟಂಬರ್ ತಿಂಗಳಿನಲ್ಲಿ ಉತ್ಪಾದಕ ರಂಗದ ಫಲಿತಾಂಶ ಕಳೆದ 14 ವರ್ಷಗಳಲ್ಲಿಯೇ ಕನಿಷ್ಠ ಮಟ್ಟವಾಗಿರುವ 5.2 ಪ್ರತಿಶವನ್ನು ದಾಖಿಲಿಸಿರುವುದು ಸರಕಾರದ ಚಿಂತೆಗೆ ಕಾರಣವಾಗಿದೆ.